ಅಥವಾ

ಒಟ್ಟು 39 ಕಡೆಗಳಲ್ಲಿ , 20 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು, ಜಂಗಮವಾಗಬಲ್ಲನೆ ? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ. ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ ? ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ ಲಿಂಗಾರ್ಚಕರಪ್ಪರೆ, ಅಯ್ಯಾ ? ವೇಷವ ಹೊತ್ತು ಗ್ರಾಸಕ್ಕೆ ತಿರುಗುವ ಈ ವೇಷ ದುರಾಚಾರಿಗಳ ಮೆಚ್ಚುವನೆ ಕೂಡಲಸಂಗಮದೇವ ?
--------------
ಬಸವಣ್ಣ
ಬಹುರೂಪು ತೊಟ್ಟಾಡಿದ ದೇಹ ಒಂದೇ. ವೇಷ ರೂಪಿನ ಪಲ್ಲಟವಲ್ಲದೆ ವೇಷಕ್ಕೆ ತಕ್ಕ ಭಾಷೆ. ಭಾಷೆಗೆ ತಕ್ಕ ವೇಷ, ಅರಿವು ಆಚರಣೆ ಒಂದಾಗಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ತೊಟ್ಟುಬಿಡುವ ವೇಳೆಯನರಿದ ಮತ್ತೆ ದೋಟಿಯನಿಕ್ಕಲೇತಕ್ಕೆ? ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ? ಇದು ಗುರುಸ್ಥಲಕೆ ನಿಶ್ಚಯವಲ್ಲ; ಇದು ಶಿಲೆಯ ಮಾರಿಯ ಹದಹು; ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ ಆತ ಸದ್ಗುರುಜಾತನಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ? ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ. ಈ ಆಸೆಯ ವೇಷವ ಕಂಡಡೆ ಕಾರಹುಣ್ಣಿಮೆಯ ಹಗರಣವೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತರುಗಿಡು ಗುಣನಾಮವಾದಡೇನು, ಸ್ಥಾಣುವಿನ ಒಲವರದ ತೆರ ಬೇರೆ. ದರ್ಶನ ಸುಖಸಂಪತ್ತಾದಡೇನು, ಅರಿವಿನ ಒಲವರದ ತೆರ ಬೇರೆ. ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ ? ಶಬರನ ವೇಷ, ಮೃಗದ ಹರಣದ ಕೇಡು. ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ, ಬಂಕೇಶ್ವರಲಿಂಗವ ಅರಿದ ಅರಿವು ?
--------------
ಸುಂಕದ ಬಂಕಣ್ಣ
ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು. ಜಂಗಮಕ್ಕೆ ಸದ್ಭಕ್ತಿ, ಸದಾಚಾರ, ಸಕ್ರೀ ಇಂತೀ ಆಚಾರದಲ್ಲಿ ಇರಬೇಕು. ಅದೆಂತೆಂದಡೆ:ಪುರುಷನ ಆಚಾರ ಸತಿಗೆ ಕಟ್ಟು, ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ. ಅವತಾರಕ್ಕೆ ವೇಷ, ಅರಿವಿಂಗೆ ಆಚಾರ. ಆ ಜಂಗಮಭಕ್ತನ ಇರವು ಘಟಪ್ರಾಣದಂತೆ. ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ``ಏಕೋ ದೇವೋ ನ ದ್ವಿತೀಯಃ'' ಎಂದು ಶುದ್ಧಶೈವನಿಷ್ಠಾಪರನಾಗಿ ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇಷವ ಹೊತ್ತು ದೋಷದಲ್ಲಿ ನಡೆದಡೆ ದೋಷಕ್ಕೆ ವೇಷ ಭಂಡ. ಮೊದಲೆ ವೇಷವ ಕಂಡು ಲೇಸೆಂದು ಕೊಂಡಾಡುವ ದೋಷಿಗಳ ನರಕದಲ್ಲಿಕ್ಕುವ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಅ[ಜಾ]ಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ ಕಾಷ*ದ ವೇಷ ಗುರುಚರ[ಲಿಂಗ]ವಾದಲ್ಲಿ, ಎನ್ನ ಕಾಯಕದ ಕಾಷ* ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ, ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು ಆ ಭಾವಕ್ಕೆ ಬಲೋತ್ತ[ರ]ನಾಗಿದ್ದಾತನ ಇರವು, ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತೋರುವ ತೋರಿಕೆ ಸಬರೆ ಮುಟ್ಟಾಗಿ, ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ, ಚಿತ್ತವನರಿಯದ ಭಾವ ಎತ್ತಾಗಿ, ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ, ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು, ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು. ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ, ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು.
--------------
ಸುಂಕದ ಬಂಕಣ್ಣ
ನಾ ಬಂದೆ ಹರಿಭಕ್ತನಾಗಿ, ಬಾಹಾಗ ನಾ ದಾಸನಾಗಿ. ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು ತಿತ್ತಿಗ ನೀರ ಕಾಣೆ. ಲೆಕ್ಕವಿಲ್ಲದ ನಾಮವನಿಕ್ಕಿದೆ, ಸುತ್ತಿ ಸುತ್ತಿ ಬಳಸಿದೆ. ಹೀಲಿಯ ಗರಿಯ ಹೇಕಣ್ಣ, ಪಜ್ಞೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ ಹೊತ್ತ ದಾಸಿಕೆ ಹುಸಿಯಾಯಿತ್ತು. ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ತೋಹಿನ ಶಬರನಂತೆ, ಲಾಗಿನ ವ್ಯಾಘ್ರನಂತೆ, ಆಡುವ ವಿಧಾಂತನಂತೆ, ಇಂತೀ ವೇಷ ಸಹಜವೆ ? ದೊರೆವನ್ನಬರ ಭಕ್ತ, ದೊರೆವನ್ನಬರ ವಿರಕ್ತ. ಇಂತೀ ಇವರಿರವ ಕಂಡು ಬೆರಸಿದೆನಾದಡೆ, ಎನಗೆ ಘೋರ ನರಕ, ನಿಮಗೆ ಎಕ್ಕಲ ತಪ್ಪದು. ಇದಕ್ಕೆ ಮುಂಡಿಗೆಯ ಹಾಕಿದೆ, ಎತ್ತಿ ಶುದ್ಧರಾಗಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ, ಭಾವಕ್ಕೆ ವೇಷ. ಪ್ರಾಣಕ್ಕೆ ರೋಷ, ಕಾಮಕ್ಕೆ ಮದ. ಇಂತಿವನಿಂಬಿಟ್ಟುಕೊಂಡು ನಾವು ಜಂಗಮವೆಂದು ಸುಳಿದರೆ, ಹೇಯವಿಲ್ಲದ ಭಕ್ತರು ವೇಷವ ಕಂಡು ಪೂಜೆಯ ಮಾಡಿದರೆ, ಅಶನಕ್ಕೆ ಅನ್ನವನಿಕ್ಕಿದರೆ, ಶೀತಕ್ಕೆ ರಗಟೆಯ ಕೊಟ್ಟರೆ, ಅವರಿಗದು ಸಹಜ. ನಿಮ್ಮ ನೀವು ನೋಡಲಿಲ್ಲವೆ ? ನಾವು ದೇವರಾದೆವೆಂದು ವಿಚಾರಿಸಿ ನೋಡಿ, ಉಭಯವ ಮೆಟ್ಟಿನಿಂದು, ಅಭವನೆಂಬ ಹೆಸರಿಗೆ ಸಂದವರಿಗೆ ಸುಲಭದಿಂದ ಜಗವೆಲ್ಲವು ನಮೋ ನಮೋ ಎಂಬುದು. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಈ ಉಭಯದ ಭೇದವ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು. ರಾಜಂಗೆ ಯಾಚಕತನ ಹೀನ, ಅಂಗದ ಮೇಲೆ ಲಿಂಗಸನ್ನಿಹಿತನಾಗಿ ಶಿವಜ್ಞಾನ ಬೀಜ, ಭಕ್ತನ ಬಂಧುತ್ವ, ದ್ರವ್ಯತ್ರಯಲಿಂಗಾರ್ಪಣವೆಂಬ ತ್ರಿವಿಧಾಚರಣೆಸಂಪನ್ನ ವೀರಮಾಹೇಶ್ವರ ವೇಷವ ಹೊತ್ತುಕೊಂಡು, ಕಾಸು ವಿಷಯಾದಿಗಳಿಗಾಸೆಮಾಡಿ, ಜಡಸಂಸಾರದೊಳಗಿರ್ಪ ಜನರಿಗೆ ಕೈಯಾಂತು ಬೇಡಿ ಬೆಂಡಾಗಿ ತಿರುಗಿ ಹೊತ್ತುಗಳೆದರೆ ಹಳಸಿತ್ತು ವೇಷ, ಮುಳಿಸಿತ್ತು ಭಾಷೆ, ಮುಂದೆ ಕೆಡಹಿತ್ತು ಆಸೆ ದುರ್ಗತಿ ಗುರುನಿರಂಜನ ಚನ್ನಬಸವಲಿಂಗವನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->