ಅಥವಾ

ಒಟ್ಟು 106 ಕಡೆಗಳಲ್ಲಿ , 35 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ, ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ. ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ ಅದೆ.
--------------
ಅರಿವಿನ ಮಾರಿತಂದೆ
ವೇದವನೋದುವ ಅಣ್ಣಗಳು ನೀವು ಕೇಳಿರೊ ! ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ; ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ_ ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅನುಭವವೆಂಬುದದು ಅನುಭಾವಿಕಗಲ್ಲದೆ ಹೊತ್ತಗೆಯ್ಲಲ್ಲ ನೋಡಾ ಮಾನವಾ. ರತ್ನಂಗಳು ಸಮುದ್ರದಲ್ಲಲ್ಲದೆ ಕೀಳು ಕುಲ್ಯಾಗಳ್ಲಲ್ಲ ನೋಡಾ, ಮಾನವಾ. ನವಮಂತ್ರಂಗಳ ಮರ್ಮವದು ಗುರುಮುಖದಲ್ಲಲ್ಲದೆ, ಬರಿಯ ಪುರಾಣಂಗಳ್ಲಲ್ಲ ನೋಡಾ, ಮಾನವಾ. ಇಂನ ಪ್ರಮಥರು ಮುಂದೆ ಬಂದಹರೆಂಬ ಭ್ರಮೆ ಬೇಡ ನೋಡಾ, ಮಾನವಾ. ನೀನಂಂಗೆನ್ನದೆ ಕಪಿಲಸಿದ್ಧಮಲ್ಲಿಕಾರ್ಜುನನ ನಂಬು ನೋಡಾ, ಮಾನವಾ.
--------------
ಸಿದ್ಧರಾಮೇಶ್ವರ
ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು ಮನಬಲ್ಲಂತೆ ಹರಿದಾಡಿ, ಹಿರಿಯರನರಿಯದೆ ಹಳಿದು ಮರೆಯಿಂದೆ ದುರ್ಬುದ್ಧಿಯ ಮಡುಗಿ ಹೆಮ್ಮೆ ಮುಮ್ಮೊಗನಾಗಿ ಮೆರೆದು ಹೋಗುವ ಬರಿವೇಷಭಾರಕರಿಗೆ ಪರಮಕ್ರಿಯಾ ನಿಜಜ್ಞಾನದ ನಿಲುವೆಂತು ಸಾಧ್ಯವಪ್ಪುದಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯತ ಸ್ವಾಯತ ಸನ್ನಿಹಿತವೆಂದು ನುಡಿವ ಅನಾಯತದ ಹೇಸಿಕೆಯನೇನಂಬೆನಯ್ಯಾ? ತನುಗುಣಂಗಳನೊರಸದೆ, ಭೋಗಭೂಷಣಂಗಳನತಿಗಳೆಯದೆ, ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ? ಆಯತವು ಮನೋವಿಕಾರವಳಿದು, ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ ಅನ್ಯವಿಷಯ ಬ್ಥಿನ್ನರುಚಿಯ ಮರೆದು ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ. ಮತ್ತೆಂತಯ್ಯಾ ಸ್ವಾಯತವು? ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ, ಸದ್ಭಾವದಲ್ಲಿ ಅಳವಟ್ಟುದಿಲ್ಲದೆ ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ ಅನಾಯತದ ನಾಚಿಕೆಯನೇನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ?
--------------
ಆದಯ್ಯ
ಅರಿವರತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ? ಅರಿವನಾರು ? ಅರುಹಿಸಿಕೊಂಬನಾರು ? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ?
--------------
ಚನ್ನಬಸವಣ್ಣ
ಮಾಡಿಸಯ್ಯ ಎನಗೆ ನಿನ್ನವರ ಸಂಗವ, ಮಾಡಿಸಯ್ಯ ಎನಗೆ ನಿನ್ನವರ ಆನಂದವ, ಆಗಿಸಯ್ಯ ನಿನ್ನವರಾದಂತೆ, ನೋಡಯ್ಯ, ನಿನ್ನವರ ಕೂಡೆ ಸಂಗವನು ಮಾಡಿಸಯ್ಯ, ಎನಗೆ ಬಚ್ಚ ಬರಿಯ ಭಕ್ತಿಯನು ಕೊಡಿಸಯ್ಯ. ಎನಗೆ ಪಾದೋದಕ ಪ್ರಸಾದವನೊಚ್ಚತ ಸಲಿಸಯ್ಯ. ನಿನ್ನವರ ಕೂಡಿ ಸಲಿಕೆಗೆ ಇರಿಸಯ್ಯ ನಿನ್ನವರ ಪಾದದ ಕೆಳಗೆ. ನಿತ್ಯನಿತ್ಯನಾಗಿ ಬರಿಸರಯ್ಯ ಎನ್ನ ಭವಭವದಲ್ಲಿ, ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ.
--------------
ಸಿದ್ಧರಾಮೇಶ್ವರ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಬ್ಥಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಬ್ಥೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎರವಿನ ಬದುಕು ಸ್ಥಿರವಲ್ಲ. ಅಭ್ರಛಾಯದಂತೆ ನಿಮುಷದಲ್ಲಿ ತೋರಿಯಡಗಲು, ಈ ಸಂಸಾರದಲ್ಲೇನು ಲೇಸು ಕಂಡು ನಚ್ಚುವೆ? ನಚ್ಚದಿರು. ನಚ್ಚಿದವರ ಕೆಟ್ಟ ಕೇಡಿಂಗೆ ಕಡೆಯಿಲ್ಲ. ಬರಿಯ ಬಯಲ ಭ್ರಮೆ ಸಟೆಯ ಸಂಸಾರ. ಇದರಲ್ಲೇನೂ ಲೇಸಿಲ್ಲವೆಂದರಿದು ದೃಢವಿಡಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶ್ರೀಚರಣವನು.
--------------
ಸ್ವತಂತ್ರ ಸಿದ್ಧಲಿಂಗ
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ, ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ. ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ, ಗುರುಕಾರುಣ್ಯವಾಯಿತ್ತೆಂದು ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ. ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು. ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ, ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು, ಸಮಯಾಚಾರಕ್ಕೆ ಮುನ್ನವೇ ಸಲ್ಲ. ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ, ನಾಗಪ್ರಿಯ ಚೆನ್ನರಾಮೇಶ್ವರಾ.
--------------
ಶಿವನಾಗಮಯ್ಯ
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕುರುಹಿಲ್ಲದಠಾವಿನಲ್ಲಿ ತೆರಹಿಲ್ಲದಾತ್ಮಂಗೆ ಬರಿಯ ನಾಮವ ಸೈತಿಟ್ಟು ಕುರುಹದೇನು ಹೇಳಾ? ನಾಮವುಳ್ಳೆಡೆಯಲ್ಲಿ ಸೀಮೆ, ಸೀಮೆಯುಳ್ಳೆಡೆಯಲ್ಲಿ ನಾಮ ಹೋಹೋ, ತಿಳಿದು ನೋಡಿರೇ. ಹಮ್ಮು ಜಡನರಿವು ಮರವೆಯನೆಯ್ದಿಪ್ಪುದು ಮನ. ತನು, ಮನ, ಕರಣ, ಭಾವಕ್ಕಾಧಾರವಾಗಿಪ್ಪುದಾತ್ಮ. ಇನಕಿರಣ ಇನನಪ್ಪುದೆ? ವಾಯು ತಾನೇ ಆಕಾಶವೇ? ಧೂಮ್ರ ತಾನೇ ಅಗ್ನಿಯೆ? ನೆನೆವ ಮನವು ತಾನೇ ಜೀವನೆ? ಇಂತಲ್ಲ ನೋಡಾ, ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನವೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನ.
--------------
ಆದಯ್ಯ
ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು ಹೊರ ಉಪಚಾರವ ಮಾಡುವುದೆಲ್ಲ ಬರಿಯ ಭಾವದ ಬಳಲಿಕೆ ನೋಡಾ. ಅಳಲದೆ ಬಳಲದೆ ಆಯಾಸಂಬಡದೆ ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ ಪೂಜಿಸಬಲ್ಲ ಶರಣಂಗೆ ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->