ಅಥವಾ

ಒಟ್ಟು 61 ಕಡೆಗಳಲ್ಲಿ , 25 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುವ ಹಿಡಿದು, ದಂಡವ ಕೊಂಡು, ಸಾವರ ಹಿಡಿದು, ಸಂಕಲೆಯನಿಕ್ಕಿ, ಈ ವಿದ್ಥಿಯಲ್ಲಿ ಸಯಸಗೊಳ್ಳದೆ, ಭಾವವಾಡಿದಂತೆ ಭ್ರಮೆಗೊಳಗಾಗದೆ, ಮತ್ತಿವನೇನನೂ ಎನ್ನದಿರ್ಪುದೆ, ಸರ್ವಜ್ಞಾನದೊಳಗು. ಆ ನಿಜವಸ್ತು, ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಲ್ಲು ರತಿಯಿಂದ ರತ್ನವಾದಂತೆ, ಉದಕ ಸಾರವರತು ಲವಣವಾದಂತೆ, ವಾರಿ ವಾಯುವ ಸಂಗದಿಂದ ಬಲಿದಂತೆ, ಪೂರ್ವವನಳಿದು ಪುನರ್ಜಾತನಾದ ಮತ್ತೆ, ಎನ್ನವರೆಂದು ಬೆರಸಿದಲ್ಲಿ, ಆ ಗುಣ ಆಚಾರಕ್ಕೆ ಹೊರಗಾಯಿತ್ತು. ಮಾತೆ ಪಿತ ಸಹೋದರ ಬಂಧುಗಳೆಂದು ಮನ ಕೂರ್ತು ಬೆರಸಿದಲ್ಲಿ, ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ, ಪರಮಾರ್ಥಕ್ಕೆ ಸಲ್ಲ. ಇವನೆಲ್ಲವ ಕಳೆದುಳಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ, ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ, ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ. ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ.
--------------
ಆದಯ್ಯ
ಅಂಬುದ್ಥಿs ಉರಿಯಿತ್ತು ಅವನಿಯ ಮೇಲನರಿಯಲು. ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ, ಆ ಪ್ರಸಾದದಿಂದ ಸುಖಿಯಾದೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬ್ರಹ್ಮಸ್ಥಾನದಲ್ಲಿ ಜ್ಯೋತಿರ್ಲಿಂಗವಿಪ್ಪುದನರಿತು, ಕ್ರೀವೆರಸಿ ನಿಃಕ್ರೀಯಲ್ಲಿ ನಿಂದು ಕ್ರಮದಿಂದೂಧ್ರ್ವಕ್ಕೆಯ್ದಲು ಮಹಾಲಿಂಗದ ಬೆಳಗು, ಪೃಥ್ವಿಯಂ ಮುಸುಕಿ, ಅಪ್ಪುವನೀಂಟಿ, ಅಗ್ನಿಯಂ ದಹಿಸಿ, ವಾಯುವಂ ನುಂಗಿ, ಆಕಾಶಕ್ಕಳವಲ್ಲದೆ ಸ್ಥಲನಿಸ್ಥಲವನೆಯ್ದಿ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲದೆ ಅರಿವು ಮರಹನೊಳಕೊಂಡಿಪ್ಪ ಅಜ್ಞಾನಿಗಳೆತ್ತ ಬಲ್ಲರಯ್ಯಾ ?
--------------
ಆದಯ್ಯ
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು
--------------
ಅಕ್ಕಮ್ಮ
ಪ್ರಾಣಾದಿ ವಾಯುಗಳ ಕಳೆದು ಭಕ್ತರಾದರೆಮ್ಮವರು, _ಅದೆಂತೆಂದಡೆ: ಅಲ್ಲಲ್ಲಿರ್ದ ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತಿಯ ಮಾಡುವ ಪರಿಯ ಹೇಳಿಹೆ ಕೇಳಿರಣ್ಣಾ: ಪ್ರಾಣವಾಯುವ ನಿಲಿಸಿದರು ಪ್ರಾಣಲಿಂಗದಲ್ಲಿ, ಅಪಾನವಾಯುವ ನಿಲಿಸಿದರು ಪ್ರಸಾದಲಿಂಗದಲ್ಲಿ, ವ್ಯಾನವಾಯುವ ನಿಲಿಸಿದರು ಚತುರ್ವಿಧಪದದ ಬಯಕೆಯಳಿದ ಲಿಂಗಧ್ಯಾನದಲ್ಲಿ. ಉದಾನ ವಾಯುವ ನಿಲಿಸಿದರು ಉದ್ದೇಶದಿಂದ ನಡೆವ ಅನ್ಯಗಮನವ ಕೆಡಿಸಿ
--------------
ಚನ್ನಬಸವಣ್ಣ
ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಗ್ಘವಣಿಗಡಿವಜ್ಜೆಯುಂಟೆ ? ವಾಯುವ ಹಿಡಿದು ಬಂದ್ಥಿಸಬಹುದೆ ? ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಬ್ಥಿನ್ನವುಂಟೆ ? ಸುಗಂಧಕ್ಕೆ ಬುಡ ತುದಿಯಿಲ್ಲ. ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ.
--------------
ಮಧುವಯ್ಯ
ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ? ಘಟವಕೊಳಕೊಂಡಿದ್ದಾತ್ಮನನರಿಯಬಹುದೆ, ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ ಅಂಗ ವಸ್ತುವಾದಲ್ಲಿ ಹಿಂಗಿ ಅರಿವಠಾವಿನ್ನಾವುದು? ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ ನಡು ಮೊದಲುಂಟೆ? ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು.
--------------
ಅರಿವಿನ ಮಾರಿತಂದೆ
ಕ್ಷೀರವ ಸೋಂಕಿದ ಜಲವ ಬೇರೆ ಮಾಡಬಹುದೇ? ಪರಿಮಳವ ಸೋಂಕಿದ ವಾಯುವ ವಿವರಿಸಲುಂಟೆ? ಉತ್ತಮಂ ಏಕಭುಕ್ತಂ ಚ ಮಧ್ಯಮಂ ದ್ವಯಸ್ವೀಕೃತಂ ಕನಿಷೊ*ೀನ[s]ರ್ಪಿತಶ್ಚೈವ ಪ್ರಸಾದೋ ನಿಷ್ಫಲೋ ಭವೇತ್ ಎಂದುದಾಗಿ ನಿರೂಪಿಂಗೆ ರೂಪನರ್ಪಣೆಯ ಮಾಡಿ, ರುಚಿ ಪರಿಮಳ ಭಾವದತ್ತಲು ಅವಧಾನಿಯಾಗಿಪ್ಪ ನಿಮ್ಮ ಶರಣ. ಬೇರೆ ಮತ್ತೆ ವ್ಯವಧಾನವಿಲ್ಲದಂತಿಪ್ಪ ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.
--------------
ಚನ್ನಬಸವಣ್ಣ
ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->