ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆಯಿಲ್ಲದೆ ಮರ ಕಾಯಾಯಿತ್ತು, ಆ ಮರ ಫಲವಾಯಿತ್ತು, ಆ ಫಲ ನಿಃಫಲವಾಯಿತ್ತು ಆ ನಿಃಫಲವನುಂಡೀಗ ನನಗೆ ಸುಖಸಂಯೋಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಕಟೆದ ಕಲ್ಲು ಲಿಂಗವೆಂದೆನಿಸಿತು; ಕಟೆಯದ ಕಲ್ಲು ಕಲ್ಲೆನಿಸಿತ್ತು. ಪೂಜಿಸಿದ ಮಾನವ ಭಕ್ತನೆನಿಸಿದನು; ಪೂಜಿಸದ ಮಾನವ ಮಾನವನೆನಿಸಿದನು. ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು ; ಮಾನವನಾದಡೇನು? ಭಕ್ತಿಗೆ ಕಾರಣಿಕನಾದನು. ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧರೆಯ ಮೇಲೆ ಬಿದ್ದ ಬೀಜ, ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು. ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ, ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ, ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು. ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
--------------
ಹೊಡೆಹುಲ್ಲ ಬಂಕಣ್ಣ
ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ, ಆರವೆಯಿಲ್ಲದ ಮರ ಹುಟ್ಟಿ, ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು, ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು, ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು. ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು, ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ನೂಲೆಳೆಯ ಗಾತ್ರದ ಮರದಲ್ಲಿ, ಬೆಟ್ಟದ ತೋರದ ಕಾಯಿ ಫಲವಾಯಿತ್ತು. ಅದು ಹಣ್ಣಾಗದು, ನೋಡಿರಯ್ಯಾ ಇನ್ನೆಂತೊ ? ಏರಬಾರದು ಮರನ, ಕೊಯ್ದು ಹಿಡಿಯಬಾರದು ಕಾಯ. ಈ ಭೇದವನರಿದು ಮರನನೇರದೆ, ಕಾಯ ಮುಟ್ಟದೆ, ಹಣ್ಣಿನ ರುಚಿಯ ಚೆನ್ನಾಗಿ ಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗ ತನ್ನಲ್ಲಿ ನಿರ್ಲೇಪಸಂಬಂಧಿ.
--------------
ಮೋಳಿಗೆ ಮಾರಯ್ಯ
ಭೂಮಿಯಲ್ಲಿ ಹುಟ್ಟಿ ಅಂತರಂಗದಲ್ಲಿ ಬೆಳೆವ ಫಲವೃಕ್ಷದಂತೆ, ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ, ನೀ ಭೂಮಿಯಾಗಿ ನಾ ಸಸಿಯಾಗಿ ಬೆಳೆದ ಬೆಂಬಳಿಯಲ್ಲಿ ಗುಹೇಶ್ವರಲಿಂಗವೆಂಬುದು ಫಲವಾಯಿತ್ತು. ಅರಿದ ಅರಿಕೆ ರಸವಾಯಿತ್ತು. ಸಂಗನಬಸವಣ್ಣನಿಂದ ಎನ್ನಂಗ ಬಯಲಾಯಿತ್ತು !
--------------
ಅಲ್ಲಮಪ್ರಭುದೇವರು
-->