ಅಥವಾ

ಒಟ್ಟು 99 ಕಡೆಗಳಲ್ಲಿ , 43 ವಚನಕಾರರು , 93 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿಕಾರಿ ಭಿಕಾರಕ್ಕೆಳಸ. ಉಣ್ಣಲು ಉಡಲು ಕಾಣದಾತ ಭಿಕಾರಿ. ತನು ಮೀಸಲು, ಮನ ಮೀಸಲು, ಬಾಯಿ ಬೋರು ಬೋರು. ಮರಣವಳಿದುಳಿದಾತ ಭಿಕಾರಿ. ಸಂಚಲದ ಪಂಚಕರಣಗಳ ತೆಗೆದುಂಡು, ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ, ಕರುತಿರುವ ಗೊರವಾ
--------------
ಭಿಕಾರಿ ಭೀಮಯ್ಯ
ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ ಕೈದೇನ ಮಾಡುವುದು ? ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ ವಿಷವೇನ ಮಾಡುವುದು ? ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?
--------------
ರಾಯಸದ ಮಂಚಣ್ಣ
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ, ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ- ಇಂತೀ ಅಯಿದರ ಗುಣ ಎಡೆಯಾಟ ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ, ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಹಿಂಚುಮುಂಚಿಗೆ ಸಿಕ್ಕದೆ, ಕುಡಿವೆಳಗಿನ ಮಿಂಚಿನ ಸಂಚದಂತಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಶಿವಶಿವಾ, ಈ ಮಾಯಾಸಂಸಾರಯುಕ್ತವಾದ ದೇಹದ ಸುಖ ಹೇಳಲಂಜುವೆ. ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ, ಲಾಲಿಸಿ ಕೇಳಿರಿ, ಎಲುವಿನ ಕಂಬ, ಎಲುವಿನ ತೊಲೆಗಳು, ಸಂದೆಲವುಗಳೆ ಬಿಗಿ ಮೊಳೆಗಳು, ಕರುಳಜಾಳಿಗೆ ಬಿಗಿಜಂತಿಗಳು, ಬರುಕಿ ಎಲವುಗಳೆ ಜಂತಿಗಳು, ಬೆರಳೆಲವುಗಳೆ ಚಿಲಿಕೆಗಳು. ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು, ರಕ್ತದ ಸಾರಣೆಗಳು, ಮಜ್ಜದ ಮಡುಗಳು, ಕೀವಿನ ಕುಣಿಗಳು, ಪಿತ್ತದ ಕೊಂಡಗಳು, ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು, ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು, ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು. ಬಾಯಿ ಎಂಬುದೊಂದು ದೊಡ್ಡ ದರವಾಜು. ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ ಮೂವರು ಕರ್ತೃಗಳಾಗಿಹರು. ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ. ಇಂತೀ ತ್ರಿವಿಧ ಭೂತಸ್ವರೂಪರಾದ ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು. ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು, ಮಣ್ಣು ಬ್ರಹ್ಮನಹಂಗು, ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು ಮಿಥೆಯೆಂದು ತಿಳಿದು ವಿಸರ್ಜಿಸಲರಿಯದೆ, ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ, ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ ಮಲತ್ರಯದಾಶೆಗೆ ಹೊಡದಾಡಿ ಹೊತ್ತುಗಳೆದು ಸತ್ತುಹೋಗುವ ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ ! ಮುಂದೆ ಹೊಲೆಮಾದಿಗರ ಮನೆಯಲ್ಲಿ ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಿತ್ತ ಶುದ್ದವಾದಲ್ಲಿಯೆ ಮಜ್ಜನದ ಮಂಡೆ. ಆಂಗದಾಪ್ಯಾಯನವರತಲ್ಲಿಯೆ ಎಂಬುದಕ್ಕೆ ಬಾಯಿ. ಸಂದುಸಂಶಯ ಹರಿದಲ್ಲಿಯೆ ಲಿಂಗದ ಸಂಸರ್ಗ. ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೈ[ಯ]ಮರೆದು ಕಾದುವ ಕಾಳಗವದೇನೋ? ಮೈಮರೆದು ಮಾಡುವ ಮಾಟವದೇನೋ? ಬಾಯಿ ಮರೆದು ಉಂಬ ಊಟವದೇನೋ? ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ ಜನ್ಮದ ಮೃತ್ಯು ನೋಡಾ. ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ. ಸಂಕಲ್ಪ ವಿಕಲ್ಪವಿಲ್ಲದೆ ಮನ ಲಿಂಗಸಾಹಿತ್ಯವಾದರೆ ಅರ್ಪಿತ; ಅದು ಪ್ರಸಾದ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ, ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ. ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ, ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ ಹಾರಾಡುವ ಬಯಲರೂಪು, ತೋರದ ಆಗರದಲ್ಲಿ ಹಾರಿಹೋಯಿತ್ತು. ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು, ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ, ನೈಋತ್ಯ ಕರ, ವರುಣ ಹೃತ್ಕಮಲ, ವಾಯವ್ಯ ನಾಬ್ಥಿ, ಕುಬೇರ ಗುಹ್ಯ, ಈಶಾನ ಜಂಘೆ, ಇಂತೀ ಅಷ್ಟತನುಮೂರ್ತಿ ರೋಹವಾಹ ಪ್ರಮಾಣು. ಅವರೋಹವಾಗಿ ಮುಮುಕ್ಷುವಾಗಿ ಅಷ್ಟತನುವಿನಲ್ಲಿ ಆತ್ಮನು ನಿಶ್ಚಯವಾದುದನರಿದು ಸದ್ಯೋಜಾತಲಿಂಗವ ಹೊರೆಯಿಲ್ಲದೆ ಕೂಡಬೇಕು.
--------------
ಅವಸರದ ರೇಕಣ್ಣ
ಮುಪ್ಪುರದರಸಿಂಗೆ ಮುಖವೈದು, ಬಾಯಿ ಹದಿನಾರು, ಹಲ್ಲು ಇನ್ನೂರ ಹದಿನಾರು ನೋಡಾ. ಆರೂಢನಂಗದಲ್ಲಿ ಅರ್ಭುತದ ಕಿಚ್ಚು ಹುಟ್ಟಲು ಮೂರೂರು ಬೆಂದು, ಮುಖವೈದು ಕೆಟ್ಟು, ಬಾಯಿ ಹದಿನಾರು ಮುಚ್ಚಿ, ಇನ್ನೂರಹದಿನಾರು ಹಲ್ಲು ಮುರಿದವು ನೋಡಾ. ಮುಪ್ಪರದರಸ ನುಂಗಿದ್ದ ಕಿಚ್ಚು ನಿಷ್ಪತ್ತಿಯಾಗಲು ಲಿಂಗಾಂಗ ಸಂಯೋಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತನ ದಿವ್ಯರೂಪು ನೋಡಿ ಎನ್ನ ಕಂಗಳು ದಣಿಯವು. ಆತನ ಲಲ್ಲೆವಾತ ಕೇಳಿ ಎನ್ನ ಕಿವಿಗಳು ದಣಿಯವು. ಆತನ ಜಿಹ್ವೆಯ ಚುಂಬಿಸಿ ಎನ್ನ ಬಾಯಿ ದಣಿಯದು. ಆತನ ಸರ್ವಾಂಗವನಪ್ಪಿ ಎನ್ನ ತನು ದಣಿಯದು. ಆ ಅಖಂಡೇಶ್ವರ ಕೂಡಿ ಒಳಪೊಕ್ಕು ಪರಿಣಾಮ ಸೂರೆಗೊಂಡು ಎನ್ನ ಮನ ದಣಿಯದು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->