ಅಥವಾ

ಒಟ್ಟು 181 ಕಡೆಗಳಲ್ಲಿ , 42 ವಚನಕಾರರು , 145 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡುವಲ್ಲಿ ಎನ್ನ ನಾನರಿದು ಮಾಡಿದೆನಾದಡೆ, ನೀಡುವಲ್ಲಿ ಎನ್ನ ನಾನರಿದು ನೀಡಿದೆನಾದಡೆ, ನೀಡುವಲ್ಲಿ ರುಚಿಗೆ ಮನವೆಳೆಸಿ ಹಾರೈಸಿದೆನಾದಡೆ, ನಿಮಗಂದೆ ದ್ರೋಹವಯ್ಯಾ. ಮಾಡುವಲ್ಲಿ ನೀಡುವಲ್ಲಿ ಕೂಡೆ ಶುದ್ಧನಲ್ಲದಿರ್ದಡೆ, ನೀನಂದೆ ಮೂಗ ಕೊಯಿ ಕೂಡಲಸಂಗಮದೇವಾ.
--------------
ಬಸವಣ್ಣ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನ್ನ ತಾನರಿತು ಮಾಡುವಲ್ಲಿ ತಾ ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬ ಡಾಳಕತನವೇಕೆ? ಅದು ಗುರುಚರಕ್ಕೆ ಅರಿವಿನ ಮತವಲ್ಲ. ಇಂತಿವನರಿದು ಮರಳಿ ಕಾಡುವ ಶಬರವೇಷಿಗಳು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ: ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು. ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು. ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು; ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು; ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು ಪುನರಪಿಯ ಮಾಡಿ ಪುನರ್ದೀಕ್ಷೆಯ ಮಾಡಬೇಕು. ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ. ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ. ಭವಿಗೆ ಲಿಂಗವ ಕೊಡುವಲ್ಲಿ, ಲಿಂಗವಂತಂಗೆ ಹರರೂಪ ಮಾಡುವಲ್ಲಿ, ಹರರೂಪಿಂಗೆ ಅರಿವ ಹೇಳುವಲ್ಲಿ, ತ್ರಿವಿಧ ಗುರುರೂಪಾಯಿತ್ತು. ಅಂಗಕ್ಕೆ ಲಿಂಗವ ಕೊಡುವಲ್ಲಿ, ಜಂಗಮಸ್ಥಲವ ಮಾಡುವಲ್ಲಿ, ಆತ್ಮಬೋಧನೆಯ ಹೇಳುವಲ್ಲಿ, ಲಿಂಗಕ್ಕೆ ಆಚಾರ, ಸಮಯಕ್ಕೆ ದರಿಸಿನ, ಆತ್ಮಕ್ಕೆ ಬೋಧೆ, ಇಂತಿವನಾಧರಿಸಿ ಮಾಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ: ಜಂಗಮದ ಪಾದೋದಕ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಜಂಗಮದ ಕುಂದು ನಿಂದೆಯ ಕೇಳಬಾರದು. ಜಂಗಮಪ್ರಸಾದವ ಲಿಂಗಕ್ಕೆ ಕೊಡುವಲ್ಲಿ ಅರ್ಥ ಪ್ರಾಣ ಅಬ್ಥಿಮಾನವ ಮುಟ್ಟಿದಲ್ಲಿ ಚಿತ್ತದಲ್ಲಿ ಹೆಚ್ಚು ಕುಂದು ತೋರಿದಾಗಲೆ ಪ್ರಸಾದಕ್ಕೆ ದೂರ. ಇದು ಕಾರಣ, ದೇಹಭಾವವಳಿದವಂಗಲ್ಲದೆ ಪಾದೋದಕ ಪ್ರಸಾದವಿಲ್ಲಾ ಎಂದೆ. ವಿಶ್ವಾಸವುಂಟಾದಲ್ಲಿ ಕುರುಹಿನ ಮುದ್ರೆಯ ಬಯಕೆ ಉಂಟೆ ಅಯ್ಯಾ? ಅವಿಶ್ವಾಸವುಳ್ಳವಂಗೆ ಗುರುಚರದ ಮಾರ್ಗವಿಲ್ಲಾಯೆಂದೆ. ಸದಾಶಿವಮೂರ್ತಿಲಿಂಗವ ಹೀಗರಿವುದಕ್ಕೆಠಾವ ಕಾಣೆ.
--------------
ಅರಿವಿನ ಮಾರಿತಂದೆ
ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು. ವ್ರತ ನೇಮ ಕೃತ್ಯ ನಿತ್ಯವ ಮಾಡುವಲ್ಲಿ, ಅತಿಶಯನಾಗಿರಬೇಕು. ಪಟುಭಟನಾದಲ್ಲಿ ಉಭಯದಳ ಪಿತಾಮಹನಾಗಿರಬೇಕು. ಗತಿ ಬಟ್ಟೆಯ ತೋರುವ ಚರಗುರುದ್ವಯ ಗತಿಮಹನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು, ಲಿಂಗಪೂಜೆಯ ಮಾಡುವಲ್ಲಿ ಲಿಂಗಪೂಜೆಯಲ್ಲಿಯೇ ಮುಕ್ತರು, ಜಂಗಮಪೂಜೆಯ ಮಾಡುವಲ್ಲಿ ಜಂಗಮಪೂಜೆಯಲ್ಲಿಯೇ ಮುಕ್ತರು. ಮೂರೊಂದಾಗಲಾಗಿ ಬೇರೊಂದಂಗವಿಲ್ಲ. ಆಗುಚೇಗೆ ಮೂರರಲ್ಲಿ ಅಡಗಿದ ಮತ್ತೆ ಅಮರೇಶ್ವರಲಿಂಗವ ಪೂಜಿಸಲಿಲ್ಲ.
--------------
ಆಯ್ದಕ್ಕಿ ಮಾರಯ್ಯ
ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
--------------
ನುಲಿಯ ಚಂದಯ್ಯ
ಶ್ರೀಗುರು ಸಾಹಿತ್ಯಸಂಬಂಧವ ಮಾಡುವಲ್ಲಿ; ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು, ಹೇಳಿಕೊಟ್ಟ ವಿವರವನರಿಯದೆ, ಲಿಂಗದೊಳಗೆ ಜಂಗಮವುಂಟೆಂದು ಗಳಹುತಿಪ್ಪಿರಿ. ರಾಸಿಗಿಕ್ಕದ ಲಚ್ಚಣ ರಾಸಿಯ ಕೊಳಬಲ್ಲುದೆ, ರಾಸಿಯ ಒಡೆಯನಲ್ಲದೆ ?_ ಆ ಪರಿಯಲ್ಲಿ ಲಿಂಗವು ಜಂಗಮದ ಮುದ್ರೆ, ಅದಕ್ಕೆ ಜಂಗಮವೆ ಮುದ್ರಾಧಿಪತಿಯಾದ ಕಾರಣ, ಜಂಗಮದೊಳಗೆ ಲಿಂಗವುಂಟೆಂಬುದು ಸತ್ಯವಲ್ಲದೆ ಲಿಂಗದೊಳಗೆ ಜಂಗಮವುಂಟೆಂಬುದು ಅಸತ್ಯವು. ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ಫಲವಹುದೆ ?ಬೇರಿಂಗೆ ನೀಡಬೇಕಲ್ಲದೆ. ವೃಕ್ಷದ ಆಧಾರವೆ ಪೃಥ್ವಿ, ಪೃಥ್ವಿಯೆ ಜಂಗಮ, ಶಾಖೆಯೆ ಲಿಂಗವು. ದೇಹದ ಮೇಲೆ ಸಕಲಪದಾರ್ಥಂಗಳ ತಂದಿರಿಸಿದಡೆ ತೃಪ್ತಿಯಹುದೆ ? ಮುಖವ ನೋಡಿ ಒಳಯಿಂಕೆ ನೀಡಬೇಕಲ್ಲದೆ. ಅದು ಕಾರಣವಾಗಿ_ಅವಯವಂಗಳು ಕಾಣಲ್ಪಟ್ಟ ಮುಖವುಳ್ಳುದೆ ಜಂಗಮ ದೇಹವೆ ಲಿಂಗ. ಲಿಂಗವೆಂಬುದು ಜಂಗಮದೊಂದಂಗ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿಯಿಲ್ಲದಿರಬೇಕು. ಅದು ಅಸಮಾಕ್ಷನ ಬರವು, ಪಶುಪತಿಯ ಇರವು, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಬಳಿಕ ಕ್ರಿ....ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದ ನಿನ್ನು ನಿಮಿ...ರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲ ದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ...ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದ ಲಾದ ಶಿವಕ್ರಿಯೆಗಳ ನುಪದೇಶಂಗೆಯುಂತು ಪೇಳ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಬ್ಥಿಷೇಕ, ವಿಭೂತಿಯ ಪಟ್ಟ, ಲಿಂಗಾಯತ, ಲಿಂಗಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೊದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳಿರಿಸಿ ಮಂತ್ರ ನ್ಯಾಸಾದಿಗಳಂ ಮಾಡಿ ಮಂತ್ರಶರೀರಿ ಎನಿಸೂದೆ ಸ್ವಸ್ತಿಕಾರೋಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಬ್ಥಿಷೇಕವೆನಿ ಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂ ಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೊದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗಸಂಬಂದ್ಥಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ :ಶ್ರೇಷ್ಠರುಗಳಾ ವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶ ಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ... [ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು...ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲ ವನೊ.... ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲ ಭವದೊಳು...ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯ ಲಿಂಗ ನೀನೆಂದು ತಿಳುಪುವದೆ ಅ...ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲ ದುಸತ್ಯಶುದ್ಧೀದಕ್ಷೆ. ಯೀ ಸಪ್ತಕವ....ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]....ಯ ಕರಣಭಾವಾರ್ಪಿತಗಳಂ ಸರ್ವಕಾಲದೊಳು ಇಷ್ಟ ಪ್ರಾಣವಾಸ ಲಿಂಗಂ.....ದಿರ್ಪುದೆ ....ದೀಕ್ಷೆಯೆನಿಪುದು. ಆದಿಮಧ್ಯಾವ ಸಾನರಹಿತ ಶಿವ ತಾನೆ ನಲ....ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶ ಮಂ....(ಅಪೂರ್ಣ)
--------------
ಶಾಂತವೀರೇಶ್ವರ
ಇನ್ನಷ್ಟು ... -->