ಅಥವಾ

ಒಟ್ಟು 78 ಕಡೆಗಳಲ್ಲಿ , 32 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.
--------------
ಜೇಡರ ದಾಸಿಮಯ್ಯ
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ, ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ. ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ. ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ. ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ. ತನುಮನಧನವೊಂದಾಗಿ ತನ್ನದಾದಡೆ ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು ಬೇರೆ ಮುಕ್ತಿ ಎಂತಪ್ಪುದಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ. ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ, ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
--------------
ಬಸವಣ್ಣ
ಅಹುದಹುದು ಇಂತಿರಬೇಡವೆ ನಿರಹಂಕಾರ. ಮಹಾಜ್ಞಾನಕ್ಕೆ ನಿರಹಂಕಾರವೆ ಶೃಂಗಾರ. ನಿರಹಂಕಾರಕ್ಕೆ ಭಕ್ತಿಯೆ ಶೃಂಗಾರ. ಭಕ್ತಿಗೆ ಬಸವಣ್ಣನೆ ಶೃಂಗಾರ. ಬಸವಣ್ಣಂಗೆ ಚೆನ್ನಬಸವಣ್ಣನೆ ಶೃಂಗಾರ. ಕಲಿದೇವರದೇವಾ, ಎನಗೆಯೂ ನಿನಗೆಯೂ ಚೆನ್ನಬಸವಣ್ಣನೆ ಶೃಂಗಾರ.
--------------
ಮಡಿವಾಳ ಮಾಚಿದೇವ
ಮರಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ ; ಅರಿವಿಂಗೆ ಪ್ರಾಣಲಿಂಗ ಬೇರೆ ಕಾಣಿರಣ್ಣಾ. ನಿರ್ಣಯವಿಲ್ಲದ ಭಕ್ತಿಗೆ ಬರಿದೆ ಬಳಲಲದೇತಕೆ ? ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ ಮರಳಿ ಭವಕ್ಕೆ ಬಹನೆ ?
--------------
ಅಕ್ಕಮಹಾದೇವಿ
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಸತ್ವಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು. ಮತ್ತತ್ವವಿದ್ದಲ್ಲಿ ನಿಶ್ಚಯವ ಹೇಳಲಾಗಿ, ಮಹಾಪ್ರಸಾದವೆಂದು ಕೈಕೊಳಬೇಕು. ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ, ಎನ್ನ ಸತ್ಯಕ್ಕೆ ನೀ ಸತಿಯಾದ ಕಾರಣ, ಎನ್ನ ಸುಖದುಃಖ ನಿನ್ನ ಸುಖದುಃಖ, ಅನ್ಯವಿಲ್ಲ. ಇದಕ್ಕೆ ಬ್ಥಿನ್ನಭೇದವೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು? ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು? ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ. ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು, ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಭಕ್ತಿಗೆ ಭಕ್ತ ಬಸವಣ್ಣನಯ್ಯಾ. ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ. ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಟೆದ ಕಲ್ಲು ಲಿಂಗವೆಂದೆನಿಸಿತು; ಕಟೆಯದ ಕಲ್ಲು ಕಲ್ಲೆನಿಸಿತ್ತು. ಪೂಜಿಸಿದ ಮಾನವ ಭಕ್ತನೆನಿಸಿದನು; ಪೂಜಿಸದ ಮಾನವ ಮಾನವನೆನಿಸಿದನು. ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ; ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು. ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಮಿಸಿದೆನಯ್ಯಾ ಬಸವಣ್ಣನ ಭಕ್ತಿಗೆ; ಕಾಮಿಸಿದೆನಯ್ಯಾ ಬಸವಣ್ಣನ ಯುಕ್ತಿಗೆ; ಕಾಮಿಸಿದ ಕಾಮವೆ ಕೈಸಾರಿತ್ತಯ್ಯಾ, ಬಸವಣ್ಣನ ಕರುಣದಿಂದ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು. ಅದೆಂತೆಂದಡೆ: ಬಾಲರು ಭ್ರಾಮಕರು ಚೋರರು ಕಟುಕರು ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_ ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ? ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು. ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು. ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ, ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ. ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ, ಭಕ್ತಿಗೆ ಇದಿರೆಡೆಯಿಲ್ಲ, ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ. ಇದು ಕಟ್ಟಾಚಾರಿಯ ದೃಷ್ಟ, ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ.
--------------
ಏಲೇಶ್ವರ ಕೇತಯ್ಯ
ಎಲೆ ದೇವಾ, ನೀನೊಬ್ಬನೆ ಹಲವು ರೂಪಾಗಿ ಬಂದೆಯಯ್ಯಾ ; ಭಕ್ತಿಯಲ್ಲಿ ಬಸವಣ್ಣನಾಗಿ ಬಂದಿರಿ ; ಮನದ ಮೈಲಿಗೆಯ ತೊಳೆಯುವಲ್ಲಿ ಮಡಿವಾಳನಾಗಿ ಬಂದಿರಿ; ಎನ್ನ ಭಕ್ತಿಗೆ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲನಾಗಿ ಬಂದಿರಿ.
--------------
ಸಿದ್ಧರಾಮೇಶ್ವರ
ಪುತ್ರ ಮಿತ್ರ ಕಳತ್ರಕ್ಕೆ ಸ್ನೇಹಿಸುವಂತೆ ಶ್ರೀಗುರು ಲಿಂಗ ಜಂಗಮಕ್ಕೆ ಸ್ನೇಹಿಸಬೇಕು. ಸ್ನೇಹವೇ ಬಾತೆ ಕಾಣಿರೋ, ಲಿಂಗಕ್ಕೆ ಸ್ನೇಹವೇ ಭಕ್ತಿ ಕಾಣಿರೋ, ಸ್ನೇಹವೇ ಭಕ್ತಿಗೆ ಮೂಲ ಕಾಣಿರೋ, ಕಣ್ಣಪ್ಪ, ಮಾದಾರ ಚೆನ್ನಯ್ಯ, ಚೋಳಿಯಕ್ಕನ ಸ್ನೇಹವ ನೋಡಿ ಭೋ. ಅವರಂತೆ ಸ್ನೇಹವ ಮಾಡಲು ಭಕ್ತಿ ಮುಕ್ತಿ ಪರಿಣಾಮ ಮಹಾಸುಖ. ಆ ಸುಖಸ್ವರೂಪ ತಾನಾಗಿ ಇಪ್ಪನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->