ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊನ್ನೆಂಬ ಕಾರ್ಮಿಕವ ಜರಿದು ಹರಿದು, ಮಣ್ಣೆಂಬ ಭವದ ಭವದ ಹರಿದು, ಹೆಣ್ಣೆಂಬ ರಾಕ್ಷಸಿಯ ಅಣಲೊಳಗೆ ಸಿಕ್ಕಿ ಅಗಿದಗಿದು ತಿನಿಸಿಕೊಂಬ ಜಡಜೀವಿಗಳ ಸಂಗದಿಂದಾದ ಸಕಲ ಸುಖಭೋಗಂಗಳ ಬಿಟ್ಟು; ಲಿಂಗರತಿ ಪರಮಸುಖದ ಚಿದಮೃತದ ನಿತ್ಯ ತೃಪ್ತಿ ಸಂತೋಷ ಇಂಬುಗೊಂಡು, ವೇಷದ ಭ್ರಾಂತಿನ ಭ್ರಾಮಕದ ಸಮಯ ಕುಲಪಾಷಂಡಿಗಳ ತತ್ಸಂಗವ ಬಿಟ್ಟು ನಿರಾಶಾ ಪಥದ ಸುಜ್ಞಾನವೆ ಅನುಕೂಲವಾಗಿ ಘೃತ ಫಳ ಮಧುರರಸ ಮೃಷ್ಟಾನ್ನಂಗಳಲ್ಲಿ ಮನಮಗ್ನವಾದ ಪರಮ ಪ್ರಸಾದದಲ್ಲಿ ಪರಿಣಾಮಿಯಾದ ಪರಮಲಿಂಗೈಕ್ಯ ವಿರಕ್ತಂಗೆ ಲಿಂಗಾರ್ಪಿತವಲ್ಲದೆ_ ಇಂತೀ ಕ್ರಮವನರಿದು ಸಕಲಭ್ರಾಂತನಳಿಯದೆ ಮನ್ಮಥವೇಷಧಾರಿಗಳು ಪಂಚಲೋಹ ಕಾರ್ಮಿಕವ ಧರಿಸಿಕೊಂಡು ಲಿಂಗಾರ್ಪಿತ ಭಿಕ್ಷೆಯೆಂದು ಭುಂಜಿಸುವ ಭುಂಜನೆಯೆಲ್ಲವು ವರಾಹ ಕುಕ್ಕುಟದ ಮೇಧ್ಯವು, ಅವರಿಗೆ ಪ್ರಸಾದವೆಂಬುದು ಸ್ವಪ್ನದಲ್ಲಿಯೂ .... .......ಕೊಂಬುದೆಲ್ಲವು ಕತ್ತೆಯ ಮಾಂಸ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ, ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ, ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ ಮಲಿನ ಅಮಲಿನವೆಂಬುದ ಕಾಣದೆ ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ, ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು ರಸವನೀಂಟಿದ ಘಟದಂತೆ ಅಸಿಯ ಮೊನೆಗೆ ಬಂದು ನಿಲುವಂತೆ, ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ, ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ ಭ್ರಮರ ಅನುಭವಿಸಿದ ಗಂಧದಂತೆ ಭೂಸ್ಥಾಪಿತದಂತೆ, ಅನಲಕಾಷ*ಪಾಷಾಣದಂತೆ ದೃಷ್ಟವ ಕಾಬನ್ನಕ್ಕ ಷಟ್‍ಸ್ಥಲಸಂಬಂಧ. ಇಂತೀ ಸ್ಥಲಂಗಳನಾರೋಪಿಸಿದಲ್ಲಿ ಸದ್ಯೋಜಾತಲಿಂಗವು ಸಂಬಂಧನಪ್ಪನು.
--------------
ಅವಸರದ ರೇಕಣ್ಣ
ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ, ಮೆಲುವರಿಗೆ ಅಡಹೆ ? ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ, ಭುಂಜಿಸುವರ ಅಂಗ ಮನೋಹರವಾಗಿಪ್ಪುದು. ಲೌಕಿಕ ಪರಮಾರ್ಥಂಗಳ ಭೇದ, ಉಭಯರೂಪು ನಿಬದ್ಧಿಯಾದಲ್ಲಿ, ಬಂಕೇಶ್ವರಲಿಂಗವು ಎಂತಿದಡೇನು ?
--------------
ಸುಂಕದ ಬಂಕಣ್ಣ
ಪಾಡಿನ ಫಲವನಡೆದಡೆ ಫಳ ರಸವಲ್ಲದೆ ಹೂ ಮಿಡಿಯಲ್ಲಿ ಅಡೆದವರುಂಟೆ? ತನುರಸ ಆತ್ಮನ ಅಡಿಯಲ್ಲಿ ಅಡಗುವನ ಬಿಡುಮುಡಿಯ ಲತೆಯ ಸಾಗಿಸಿದ ಶಾಖೆಯಂತೆ, ಘಟದ ಅಸುವಿನ ಭೇದ. ಇದರ ಎಸಕವ ಕೇಳಿಹರೆಂದು, ಅಲೇಖನಾದ ಶೂನ್ಯ ಕಲ್ಲಿನ ಮೆರೆಯಾದೆಯಾ ?
--------------
ವಚನಭಂಡಾರಿ ಶಾಂತರಸ
-->