ಅಥವಾ

ಒಟ್ಟು 90 ಕಡೆಗಳಲ್ಲಿ , 30 ವಚನಕಾರರು , 74 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು ಊರೆಲ್ಲ ಕಟ್ಟಿದ ಕೆರೆ ನೀರ ತಂದು ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ ಇದ ನಾನರಿಯೆ ನೀ ಹೇಳೆಂದಾತ ನಮ್ಮ ದಿಟ್ಟ ವೀರಾದ್ಥಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ, ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ, ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ, ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ, ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ, ಗಮನ ಸುಮನ ಸಮತೆ ನೇಮ ಸಂತೋಷವ್ರತ. ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು? ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ, ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ, ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ. ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು.
--------------
ಶಿವಲೆಂಕ ಮಂಚಣ್ಣ
ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? ಅಪ್ಪುವಿನಲ್ಲಿ ಅಳಿದಡೇನು ? ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕøಷ್ಟವಾದಡೇನು ? ಅಹುದಲ್ಲವೆಂಬ ಅಜ್ಞಾನಮತಿಗಳೆದು ಮುನ್ನಿನಂತೆ ಪೂಜಿಸುವ ಭಕ್ತರ ತೋರಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ, ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ. ಪೂಜೆಯ ಫಲವು ಕೊಡವಾಲ ಕರೆವ ಸುರಬ್ಥಿಯಂತೆ ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ, ತನ್ನ ಉದರನಿಮಿತ್ತ್ಯವಿಡಿದು, ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.
--------------
ಸಕಳೇಶ ಮಾದರಸ
ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ, ಗಂಡಂಗಯಿದರೆಡೆಯ ತೋರುವಳೆ ಹೆಂಡತಿ ? ಆ ಕಳ್ಮಂಡ ಷಂಡ ಸವುಂಡ ಅಂಡರಂತೆ ಕಂಡಕಂಡುದ ಪೂಜಿಸುವ ಭಂಡ ಮುಂಡೆ ಮೂಕೊರೆಯನ ಮುಖವ ನೋಡಲಾಗದು, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಬ್ರಹ್ಮ ಪೂಜಿಸುವ, ವಿಷ್ಣು ಪೂಜಿಸುವ, ಇಂದ್ರ ಪೂಜಿಸುವ, ರವಿ ಪೂಜಿಸುವ, ಚಂದ್ರ ಪೂಜಿಸುವ- ಅಂದಂಂಗೆ ಬಂದ ಸುಖದುಃಖಗಳನುಣ್ಕಪ್ಪರು. ಅದು ಕಾರಣ, ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಪ್ರಾಸಾದಂಗಪ್ರಾಣಿಗಳಿಗೆ ಭವವಿಲ್ಲ, ಸಂದಿಲ್ಲ ; ಇದು ನಿಶ್ಚಯ, ನಂಬು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ.
--------------
ಸಿದ್ಧರಾಮೇಶ್ವರ
ಅಜಾತನು ಜಾತನ ಜಾತಕನೆಂಬೆನು. ಅಜಾತಂಗೆ ಜಾತಂಗೆ ಕುಲಹೊಲೆಯಿಲ್ಲೆಂಬೆನು. ಹಿರಿಯಮಾಹೇಶ್ವರನೆಂಬೆನು. ಸಮಯಾಚಾರವ ಬೆರಸಲಮ್ಮೆನು. ನಿಚ್ಚ ಪೂಜಿಸುವ ಪೂಜಕ ನಾನು. ಸಕಳೇಶ್ವವರದೇವಾ, ಎನ್ನ ನಾಚಿಸಬೇಡ.
--------------
ಸಕಳೇಶ ಮಾದರಸ
ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ. ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಭಕ್ತ ಮಾಹೇಶ್ವರರ ಇಷ್ಟಲಿಂಗವು, ಶಕ್ತಿಸಂಪುಟದಿಂದ ಉತ್ಕøಷ್ಟವಾದರೆ, ಕಾಯವಳಿದೆನೆಂಬ ಕರ್ಮವ ನೋಡಾ. ಕಾಯವಳಿದು ಕರ್ಮಕ್ಕೆ ಗುರಿಯಾಗದೆ ಮುನ್ನಿನಂತೆ ಪೂಜಿಸುವ ಮುಕ್ತರ ತೋರಿಸಯ್ಯಾ. ಅದೆಂತೆಂದಡೆ: ಅನಾದಿಪ್ರಣಮ, ಆದಿಪ್ರಣಮ, ಅಂತ್ಯಪ್ರಣಮ, ನಾದಪ್ರಣಮ, ಅನಾದ ಪ್ರಣಮವೆಂಬ ಪಂಚಪ್ರಣಮಂಗಳ ಪಂಚಸ್ಥಾನದಲ್ಲಿ ಪ್ರತಿಷ್ಠಿಸಿ, ನಾ ನೀನೆಂಬ ಆನಂದವ ಆರುಹಿಸಿಕೊಟ್ಟನಯ್ಯಾ ಶ್ರೀಗುರು. ಇಂತೀ ಭೇದಾದಿಭೇದದ ಆದಿಯನರಿಯದೆ, ಕಾಯವಳಿದೆಹೆನೆಂಬ ಕರ್ಮಭಾಂಡಿಗಳ ಮೆಚ್ಚುವನೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಚ್ಚಣೆಯ ಬೊಂಬೆ ನೀರಾಗಲಾಗಿ, ನಿಶ್ಚಯಿಸಿಕೊಳ್ಳಬಲ್ಲದೆ ? ಉಚ್ಚೆಯ ಬಚ್ಚಲ, ಕೊಚ್ಚೆಯ ಠಾವು, ಪೂಜಿಸುವ ನಿಶ್ಚಯರಿಗೆ, ಮರೆಮಾಡುವ ಮೆಚ್ಚುನುಂಗಿಗೇಕೆ ನಿಶ್ಚಯದ ಅರಿವು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಜಂಗಮವಾದುದಕ್ಕೆ ಇದೆ ಚಿಹ್ನೆ ನೋಡಾ: ಅಂಗವಿಡಿದು ಲಿಂಗವ ಪೂಜಿಸುವ; ಲಿಂಗವಿಡಿದು ಅಂಗವ ಪೂಜಿಸ ನೋಡಾ. ಶತದಳ ಸಹಸ್ರಸೂರ್ಯವರ್ಣದ ಪದ್ಮದೊಳಿಪ್ಪ ಮಹಾಂಗವನರುಹಿ, ಪ್ರಾಣಂಗಿಯ ಕೂಟವನರಿಪಾತನೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತನ ಭಾಷೆ ಗುರುಲಿಂಗಜಂಗಮವಲ್ಲ. ತ್ರಿವಿಧ ಕರ್ತೃವಿನ ಭಾಷೆ, ತನ್ನ ಮುಟ್ಟಿ ಪೂಜಿಸುವ ಭಕ್ತನಲ್ಲ. ಇಂತೀ ಉಭಯದ ಭಾಷೆ, ಕರ್ತೃ ಭೃತ್ಯಂಗಲ್ಲ [ವೆ]? ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.
--------------
ಶಿವಲೆಂಕ ಮಂಚಣ್ಣ
ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂದ್ಥಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂದ್ಥಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->