ಅಥವಾ

ಒಟ್ಟು 318 ಕಡೆಗಳಲ್ಲಿ , 13 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು. ಚಂದ್ರಲೋಕದವರೆಲ್ಲರೂ ಷೋಡಶಕಲಾ ಪರಿಪೂರ್ಣ ಬಸವಾ ಎಂದೆಂಬರು. ಯುಗಕೋಟಿಬ್ರಹ್ಮರೆಲ್ಲರೂ ಪರಶಿವ ಬಸವಾ ಎಂದೆಂಬರು. ಹರಿವಿರಿಂಚಿಗಳೆಲ್ಲರೂ ಗುರುಲಿಂಗ ಬಸವಾ ಎಂದೆಂಬರು. ಅಷ್ಟದಿಕ್ಪಾಲಕರೆಲ್ಲರೂ ಪರಶಿವ ಬಸವಾ ಎಂದೆಂಬರು. ಸುರಪಡೆಯಲ್ಲಾ ಅಮೃತಸಾಗರ ಬಸವಾ ಎಂದೆಂಬರು. ನವನಾಥಸಿದ್ಧರೆಲ್ಲರೂ ಪರಮಘುಟಿಕೆ ಬಸವಾ ಎಂದೆಂಬರು. ಲಂಬೋದರ ಕುಂಭೋದರ ದಾರುಕ ರೇಣುಕ ಗೌರೀಸುತ ತಾಂಡವರೆಲ್ಲರೂ ಸಕಲಜೀವಚೈತನ್ಯ ಮಾತ್ರ ಬಸವಾ ಎಂದೆಂಬರು. ಓತವರೆಲ್ಲರೂ ಮಾತಾಪಿತ ಬಸವಾ ಎಂದೆಂಬರು. ಒಲಿದವರೆಲ್ಲರೂ ಪ್ರಾಣ ಪರಿಣಾಮಿ ಬಸವಾ ಎಂದೆಂಬರು. ಆನೇನೆಂಬೆನು, ಉಪಮಿಸಬಾರದ ಮಹಾಘನ ಮಹಿಮನ.
--------------
ಮಡಿವಾಳ ಮಾಚಿದೇವ
ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
--------------
ನೀಲಮ್ಮ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಅಧಿಕ ತೇಜೋನ್ಮಯ ಬಸವಾ. ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ. ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ ಪ್ರಣವಮೂರ್ತಿಯಯ್ಯಾ ಬಸವಯ್ಯನು. ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಎಲೆ ಅಯ್ಯಾ ಬಸವಾ ಎಲೆ ಪ್ರಣವ ಬಸವಾ ಏನಯ್ಯಾ ಸಂಗಯ್ಯಾ, ಬಸವಾ.
--------------
ನೀಲಮ್ಮ
ಮುಕ್ತಿಯ ಕೂಟಕ್ಕೆ ಮೂಗ ನೀನೆ ಬಸವಾ. ಭಕ್ತಿಯ ತನುಸಂಬಂದ್ಥಿ ನೀನೆ ಬಸವಾ. ಎನಿತೆನಿತು ಜರಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಎನಿತೆನಿತು ಕಡಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ. ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.
--------------
ಸಿದ್ಧರಾಮೇಶ್ವರ
ಸಯದಾನವರತ ಬಸವಾ. ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ
--------------
ನೀಲಮ್ಮ
ಪರಮನ ಹಂಗು, ಪ್ರಾಣದ ಸಂಗ ಉಂಟೆಂದೆನಲಿಲ್ಲ ಬಸವಾ. ಪರಶಿವನ ವಿಲಾಸದಲ್ಲಿರಲೊಂದುದಿನ ಬಸವಾ ಎಂಬ ಮೂರಕ್ಷರವ ಕಂಡೆ. ಬಸವಾ ಎಂಬ ಮೂರಕ್ಷರವ ಕಂಡು, ಪ್ರಾಣಲಿಂಗಸಂಬಂಧಿಯಾದೆನು ನಾನು ಬಸವಾ. ಆ ಪ್ರಣವದ ಹೊಳಹನರಿಯಹೋದಡೆ, ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ. ಸಂಗಯ್ಯಾ, ಸ್ವಯಲಿಂಗಸಂಬಂಧಿಯಾನಾದೆನು.
--------------
ನೀಲಮ್ಮ
ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ. ಘನವ ಕಂಡೆ ಕಂಡೆ ಮನದಲ್ಲಿ ನಾನು ಬಸವಾ. ತನುವಿಲ್ಲವೆನಗೆ ಬಸವಾ, ಸಂಗಯ್ಯಾ, ಬಸವನಳಿದಬಳಿಕ.
--------------
ನೀಲಮ್ಮ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಪ್ರಮಾಣದ ತಾಣದಲ್ಲಿ ಅಘೋರವಕ್ತ್ರ ಸಂಭಾಷಣೆಯ ಮಾಡಲು ಬಸವಯ್ಯನ ರೂಪು ಎನುತಿದ್ದೆನು. ಸಂಗಯ್ಯನಲ್ಲಿ ಪ್ರಭೆಯಳಿಯಿತ್ತು ಬಸವಾ.
--------------
ನೀಲಮ್ಮ
ಬುದ್ಧಿಯನಳಿದು ನಿರ್ಬುದ್ಧಿವಂತಳಸಂಗದಿಂದ ನಾನು ಸುಖವ ಕಂಡೆನೆಂದು ನುಡಿದನೆಂದೆ ಬಸವಾ. ಬಸವನ ಹಂಗುಹರಿದು ಆನು ಸಂಗಯ್ಯನಲ್ಲಿ ಸುಖಿಯಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ನಿರೂಪ ರೂಪಿನಲ್ಲಿ ಅಡಗಿ, ನಿರಾಲಂಬವಾಯಿತ್ತು ಬಸವನಲ್ಲಿ. ನಿರಾಲಂಬಮೂರ್ತಿಯಲ್ಲಿ ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ. ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ. ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ. ಆ ಪಶು ಕಾಯವಂ ಕಳೆದು ಆನು ಪರಿಣಾಮವಡಗಿದವಳಯ್ಯಾ. ಪರಿಣಾಮದ ವಿವರದಿಂದ ಪರವಸ್ತುವಿನ ನೆಲೆಯ ತಿಳಿದು, ಪರಮಪ್ರಸಾದಿಯಾದೆನು. ಪ್ರಾಣಯೋಗ ಪ್ರಸಾದಮೂರ್ತಿಯುಳ್ಳವಳಾದ ಕಾರಣ, ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಇನ್ನಷ್ಟು ... -->