ಅಥವಾ

ಒಟ್ಟು 10 ಕಡೆಗಳಲ್ಲಿ , 6 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಗಳು ರುದ್ರಾಕ್ಷಿಯ ಕೊಟ್ಟ್ಲಲ್ಲಿ ಫಲವಲ್ಲದೆ, ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ, ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ, ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ. ನಿನ್ನರಿವ ನಾನರಿತಲ್ಲಿ ಫಲವಲ್ಲದೆ, ಅರುಹಿಸಿದಲ್ಲಿ ಫಲವಿಲ್ಲ. ಅಹುದೆಂಬುದು ನ್ಕೀ, ಬಲ್ಲೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪರಮಪ್ರಕಾಶ ತನ್ನಯ ಮೂರ್ತಿ ಭಿತ್ತಿ ಅಹಲ್ಲಿ, ಚಿತ್ಪ್ರಕಾಶಶಕ್ತಿ ಮುಕ್ತಿಯ ಸಾಕಾರವ ಧರಿಸಿದಲ್ಲಿ, ತ್ರಿವಿಧದ ಉತ್ಪತ್ಯದ ಭೇದ. ಒಂದು ಮೂರಾಗಿ, ಮೂರ ಹಲವಾಗಿ, ಅಂಡ ಪಿಂಡಗಳಲ್ಲಿ ತೋರುವ ತೋರಿಕೆ, ಬಂಕೇಶ್ವರಲಿಂಗನ ಲೀಲಾಭಾವ.
--------------
ಸುಂಕದ ಬಂಕಣ್ಣ
ಮನವೆಂಬುದು ಬೇರಿಲ್ಲ ; ಮಹಾದೇವನ ಮಹಾ ಅರುಹು ನೋಡಾ. ಸಂಕಲ್ಪ ವಿಕಲ್ಪಂಗಳ ಧರಿಸಿದಲ್ಲಿ ಮನವೆನಿಸಿತ್ತು ; ಅದು ಅಳಿದಲ್ಲಿ ಮಹಾಜ್ಞಾನವೆನಿಸಿತ್ತು ; ಅಳಿದ ಭಾವ ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನೆನಿಸಿತ್ತು.
--------------
ಸಿದ್ಧರಾಮೇಶ್ವರ
ನಾಲ್ಕು ಯುಗಂಗಳು ಸಹಸ್ರ ವೇಳೆ ತಿರುಗಿದಡೆ, ಬ್ರಹ್ಮಂಗೊಂದು ಬ್ರಹ್ಮನಂದು ಸಹಸ್ರ ವೇಳೆ ತಿರುಗಿದಡೆ, ವಿಷ್ಣುವಿಗೊಂದು ಗಳಿಗೆ. ವಿಷ್ಣು ತಾನು ಹನ್ನೆರಡು ಲಕ್ಷ[ವೇಳೆ]ತಿರುಗಿದಡೆ, ಮಹೇಶ್ವರಂಗೊಂದು ನಿಮಿಷ. ಅಂತಪ್ಪ ಮಹೇಶ್ವರರನೇಕ ಲೀಲೆ ಧರಿಸಿದಲ್ಲಿ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆ ಸಮಾಪ್ತಿ, ನೋಡಯ್ಯಾ ಬಾಚರಸರೆ.
--------------
ಸಿದ್ಧರಾಮೇಶ್ವರ
ವಸ್ತು ಸ್ವಯಂಭುವಾಗಿದ್ದಲ್ಲಿ ನಾಮರೂಪುಕ್ರೀಗೆ ಹೊರಗಾಗಿದ್ದಿತ್ತು. ತನ್ನಯ ಸುಲೀಲೆ ಹಿಂಗಿ ಜಗಹಿತಾರ್ಥವಾಗಿ ಉಮಾಪತಿಯ ಧರಿಸಿದಲ್ಲಿ ತ್ರಿವಿಧಮೂರ್ತಿಯ ಭಾವ ಕಲ್ಪಿಸಿದಲ್ಲಿ, ಕ್ರಿಯಾಸಂಪದಕ್ಕೆ ಒಳಗಾಗಿ, ಅಷ್ಟವಿಧಾರ್ಚನೆ ಷೋಡಶ ಉಪಚರ್ಯವ ಮಾಡಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅರಿವಿಂದಲಾದ ಮರಹಿನ ಶಬ್ದವನರಿಯಲಾಗದು, ಅರಿದಡದಕ್ಕೆ ಭವವು (ಭಂಗವು?), ಅರಿವರತು ಮರಹು ನಷ್ಟವಾಗಿ ಜ್ಞಾನ ಬೆಂದಲ್ಲಿ ನಿರ್ಣಯವೆಲ್ಲಿಯದು ? ಜ್ಞಾನದೊಳಗಣ ಬುದ್ಧಿಯ ಭಸ್ಮವಾಗಿ ಧರಿಸಿದಲ್ಲಿ ಕೂಡಲಚೆನ್ನಸಂಗಮದೇವರು ಸರ್ವನಿವಾಸಿ.
--------------
ಚನ್ನಬಸವಣ್ಣ
ಗುರುವೆಂಬ ಅಂಗವ ಧರಿಸಿದಡೇನು? ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ? ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು? ಮೃತ್ತಿಕೆಯ ಬೊಂಬೆಯ ಕೈಯಲ್ಲಿ ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ? ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ? ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು, ನಿಜತತ್ವದ ಸಾಕಾರವೆ ಮೂರ್ತಿಯಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು, ಸರ್ವಾಚಾರಸಂಪತ್ತಿನೊಳಗಿರಿಸಿದ ಕ್ರಿಯಾಘನಗುರುವಿನ ತೆಗೆದುಹಾಕಿ ನಾವು ಲಿಂಗಜಂಗಮಸನ್ನಿಹಿತರೆಂದಡೆ ಆ ನಾಲಿಗೆ ಕೀಳದಿಹರೆ ಕಾಲನವರು ? ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ ಖಂಡಿಸದಿಹರೆಯಮನವರು? ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ ಬಿಸಾಟರೆ ಅಂತಕನವರು? ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ ಕಡಿಕಡಿದು ಕಡೆಗಿಡರೆ ಯಮನವರು ? ಆ ಆದಿಯ ಗುರುನಾಮಾಮೃತವ ಸೇವಿಸುವರ ಹೃದಯವನಿರಿದು ಕೆಡಹದಿಹರೆ ದಂಡಧರನವರು ? ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ ಮಾನವರ ಬಾಧಿಸರೆ ಕೀನಾಶನವರು ? ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ ಸೇವಿಸುವ ಭಾವವನು ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು ? ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ ವೈತರಣಿಯಕೂಟ ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
-->