ಅಥವಾ

ಒಟ್ಟು 145 ಕಡೆಗಳಲ್ಲಿ , 24 ವಚನಕಾರರು , 99 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಲೋಕದವರೆಲ್ಲರೂ ಸೂತಕಲಾಸಂಹಾರಿ ಬಸವ ಎಂದೆಂಬರು. ಚಂದ್ರಲೋಕದವರೆಲ್ಲರೂ ಷೋಡಶಕಲಾ ಪರಿಪೂರ್ಣ ಬಸವಾ ಎಂದೆಂಬರು. ಯುಗಕೋಟಿಬ್ರಹ್ಮರೆಲ್ಲರೂ ಪರಶಿವ ಬಸವಾ ಎಂದೆಂಬರು. ಹರಿವಿರಿಂಚಿಗಳೆಲ್ಲರೂ ಗುರುಲಿಂಗ ಬಸವಾ ಎಂದೆಂಬರು. ಅಷ್ಟದಿಕ್ಪಾಲಕರೆಲ್ಲರೂ ಪರಶಿವ ಬಸವಾ ಎಂದೆಂಬರು. ಸುರಪಡೆಯಲ್ಲಾ ಅಮೃತಸಾಗರ ಬಸವಾ ಎಂದೆಂಬರು. ನವನಾಥಸಿದ್ಧರೆಲ್ಲರೂ ಪರಮಘುಟಿಕೆ ಬಸವಾ ಎಂದೆಂಬರು. ಲಂಬೋದರ ಕುಂಭೋದರ ದಾರುಕ ರೇಣುಕ ಗೌರೀಸುತ ತಾಂಡವರೆಲ್ಲರೂ ಸಕಲಜೀವಚೈತನ್ಯ ಮಾತ್ರ ಬಸವಾ ಎಂದೆಂಬರು. ಓತವರೆಲ್ಲರೂ ಮಾತಾಪಿತ ಬಸವಾ ಎಂದೆಂಬರು. ಒಲಿದವರೆಲ್ಲರೂ ಪ್ರಾಣ ಪರಿಣಾಮಿ ಬಸವಾ ಎಂದೆಂಬರು. ಆನೇನೆಂಬೆನು, ಉಪಮಿಸಬಾರದ ಮಹಾಘನ ಮಹಿಮನ.
--------------
ಮಡಿವಾಳ ಮಾಚಿದೇವ
ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
--------------
ನೀಲಮ್ಮ
ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ ! ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ ಬಸವ ಮೊದಲಾದ ಪ್ರಮಥರೆಲ್ಲ ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ, ಮಹಾಲಿಂಗೈಕ್ಯಾನುಭಾವವ ಬೆಸಗೊಳಲು ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಯದಾನವರತ ಬಸವಾ. ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ
--------------
ನೀಲಮ್ಮ
ಭಕ್ತಿಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ. ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ ಎನ್ನ ಗುರು ಚೆನ್ನಬಸವಣ್ಣನು. ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶ್ರುತಿಯ ನೋಡುವ ಮತಿಕುಶಲದನುವಿಂಗೆ ನೆಗೆದುನೋಡಲೊಲ್ಲದೆನ್ನ ಭಾವ. ಆಗಮವ ನೋಡುವ ಮತಿಕುಶಲದನುವಿಂಗೆ ವಿಕಸನವಾಗಲೊಲ್ಲದೆನ್ನ ಮನ. ಅಭ್ಯಾಸಿಗಳರಿವ ಮತಿಕುಶಲದನುವಿಂಗೆ ಸೊಗಸನೆತ್ತಲೊಲ್ಲದೆನ್ನ ತನು. ಅದೇನು ಕಾರಣವೆಂದೊಡೆ, ಬಸವ ಚನ್ನಬಸವ ಪ್ರಭುಗಳ ವಚನಾನುಭಾವದ ಪರಮಪ್ರಕಾಶ ಎನ್ನೊಳಹೊರಗೆ ಪರಿಪೂರ್ಣಾನಂದ ತಾನೆಯಾಗಿಪ್ಪುದಾಗಿ, ಮತ್ತೊಂದನರಿಯಲರಿಯದ ಭಾವವನೇನೆಂದರಿಯದಿರ್ದೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
`ಬಸವ, ಬಸವ, ಬಸವ' ಎನುತಿರ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲ? ಅನಾದಿ ಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೆ ಬಹಿಷ್ಕರಿಸಿತ್ತು. ಆ ಚಿತ್ತೆ ಚಿದಂಗ ಬಸವ, ಚಿದಂಗ ಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರು ಜ್ಯೋತಿರ್ಮಯಲಿಂಗವಪ್ಪುದು ತಪ್ಪದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಭಕ್ತಿಪ್ರಸಾದ, ಮುಕ್ತಿಪ್ರಸಾದ, ಇರಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು. ತಾವರಿಯದ ವಿವರ ತಮಗೆಲ್ಲಿಯದೊ ? ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ ಮತ್ತಾರನೂ ಕಾಣೆನಯ್ಯಾ.
--------------
ನೀಲಮ್ಮ
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ. ಶತಕೋಟಿಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ. ಎನ್ನ ಭವವೆಂಬ ವಾರಿದ್ಥಿಯ ದಾಂಟುವುದಕ್ಕೆ ನಿನ್ನ ಬಾಲತುದಿಯ ಎಯ್ದಿದೆನು ಬಸವ. ಆರಾಧ್ಯಪ್ರಿಯ ಸಕಳೇಶ್ವರಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಸಕಳೇಶ ಮಾದರಸ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶುದ್ಧಗುರು ಬಸವಣ್ಣ, ಸಿದ್ಧಗುರು ಚೆನ್ನಬಸವಣ್ಣ, ಪ್ರಸಿದ್ಧಗುರು ಪ್ರಭುರಾಯನು. ತನುತ್ರಯ ಮಲತ್ರಯ ಆರನತಿಗಳೆದು, ಲಿಂಗತ್ರಯ ಪ್ರಸಾದ ಮೂರನು ಪರಿಭವಿಸಿ ವಶಮಾಡಿ ಎನ್ನ ರಕ್ಷಿಸಿದ ಬಸವ, ಚೆನ್ನಬಸವ, ಪ್ರಭು ಶರಣೆಂದು ಬದುಕಿದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಖೇಚರರಾಗಲಿ, ಭೂಚರರಾಗಿಲಿ, ಪುರಹರರಾಗಲಿ, ಮಧ್ಯಸ್ಥರಾಗಲಿ, ಪವನನುಂಡುಂಡು ದಣಿಯದವರಾಗಲಿ, ಅಗ್ನಿ ಪರಿಹರರಾಗಲಿ, ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ. ಪುರಹರರೊಳು ಬಸವನ ಮಹಾರತಿ. ಮಧ್ಯಸ್ಥರೊಳು ಬಸವನೇಕಾಂತವಾಸಿ. ಪವನದೊಳು ಬಸವ ಹೇಳಿತ್ತ ಕೇಳುವೆ. ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ. ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣ ಕಾಣಾ ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->