ಅಥವಾ

ಒಟ್ಟು 22 ಕಡೆಗಳಲ್ಲಿ , 10 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ, ವಾಯುವಿನ ಚಲನೆ, ತರುಗುಲ್ಮ ಲತಾದಿಗಳಲ್ಲಿಯ ತಳಿರು ಪುಷ್ಪ ಷಡುವರ್ಣಂಗಳೆಲ್ಲ ಹಗಲಿನ ಪೂಜೆ. ಚಂದ್ರಪ್ರಕಾಶ ನಕ್ಷತ್ರ ಅಗ್ನಿ ವಿದ್ಯುತ್ತಾದಿಗಳು ದೀಪ್ತಮಯವೆನಿಸಿಪ್ಪವೆಲ್ಲ ಇರುಳಿನ ಪೂಜೆ. ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಹೋ ಹೋ ಗುರುವೆ ನಿಮ್ಮ ಚಮ್ಮಾವುಗೆಯ ಬಂಟ ನಾನಾಗಿರಲು ಅಂಜುವರೆ ? ಅಳುಕುವರೆ ? ಸಂಗಮನಾಥ ಬಂದು, ನಿಮ್ಮ ಮನವ ನೋಡಲೆಂದು ತಮ್ಮ ಮನವನಡ್ಡಲಿಕ್ಕಿದನೊಂದು ಲೀಲೆಯಿಂದ. ಅದು ನಿಮಗೆ ಸಹಜವಾಗಬಲ್ಲುದೆ ? ಮಂಜಿನ ಮೋಹರ, ರವಿಯ ಕಿರಣವ ಕೆಡಿಸಲಾಪುದೆ ? ನಿಮ್ಮ ನೆನೆವರಿಗೆ ಸಂಸಾರವಿಲ್ಲೆಂದು ಶ್ರುತಿಗಳು ಹೊಗಳುತ್ತಿರಲು ನಿಮ್ಮ ಅರುಹಿಂಗೆ ಕೇಡುಂಟೆ ? ಕೂಡಲಚೆನ್ನಸಂಗನ ಶರಣರ ಕರೆವಡೆ ಎನ್ನ ಮನವೆಂಬ ಚಮ್ಮಾವುಗೆಯ ಮೆಟ್ಟಿ ನಡೆಯಾ ಸಂಗನಬಸವಣ್ಣ
--------------
ಚನ್ನಬಸವಣ್ಣ
ಸಂಸಾರಸಂಗವ ಭೇದಿಸಿ ನೋಡುವಡೆ, ದೂರವೆ ? ಕಪಟ ಕನ್ನಡವೆ ? ರವಿಯ ತಪ್ಪಿಸಿ ಸುಳಿವ ಗುಹೇಶ್ವರನೆಂದರಿದ ಶರಣ ಸಂಸಾರಿಯೆ ?
--------------
ಅಲ್ಲಮಪ್ರಭುದೇವರು
ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
--------------
ಅಮುಗಿದೇವಯ್ಯ
ರವಿಯ ಕಿರಣಂಗಳ ರಮಿಸದೆ ಪಾಲಿಸದೆ ಆಲಿಸದೆ ಎಂದೂ ನಿಂದುದಾಗಿ, ಹಿಮಕರಾದಿಗ?ನು ಮನಸ್ತಂಭನೆಗೆ ತಾರದೆ ನಿಂದುದಾಗಿ, ದಿನಕರ ಅಬೋಧ ಸ್ತಂಭಗಳ ಅರ್ಪಿತವೆನ್ನದೆ ಆಯಿತ್ತಾಗಿ, ಘನಮನವೇದ್ಯ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಆನೆನ್ನದ ಪ್ರಸಾದಿ.
--------------
ಚನ್ನಬಸವಣ್ಣ
ಕಬ್ಬನಗಿದ ಗಾಣ ಬಲ್ಲುದೆ ಹಾಲ ಸವಿಯ ? ಗಗನದಲಾಡುವ ಪಕ್ಷಿ ಬಲ್ಲುದೆ ರವಿಯ ನಿಲವ ? ಹಗರಣಕ್ಕೆ ಪೂಜಿಸುವರು ಬಲ್ಲರೆ ನಮ್ಮ ಶರಣರ ಸುಳುಹ ? ನಡುಮುರಿದು ಗುಡುಗೂರಿದಡೇನು ಲಿಂಗದ ನಿಜವನರಿಯದನ್ನಕ್ಕ ? ಸಾವನ್ನಕ್ಕ ಜಪವ ಮಾಡಿದಡೇನು ಲಿಂಗದ ಪ್ರಾಣ ತನ್ನ ಪ್ರಾಣ ಒಡಗೂಡದನ್ನಕ್ಕ ? ಇಂತಿವರೆಲ್ಲರು ಅಭ್ಯಾಸಶಕ್ತಿಗರುಹಿಗರು ! ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಮಾಯಾಕೋಳಾಹಳ ಸಿದ್ಧರಾಮಯ್ಯದೇವರಿಗೆ ಅಹೋರಾತ್ರಿಯಲ್ಲಿ ನಮೋ ನಮೋ ಎಂದು ಬದುಕಿದೆನು ಕಾಣಾ ಪ್ರಭುವೆ.
--------------
ಚನ್ನಬಸವಣ್ಣ
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ ! ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು. ರವಿಯ ರಥದಚ್ಚು ಮುರಿಯಿತ್ತು ! ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರಗೈವ ಕಾಲದೊಳು ಚರಣಾಯುಧ ಕೂಗಲು ನಿದ್ರೆಗಳೆಯಲು ರವಿಯ ಮಧ್ಯೆ ಕತ್ತಲೆಗೆಡೆಯಿಲ್ಲ ನೋಡ. ಕೆಂಡಕ್ಕೆ ಬಂದೊರಲೆ ನಿಂದಿರಲೆಡೆಯಿಲ್ಲ ! ಜ್ಞಾನೋದಯವಾದ ಶರಣನ ಮುಂದೆ ತಮ್ಮ ಶರಣವೃಂದ ಗಾಲುಮೇಲುಗಳ ನಾಶ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿಷಮದಶ ಪದನವನು ವಶಕ್ಕೆ ತಂದು ನಿಲಿಸಿ ಸುಷುಮ್ನ ಸುಸರದ ಊದ್ರ್ವಪಥವನರಿದೆವೆಂದು ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ ಶಶಿಯಮೃತವನುಂಡು ಸುಖಿಯಾದೆನೆಂಬರು. ಇವರೆಲ್ಲರು ಉಪಾಧಿಯನರಿಯದೆ ಹೋದರು. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಬಯಲದ್ವೈತವ ನುಡಿವರು.
--------------
ಚಂದಿಮರಸ
ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ. ಬ್ರಹ್ಮನ ತಲೆಯ ಕಳೆಯಿತ್ತು ಮಾಯೆ. ವಿಷ್ಣುವಿನ ಕಷ್ಟಬಡಿಸಿತ್ತು ಮಾಯೆ. ಚಂದ್ರನ ಕ್ಷಯರೋಗಿಯ ಮಾಡಿತ್ತು ಮಾಯೆ. ರವಿಯ ಕೊಷ*ನ ಮಾಡಿತ್ತು ಮಾಯೆ. ಈ ಮಾಯೆಯೆಂಬ ವಿಧಿ ಆರಾರನೂ ಕೆಡಿಸಿತ್ತು ನೋಡ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಕಂಗಳನೋಟ, ಕರಸ್ಥಲದ ಲಿಂಗ ಹೃದಯದ ಜ್ಞಾನ- ಲಿಂಗವೆಂಬ ಲಿಂಗಮುಖದಲ್ಲಿ ಮಾತನಾಡುತ್ತಿರಲಾಗಿ, ನಡೆವ ಕಾಲು ಕೆಟ್ಟು, ಹಿಡಿವ ಕೈಯ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ನೆನೆವ ಮನದ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ನೋಡುವ ಕಂಗಳ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ಬೆಳಗಿನೊಳು ಬೆಳಗಾಗಿ, ಬೆಳಗು ಸಮರಸವಾಗಿ, ಇಂದು ಇಂದುವ ಕೂಡಿದಂತೆ, ರವಿ ರವಿಯ ಬೆರಸಿದಂತೆ, ಮಿಂಚು ಮಿಂಚನು ಕೂಡಿದಂತೆ, ಉಭಯದ ಸಂಚವಳಿದು ಸ್ವಯಂ ಜ್ಯೋತಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನ್ಯ ರಜವ ಸೋಂಕದೆ, ತನ್ನ ರಜವ ಬಾಧಿಸದೆ, ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು, ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ. ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು.
--------------
ಅಲ್ಲಮಪ್ರಭುದೇವರು
ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ, ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಕ್ಕಮಹಾದೇವಿ
ಭವಿಯ ಕಳೆದು, ಭವಿಯ ಬೋಧಿಸಿ ಬೇಡುವರು ಸಂಬಂಧಿಗಳಲ್ಲ. ರವಿಯ ಕಪ್ಪ ಕಳೆಯಲರಿಯದವರು ಸಂಬಂಧಿಗಳಲ್ಲ. ಭವಿಯ ಕಳೆದು ಭಕ್ತನ ಮಾಡುವವರು ಭಕ್ತರಲ್ಲ, ಸಂಬಂಧಿಗಳಲ್ಲ. ಇಂತೀ ಸಾರಾಯವಾರಿಗೂ ಅಳವಡದಾಗಿ ಕೊಂಡ ವ್ರತವನನುಸರಿಸಿ ನಡೆದು, ನಿಂದೆಗೆ ಬಂದ ಸಂದೇಹಿಯನೆಂತು ಸಂಬಂಧಿಯೆಂಬೆ ಕೂಡಲಚೆನ್ನಸಂಗಯ್ಯಾ?
--------------
ಚನ್ನಬಸವಣ್ಣ
ಇನ್ನಷ್ಟು ... -->