ಅಥವಾ

ಒಟ್ಟು 59 ಕಡೆಗಳಲ್ಲಿ , 29 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಿಥ್ಯಭಾವವನು ತತ್ತರಿದಂದು, ಕಲ್ಪಕಳೆಯನಳಿದುಳಿದಂದು, ಸತ್ತವರೆದ್ದು ಬಂದಂದು, ಸಂಬಂಧಸುಖಸಮ್ಮುಖದ ಸಂಗದ ಸವಿಯ ನೋಡಾ. ಧರೆ ಗಗನದ ಮಧ್ಯ ಜಗಜಗಿಸುತಿರ್ದ ಷಡುದರ್ಶನ ಮೂಲಮುಖಸುಯಿಧಾನವಿಡಿದು, ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ! 26
--------------
ಬಸವಣ್ಣ
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ. ಒಂದು ಧರೆಯ ಕಣ್ಣು, ಒಂದು ಸಿರಿಯ ಕಣ್ಣು, ಒಂದು ಉರಿಯ ಕಣ್ಣು. ಉರಿ ಸಿರಿಯ ನುಂಗಿ, ಸಿರಿ ಧರೆಯ ನುಂಗಿ, ಧರೆ ಅರುಹಿರಿಯರ ನುಂಗಿತ್ತು. ಆ ಗುಣವನರಿಯಬೇಕು, ಸದಾಶಿವಮೂರ್ತಿಲಿಂಗವ ಭೇದಿಸಬೇಕು
--------------
ಅರಿವಿನ ಮಾರಿತಂದೆ
ಪರವಧುವ ನೆರೆಯದೆ; ಪರಧನವ ತುಡುಕದೆ. ಪರದೈವದಿಚ್ಚೆವಡೆಯದೆ ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ, ಮುನ್ನಾದುದಕ್ಕೆ ನಿನ್ನ ಮನ ಬಂದಂತೆ ಮಾಡು. ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಲಿಂಗವೆ, ಪರವಧುವೆನ್ನ ಹೆತ್ತತಾಯಿ ಸಮಾನ. ಇದ್ದವರೆನ್ನ ಸಹೋದಯಸ್ತ್ರೀಯ ಸಮಾನ. ಪಣ್ಯಾಂಗನೆಯರ ಸಂಗವೆನಗೆ ನಾಯಮಾಂಸ ನರರಡಗಿನ ಸಮಾನ. ದಾನವರ ಸಂಗವೆನಗೆ ಸೂಕರನ ಮಲದ ಸಮಾನ. ಇಹಿಂಗೆಂದು ಭಾಷೆಯ ಮಾಡಿ, ತಿರುಗಿ ಆಸೆ ಮಾಡಿ ಕೂಡಿದೆನಾದಡೆ, ನಿಮ್ಮ ಪ್ರಸಾದಕ್ಕೆ ಬಾಯಿದೆರೆಯನು. ತನು ಲೋಭದಿಂದ ಕೂ[ಡಿದೆನಾದ]ಡಾ ತನುವ ದಿಗುಬಲಿಗೊಡುವೆನು, ಕೊಡದಿರ್ದಡೆ, ಧರೆ ಚಂದ್ರಾರ್ಕರುಳ್ಳನ್ನ ಬರ ಅರಸು ನರಕದಲ್ಲಿಕ್ಕು. ಸೂಕರ ನಾಯಿ ವಾಯಿಸ ಗಾರ್ದಭ ಬಸುರಲ್ಲಿ ಬರಿಸು. ಬರಿಸದಿದಡೆ ನಿಮಗೆ ನಿಮ್ಮಾಣೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು. ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ, ಹೊಳೆ ಒಂದೆ, ಹಾದಿಯ ಹೊಲಬು ಬೇರಲ್ಲದೆ, ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ ? ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ, ಪಾವಕ ಸರ್ವಮಯರಿಗೆ ದಗ್ಧ. ಸರ್ವಮಯ ಪೂಜಿತ ದೈವದ ಆಧಾರ, ನೀನಲ್ಲದೆ ಬೇರೆಯಿಲ್ಲ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಮಹಾಪ್ರಳಯದೊಳು ಧರೆ ಜಲದಲ್ಲಡಗಿತ್ತು, ಬ್ರಹ್ಮ ವಿಷ್ಣುವಿನಲ್ಲಡಗಿದ, ಜಲ ಅಗ್ನಿಯಲ್ಲಡಗಿತ್ತು, ವಿಷ್ಣು ರುದ್ರನಲ್ಲಡಗಿದ, ಅಗ್ನಿ ವಾಯುವಿನಲ್ಲಡಗಿತ್ತು, ರುದ್ರ ಈಶ್ವರನಲ್ಲಡಗಿದ, ವಾಯುವಾಕಾಶದಲ್ಲಡಗಿತ್ತು, ಈಶ್ವರ ಸದಾಶಿವನಲ್ಲಡಗಿದ, ಆಕಾಶ ಅಕ್ಷರ ಮೂರೆಂಬ ಓಂಕಾರದಲ್ಲಡಗಿತ್ತು, ಸದಾಶಿವನತೀತನಲ್ಲಡಗಿದ, ಅತೀತ ಆದಿಯಲ್ಲಡಗಿದ, ಆದಿ ಅನಾದಿಯಲ್ಲಡಗಿತ್ತು, ಅನಾದಿ ನಿಜದ ಅಹಂಕಾರದಲ್ಲಿಳಿಯಿತ್ತು, ನಿಜವು ತಾನು ತಾನು ಆಗಿದ್ದಿತು, ಈ ಭೇದವ ಕೂಡಲಸಂಗನಲ್ಲಿ ಪ್ರಭುವೆ ಬಲ್ಲ ಕಾಣಾ ಚೆನ್ನಬಸವಣ್ಣಾ
--------------
ಬಸವಣ್ಣ
ಆದಿಪುರುಷನ ಮನವು ಮಹವನಕ್ಕಾಡೆ, ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು. ಧರೆ, ಅಂಬರ, ವಾರುಧಿ ಸಹಿತ, ಜಾರೆಯೆಂದಡೆ ಜಗದಲ್ಲಿ ನಿಂದವು Zõ್ಞರಾಸಿಲಕ್ಷ ಜೀವಜಾಲಗಳು. ಹೋರೆಯೆಂದಡೆ ಆಕಾಶದಲ್ಲಿ ನಿಂದರು ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು- ಮೊದಲಾದ ದೇವಸಮೂಹಂಗಳೆಲ್ಲ ಕೂಡಲಸಂಗಮದೇವಾ, ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು.
--------------
ಬಸವಣ್ಣ
ಧರೆ ಜಲ ಅಗ್ನಿ ವಾಯು ಅಂಬರವಿಲ್ಲದಂದು, ಅಂತರಂತರ ಪದಿನಾಲ್ಕುಭವನ ನೆಲೆಗೊಳ್ಳದಂದು, ದಿವಾ ರಾತ್ರಿ ಚಂದ್ರ ಸೂರ್ಯ ನಕ್ಷತ್ರ ಗ್ರಹರಾಶಿಗಳಿಲ್ಲದಂದು, ಅಷ್ಟದಿಕ್ಕು ಅಷ್ಟಕುಲಪರ್ವತಗಳಿಲ್ಲದಂದು, ಸಪ್ತಸಮುದ್ರಂಗಳು ಸಪ್ತದ್ವೀಪಂಗಳಿಲ್ಲದಂದು, ಮಹಾಮೇರುವ ನವಖಂಡಪೃಥ್ವಿಯ ಮಧ್ಯದಲ್ಲಿ ಸ್ಥಾಪಿಸದಂದು, ಸಿಡಿಲು ಮಿಂಚು ಚಳಿ ಮಳೆಗಳಿಲ್ಲದಂದು, ನರ ಸುರ ತಿರ್ಯಗ್ಜಾತಿಗಳು ಸ್ಥಾವರ ಜಂಗಮಾತ್ಮಕವಾದ ಸಮಸ್ತ ಪ್ರಪಂಚ ಪಸರಿಸದಂದು, ನೀನೊಬ್ಬನೆ ಇರ್ದೆಯಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಧರೆ ರಸಾತಳಕ್ಕಿಳಿವಂದು, ಹರಿಬ್ರಹ್ಮಾದಿಗಳಳಿವಂದು, ಮಹಾದೇವ ಮಹಾದೇವ ಎನುತ್ತಿರ್ದೆನು ಅದೆಂತೆಂದಡೆ; ಬ್ರಹ್ಮಾಂಡಾನಾಮಸಂಖ್ಯಾನಾಂ ಬ್ರಹ್ಮವಿಷ್ಣುಮಹಾತ್ಮನಃ± ಯತ್ರೋದಯಂ ಲಯಂ ಯಾಂತಿ ಮಹಾದೇವ ಇತಿ ಸ್ಮೈತಃ ಎಂದುದಾಗಿ ಅಗ್ರದ ಕೊನೆಯ ತುದಿಯಿಂದತ್ತತ್ತ ತತ್ತ್ವಮಸಿಯ ಮೀರಿದ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು, ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷಾ*ದಿಗಳಿಲ್ಲದಂದು, ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದಿಹೆನೆಂಬ ತ್ರಿಜಗಾಧಿಪತಿಗಳಿಲ್ಲದಂದು_ ತೋರುವ ಬೀರುವ ಪರಿ ಇಲ್ಲದಂದು, ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->