ಅಥವಾ

ಒಟ್ಟು 272 ಕಡೆಗಳಲ್ಲಿ , 62 ವಚನಕಾರರು , 236 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾದಾಖ್ಯ ದೇಹದ ಆದ್ಯಂತ ಶೂನ್ಯದ ಆಮೋದದಕ್ಷರವು ಕಂಗಳಾಗಿ ಆನಂದ ರೂಪು ಕಪಿಲಸಿದ್ಧಮಲ್ಲಿಕಾರ್ಜುನನ ನೇಮಾಕ್ಷರದ ರೂಪಕಳೆಯ ಪೇಳುವೆನಯಾ
--------------
ಸಿದ್ಧರಾಮೇಶ್ವರ
ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ, ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ. ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ. ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿಲೀಯವಾದರು.
--------------
ಸಿದ್ಧರಾಮೇಶ್ವರ
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ರೂಪು ಕುರೂಪುಗಳನು, ಲಿಂಗ ನೋಡಿದಡೆ ನೋಡುವನು, ಲಿಂಗ ನೂಕಿದಡೆ ತಾ ನೂಕುವನು. ಶಬ್ದಾಪಶಬ್ದಂಗಳನು ಲಿಂಗ ಕೇಳಿದಡೆ ಕೇಳುವನು, ಲಿಂಗ ತಾ ನೂಕಿದಡೆ ನೂಕುವನು. ಸುರಸ ಕುರಸಂಗಳನು ಲಿಂಗ ಸವಿದಡೆ ಸವಿವನು, ಲಿಂಗ ನೂಕಿದಡೆ ತಾ ನೂಕುವನು. ಗಂಧ ದುರ್ಗಂಧಗಳನು ಲಿಂಗ ವಾಸಿಸಿದಡೆ ವಾಸಿಸುವ, ಲಿಂಗ ನೂಕಿದಡೆ ತಾ ನೂಕುವನು. ಮೃದು ಕಠಿಣ ಶೀತೋಷ್ಣಂಗಳನು ಲಿಂಗ ಸೋಂಕಿದಡೆ ಸೋಂಕುವನು. ಲಿಂಗ ನೂಕಿದಡೆ ತಾ ನೂಕುವನು. ಲಿಂಗಮಧ್ಯಪ್ರಸಾದಿಯಾದ ಕಾರಣ ಲಿಂಗದೊಡನೆ ಕೂಡಿ ಅರಿದು ಭೋಗಿಸಿ ಸುಖಿಸುವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ಆತ್ಮಂಗೆ ಕಾಯವೆ ರೂಪು. ಆ ಕಾಯಕ್ಕೆ ಆತ್ಮನೆ ಹಾಹೆ. ಆ ಹಾಹೆಗೆ ಅರಿವೇ ಬೀಜ. ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
--------------
ತುರುಗಾಹಿ ರಾಮಣ್ಣ
ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ, ರೂಪು ನಿರೀಕ್ಷಣೆಯಲ್ಲಿ, ಶಬ್ದ ಗೋಚರದಲ್ಲಿ, ಸ್ಪರ್ಶ ತ್ವಕ್ಕಿನಲ್ಲಿ, ಪಂಚಪುಟ ಭೇದಂಗಳಲ್ಲಿ, ಅಷ್ಟಗುಣ ಮದಂಗಳ ಪಟ್ಟಣದ, ಷೋಡಶದ ರೂಡ್ಥಿಯ ಷಡ್ಚಕ್ರದ ಆಧಾರದ, ಪಂಚವಿಂಶತಿಯ ನಿಳೆಯದ ಸಂಚಾರದ, ನವಕವಾಟದ, ತ್ರಿಶಕ್ತಿ ಸಂಪದದ, ತ್ರಿಗುಣಾತ್ಮನ ತ್ರಿಗುಣ ಓಹರಿಯಲ್ಲಿ ಬಳಸಿಪ್ಪ ಬಂಧದಲ್ಲಿ ಮಗ್ನವಾಗದೆ, ಜಾಗ್ರ [ಸ್ವಪ್ನ] ಸುಷುಪ್ತಿ ತ್ರಿವಿಧ ಘಟಪಟಲ ತತ್ವನಿರಸನ ನಿರ್ವಿಕಾರನಾಗಿ, ಇಂತಿವರಲ್ಲಿ ಅವಘಾನವಾಗಿ ಮುಳುಗದೆ, ನೀರನಿರಿದ ಕೈದಿನಂತೆ ಕಲೆದೋರದೆ, ಆವ ಸುಖಂಗಳಲ್ಲಿ ಅಬ್ಥಿನ್ನವಾಗಿ, ಜಲದೊಳಗಣ ಶಿಲೆ, ಶಿಲೆಯೊಳಗಣ ವಹ್ನಿ ಸುಳುಹುದೋರದ ತೆರ, ಮಥನಕ್ಕೆ ಕಂಡು, ಕಾಣದಡಗಿಪ್ಪ ತೆರ, ಲಿಂಗಾಂಗಿಯ ಇರವು. ಇದು ಸಿದ್ಧವಾಗಬೇಕು, ಶರೀರದ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ. ಇದೇ ಅಂಜನಸಿದ್ಧಿ.
--------------
ಮನುಮುನಿ ಗುಮ್ಮಟದೇವ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಪಾಷಾಣದುದಕ ಏತರಿಂದ ದ್ರವ ? ಪಾಷಾಣದ ಪಾವಕ ಅದೇತರಿಂದ ಕ್ರೋಧ ? ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ? ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ?
--------------
ಮಧುವಯ್ಯ
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅತ್ತಿಯ ಹಣ್ಣು ಹಸ್ತ ನೇತ್ರಕ್ಕೆ ಮೃದು ಮಿಶ್ರವಿರ್ದಡೇನು, ಬಿಚ್ಚಿದರೆ ಕ್ರಿಮಿ ಘನವಯ್ಯಾ. ದುಃಸಂಸಾರಿ ಸಮಯಕ್ಕೆ ನಾಚಿ ಲಾಂಛನಧಾರಿಯಾದಡೇನು, ನುಡಿ ರೂಪು ನಯನ ನುಣುಪಲ್ಲದೆ, ಮನಭಾವವನೊರೆದುನೋಡಿದರೆ ದುಷ್ಕರ್ಮಘನ ಕಾಣಾ. ಇಂತಲ್ಲದೆ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ ತೆಂಗು ಬಾಳೆಯ ಫಲದಂತೆ ಬಿಚ್ಚಿನೋಡಿದರೆ ಲಿಂಗಸಾರಾಯಸುಖಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ ಅರುದ್ವಾರ ಕೂಡಿದ ಠಾವಿನಲ್ಲಿ, ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ ಮೂರ್ತಿಗೊಂಡು, ಶಬ್ದ ರೂಪು ಗಂಧಂಗಳ ಗ್ರಹಿಸುವಾತ ನೀನಲ್ಲದೆ ಮತ್ತಾರು ಹೇಳಾ? ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳಾ? ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ ಪ್ರಸಾದವ ಕರುಣಿಸಿದ ಕೃಪಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?
--------------
ಸ್ವತಂತ್ರ ಸಿದ್ಧಲಿಂಗ
ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ. [ಅದು] ಸಂದಿಗೆ ಸಾವಿರ ರೂಪು, ಕೊಂಬಿಗೆ ಹಿಂಗದ ವೆಜ್ಜ, ಅದರಂಗದ ಕಂಗಳು ಕಪ್ಪು. ಅದ ಕೊಂದವ[ರ] ತಂದು ಕೂಡಿದೆ ನನ್ನಂಗಳದಲ್ಲಿ. ಆ ಅಂಗಳ, ಅವರ ತಿಂದು ನುಂಗಿತ್ತು. ಮೂರು ಭುವನವ ನುಂಗಿದವರ ಕಂಡು, ಹಿಂಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->