ಅಥವಾ

ಒಟ್ಟು 147 ಕಡೆಗಳಲ್ಲಿ , 31 ವಚನಕಾರರು , 136 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣವೆಂದೆನ್ನ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ. ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ. ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು. ಶ್ರೋತ್ರಂಗಳ ಮುಚ್ಚಿ ಶಬ್ದವಿಲ್ಲದ ನಾದವ ಕೇಳಬೇಕು. ಜಿಹ್ವೆಯ ಮುಚ್ಚಿ ಸ್ವಾದುವಿಲ್ಲದ ರುಚಿಯನರಿಯಬೇಕು. ನಾಸಿಕವ ಮುಚ್ಚಿ ಉಸುರ ನುಂಗಿದ ಪರಿಮಳವನರಿಯಬೇಕು. ಅಂಗವ ಮುಚ್ಚಿ ಲಿಂಗಸಂಗ ಸಮಸುಖವನರಿಯಬೇಕು. ಸೌರಾಷ್ಟ್ರ ಸೋಮೇಶ್ವರವಿಡಿದು, ಪಂಚೇಂದ್ರಿಯಗಳಳಿದು ಲಿಂಗೇಂದ್ರಿಯಗಳಾಗಬೇಕು.
--------------
ಆದಯ್ಯ
ಭಕ್ತನೆಂದಲ್ಲಿ ದೃಷ್ಟವಾಯಿತ್ತು; ಐಕ್ಯನೆಂದಲ್ಲಿ ನಷ್ಟವಾಯಿತ್ತು. ಈ ನಷ್ಟ ದೃಷ್ಟವನೊಳಗೊಂಡು ಅದೃಶ್ಯವಾಗಿಪ್ಪ ಅಖಂಡಗುಹೇಶ್ವರನ ನಿಲವ ಉಪಮಿಸಬಾರದೆ ನಿಶ್ಶಬ್ದಿಯಾದೆನು.
--------------
ಅಲ್ಲಮಪ್ರಭುದೇವರು
ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆ ನಿಮ್ಮ ನಿಲವ ನೋಡಿಹೆನೆಂದಡೆ ನಿಮ್ಮ ಘನವೆನ್ನ ಮನಕ್ಕೆ ಸಾಧ್ಯವಾಗದ ಕಾರಣ, ಅಂತಿಂತೆಂದುಪಮಿಸಲಮ್ಮದೆ ಇದ್ದೆ ನೋಡಯ್ಯಾ, ನಿತ್ಯತೃಪ್ತಮಹಿಮಾ, ನಿಮಗೆಂದಳವಡಿಸಿದ ಪದಾರ್ಥವ ಸುಚಿತ್ತದಿಂದವಧರಿಸಿ ಸಲಹಯ್ಯಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಕತ್ತಲಾಗಿ ಹೋಯಿತ್ತು ನಿತ್ಯ ಸೂರ್ಯನಿಂದೆ. ಸತ್ಯವೆಂದಲ್ಲಿ ಮಿಥ್ಯ ಸಾಕಾರ ಸಂದಳಿಸಿ ಬೆಂದು ನಿಂದವು. ತಾಯಿ ತಂದೆಯಾಗಿ ನಿಂದ ನಿಲವ, ನಾನೆಂದು ಕಂಡು ಬದುಕುವೆನಯ್ಯಾ ನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!
--------------
ಜೇಡರ ದಾಸಿಮಯ್ಯ
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ! ಅರಿದು ಮರೆದು ನೆನೆದಡೆ ನೆಲೆಗೊಳ್ಳದು. ಅರಿವರಾರಯ್ಯ ಆಗಮ್ಯಲಿಂಗವನು ? ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ? ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ? ಗುಹೇಶ್ವರಲಿಂಗದ ನಿಲವ ತೋರಬಾರದು_ಕೇಳಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ, ಎನ್ನ ಮನದಲ್ಲಿ ತನ್ನ ನಿಲವ ತೋರಿದ, ಎನ್ನ ಅರಿವಿನಲ್ಲಿ ನಿಮ್ಮ ತೋರಿದ, ಇಂತೀ ತ್ರಿವಿಧಸ್ವಾಯತವನು ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ. ಕೂಡಲಸಂಗಮದೇವಯ್ಯಾ, ಚೆನ್ನಬಸವಣ್ಣನ ಕರುಣದಿಂದ ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ.
--------------
ಬಸವಣ್ಣ
ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ. ಶಿವಲಿಂಗ ಸಂಯೋಗವಾದಲ್ಲಿ ಜಂಗಮಲಿಂಗದುದಯ. ಜಂಗಮಲಿಂಗ ಸಂಯೋಗವಾದಲ್ಲಿ ಪ್ರಸಾದದುದಯ. [ಪ್ರಸಾದ ಸಂಯೋಗವಾದಲ್ಲಿ ಪ್ರಾಣದುದಯ] ಪ್ರಾಣಸಂಯೋಗವಾದಲ್ಲಿ ಜ್ಞಾನದುದಯ. ಜ್ಞಾನಾನುಭಾವ ಸಂಯೋಗವಾದಲ್ಲಿ ಸುಜ್ಞಾನದುದಯ. ಇಂತೀ ಗುರುವಿನ ಘನವ, ಲಿಂಗದ ನಿಜವ, ಜಂಗಮದ ಮಹಿಮೆಯ, ಪ್ರಸಾದದ ರುಚಿಯ, ಪ್ರಾಣನ ನೆಲೆಯ, ಸುಜ್ಞಾನದ ನಿಲವ, ಮಹಾನುಭಾವದ ಸುಖವನರಿದು ಮರೆದಲ್ಲಿ, ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಲ್ಲಿ ಜ್ಞಾನಭರಿತವಾದಂದು ಸುಜ್ಞಾನ.
--------------
ಅಮುಗಿದೇವಯ್ಯ
ವೀರಮಾಹೇಶ್ವರರು ಸರ್ವಾಂಗದಲ್ಲಿ ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ, ಕಾವಿಲಾಂಛನವ ಪೊದ್ದರೆಂದು ಈ ಮತ್ರ್ಯಲೋಕದ ಜಡಮತಿ ಮರುಳಮಾನವರು ತಾವು ಧರಿಸುತ್ತಿರ್ಪರು. ಇಂತಪ್ಪವರ ನಡತೆ ಎಂತಾಯಿತ್ತೆಂದರೆ, ಗುರುವನರಿಯದೆ ವಿಭೂತಿಧರಿಸುವರೆಲ್ಲ ಬೂದಿಯೊಳಗಣ ಕತ್ತೆಗಳೆಂಬೆ. ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ. ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ. ಜಂಗಮದ ನಿಲವ ಅರಿಯದೆ ಕಾವಿಯ ಲಾಂಛನ ಹೊದ್ದವರೆಲ್ಲ ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ. ಇಂತಿದರನುಭಾವವ ತಿಳಿಯದೆ ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ ಜಾತಿಹಾಸ್ಯಗಾರರೆಂಬೆ. ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ ಶಿವಸ್ವರೂಪರೆಂದು ಹೇಳುವವರ, ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು ಮನ ಮನ ಬೆರಸಿದಡೆ, ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ. ಬಂದ ಬರವನರಿಯದೆ ನಿಂದ ನಿಲವ ನೋಡದೆ ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ.
--------------
ಅಲ್ಲಮಪ್ರಭುದೇವರು
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ, ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ, ಬಸವಪ್ರಿಯ ಕೂಡಲಚನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->