ಅಥವಾ

ಒಟ್ಟು 44 ಕಡೆಗಳಲ್ಲಿ , 24 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ, ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ, ತನ್ನಯ ಸ್ಥಾನಕ್ಕೆ ಬಹಂತೆ, ವಸ್ತುವಿನ ಗೊತ್ತಿನಿಂದ ಕಟ್ಟು ಮೀರಲಿಲ್ಲವಾಗಿ, ಐಘಟದೂರ ರಾಮೇಶ್ವರಲಿಂಗದಲ್ಲಿಗೆ ಎಯ್ದುವ ತೆರ.
--------------
ಮೆರೆಮಿಂಡಯ್ಯ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ಸರ್ವವೆಲ್ಲವೂ ವಸ್ತುವಿನ ಅದ್ಥೀನವಾದಲ್ಲಿ, ಬೇರೊಂದು ತಟ್ಟುವ ಮುಟ್ಟುವ ಠಾವುಂಟೆ ? ಸರ್ವಭಾವಜ್ಞಗೆ ಬ್ಥಿನ್ನಭಾವವಿಲ್ಲ, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ ಒಲವರದಿಂದ ಹೋಹಲ್ಲಿ, ಆ ದೈವದ ಬಲುಮೆಯ ಅವನ ಕುಲವಾಸಾ ಬಲುಮೆಯ ತೆರನೊ! ಈ ಹೊಲಬ ತಿಳಿದು, ಗುರು ಚರವಪ್ಪ ವಸ್ತುಸಂಸಾರದ ಒಡಲೆಳೆಗಾಗಿ, ಭಕ್ತನ ನೆಲೆಹೊಲವಾಸಕ್ಕೆ ಹಲುಬಿ ಬರಬಹುದು ? ಇದು ವಸ್ತುವಿನ ನೆಲೆಯಿಲ್ಲ. ಕರ್ತೃ ಸಂಬಂಧಕ್ಕೆ ಸಲ್ಲ, ಮಹಾಮಹಿಮ ಕಲ್ಲೇಶ್ವರಲಿಂಗ ಅವರುವನೊಲ್ಲ.
--------------
ಹಾವಿನಹಾಳ ಕಲ್ಲಯ್ಯ
ಕುರುವ ಹಿಡಿವರೆ ಗುರು ಕರಜಾತ. ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ ? ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು. ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ ? ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ವಸ್ತುವೆಂದಡೆ:ಹೇಂಗಾಯಿತ್ತಯ್ಯಾಯೆಂದಡೆ, ಹೇಳಿಹೆ ಕೇಳಯ್ಯಾ ಮಗನೆ. ಕಾಷ್ಟದಲ್ಲಿ ಅಗ್ನಿ ಹೇಂಗೆ ಹಾಂಗಿಪ್ಪುದು; ಕ್ಷೀರದೊಳಗೆ ಘೃತ ಹೇಂಗೆ ಹಾಂಗಿಪ್ಪುದು; ತಿಲದಲ್ಲಿ ತೈಲ ಹೇಂಗೆ ಹಾಂಗಿಪ್ಪುದು; ಜಲದೊಳಗೆ ಸೂರ್ಯ ಹೇಂಗೆ ಹಾಂಗಿಪ್ಪುದು; ಕನ್ನಡಿಯೊಳಗೆ ಪ್ರತಿಬಿಂಬ ಹೇಂಗೆ ಹಾಂಗಿಪ್ಪುದು; ಸರ್ವತ್ರ ಎಲ್ಲಾ ಠಾವಿನಲ್ಲಿಯೂ ವಸ್ತುವಿನ ಕಳೆ ಪರಿಪೂರ್ಣವಾಗಿಪ್ಪುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರು ಕಂಬದ ಮೇಲೆ ಮೂರು ದೇಗುಲವ ಕಂಡೆನಯ್ಯ. ಮೂರು ದೇಗುಲದ ಮೇಲೆ ಒಂದು ಶಿಖರವ ಕಂಡೆನಯ್ಯ. ಆ ಶಿಖರವನೊಂದು ವಸ್ತು ಒಳಗೊಂಡಿರ್ಪುದು ನೋಡಾ. ಆ ವಸ್ತುವಿನ ಕುರುಹ ನೀವಾರಾದರೆ ಹೇಳಿರಯ್ಯ; ನಾನೊಂದ ಅರಿಯೆನು. ತಾನಾಗಿ ಕಾಣಬಲ್ಲವರಿಂಗೆ ಕಾಣಬಂದಿತ್ತಯ್ಯ. ಕಾಣಲರಿಯದವರಿಂಗೆ ದೂರವಾಗಿತ್ತಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ವಸ್ತುವೆಂದರೆ ಪರಬ್ರಹ್ಮದ ನಾಮವು. ಅಂತಪ್ಪ ವಸ್ತುವಿನ ಕಳೆ, ಆ ವಸ್ತುವಿನ ನಿಲವು ಪೇಳ್ವೆ ಕೇಳಿರಯ್ಯ. ಅನಂತಹಸ್ತ, ಅನಂತಪಾದ, ಅನಂತಮುಖ, ಅನಂತನಯನ, ಅನಂತಕರಣ, ಅನಂತಾಂಗ, ಅನಂತ ಮಿಂಚಿನಲತೆಪ್ರಕಾಶದಂತೆ, ಅನಂತ ಚಂದ್ರ ಸೂರ್ಯಪ್ರಕಾಶದಂತೆ, ಅನಂತ ವಜ್ರ ವೈಡೂರ್ಯ ಮಾಣಿಕದ ಪ್ರಕಾಶದಂತೆ, ಇಂತೀ ನಿಲವನು, ಇಂತೀ ಪ್ರಕಾಶವನು ಗರ್ಭೀಕರಿಸಿಕೊಂಡು, ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯದಿಂದತ್ತತ್ತಲಾದ ಪರವಸ್ತು ಸ್ವಯಂಭುವಾಗಿರ್ದು ತನ್ನ ವಿನೋದಕ್ಕೆ ತಾನೆ ಶಂಭುರೂಪದಿಂ ಲೀಲಾಮೂರ್ತಿಯಾಗಿ, ಇಂತೀ ನಿಲವನು, ಇಂತೀ ಕಳೆಯನು ಧರಿಸಿ, ಘನಮಹಾಲಿಂಗವಾಗಿರ್ಪನು. ಅಂತಪ್ಪ ಘನಮಹಾಲಿಂಗವನು ಬಹಿಷ್ಕರಿಸಿ, ಶ್ರೀಗುರು ಶಿಷ್ಯನ ಕರಸ್ಥಳಕ್ಕೆ ಇಷ್ಟಲಿಂಗವ ಮಾಡಿ, ತೋರಿ ಕೊಟ್ಟ ಬಳಿಕ ಆ ಲಿಂಗದಲ್ಲಿ ತನ್ನ ತನುವನು ಅಡಗಿಸಿ, ಆ ತನುವಿನಲ್ಲಿ ಆ ಲಿಂಗವ ಸಂಬಂಧಿಸಿ, ಶಿಖಿ-ಕರ್ಪೂರದ ಸಂಯೋಗದ ಹಾಗೆ ಅಂಗಲಿಂಗವೆಂಬುಭಯ ನಾಮ ನಷ್ಟವಾಗಿರ್ಪಾತನೇ ಶಂಭುಸ್ವಯಂಭುಗಿಂದತ್ತತ್ತ ತಾನೆ ನೋಡಾ, ಶಂಭು-ಎಂದಡೆ ಇಷ್ಟಲಿಂಗ, ಸ್ವಯಂಭು ಎಂದೊಡೆ ಪ್ರಾಣಲಿಂಗ, ಉಭಯದಿಂದತ್ತತ್ತವೆಂದೊಡೆ ಭಾವಲಿಂಗ. ಅಂತಪ್ಪ ಭಾವಲಿಂಗಸ್ವರೂಪ ಶರಣ ತಾನೆ ನೋಡಾ ಎಂದನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿವಸ್ತು, ಅನಾದಿವಸ್ತುವೆಂದು ಭೇದವ ಮಾಡಿದಲ್ಲಿ, ತನ್ನಿರವಿನ ಭೇದವೊ ? ವಸ್ತುವಿನ ಸ್ವಯರೂಪದಂಗವೊ ? ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ? ಆದಿ ಅನಾದಿ ವಸ್ತು ವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಏಕಮೂರ್ತಿ ಸ್ವಯಂಭು.
--------------
ಶಿವಲೆಂಕ ಮಂಚಣ್ಣ
ನನ್ನ ನಾನರಿವಡೆ, ಮೂರು ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ, ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ ಠಾವಿಂಗೆ ತಪ್ಪಿಹೋದ ಮೂಷಕನಂತೆ, ಎತ್ತಲೆಂದರಿಯೆ.ಅರ್ತಿಯಿಂದ ಕಟ್ಟಿದೆ ಇಷ್ಟವ. ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು, ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ ವಸ್ತುವಿನ ಅಂಗದಲ್ಲಿಯೆ ತನ್ನಂಗೆ ತಲ್ಲೀಯವಾಗಿಪ್ಪುದೆ ಮಹಾ ನಿಜದ ನೆಲೆ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ.
--------------
ತುರುಗಾಹಿ ರಾಮಣ್ಣ
ಇನ್ನಷ್ಟು ... -->