ಅಥವಾ

ಒಟ್ಟು 54 ಕಡೆಗಳಲ್ಲಿ , 24 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ. ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ | ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು || ಎಂದುದಾಗಿ, ಇದು ಕಾರಣ, ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ, ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ? ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೊ? ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ ಪ್ರಸಾದಿಗೆ ಆವುದ ಸರಿಯೆಂಬೆ? ಬಂದುದನತಿಗಳೆಯೆ, ಬಾರದುದ ಬಯಸೆ. ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ; ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ; ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ. ಆತನುರುತರ ಸಮ್ಯಕ್‍ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು. ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಉರುತರ ಮಹಾಜ್ಯೋತಿರ್ಮಯನು.
--------------
ಸಿದ್ಧರಾಮೇಶ್ವರ
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ, ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ. ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ? ಅದು ಮುನ್ನವೆ ಲಿಂಗಾರ್ಪಿತ. ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ, ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
``......................ರು, ನೀವು ಕೇಳಿ, ನಿಚ್ಚಕ್ಕೆ ನಿಜಹುಸಿಯ ಕಂಡೆವಲ್ಲಾ ! ವಾಯು ಬೀಸುವಲ್ಲಿ ಆಕಾಶ ಬಲಿದಲ್ಲಿ ಲಿಂಗಾರ್ಪಿತ ಮುಖವನರಿಯರಲ್ಲ. ಭೋಜನವನುಂಡು ಭಾಜನವನಲ್ಲಿಟ್ಟು ಹೋಹ ಹಿರಿಯರ ವ್ರತಕ್ಕೆ ಅದೇ ಭಂಗ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಗುಣಾನಂದಜೀವಚರ್ಯವಿಡಿದೆತ್ತಿ ಜೀವಾತ್ಮನ ಹೇಯವೆಂದು ಆತ್ಮನ ನಿಜವನರಿದು, ನಿರ್ಗುಣಾನಂದಲೀಲೆಯ ವಿರತಿಯೊಡನೆ ಪರಮಾತ್ಮ ತಾನೆಂದರಿದ ಶರಣಂಗೆ, ಎಂತಿರ್ದುದಂತೆ ಪೂಜೆ ನೋಡಾ. ಆ ಶರಣ ಭೋಗಿಸಿತೆಲ್ಲವು ಲಿಂಗಾರ್ಪಿತ, ರುಚಿಸಿತೆಲ್ಲವು ಪ್ರಸಾದ. ಆ ಶರಣನರಿದುದೆಲ್ಲವು ಪರಬ್ರಹ್ಮ, ನುಡಿದುದೆಲ್ಲವು ಶಿವತತ್ವ ಆ ಶರಣ ತಾನೆ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಬಂದ ಪದಾರ್ಥವ ಸವಿದು ಚಪ್ಪರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಜ್ಜನದ ಮಾರಿಯೆ ಪತ್ರೆಯ ತಾಪತ್ರಯ ನಿ[ರ್ಮಾ]ಲ್ಯವ ಲಿಂಗಾರ್ಪಿತ ಮಾಡುವವನೇನೆಂಬೆ. ರೂಪಿಲ್ಲದುದನೊಂದು ಶಾಪ ಬಂಧನಕ್ಕೆ ತಂದು ಕೋಪದ ದೂಪದಾರತಿಯಾದ ತೆರನೆಂತೊ! ಅದು ಬೇಕೆನ್ನದು, ಬೇಡೆನ್ನದು, ಸಾಕೆಂಬುದು ಮುನ್ನಿಲ್ಲವಾಗಿ. ಈ ಪರಿಯ ಭ್ರಮಿತರಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಈ ಲಿಂಗಾರ್ಪಿತ ಷಡ್ವಿಧ ಪ್ರಸಾದಂಗಳಂ ಯಥಾಕ್ರಮದಿಂ ಪೂರ್ತಿಗೊಳಿಸಿ, ತತ್ಪ್ರಸಾದ ಸ್ವರೂಪನಾಗಿರ್ಪಂ ನೀನೆಯಯ್ಯಾ, ಪರಮ ಶಿವಲಿಂಗಯ್ಯಾ, ಪರಮುಕ್ತ ಹೃದಯಾಬ್ಜ ಶಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬೇಕು ಬೇಡೆನ್ನದ ಪ್ರಸಾದಿಯ ಕಾಯ, ಲಿಂಗಾರ್ಪಿತ, ಆ ಅರ್ಪಿತವೆ ಪ್ರಸಾದ, ಅದೆ ಮತ್ತೆ ಮತ್ತೆ ಅರ್ಪಿತ, ದರ್ಶನದಿಂದಾಯಿತ್ತು, ಸ್ಪರ್ಶನದಿಂದಾಯಿತ್ತು. ಅರ್ಪಿಸಿ, ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು. ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕ್ಕೆಂತೊ ?
--------------
ಚನ್ನಬಸವಣ್ಣ
ಕಾಯದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಭಾವದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ನೇತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ ಶ್ರೀತ್ರದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಘ್ರಾಣದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಜಿಹ್ವೆಯ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಸ್ಪರ್ಶನದ ಕೈಯಲು ಲಿಂಗಾರ್ಪಿತ ಖಂಡಿತ ಭಾಷೆ. ಲಿಂಗಮಧ್ಯೇ ಶರಣ, ಶರಣಮಧ್ಯೇ ಲಿಂಗ. ಅಲ್ಲಲ್ಲಿ ತಾಗಿದ ಸುಖವೆಲ್ಲ ಲಿಂಗಾರ್ಪಿತವಾಗದಿದ್ದಡೆ ಕೂಡಲಚೆನ್ನಸಂಗಯ್ಯನಲ್ಲಿ ಅವರ ಸಹಜರೆಂತೆಂಬೆ ?
--------------
ಚನ್ನಬಸವಣ್ಣ
ಅಂದಿನವರಿಗೆ ಪರುಷವಿಪ್ಪುದು ಇಂದಿನವರಿಗೆ ಪರುಷವೇಕಿಲ್ಲ ? ದಯದಿಂದ ಕರುಣಿಸಿ ಸ್ವಾಮಿ. ಕೇಳಯ್ಯ ಮಗನೆ : ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ ? ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ ? ಶಿವಯೋಗಿ ಲಿಂಗಾರ್ಪಿತ ಭಿಕ್ಷಕ್ಕೆ ಬಂದಡೆ ಸುಮ್ಮನಿಹರು. ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ ? ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ ? ಪರುಷ ಎಲ್ಲಿಹುದು ಎಂದಡೆ : ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ ಅರಿತವರಿಗೆ ಅದೇ ಪರುಷ. ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ ಜಂಗಮವು ಭಿಕ್ಷಕ್ಕೆ ಬರಲು ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ ಸುಖವಬಡಿಸುವುದೇ ಪರುಷ. ಸಮಸ್ತ ಒಡವೆಯೆಲ್ಲವನು ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ. ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ ಭಕ್ತಿಯ ಮಾಡಿದವರಿಗೆ ಅದೇ ಪರುಷ. ಹೀಗೆ ಮಾಡಿದವರಿಗೆ ಅಂದೇನು ಇಂದೇನು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ
--------------
ಗಣದಾಸಿ ವೀರಣ್ಣ
ಕ್ಷಮೆ ದಮೆ ಶಾಂತಿ ಸೈರಣೆ ಭಕ್ತಿ ಜ್ಞಾನ ವೈರಾಗ್ಯಸಂಪನ್ನರಾದ ವೀರಮಾಹೇಶ್ವರರು, ಜಗದ್ಧಿತಾಥಾವಾಗಿ ಮತ್ರ್ಯಲೋಕದೊಳು ಬಂದು, ನಡೆನಡೆಗೆ ನುಡಿನುಡಿಗೆ ಅಡಿಗಡಿಗೆ ಹೆಜ್ಜೆಹೆಜ್ಜೆಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ- ಎಂಬ ಮಂತ್ರಮೂರ್ತಿಗಳಾಗಿ, ಲಿಂಗದ ನೆನಹಿಂದ ಲಿಂಗಾರ್ಪಿತಕ್ಕೆ ಹೋಗಿ, ನಿಂದು ಲಿಂಗಾರ್ಪಿತ ಭಿಕ್ಷಾ ಎಂದಲ್ಲಿ, ಗುರುವಾಜ್ಞೆಯಿಂದ ಬಂದ ಭಿಕ್ಷ ಅಮೃತಾನ್ನವೆಂದು ಕೈಕೊಂಡು ಭೋಜ್ಯ ಭೋಜ್ಯಗೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಎಂಬ ನುಡಿಯಿಂದ ಸೇವಿಸಿ, ನಿತ್ಯತೃಪ್ತರಾಗಿ, ಸುಳುಹು ಪಾವನರಾಗಿ ಚರಿಸುವ ಮಹಾಮಹಿಮ ಶರಣರ ನಡೆ ಪುರುಷ, ನುಡಿ ಪುರುಷ, ಮುಟ್ಟಿದ್ದು, ನೋಡಿ ಸೋಂಕಿದ್ದೆಲ್ಲಾ ಪಾವನ, ಹಾದ ಜಲವೆಲ್ಲ ಪುಣ್ಯತೀರ್ಥ, ಏರಿದ ಬೆಟ್ಟವೆಲ್ಲ ಶ್ರೀಪರ್ವತಂಗಳಾದವು. ಇಂತಪ್ಪ ನಿರಾಳ ನಿಜೈಕ್ಯ ನಿರಾಮಯ ನಿರ್ದೇಹಿಗಳಾದ ಶರಣರ ಅರೆಪಾದ ಧೂಮ್ರ ಮಲಿನವಾಗಿರುವಂತೆ ಮಾಡಯ್ಯ. [ಕೇಟಶ್ವರಲಿಂಗದಲ್ಲಿ] ಧನ್ಯ ನಾನಯ್ಯ.
--------------
ಬೊಕ್ಕಸದ ಚಿಕ್ಕಣ್ಣ
ಅಂಗವನಳಿವನ್ನಕ್ಕ ಶಿವಲಿಂಗಪೂಜೆಯ ಮಾಡಬೇಕು. ಆತ್ಮನ ಕ್ಷುಧೆಯುಳ್ಳನ್ನಕ್ಕ ಬಂದ ಪದಾರ್ಥವ ಲಿಂಗಾರ್ಪಿತ ಮಾಡಬೇಕು. ಇದು ಅರಿವಿನ ಭಿತ್ತಿ , ಜ್ಞಾನದ ಗೊತ್ತು, ಸರ್ವಮಯದ ಯುಕ್ತಿ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವ ಶಕ್ತಿ.
--------------
ಶಿವಲೆಂಕ ಮಂಚಣ್ಣ
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ. ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವುದೆ ಮಾಟ. ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
--------------
ನುಲಿಯ ಚಂದಯ್ಯ
ಇನ್ನಷ್ಟು ... -->