ಅಥವಾ

ಒಟ್ಟು 205 ಕಡೆಗಳಲ್ಲಿ , 45 ವಚನಕಾರರು , 146 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರವೆಯ ತಮವ ಕಳೆಯಯ್ಯ. ಅರುಹಿನ ಜ್ಯೋತಿಯ ಬೆಳಗಯ್ಯ. ಅರುಹಿನ ಜ್ಯೋತಿಯ ಬೆಳಗಿ, ನಿಮ್ಮ ಕುರುಹ ಕಂಡು ಕೂಡುವ ತುರ್ಯಾವಸ್ಥೆಯ ಸುಖವನೆ ಕೊಡು ಕಂಡ ಮಹಾಲಿಂಗ ತಂದೆ. ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ ಭೋಗವುಳ್ಳುದೆ ತಪ್ಪದೆಂಬೆಯಾದಡೆ, ಶರೀರಗಳಿಗಾಗಲಿ ಪ್ರೇರಕಹರ್ತುದಿಂದಲ್ಲವೆಂಬುದೆ ಪ್ರಮಾಣ. ಶಿವ ಪ್ರೀತ್ಯರ್ಥವಾದಗ......ಳು ಕರ್ತವನೆಯ್ದುವವೆಂಬುದಕ್ಕೆ ಪ್ರಮಾಣವು ಎನಲು, ಪಿತೃವಧೆಯಿಂದ ಚಂಡೇಶ್ವರನು ಅನುಪಮ ಗಣಪದವನೈದಿದನು. ಸಿರಿಯಾಳನು ತನ್ನ ಮಗನನೆ ಹತಿಸಿ ಪುರಜನ ಬಾಂಧವರುಸಹಿತ ಶಿವಲೋಕವನೈದನೆ ? ಕಾಲಾಂತರದಲ್ಲಿ ಮನುಚೋಳನು ಪುತ್ರವಧೆ ಭ್ರೋಣಹತ್ಯವನು ಮಾ ಎಸಗಿ, ತನುವರಸಿ ಶಿವಲೋಕವೆಯ್ದನೆ ? ಅಯ್ಯೋಮ ರಾಜನು ವಿಪ್ರೋತ್ತಮನನೆ ವದ್ಥಿಸಿ ಲಿಂಗ ಗರ್ಭಾಂತರವನೆಯ್ದಿದನೆ ? ಅಂದು ಜಗವರಿಯಲದಂತಿರಲಿ. `ಸ್ವರ್ಗಕಾಮೋ ಯಜೇತ'ಯೆಂಬ ಶ್ರುತಿಪ್ರಮಾಣಿಂ ದಕ್ಷ ಪ್ರಜಾಪತಿ ಕ್ರಿಯೆಗಳಿಗೆ ಅಧ್ವರ ಕರ್ಮದಿಂದ ಶಿರಚ್ಛೇದಿಯಾಗಿ ಕುರಿದಲೆ ಪಡೆಯನೆ ? ಬರೀ ಅಚೇತನ ಕರ್ಮಂಗಳು ಕೊಡಬಲ್ಲವೆ ಸದ್ಗತಿ ದುರ್ಗತಿಗಳನು ? ಕರ್ತು ಪ್ರೇರಕ ಶಿವನಲ್ಲದೆ, `ಮನ್ನಿಮಿತ್ತಕೃತಂ ಪಾಪಮಪೀಡಾವಚಯೈ ಕಲ್ಪ್ಯತೇ' ಎನಲು, ಇಂತೀ ಚಿಟಿಮಿಟಿವಾದವೆಂಬುದು ಕೊಳ್ಳವು ಕೇಳಾ. ಶಿವಭಕ್ತಿಯೆಂಬ ಪ್ರಚಂಡ ರವಿಕಿರಣದ ಮುಂದೆ ಸಾಮಾನ್ಯಕರ್ಮವೆಂಬ ತಮ ನಿಲುವುದೆ ? ಮರುಳೆ ಆ `ವೋರಾಜಾನಮಧ್ವರಸ್ಯ ರುದ್ರಗಂ' ಎನಲು, `ಇಂದ್ರ ಉಪೇಂದ್ರಾಯ ಸ್ವಾಹಾ' ಎನಬಹುದೆ ? ಪ್ರಥಮಾಹುತಿಯಲ್ಲಿಯೆಂದು ಬೆಳಲು ಭಸ್ಮವಹವಾ ಆಹುತಿ ಫಲಂಗಳು. ಆದಡೆ ಕೆಳೆಯಾ ಶಿವಭಕ್ತಿಬಾಹ್ಯವಾದ ಪಾಪಕರ್ಮಕೆ ಬಂದ ವಿಪರೀತ ಪ್ರಾಪ್ತಿಗಳು, ವಿಷ್ಣು ಸುರರಿಗೆ ಹಿತವಾಗಿ ಭೃಗು ಸತಿಯ ಶಿರವನರಿದಡೆ, ಕರ್ಮ ದಶಜನ್ಮಂಗಳಿಗೆ ತಂದು, ಹೀನಪ್ರಾಣಿಗಳ ಯೋನಿಯಲ್ಲಿ ಬರಸಿದುದನರಿಯಿರೆ. ಮತ್ತೆಯೂ ಬಾಲೆಯ ಕೊಂದ ಕರ್ಮ ಕೃಷ್ಣಾವತಾರದಲ್ಲಿ ವ್ಯಾಧನಿಂದ ತನ್ನ ಕೊಲ್ಲಿಸಿತ್ತು. ಮತ್ತೆಯೂ ಬಲಿಯ ಬಂದ್ಥಿಸಿದ ಕರ್ಮ ಮುಂದೆ ನಾಗಾರ್ಜುನನಿಂದ ಕಟ್ಟಿಸಿತ್ತು, ಕೌರವಕುಲದ ಕೊಲಿಸಿದ ಕರ್ಮಫಲ ತನ್ನ ಯಾದವ ಕುಲವ ಕೊಲಿಸಿತ್ತು. ಮತ್ತಾ ಲೀಲೆಯಿಂದ ಮತ್ತೆಯೂ ಪರ್ವತನಾರಂದರ ಸತಿಯ ಬಲುಮೆ, ಇಂತೆ ಕೊಂಡ ಕರ್ಮಫಲ ರಾವಣಗೊಪ್ಪಿಸಿತ್ತು. ತನ್ನ ಪ್ರಿಯತಮೆಯೆನಿಸುವ ಸೀತಾಂಗನೆಯ ಇನ್ನು ಮಿಕ್ಕಿನ ದೇವದಾನವಮಾನವರನೊಕ್ಕಲಿಕ್ಕಿಯಾಡದಿಹುದೆಯಾ ಕರ್ಮವು. ಆದಡಾ ಕರ್ಮವು ಸ್ವತಂತ್ರವೋ, ಪರತಂತ್ರವೋ ಎಂಬೆಯಾದಡೆ, ಆ ಕರ್ಮ ಈಶ್ವರಾಜೆÕಯಲ್ಲದ ಕರ್ಮಿ ತಾನಾದಂತೆ, ಇದಂ ಗುರು ಕನಿಷ್ಠಾಧಮಮಧ್ಯಮ ಕ್ರಿಯೆಗಳಿಂ ವಿದ್ಥಿಸಿದ ವಿದ್ಥಿಗಳಿಂ, ವಿದ್ಥಿನಿಷೇಧ ಕರ್ಮಂಗಳೆಂಬ ಸಮೂಹಕರ್ಮಗಳಿಗೆ ತಾರತಮ್ಯವಿಡಿದು, ಪುಣ್ಯಪಾಪಂಗಳ ನಿರ್ಮಿಸಿ, ಅಜಾÕನಿಪಿತವ ಮಾಡಿದನೀಶ್ವರನು. ನಾಕನರಕಾದಿಗಳೆ ಸಾಧನವಾಗಿ, ಕರ್ಮಕರ್ತನನೆಯ್ದುವರೆ, ಕರ್ಮ ಕರ್ತನು ಈಶ್ವರನಾದಡೆ ಕರ್ಮನಿ ಶ್ವರಾಜೆÕಯಿಂದೈದುವಡೆ, ಆ ಕರ್ಮ ಕರ್ತನಹ ಈಶ್ವರನನು ಬ್ರಹ್ಮನ ಮೇಲ್ದಲೆಯನರಿದುದಲಾ. ಆ ಕರ್ಮ ಆತನನೆಯ್ದುದುಮೆನಲು, ಅಹಂಗಾಗದು. ವಿರಿಂಚನು ರಜೋಗುಣಹಂಕಾರದಿಂ ಸುರ ಕಿನ್ನರ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರು ತಮ್ಮೊಳು ಬ್ರಹ್ಮವಾದದಿಂ ಸಂಪಾದಿಸಿ ತಿಳಿಯಲರಿಯದೆ, ಬ್ರಹ್ಮನಂ ಬೆಸಗೊಳಲು, ಬೊಮ್ಮವಾನೆನಲು, ಆ ಕ್ಷಣಂ ಗಗನದೊಳು ತೋರ್ಪ ಅತ್ಯನುಪಮ ದೇದೀಪ್ಯಮಾನ ತೇಜಃಪುಂಜ ಜ್ಯೋತಿರ್ಲಿಂಗಾಕಾರಮಂ ತೋರಲಾ ಬ್ರಹ್ಮೇಶ್ವರರು ಆ ವಸ್ತುನಿರ್ದೇಶಮಂ ಮಾಳ್ಪೆನೆಂದು ಪಿತಾಮಹನು ಚತುಸ್ಶಿರ ಮಧ್ಯದಲ್ಲಿ ಮೇಲ್ದಲೆಯಂ ಪುಟ್ಟಿಸಿ, ||ಶ್ರುತಿ|| `ಋತಂ ಸತ್ಯಂ ಪರಂ ಬ್ರಹ್ಮ'ಯೆಂದು ಋಗ್ಯಜುಸ್ಸಿನಲ್ಲಿ ನುತಿಸುತ್ತಂ ಇರಲು, ಬ್ರಹ್ಮಾದ್ಥಿಪತಿ ತತ್ಪರ ಬ್ರಹ್ಮಶಿವ ಇತಿ ಒಂ, ಇತಿ ಬ್ರಹ್ಮಾ ಇತಿ. ಇಂತೀ ಶ್ರುತಿ ಸಮೂಹವೆಲ್ಲವು ಶಿವನನೆ ಪರಬ್ರಹ್ಮವೆಂದು ಲಕ್ಷಿಸಿ, ಮತ್ತತನದಿಂ ಮರದೂ ಅಬ್ರಹ್ಮವೆನಲುಂ ದ್ರುಹಿಣನ ಮೇಲ್ದಲೆಯಂ ಅಪ್ರತಿಮ ತೇಜೋಮಯ ಲೀಲಾಲೋಲಾ ಶೀಲ ದುಷ್ಟನಿಗ್ರಹಿ ಶಿಷ್ಟ ಪ್ರತಿಪಾಲಕನನೆಯಾಕ್ಷಣಂ, ಘನರೌದ್ರ ಕೋಪಾಟೋಪಿಯೆನಿಸುವ ಕಾಲರುದ್ರಂ ಸಮೀಪಸ್ಥನಾಗಿರ್ದು, ಜ್ಯೇಷ್ಠಾ ತರ್ಜನಾಂಗುಲಿ ನಖಮುಖದಿಂ ಛೇದಿಸಲು, ವಿದ್ಥಿ ಭಯಾತುರನಾಗಿ `ಒಂ ನಮೋ ದೇವಾಯ ದೇವ್ಯೈ ನಮಃ, ಸೋಮಾಯ ಉಮಾಯೈ ನಮಃ' ಎಂದು ಸೋಮಾಷ್ಟಕದಿಂ ಸ್ತುತಿಸಿ, ನಮಿಸಿಯಜಿಸಿ ಮೆಚ್ಚಿಸಿ, ಸ್ವಾಮಿ ಸರ್ವೇಶ್ವರ, ಯ್ಯೋಮಕೇಶ, ದೇವದೇವ ಮಹಾಪ್ರಸಾದ. ಈ ಶಿರಮಂ ಬಿಸಾಟದಿರಿ, ಬಿಸಾಟಲು ಪುರತ್ರಯ ಜಗಮಳಿಗುತ್ತಂ ನಿಮಿತ್ತಂ ಪರಮ ಕೃಪಾನಿದ್ಥಿ ಪರಬ್ರಹ್ಮ ಪರಂಜ್ಯೋತಿ ಪರಮೇಶ್ವರ ಪರಮಭಟ್ಟಾರಕ ಪರಾತ್ಪರತರಸದಕ್ಷರ ಚಿನ್ಮೂರ್ತಿ ಸ್ವಯಂಭೋ ಸ್ವಾತಂತ್ರೇಶ್ವರಾಯೆನುತ ಕೀರ್ತಿಸುತ್ತಿರಲು, ಪರಬ್ರಹ್ಮ ನಿರೂಪದಿಂ ಕಾಲರುದ್ರನ ಕಪಾಲಮಂ ಧರಿಸಿದನಂದು. ಇನ್ನೆಮಗಿದೆ ಮತವೆಂದು ಸರ್ವದೆ ತಾ ಗರ್ವ ಕಂಡೂಷಮಂ ಉರ್ವಿಯೊಳೀಗಮೆ ತೀರ್ಚಿಪೆನೆಂದು ಪಿಡಿದು ನಡೆದಂ ಬ್ಥಿP್ಷ್ಞಟನಕಂದು. ಅಹಲ್ಯೆ ಸಾಯಿತ್ತಿದು, ಕರ ಹೊಸತು ಇನಿತರಿಂದ ಕಾಲರುದ್ರಂಗೆ ಬ್ರಹ್ಮೇತಿಯಾಯಿತ್ತೆಂಬ ಕರ್ಮವಾದಿ ಕೇಳಾದಡೆ. ||ಶಾಮಶ್ರುತಿ|| `ತ್ವಂ ದೇವೇಷು ಬ್ರಾಹ್ಮಣಾಹ್ವಯಃದುನುಷ್ಯೋಮನುಷ್ಯೇಮ ಬ್ರಾಹ್ಮಣಾಮುಪದಾವತ್ಯುಪದಾರತ್ಯಾ' ಎನಲು, `ಬ್ರಾಹ್ಮಣೋ ಭಗವಾನ್ ರುದ್ರಃ' ಎನಲು, `ಕ್ಷತ್ರಿಯಃ ಪರಮೋ ಹರಿಃ' ಎನುತಿರಲು, `ಪಿತಾಮಹಸ್ತು ವೈಶ್ಯಸಾತ್' ಎನಲು, ಬ್ರಾಹ್ಮಣೋತ್ತಮ ಬ್ರಾಹ್ಮಣಾದಿ ಪತಿ ಪರಬ್ರಹ್ಮವಿದ್ದಂತೆ. ತಾನೆ ಪರಬ್ರಹ್ಮಮೆನಲಾ ವಿದ್ಥಿಯ ಶಿಕ್ಷಿಪದು ವಿದಿತವಲ್ಲದೆ ನಿಷೇಧವಲ್ಲ. ಅದೆಂತೆನಲು, ಭೂಚಕ್ರವಳಯದೊಳು ಭೂಮೀಶನು ಅನ್ಯಾಯಗಳ ಶಿಕ್ಷಿಸಿದ ಭೂರಕ್ಷಣ್ಯವು, ಲೋಕಹಿತವಲ್ಲದೆ ದೋಷ ಸಾಧನಮೆಯೆಲ್ಲಾ, ಪಾಪಿಗೆ ತಕ್ಕ ಪ್ರಾಯಶ್ಚಿತ್ತಮೆಂದುಂಟಾಗಿ. ಇದು ಕಾರಣ, ಶಿಕ್ಷಯೋಗ್ಯನ ಶಿಕ್ಷಿಸಿದವದ ದೋಷವಿಲ್ಲೆಂದು ಭಾಟ್ಠ(?) ದೊಳೊಂದು ಪಕ್ಷಮಿರೆ, ಮತ್ತಮದಲ್ಲದೆ, ಅದೊಮ್ಮೆ ಹತ್ತುತಲೆಯವನಂ ಅತ್ಯುಗ್ರದಿಂ ವಂದಿಸಿದ ಶ್ರೀರಾಮಂಗೆ ಬ್ರಹ್ಮಹತ್ಯಾ ಬ್ರಹ್ಮಕರ್ಮ ವಿದ್ಯಾಬ್ರಹ್ಮರಿಂದಾವಾವ ಪ್ರಾಯಶ್ಚಿತ್ತದಿಂತೆಮ್ಮನೆ ಕೆಡದಿರಲು, ಆ ರಾಮಂ ಆ ರಾವಣಹತ ದೋಷನಿರುಹರಣಕ್ಕಾವುದು ಕಾಣದಿರಲು, ಶಂಭುಪೌರಾಣಿಕನೆಂಬ ನಾಮವಂ ತಾಳ್ದು, ಶಿವಂ ರಾಮಂಗೆ ಪ್ರತ್ಯಕ್ಷಮಾಗಿ, ಈ ದೋಷಕ್ಕೆ ಲಿಂಗಪ್ರತಿಷ್ಠೆಯ ನಿರೋಹರಣಮೆಂದರುಪಿ, ಅರಿದಾ ರಾಮಂಗಂ ಗಂಧಮಾದ ಪರ್ವತವೇ ಆದಿಯಾಗಿ, ಅದನು ಕೋಟೆಯ ಅವದ್ಥಿಯಾಗಿ ಶಿವಲಿಂಗಪ್ರತಿಷ್ಠೆಯಂ ಮಾಡೆ, ರಾಮೇಶ್ವರಲಿಂಗಮೆನಿಪ್ಪ ನಾಮಾಂಕಿತದಿಂ ತಕವಕ ಮಿಗೆವರಿದು ಸ್ವಾತ್ವಿಕಭಕ್ತಿಭಾವದಿಂದರ್ಚಿಸಿ ಸ್ತುತಿಸಿ, ಭೂವಳಯದೊಳೆಲ್ಲಂ ಪ್ರದಕ್ಷಿಣ ಮುಖದಿಂ ಶಿವಲಿಂಗಾಲಯಮನೆತ್ತಿಸಿ, ಅಂತಾ ಸಹಸ್ರಾವದ್ಥಿಯೆನಿಸುವ ದಶಗ್ರೀವ ವಧೆಯಂ ಪರಿಹರಿಸಿದ ಹಾಗೆ, ಶ್ರೀಮನ್ಮಹಾದೇವನೂ ದೇವಾದಿದೇವನೂ ದೇವಚಕ್ರವರ್ತಿ ದೇವಭಟ್ಟಾರಕನೂ ದೇವವೇಶ್ಯಾಭುಜಂಗನೂ ಸರ್ವದೇವತಾ ನಿಸ್ತಾರಕನೂ ಸರ್ವದೇವತಾ ಯಂತ್ರವಾಹಕನೂ ಒಂದಾನೊಂದೆಡೆಯಲ್ಲಿ ಮಹಾದೇವೇಶ್ವರನು ರುದ್ರೇಶ್ವರನು ಈಶ್ವರೇಶ್ವರನು ಶಂಕರೇಶ್ವರನೆನಿಪ ನಾಮಂಗಳಿಂ, ಭೂವಳಯದೊಳು ಲಿಂಗಪ್ರತಿಷ್ಠೆಯಂ ಬ್ರಹ್ಮಶಿರಚ್ಛೇದನ ನಿಮಿತ್ಯನಂ ಮಾಡಿದುದುಳ್ಳಡೆ, ಹೇಳಿರೆ ಕರ್ಮವಾದಿಗಳು. ಅಂತುಮದಲ್ಲದೆಯುಂ ಆ ಉಗ್ರನಿಂದಂ ಪಿತಾಮಹಂ ಅವದ್ಥಿಗಡಿಗೆ ಮಡಿವುದಂ ಕೇಳರಿಯಿರೆ. ಅದಲ್ಲದೆಯುಂ, ದP್ಷ್ಞಧ್ವರದೊಳಾ ದಕ್ಷ ಪ್ರಜಾಪತಿಯ ಶಿರವನರಿದು, ಕರಿಯದಲೆಯನೆತ್ತಿಸಿದ. ಅದಲ್ಲದೆಯುಂ ಸುತೆಗಳುಪಿದ ವಿರಂಚಿ ಹತಿಸಿದಂದು, ಅದಲ್ಲದೆಯುಂ ಸಮಸ್ತದೇವತೆಗಳ ಆಹಾರ ತೃಪ್ತಿಗೆ ಬೇಹ ಅಮೃತತರನಂ ಚರಣಾಂಗುಷ್ಠದಿಂದೊರಸಿದಂದು, ಅದಲ್ಲದೆಯುಂ ವಿಷ್ಣು ತಾನೆಯೆನಿಪ ವಿಶ್ವಕ್ಸೇನನ ತ್ರಿಶೂಲದಿಂದಿರಿದೆತ್ತಿ ಹೆಗಲೊಳಿಟ್ಟಂದು, ಅದಲ್ಲದೆಯುಂ ಮತ್ಸ್ಯ ಕೂರ್ಮ ವರಾಹ ನಾರಸಿಂಹ ತ್ರಿವಿಕ್ರಮಾದಿಗಳಂ ಮುಂದುವರಿದು ಕೊಂದಂದು ಅದಲ್ಲದೆಯುಂ ದೇವಿದ್ವಿಜರಿಗೆ ಗುರುವೆನಿಸುವ ಪಾವಕನ ಏಳು ನಾರಿಗೆಗಳ ಕೀಳುವಂದು, ಅದಲ್ಲದೆಯುಂ ಯಜÕವಾಟದೊಳು ಪ್ರಾಜÕನೆನಿಸುವ ಪೂಶಾದಿತ್ಯನ ಹಲ್ಲ ಕಳದು, ಭಾಗಾದಿತ್ಯನಂ ಮೀಂಟಿ ವಾಣಿಯ ಮೂಗಂ ಮಾಣದೆ ಕೊಯ, ದೇವಮಾತೃಕೆಯರ ದೊಲೆ ನಾಶಿಕವ ಚಿವುಟಿದಂದು, ಅದಲ್ಲದೆಯುಂ ಬ್ರಹ್ಮಾಂಡಕೋಟಿಗಳನೊಮ್ಮೆ ನಿಟಿಲತಟನಯನಂ ಲಟಲಟಿಸಿ ಶೀಘ್ರದಿಂದ ಸುಡಲು, ಸುರಾಸುರ ಮುನಿನಿವಹ ಹರಿಹಿರಣ್ಯಗರ್ಭರು ಶತಕೋಟಿ ಹತವಾದಂದು, ಪ್ರೊರ್ದದಾ ಬ್ರಹ್ಮಹತ್ಯಂ ನಿರ್ಧರಮಾಗಿ ಬೊಮ್ಮನ ಮೇಲ್ದಲೆಯೊಂದ ಚಿವುಟಿದುದರಿಂದಂ ಒಮ್ಮೆಯ ಶೂಲಪಾಣಿಗೆ ಬ್ರಹ್ಮೇತಿಯಾದುದತಿಚೋದ್ಯ ಚೋದ್ಯ. ಅವಲ್ಲದೆಯೂ ಬ್ರಹ್ಮ ಸಾಯನು. ಅಂಗಹೀನಮಾದುದಲ್ಲದೆ ಹೋಗಲಾ ಸಾಮಾನ್ಯ ಚರ್ಚೆ ಕರ್ಮಗತ ಕರ್ಮಿಯೆನಿಸುವ ನಿನ್ನ ಕರ್ಮವಾದವೆಲ್ಲಿಗೂ ಸಲ್ಲದು. ಬ್ರಹ್ಮಮಸ್ತಧಾರಣ ಲೀಲಾಲೋಲ ಶೀಲಬ್ರಹ್ಮೇಶ್ವರ ಪರಬ್ರಹ್ಮ ಶ್ರೀಮನ್ಮಹಾದೇವನ ನಾಮಕೀರ್ತನ ಮುತ್ರದಿಂದು ಬ್ರಹ್ಮಹತ್ಯಕೋಟಿಗಳುಂ ಮಹಾಪಾತಕವಗಣಿತಂ ನಿರಿಗೆಣೆಯಾದಕೂಲಮಂ ಭರದೊಳನಲ ಗ್ರಹಿಸಿದಂತಾಗುಮೆನೆ. ಬ್ರಹ್ಮ ಪಂಚಬ್ರಹ್ಮಮೆನಲು ಬ್ರಹ್ಮಪಾಪಕಾಶಿಯೆನಲು, ಶಿವಲಿಂಗ ದರ್ಶನ ಮಾತ್ರ ಬ್ರಹ್ಮಹತ್ಯವಳಿವವೆನಲು, ಆ ಶಿವನೆ ಬ್ರಹ್ಮಹತ್ಯವೆ ಇದುಯೆಂಬುದು ಮೊಲನ ಕೋಡಿನಂತೆ. ಇದು ಕಾರಣ, ಕರ್ಮ ಶಿವನಾಜೆÕವಿಡಿದು ಕರ್ಮಿಯ ಗ್ರಹಿಸೂದು. ಕರ್ಮಸಾರಿಯಲಿ ಕರ್ಮ ನಿರ್ಮಲಕರ್ಮ ಕಾರಣ ಕರ್ತೃವೆಂದರಿಯದಡೆ, ಎಲೆ ಕರ್ಮವಾದಿ, ನಿನಗೆ ಗತಿ ಉಂಟೆಂದುದು, ಬಸವಪ್ರಿಯ ಕೂಡಲಚೆನ್ನಸಂಗನ ವಚನ. || 65 ||
--------------
ಸಂಗಮೇಶ್ವರದ ಅಪ್ಪಣ್ಣ
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಯಿದಡೆ ಅಂಗದ ಮೇಲಣ ನೋವ, ಮನವರಿವಂತೆ, ಬಾಹ್ಯ ಉಪಚರಣೆಯ ಪೂಜೆ, ನಿನಗೆ ಹೊರಗಾದುದುಂಟೆ ? ಆ ತೆರನನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಳಗೂ ತಾನೆ, ಹೊರಗೂ ತಾನೆ.
--------------
ಸಗರದ ಬೊಮ್ಮಣ್ಣ
ಕೊಡುವವ ಮಾನವನೆಂದು ಒಡಲಾಸೆಯ ತೋರದಿರು, ಕೊಡುವವ ಮಾನವನಲ್ಲ. ಕೊಡುವವ ಕೊಂಬುವವ ಮಾನವರ ನಡುವಿಪ್ಪ ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ. ಜೀವನ ಬುದ್ಧಿಯಿಂದ ನರನನಾಸೆಗೈಯದಿರು. ಆಸೆಗೈದರೆ ಕಾವವರಲ್ಲ , ಕೊಲ್ಲುವವರೂ ಅಲ್ಲ , ಕೊಡುವವರೂ ಅಲ್ಲ , ಬಿಡುವವರೂ ಅಲ್ಲ . ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ ? ವೈಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ. ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ ?
--------------
ಹೇಮಗಲ್ಲ ಹಂಪ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
`ನೀನು' `ನಾನು' ಎಂಬ ಉಭಯಸಂಗವಳಿದು ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು, ಬಟ್ಟಬಯಲು ಕಾಣಬಹುದು ನೋಡಾ ! ಆ ಬಯಲ ಬೆರಸುವಡೆ_ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ ! ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ ! ನಡೆ ಅಲ್ಲಿಗೆ ತಾಯೆ, ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
--------------
ಅಲ್ಲಮಪ್ರಭುದೇವರು
ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ ! ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ ಬಸವ ಮೊದಲಾದ ಪ್ರಮಥರೆಲ್ಲ ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ, ಮಹಾಲಿಂಗೈಕ್ಯಾನುಭಾವವ ಬೆಸಗೊಳಲು ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ; ಗುರುವಿನ ಗದ್ದುಗೆ ಬೇಕಿಲ್ಲ ; ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ? ಕತ್ತಲೆಯೆತ್ತ ಬೆಳಗೆತ್ತ? ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ ಇದೇನು ಗಾರುಡಿಗತನ ನಿನಗೆ?. ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ ಅದು ಹಿತವಹುದೆ? ನಿನ್ನ ನಿಜಸುಖದ ಸವಿಗಲಿಸಿ, ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?. ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ. ಎನ್ನ ನೀನರಿದು ಸಲಹು, ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಬಸವಣ್ಣನ ಪಾದವ ಕಂಡೆನಾಗಿ ಎನ್ನಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನ್ನ ಅರಿವು ಸ್ವಯವಾಯಿತ್ತು. ಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಶರಣರ ಕರುಣವ ಪಡೆದೆನಾಗಿ ನಿನಗೆ ಮತ್ತಾವುದಿಲ್ಲವಯ್ಯ ಪ್ರಭುವೆ.
--------------
ಅಕ್ಕಮಹಾದೇವಿ
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ? ಭಾವನಾಸ್ತಿಯಾಗಿರಬೇಕು. ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು. ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು ಕುರುಹಳಿದು ಕೂಡುವ ಪರಮಸುಖವು, ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ ಮಡಿವಾಳ ಮಾಚಯ್ಯಾ ?
--------------
ಅಲ್ಲಮಪ್ರಭುದೇವರು
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->