ಅಥವಾ

ಒಟ್ಟು 315 ಕಡೆಗಳಲ್ಲಿ , 46 ವಚನಕಾರರು , 215 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಸತಿಲ ಪೂಜಿಸಿ ಹೊಡವಂಟು ಹೋದ ಒಕ್ಕಲಿತಿಯಂತಾುತ್ತೆನ್ನ ಭಕ್ತಿ. ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು ಉದಾಸೀನವ ಮಾಡಿದಡೆ, ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ ! ಕೂಡಲಸಂಗಮದೇವ ಅಘೋರನರಕದಲ್ಲಿಕ್ಕುವ. 423
--------------
ಬಸವಣ್ಣ
ಗಗನದ ಮೇಲೊಂದು ಸರೋವರ; ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ; ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ ಒಮ್ಮೆ ನಾಯಕನರಕ ತಪ್ಪದಲ್ಲಾ! ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ತೆರಹಿಲ್ಲದ ಮಹಾಘನ ಪರಿಪೂರ್ಣ ಲಿಂಗಭರಿತವೆಂದೇ ಭಾವಿಸಿ, ಪೂಜಿಸಿ, ಮರಳಿ ಬಿದ್ದಿತ್ತು ಕೆಡೆಯಿತ್ತು ಎಂಬ ಅಜಾÕನವ ನೋಡಾ ! ತೆರಹಿಲ್ಲದ ಪರಿಪೂರ್ಣ ಲಿಂಗವು, ಬೀಳಲಿಕ್ಕೆ ತೆರಹುಂಟೆ ? ಅರಿಯರು ಪ್ರಾಣಲಿಂಗದ ನೆಲೆಯನು. ಅರಿಯದೆ ಅಜಾÕನದಲ್ಲಿ ಕುರುಹು ಬಿದ್ದಿತ್ತೆಂದು ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗ? ನೋಡಾ ! ಅರದು ಕೂಡಿ ಸ್ವಯವಾಗಿರ್ದ ಲಿಂಗವು ಓಕರಿಸಿತ್ತೆಂದು ಆ ಲಿಂಗದೊಡನೆ ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗಳಿಗೆ ಅಘೋರ ನರಕ ತಪ್ಪದು ಕಾಣಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ, ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ. ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ ಅದೆ.
--------------
ಅರಿವಿನ ಮಾರಿತಂದೆ
ಮೂಗಿನಲ್ಲಿ ಕಂಡು, ಮೂರ್ತಿಯ ಕಂಗಳಲ್ಲಿ ಮಾಡಿಸಿ, ಕಿವಿಯಲ್ಲಿ ಶೋಭನ, ತಲೆಯಲ್ಲಿ ಕೈಗೂಡಿ, ಕಣ್ಣ ಕಾಡಿನ ತಲೆ ಹೊಲದಲ್ಲಿ ಸತ್ತದೇವರ ಕಂಡು, ಹುಟ್ಟಿದ ಗಿಡುವಿನ ಪತ್ರೆಯ ಕೈ ಮುಟ್ಟದೆ ಕೊಯ್ದು, ಬತ್ತಿದ ಕೆರೆಯ ಜಲವ ತುಂಬಿಕೊಂಡು, ಬಂದು ಮುಟ್ಟಿ ಪೂಜಿಸಹೋದಡೆ ಸತ್ತ ದೇವರೆದ್ದು ಪೂಜಾರಿಯ ನುಂಗಿದರು ನೋಡಾ. ತಲೆಯಲ್ಲಿ ನಡೆದು, ತಲೆಗೆಟ್ಟು ನಿರಾಳವಾದ ನಿಜಗುರು ಭೋಗೇಶ್ವರಾ, ನಿಮ್ಮ ಶರಣರಿಗಲ್ಲದೆ ಸತ್ತದೇವರನು ಸಾಯದವರು ಪೂಜಿಸಿ ನಿತ್ಯವ ಹಡೆದೆಹೆನೆಂಬ ಮಾತೆಲ್ಲಿಯದೊ ?
--------------
ಭೋಗಣ್ಣ
ಅಂಗೈಯಲ್ಲಿ ಪೂಜಿಸಿದ ಫಲ ಲಿಂಗಯ್ಯ ಕೊಡನೆಂದು ಮರುಗರಾ ಮನವೆ. ಅಂಗೈಯಲ್ಲಿ ಫಲ ಅಂಗ ಲಿಂಗ ನೋಡಿದಂತೆ ನೋಡಾ ಮನವೆ. ಅಂಗೈಯ ಫಲ ಲಿಂಗಯ್ಯನಾಗರೆ ಪೂಜಿಸುವರೆ ಪ್ರಮಥರು? ನೋಡಾ ಮನವೆ. ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ ಪೂಜಿಸಿ ಬದುಕು ಮನವೆ.
--------------
ಸಿದ್ಧರಾಮೇಶ್ವರ
ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ ನರಕವೆಂದರಿಯೆ, ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ, ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
--------------
ಬಸವಣ್ಣ
ಜಗದೊಳಹೊರಗೆಲ್ಲ ತೆರಹಿಲ್ಲದೆ ಸಂಭ್ರಮಿಸಿ ತುಂಬಿಕೊಂಡಿರ್ಪ ಪರವಸ್ತುವ ಆಹ್ವಾನಿಸಿ ಕರೆದು ವಿಸರ್ಜಿಸಿ ಬಿಡುವುದಕ್ಕೆ ಇಂಬುಂಟೇನೋ ಮರುಳೆ ? ಇಂತೀ ಅಖಂಡ ಪರಿಪೂರ್ಣವಾದ ಪರಬ್ರಹ್ಮದ ನಿಲವನರಿಯದೆ ಖಂಡಿತಬುದ್ಧಿಯಿಂದ ಕಲ್ಪಿಸಿ ಪೂಜಿಸಿ ಕರ್ಮದ ಬಲೆಯಲ್ಲಿ ಸಿಲ್ಕಿ ಕಾಲಂಗೆ ಗುರಿಯಾಗಿ ಹೋದವರ ಕಂಡು ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರು ಲಿಂಗ ಜಂಗಮ ಪ್ರಸಾದ ಒಂದೇ ಪರಶಿವಮೂರ್ತಿ ಮಹಾವಸ್ತುಗಳು ಕೇಳಿರಣ್ಣಾ. ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ, ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಈ ಚತುರ್ವಿಧ ಪದವಿಯನೂ ಕೂಡುವರೆ, ಗುರು ಲಿಂಗ ಜಂಗಮ ಪ್ರಸಾದವ ನಂಬುವುದು. ಇದು ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ, ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ, ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ, ನಮ್ಮ ಕೂಡಲಸಂಗನ ಪೂಜಿಸಿ ದೇವಾ, ಭಕ್ತರೆನಿಸಿಕೂಂಬುದ ಕಂಡೆ.
--------------
ಬಸವಣ್ಣ
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ, ಪೂಜಿಸಿದ[ಡೇ]ನು ಮನಶುದ್ಧವಿಲ್ಲದನ್ನಕ್ಕರ ? ಮನಮಗ್ನವಾಗಿ ಶಿವಧ್ಯಾನದಲ್ಲಿ ಕೂಡಿ, ಒಂದೇ ದಳವ ಧರಿಸಿದರೆ ಶಿವನು ಒಲಿಯನೆ? ಇಂತು ಪೂಜೆಯ ಮಾಡುವುದಕ್ಕಿಂತಲು ಅದೇ ತೊಪ್ಪಲನು ಕುದಿಸಿ ಪಾಕವ ಮಾಡಿದಲ್ಲಿ ಆ ಲಿಂಗವು ತೃಪ್ತಿಯಾಯಿತ್ತು. ಬರಿದೆ ಲಿಂಗವ ಪೂಜಿಸಿ ಜಂಗಮಕ್ಕೆ ಅನ್ನವ ಕೊಡದೆ, ಲಿಂಗದ ಮುಖವು ಜಂಗಮವು ಎಂದು ತಿಳಿಯದೆ, ತನು-ಮನ-ಧನವನು ಗುರು-ಲಿಂಗ-ಜಂಗಮಕ್ಕೆ ಸವೆಸದೆ, ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು, ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ, ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ ? ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ, ಆ ಧಾವತಿಯಿಂದ ಮುನ್ನಿನ ವಿದ್ಥಿ[ಯೆ] ಸಾಲದೆ ? ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ, ನಿಮ್ಮಿಂದ ಹೊರಗಣ ಜನವೆ ಸಾಲದೆ ?
--------------
ಅಲ್ಲಮಪ್ರಭುದೇವರು
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ. ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ. ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು, ಜಂಗಮಕ್ಕೆ ಭಕ್ತನಾದೆನಯ್ಯಾ. ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ. ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು. ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ ನಿಮ್ಮ ಜಂಗಮದಲ್ಲಿ ವರವ ಪಡೆದು, ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->