ಅಥವಾ

ಒಟ್ಟು 45 ಕಡೆಗಳಲ್ಲಿ , 25 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣ್ಣ ಬೆಕ್ಕು, ನನ್ನಿಯ ಮೂಷಕನ ಮುಟ್ಟಿದುದುಂಟೆ ? ಜಗಗನ್ನರ ಕ್ರೀ, ವಿರಕ್ತಿ ಪ್ರಸನ್ನನ ಮುಟ್ಟಿದುದುಂಟೆ ? ಇದ ಚೆನ್ನಾಗಿ ತಿಳಿದು ನೋಡಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಶುದ್ಧಕರ್ಮವಿಲ್ಲದ ಭಕ್ತಿ, ವರ್ಮವಿಲ್ಲದ ವಿರಕ್ತಿ, ಸದಾಸನ್ನದ್ಧವಿಲ್ಲದ ಪೂಜೆ, ವೃಥಾಹೋಹುದಕ್ಕೆ ಇದೆ ಪಥ. ಅನ್ನ ಉದಕ ಹೆಣ್ಣು ಹೊನ್ನು ಮಣ್ಣನಿತ್ತು ವರ್ಮವ ಮುಟ್ಟದೆ ಸತ್ಕರ್ಮವನರಿಯದೆ ಕುನ್ನಿ ಧ್ಯಾನಿಸಿ ಹೇಯವೆಂದರಿದು ತಲೆಗೊಡಹಿದಲ್ಲಿ ಮರೆದಂತಾಗದೆ, ನಿಜನಿಶ್ಚಯವನರಿದು ಕುರುಹಿಡಬೇಕು, ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ ಸ್ಥೂಲ ಸೂಕ್ಷ್ಮ ಕಾರಣ ಆದಿ ಮಧ್ಯಾವಸಾನಂಗಳಲ್ಲಿ ಜಗದಲ್ಲಿ ಸಾದ್ಥಿಸುತ್ತಿರ್ದ ಬೋಧರುಗಳು ನೀವು ಕೇಳಿರೊ. ಅಭ್ಯೇದ್ಯಲಿಂಗವ ಭೇದಿಸಿ ಸುಬುದ್ಧಿಯಿಂದ ಕಂಡ ಪರಿ ಇನ್ನೆಂತೊ? ಮಾತಿನ ಮಾಲೆಯ ಕಲಿತು ಸಂತೆಯ ಹೋತಿನಂತೆ ಹೋರುವ ತೂತಜ್ಞಾನಿಗಳಿಗಿನ್ನೇತರ ಭಕ್ತಿ ವಿರಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಜ್ಞಾನವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಭಕ್ತಿಯಲ್ಲ. ಭಕ್ತಿಯಿಲ್ಲದವಂಗೆ ವಿರಕ್ತಿಯಿಲ್ಲ. ವಿರಕ್ತಿಯಿಲ್ಲದವಂಗೆ ಮುಕ್ತಿಯಿಲ್ಲ. ಇದು ಕಾರಣ, ಜ್ಞಾನ ವಿಚಾರ ಭಕ್ತಿ ವಿರಕ್ತಿ ಉಳ್ಳವಂಗೆ ಮುಕ್ತಿಯುಂಟು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರತಿಯಿಂದ ರತ್ನ, ಗತಿಯಿಂದ ವಾದ್ಯ, ಸದ್ಗತಿಯಿಂದ ಮುಕ್ತಿ, ನಿರ್ಗತಿಯಿಂದ ವಿರಕ್ತಿ. ಈ ನಾಲ್ಕರ ಮತಿಯ ತಿಳಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಷಡುರುಚಿಯನರಿವನ್ನಕ್ಕ ಬೇಟದ ಚುನ್ನ ಬಿಡದು. ಬೇಟ ಬಲಿದ ಮತ್ತೆ ಕೂಟಕ್ಕೆ ಸಮೀಪ. ಸಂಭೋಗದ ಸುಖ ಮೈಯುಂಡವಂಗೆ, ಲೋಕದ ನಚ್ಚು ಮಚ್ಚಿನ ಬಲೆದೊಡಕು ತಪ್ಪದು. ಇನಿತುಳ್ಳನ್ನಕ್ಕ ನಿರಂಗ ನಾನೆಂಬ ಮಾತು ಸಟೆ. ಇನಿತುಳ್ಳ ಅನಂಗಸಂಗಿಗಳಿಗೆ ಭಕ್ತಿ ವಿರಕ್ತಿ ಎಲ್ಲಿಯದೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?
--------------
ಮೋಳಿಗೆ ಮಹಾದೇವಿ
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ ಜವನಿಕೆಯೊಳಗೆ ಕೆಡಹಿಕೊಂಡಿತ್ತು. ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು. ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು. ಅಂಗವೆಲ್ಲವನರಿದೆನೆಂಬವರ ಹಿಂಗದೆ ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು. ಲಿಂಗಮೋಹಿಗಳೆಂಬವರ ತನ್ನ ಸಂಗದ ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು. ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು. ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು. ವಾಗದ್ವೈತವ ನುಡಿವ ಅರುಹಿರಿಯರೆಂಬವರ ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂಅರ್sತರ ಮಾಡಿತ್ತು. ಸುಷುಪ್ತಿಯಲ್ಲಿ ಕಂಡೆನೆಂಬವರ ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು. ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ]. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರ್ಧರವಾದಲ್ಲಿ ನಿವಾಸವಾಗಿಪ್ಪನು.
--------------
ಬಾಚಿಕಾಯಕದ ಬಸವಣ್ಣ
ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ? ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು. ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು, ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ, ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ; ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.
--------------
ಶ್ರೀ ಮುಕ್ತಿರಾಮೇಶ್ವರ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಸಸಿಗೆ ನೀರೆರೆದಡೆ ಎಳಕುವುದಲ್ಲದೆ, ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಎಳಕುವುದೆ ಮಾರಯ್ಯಾ ? ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವನರಿಯಿರಯ್ಯಾ.
--------------
ಆಯ್ದಕ್ಕಿ ಲಕ್ಕಮ್ಮ
ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು. ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು. ವಾಗದ್ವೈತದ ಕೇಣಸರ, ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು. ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹಸಿದ ಡುಂಡುಕಂಗೆ, ಬಕಂಗೆ ಎಸಕದ ಧ್ಯಾನವುಂಟೆ ? ಅವು ತಮ್ಮ ಹಸಿವಡಗುವನ್ನಕ್ಕ, ತೃಷೆಗಳು ಬಂದು ಸೇರುವನ್ನಕ್ಕ, ಹುಸಿಧ್ಯಾನದಿಂದ ಜೀವದ ಅಸುಗಳ ಕೊಂಬವು. ಇಂತಿವರಂತೆ ಹುಸಿಕರ ಭಕ್ತಿ, ಕಿಸುಕುಳರ ವಿರಕ್ತಿ. ಇವು ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಮಹಾಭಕ್ತರ ಹೃದಯದಲ್ಲಿ ನೀನಿಪ್ಪೆಯಾಗಿ, ಅವರ ವಚನವೆನ್ನ ಕರ್ಣದೊಳಗೆ ತುಂಬಲೊಡನೆ, ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ ನಿಮ್ಮ ಶ್ರೀಪಾದದೊಳಗೆನ್ನ ಸುತ್ತಿತ್ತು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->