ಅಥವಾ

ಒಟ್ಟು 282 ಕಡೆಗಳಲ್ಲಿ , 52 ವಚನಕಾರರು , 234 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಸ್ರಶೀರ್ಷನಾದಿಪುರುಷನು. ವೇದಪುರುಷನೊಬ್ಬ ಪುರುಷನು. ತ್ರಿಪಾದ ಊಧ್ರ್ವನೊಬ್ಬ ಪುರುಷನು. ಉದನ್ಮುಖನೊಬ್ಬ ಪುರುಷನು. ಉದಯಪುರುಷನೊಬ್ಬ ಪುರುಷನು. ವಿರಾಟ್ಪುರುಷನೊಬ್ಬ ಪುರುಷನು. ಆದಿಪುರುಷನೊಬ್ಬ ಪುರುಷನು. ವಿಯತ್ಪುರುಷನೊಬ್ಬ ಪುರುಷನು. ತದ್ವಿಯತ್ಪುರುಷ ಪುರುಷರಿಲ್ಲದ ಪ್ರಭೆ ನೋಡಿದರೆ, ವೇದನಾದಾತೀತ ತೂರ್ಯಪರಮಾನಂದ ನಿರವಯ ಷಟ್‍ತ್ರಿಂಶತ್‍ಪ್ರಭಾಪಟಲಪ್ರಭೆಯ ಬೆಳಗಿದೆ ನೋಡಿರೆ. ಬೆಳಗಿನೊಳಗಣ ಮಹಾಬೆಳಗಿನ ಬೆಳಗು ಕೂಡಲಸಂಗಯ್ಯ.
--------------
ಬಸವಣ್ಣ
ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು ಹದುಳ ಪಟ್ಟಣಮಾಡಿ ಒಪ್ಪಿತೋರಿ ಸಮತೆ ಅದ್ಥಿಕಾರದ ಸುಮತಿಯಾದುದು. ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ. ಆನಂದ ಪಾತ್ರೆಯ ಸಮತೆ ತೈಲವನೆರೆಯೆ ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು, ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಎಯ್ದಿದ ಬೆಳಗು ಸಮತೆಯಾದೆ.
--------------
ಸಿದ್ಧರಾಮೇಶ್ವರ
ಗುರುಲಿಂಗ ಉದಯವಾದ ಉದಯವ ನೋಡಿರಯ್ಯಾ. ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು ! ಬೆಳಗು ಬೆಳದಿಂಗಳಾಯಿತ್ತು. ಕೂಡಲಚೆನ್ನಸಂಗಯ್ಯನಲ್ಲಿ ಒಲವಿನ ಉದಯದ ದರ್ಪಣದಿಂದ.
--------------
ಚನ್ನಬಸವಣ್ಣ
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ, ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ. ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ ಅದೆ.
--------------
ಅರಿವಿನ ಮಾರಿತಂದೆ
ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನದ ಗಮನವ ಸಹಜದ ಉದಯದಲ್ಲಿ ಏನೆಂದರಿಯೆನು. ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು. ಕೂಡಲಸಂಗಮದೇವನ ಧ್ಯಾನದಿಂದ ಏನೆಂದರಿಯೆನು.
--------------
ಬಸವಣ್ಣ
ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅದ್ಥಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಐದು ತತ್ವ, ಐದು ಭೂತ, ಐದು ಅಂಗ, ಐದು ಲಿಂಗ, ಐದು ಸುಗಂಧ, ಐದರಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳು ಕೂಡಿ ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಶರಣಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ, ಸ್ಥಿತಿಯಿಲ್ಲವಾಗಿ ಲಯವಿಲ್ಲ, ಲಯವಿಲ್ಲವಾಗಿ ದೇಹನಾಮ ಪ್ರವರ್ತನೆಯಿಲ್ಲ, ಇವಾವುದೂ ಇಲ್ಲದ ಕಾರಣ, ಗುಹೇಶ್ವರಯ್ಯಾ, ನಿಮ್ಮ ಶರಣ ಬಚ್ಚಬರಿಯ ಬೆಳಗು.
--------------
ಅಲ್ಲಮಪ್ರಭುದೇವರು
ಐವತ್ತೆರಡೆಸಳಿನ ಸ್ಥಾವರಗದ್ದುಗೆಯ ಮೇಲೆ ಪರಂಜ್ಯೋತಿಲಿಂಗವ ಕಂಡೆನಯ್ಯ. ಆ ಲಿಂಗದೊಳಗೆ ಅನಂತಕೋಟಿ ನೋಮಸೂರ್ಯರ ಬೆಳಗು ನೋಡಾ. ಆ ಬೆಳಗ ನೋಡಹೋಗದ ಮುನ್ನ, ಅದು ಎನ್ನ ನುಂಗಿ, ಬೆಳಗು ತನ್ಮಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ, ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ, ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ. ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ ಮಹಾಭೂತ, ವಾಮದೇವವಕ್ತ್ರ, ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ, ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ. ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ, ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ. ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ. ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ. ಹೃದಯ ಸ್ಥಾನದಲ್ಲಿ ಅನಾಹತಚಕ್ರ, ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ, ಈಶ್ವರ ಪೂಜಾರಿ ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ. ಕÀಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ, ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_ ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ. ಬಾಲಷಟ್ಕೋಟಿ ಸೂರ್ಯಪ್ರಕಾಶ ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ. ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ. ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ] ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ. ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ, ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_ ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಯ್ಯಾ, ನಿನ್ನ ಬೆಳಗು ಅನಂತಕೋಟಿ ಸೋಮ-ಸೂರ್ಯಾಗ್ನಿ ಬೆಳಗಿಂಗೆ ಮೀರಿಪ್ಪುದು. ನಾ ನೋಡಲಾರೆ ಅಡ್ಡಬಂದು ಕೂಡಿಕೊ ಅಪ್ರತಿಮ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->