ಅಥವಾ

ಒಟ್ಟು 100 ಕಡೆಗಳಲ್ಲಿ , 28 ವಚನಕಾರರು , 78 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು. ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು. ಗತಿಯನರಸಲುಂಟೆ? ಮತಿಯನರಸಲುಂಟೆ? ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು. ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು ? ಉಂಬಡೆ ಒಡಲಿಲ್ಲ ಲಿಂಗಾರ್ಚನೆಯಿಲ್ಲ, ಅಂಗಭೋಗಕ್ಕೆ ಕರಚರಣಂಗಳಿಲ್ಲ. ಅಂಗವಿಲ್ಲೆಂಬ ಮಾತು ನಿಮಗೇಕೆ ? ಸುಡು, ಭಂಗ. ಲಿಂಗ ನಿರಾಳ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಶಿವಲಿಂಗ ನೆಲಸುವಂಗೆ ಮೂರುಸ್ಥಲವಾಗಬೇಕು. ಅವಾವವಯ್ಯಾಯೆಂದಡೆ: ಗುರುಲಿಂಗಜಂಗಮದಲ್ಲಿ ಭಕ್ತಿ. ಅರಿವ ಸಾದ್ಥಿಸುವಲ್ಲಿ ಜ್ಞಾನ. ಕರಣಾದಿಗಳ ಭಂಗ ವೈರಾಗ್ಯ. ಇನಿತಿಲ್ಲದೆ ಲಿಂಗವ ಪೂಜಿಸಿಹೆನೆಂಬ, ಲಿಂಗವ ಧರಿಸಿಹೆನೆಂಬ ಲಜ್ಜೆಭಂಡರ ಕಂಡು, ನಾ ನಾಚಿದೆನಯ್ಯಾ. ಇದು ಕಾರಣ ಗದ್ದುಗೆಗೆಟ್ಟು ಎದ್ದಾತನು ಲಿಂಗವಲ್ಲ ಕಾಣಾ. ಲಿಂಗ ಸತ್ತ, ನಾ ಕೆಟ್ಟೆ, ರಂಡೆಗೂಳೆನಿಸಲಾರೆ. ಎನ್ನ ಹತ್ಯವ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ? ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ. ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ, ಕೊಡುಕೊಳ್ಳಿಯಳಿದುಳಿದರೆ ಎರಡಕ್ಕೆ ಬಂಗ. ಒಂದು ಭಂಗ ಭವಕ್ಕೆ ಬೀಜ, ಎರಡು ಭಂಗ ಲೀಲೆಗೇಡು, ಒಂದೆರಡರಿಯದೆ ಅಂದಂದಿಗಿತ್ತಡೆ ಅವಧಾನಿಸಿಕೊ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿರವಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ. ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ ಎನ್ನ ಅಂಗದ ಮೇಲೆ ಲಿಂಗವಿಲ್ಲ. ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ. ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ. ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ, ಎನ್ನ ಅರುವಿಂಗೆ ಭಂಗ ನೋಡಾ. ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ. ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ. ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ.
--------------
ಅಮುಗೆ ರಾಯಮ್ಮ
ತನು ನಾಗವತ್ತಿಗೆಯಾದಡೆ ಅರ್ಪಿತವ ಮಾಡಬೇಕು, ತನು ಸೆಜ್ಜೆಯಾದಡೆ ಅರ್ಪಿಸಲಿಲ್ಲ ಕಂಡಯ್ಯಾ. ತನು ಸಿಂಹಾಸನವಾದಡೆ ಸುಳಿವುದೆ ಭಂಗ. ಪ್ರಾಣಲಿಂಗ ಸಂಬಂಧಿಯಾದಡೆ, ಅದನು ಎರಡು ಮಾಡಿಕೊಂಡು ನುಡಿಯಲೇಕಯ್ಯಾ ? ಒಂದೆಯೆಂದು ನುಡಿವ ಸೋಹದವನಲ್ಲ, ಬಹ ಪದಾರ್ಥದ ಲಾಭದವನಲ್ಲ, ಹೋಹ ಪದಾರ್ಥದ ಚೇಗೆಯವನಲ್ಲ, ಪ್ರಪಂಚವ ಹೊತ್ತುಕೊಂಬ ಭಾರದವ ತಾನಲ್ಲ. ಕೂಡಲಚೆನ್ನಸಂಗನ ಶರಣನುಪಮಾತೀತನು.
--------------
ಚನ್ನಬಸವಣ್ಣ
ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು. ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ ಗನ್ನದಿಂದ ತಾವು ಗಳಿಸಿ ಕೂಡುವುದು, ಅದು ತಾನೆ ಅನ್ಯಾಯವಲ್ಲವೆ? ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ, ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ. ಇಂತಿವನರಿಯದೆ ಮೂಗ ಕೊಯಿದು ಮಾರಿ, ಹಣ್ಣ ಮೆಲುವ ಅಣ್ಣಗಳಿಗೇಕೆ ಗುರುಚರಸ್ಥಲ? ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
``......................ರು, ನೀವು ಕೇಳಿ, ನಿಚ್ಚಕ್ಕೆ ನಿಜಹುಸಿಯ ಕಂಡೆವಲ್ಲಾ ! ವಾಯು ಬೀಸುವಲ್ಲಿ ಆಕಾಶ ಬಲಿದಲ್ಲಿ ಲಿಂಗಾರ್ಪಿತ ಮುಖವನರಿಯರಲ್ಲ. ಭೋಜನವನುಂಡು ಭಾಜನವನಲ್ಲಿಟ್ಟು ಹೋಹ ಹಿರಿಯರ ವ್ರತಕ್ಕೆ ಅದೇ ಭಂಗ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು
--------------
ಅಕ್ಕಮ್ಮ
ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ. ಇಲ್ಲ ಎಂದಡೆ ಸಮಯಕ್ಕೆ ದೂರ, ಉಂಟೆಂದಡೆ ಜ್ಞಾನಕ್ಕೆ ದೂರ. ಉಭಯವ ಸಂಪಾದಿಸುವದಕ್ಕೆ ಎನಗೆ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ ? ಕಾಲಕಲ್ಪಿತ ಉಪಾಧಿಯುಳ್ಳನ್ನಕ್ಕರ ಶೀಲವೆಂಬುದು ಭಂಗ. ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯೆ ತಾನೆಂದು ತಿಳಿಯದನ್ನಕ್ಕರ, ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->