ಅಥವಾ

ಒಟ್ಟು 30 ಕಡೆಗಳಲ್ಲಿ , 16 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ. ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ. ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ. ಮಾಡುವ ಸದಾಚಾರಕ್ಕೆ ಮೂರು ಪೂಜೆ. ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
--------------
ಚನ್ನಬಸವಣ್ಣ
ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಗುರುಪೂಜೆ ಮಾಡುವಾತ ಶಿಷ್ಯನಲ್ಲ. ಲಿಂಗಪೂಜೆ ಮಾಡುವಾತ ಶರಣನಲ್ಲ. ಜಂಗಮಪೂಜೆ ಮಾಡುವಾತ ಭಕ್ತನಲ್ಲ. ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಕೊಂಬುವಾತ ಪ್ರಸಾದಿಯಲ್ಲ. ಇಂತೀ ಚತುರ್ವಿಧದ ಹಂಗು ಹಿಂಗದೆ ಭವಹಿಂಗದು ಮುಕ್ತಿದೋರದು. ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ ಪಾದೋದಕ ಪ್ರಸಾದವ ಕೊಳ್ಳದವರಿಗೆ ಭವಹಿಂಗದು ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಾವ ಶುದ್ಧವಾಗಿಪ್ಪುದೇ ಗುರುಪೂಜೆ ಜ್ಞಾನಶುದ್ಧವಾಗಿಪ್ಪುದೇ ಲಿಂಗಪೂಜೆ. ತ್ರಿಕರಣ ಶುದ್ಧವಾಗಿ ತ್ರಿವಿಧ ಮಲದಲ್ಲಿ ನಿಶ್ಚಯವಾಗಿ ನಿಂದುದೇ ಜಂಗಮಪೂಜೆ. ಇಂತೀ ತ್ರಿವಿಧ ಭೇದದಲ್ಲಿ ತ್ರಿವಿಧಾರ್ಪಣವ ಅರ್ಪಿಸಿ ನಿಂದುದೇ ಚಂದೇಶ್ವರಲಿಂಗಕ್ಕೆ ಅರ್ಪಿತ, ಮಡಿವಾಳಯ್ಯಾ.
--------------
ನುಲಿಯ ಚಂದಯ್ಯ
ಜಂಗಮ ನಮಸ್ಕಾರವೆ ಗುರುಪೂಜೆ, ಜಂಗಮ ಪೂಜೆಯ ಲಿಂಗಪೂಜೆ, ಜಂಗಮ ತೃಪ್ತಿಯೆ ತನಗೆ ಪ್ರಸನ್ನ. ತನಗೆ ಪ್ರಸನ್ನವಾದುದೆ ನಿತ್ಯಪ್ರಸಾದದಾಗು, ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಕಟ್ಟುಗೊತ್ತು ಕಾಣಾ! ಸಂಗನ ಬಸವಣ್ಣ ಪ್ರಭುವೆ.
--------------
ನುಲಿಯ ಚಂದಯ್ಯ
ಸದಾಚಾರಿಯಾದಡೆ:ಉಪ್ಪರಗುಡಿ ಸಿಂಧುಪತಾಕೆ, ಒಬ್ಬರಿಗೊಬ್ಬರು ಶರಣೆಂಬುದೆ ಸರ್ವತೀರ್ಥ. ಭಕ್ತನ ದೇಹವೆ ತ್ರಿಕೂಟಶಿವಾಲಯ, ಕಾಲೇ ಕಡೆದ ಕಂಬ, ಶಿರವೆ ಸುವರ್ಣದ ಕಳಶ, ಶಿವಾಚಾರ ಪೌಳಿ, ವಿಭೂತಿಯಲ್ಲಿ ಧವಳಿಸಿ, ಪರದೈವಕ್ಕಂಜೆವೆಂಬ ಅಗುಳಿ ದಾರವಟ್ಟ ಬಿಯಗವೊಪ್ಪುತ್ತಿರೆ, ಹಸ್ತಾಗ್ರಪೂಜೆ, ಶಾಂತವೆ ಅಗ್ಘಣಿ, ಸಜ್ಜನವೆ ಮಜ್ಜನ, ಸದಾ ಸನ್ನಿಹಿತವೆ ಲಿಂಗಪೂಜೆ, ಸತ್ಯವೆ ಅಡ್ಡಣಿಗೆ, ಸಮತೆ ಪರಿಯಾಣ, ಮನ ಮೀಸಲೋಗರ. ಲಿಂಗಬಣ್ಣಿಗೆಯ ಮೇಲೋಗರದಲ್ಲಿ ದೇವರೊಲಿದಾರೋಗಣೆಯ ಮಾಡುತ್ತಿರಲು ಹರುಷವೆ ಹಸ್ತಮಜ್ಜನ, ಪ್ರೀತಿಪ್ರೇಮವೆ ಕರ್ಪುರದ ವೀಳೆಯ, ಕಲಿತನದ ಝೇಘಂಟೆ, ಛಲಪದದ ಕಹಳೆ ಭೇರಿ, ವೀರವಂದನೆ ಮದ್ದಳೆ, ಕೇಳಿಕೆ ಸಂಪ್ರದಾಯವು. ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಕಾಯದ ಕೈಯಲ್ಲಿ ಲಿಂಗಪೂಜೆ. ಮನದ ಕೈಯಲ್ಲಿ ಸಂಸಾರ. ಎಂತಹದಯ್ಯಾ ಲಿಂಗಪೂಜೆ ? ಎಂತಹದಯ್ಯಾ ಜಂಗಮಪೂಜೆ ? ಇಂತಪ್ಪ ನಾಚಿಕೆಗೆಟ್ಟ ಮೂಕೊರೆಯರ ತೋರದಿರಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ. ದೇಶವ ತಿರುಗುವರು ಒಡಲ ಪೋಷಿಸುವುದರಿಂದ. ದೇಶವ ತಿರುಗುವರು ಮಲಮೂರರ ಆಸೆ, ವೇಶ್ಯೆಯ ಮಚ್ಚು ತಲೆಗೇರಿ, ಗುರುಸೇವೆ ಮುಂದುಗೊಂಡು ದೇಶಾಂತರವ ಮಾಡಲಿಲ್ಲ. ಲಿಂಗಪೂಜೆ ಮುಂದುಗೊಂಡು ದೇಶವ ತಿರುಗಲಿಲ್ಲ. ಜಂಗಮದಾಸೋಹ ಮುಂದುಗೊಂಡು ದೇಶವ ತಿರುಗಲಿಲ್ಲ. ಇಂತು ಅಪ್ರಯೋಜನ ಪ್ರಾಣಿಗಳ ಶಿವಯೋಗಿಗಳೆಂದು ನಿರ್ಮಲ ಗಮನಮತಿಮಹಿಮರು ನುಡಿದುಕೊಳ್ಳಲಾಗದು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಜನರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ ಗುರುಸೇವೆ ಸಂದಿತ್ತು. ಜುಗಮಸೇವೆಯ ಚಿತ್ತಶುದ್ಧವಾಗಿ ಮಾಡಲಾಗಿ ಲಿಂಗಪೂಜೆ ಸಂದಿತ್ತು. ಜಂಗಮದಾಸೋಹದಿಂದ ಸರ್ವ ಪದವಾಯಿತ್ತು. ಆ ಗುಣವನರಿದು ಹರಿಯಲಾಗಿ ಬಟ್ಟಬಯಲು ಕಾಣಬಂದಿತ್ತು. ಹುಟ್ಟುವ ಹೊಂದುವ ನೆಲೆ ಇತ್ತಲೆ ಉಳಿಯಿತ್ತು. ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿಯಲಾಗಿ.
--------------
ನುಲಿಯ ಚಂದಯ್ಯ
ಆಧಾರದಲ್ಲಿ ಗುರುಸಂಬಂಧವು. ಸ್ವಾಧಿಷಾ*ನದಲ್ಲಿ ಲಿಂಗಸಂಬಂಧವು. ಮಣಿಪೂರಕದಲ್ಲಿ ಜಂಗಮಸಂಬಂಧವು. ಅನಾಹತದಲ್ಲಿ ಪಾದೋದಕಸಂಬಂಧವು. ವಿಶುದ್ಧಿಯಲ್ಲಿ ಪ್ರಸಾದಸಂಬಂಧವು. ಆಜ್ಞೇಯದಲ್ಲಿ ಅರುಹುಸಂಬಂಧವು. ಈ ಅರುಹುವಿಡಿದು ಗುರುವ ಕಂಡು, ಲಿಂಗವ ನೋಡಿ, ಜಂಗಮವ ಕೂಡಿ, ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು. ಈ ಅಂತರಂಗದ ವಸ್ತುವು ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ, ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ, ಪಾದೋದಕಪ್ರಸಾದ ಸೇವನೆಯ ಪ್ರೇಮವುಳ್ಳಡೆ ಬಹಿರಂಗವೆನಿಸುವುದು. ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಪ್ರಸಾದವ ಬಯಸಿ ಪರವನರಿದೆನೆಂಬವಂಗೆ, ಬೇರೆ ಮತ್ತೆ ಸಾಧಿಸಿ ಅರಿದೆನೆಂಬ ಬಳಲಿಕೆಯದೇಕೇ? ಜಂಗಮವೆ ಲಿಂಗವೆಂದು ನಂಬಿ ಪೂಜೆಯ ಮಾಡಲು, ಅದು ತಾನೆ, ಲಿಂಗಪೂಜೆ ನೋಡಾ. ಆ ಜಂಗಮ ಭಕ್ತಿಯಿಂದ ಪ್ರಸಾದ ಸಾಧ್ಯವಹುದು. ಮುಂದೆ ಪರವನರಿವ. ಇದು ಕಾರಣ, ಜಂಗಮಭಕ್ತಿಯೇ ವಿಶೇಷ, ಇದು ತಪ್ಪದು, ನಿಜಗುರು ಸ್ವತಂತ್ರಲಿಂಗೇಶ್ವರನ ನಂಬಿ ನಿಜವನೈದುವಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಸ್ಥಾವರಲಿಂಗಪೂಜೆ ಶುದ್ಧಶೈವ, ಮಾರ್ಗಶೈವ ಲಿಂಗಪೂಜೆ ಸಿಂಹಾಸನ. ಪೂರ್ವಶೈವಪೂಜೆ ಸಂಕಲ್ಪನಿರಾವರಣ, ವೀರಶೈವ ಲಿಂಗಪೂಜೆ ಅಂಗದ ಮೇಲೆ ಹಿಂಗದೆ ಧರಿಸಿಹುದು. ಇವೆಲ್ಲವು ಸರಿ, ಶೈವಪೂಜೆ ಅದೆಂತೆಂದಡೆ: ಇಷ್ಟಲಿಂಗ ಜೀವನ ಅಂಗ ಉಭಯವ ಕೂಡಿ ಲೀಯವಾಗಿದ್ದುದು ಶೈವಭೇದಂಗಳಿಗೆ ಹೊರಗು ಸದಾಶಿವಮೂರ್ತಿಲಿಂಗಕ್ಕೆ ಒಳಗು.
--------------
ಅರಿವಿನ ಮಾರಿತಂದೆ
ಕಾಯವುಳ್ಳನ್ನಕ್ಕ ಲಿಂಗಪೂಜೆ, ಆತ್ಮವುಳ್ಳನ್ನಕ್ಕ ಅರಿವಿನ ಭೇದ. ಪುರುಷ ನೀ, ಸತಿ ನಾನೆಂಬಲ್ಲಿ ಉಭಯದ ಬೀಜ ನಾ ನೀನೆಂಬನ್ನಕ್ಕ. ಅಂಗದ ಲಿಂಗದಲ್ಲಿಯೆ ನಿರಂಗವಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ : ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ ; ನಿಂತಿರ್ದುದು ಇಷ್ಟಲಿಂಗಕ್ಕೆ ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು ; ನುಡಿವುದು ಪ್ರಾಣಲಿಂಗವು ; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ; ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ : 'ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||' ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ.
--------------
ಗಣದಾಸಿ ವೀರಣ್ಣ
ಮುಖದಲ್ಲಿ ಮಂತ್ರ ಹೃದಯದಲ್ಲಿ ಧ್ಯಾನ, ಪ್ರಾಣದಲ್ಲಿ ಲಿಂಗ ನೆನಹು ಕರಿಗೊಂಡ ಶಿವಾತ್ಮಶರಣನ ಹೃದಯವೇ ಪರಮೇಶ್ವರರಿಗೆ ನಿವಾಸಸ್ಥಾನ, ನೆರೆಮನೆಯಾಗಿಪ್ಪುದಯ್ಯ. ಆ ಪರಮೇಶ್ವರನೊಳಗಣ ಸಮರಸ ಭಾವವೆ ಆ ಶರಣಂಗೆ ನಿತ್ಯ ನೇಮ ಪೂಜೆಯಾಗಿಪ್ಪುದಯ್ಯ. ಇದೇ ಪೂರ್ಣ ಶರಣಭಾವ. ಅಲ್ಲಿಯ ಲಿಂಗಸಿದ್ಧಿ, ಘನಲಿಂಗ ಪದಸ್ಥಿತಿ. ಲಿಂಗಪೂಜೆ. ಮತ್ತಲ್ಲಿಯೆ ನಿಶ್ಚಯವದೇ ಪರಮಾರ್ಥ. ಇದಲ್ಲದೆ ಅನ್ಯವಪ್ಪೆಲ್ಲವು ಆತ್ಮ ದುಃಖ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->