ಅಥವಾ

ಒಟ್ಟು 60 ಕಡೆಗಳಲ್ಲಿ , 29 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ದೃಷ್ಟಿ ಕಾಮ್ಯಾರ್ಥದಲ್ಲಿ ನೆಟ್ಟು ನೋಡಿ, ಒಡೆಯರು ಭಕ್ತರ ವಧುಗಳಲ್ಲಿ ಮತ್ತಾ ದೃಷ್ಟಿಯ ಮುಟ್ಟಲೇತಕ್ಕೆ? ಮತ್ತೆ ಇತ್ಯಾದಿಗಳ ಬಿಟ್ಟು ಹೆಣ್ಣವ್ರತ ಕಟ್ಟೆಂದು ಮಾಡಬಹುದೆ? ಮತ್ತದ ಕಟ್ಟಿಕೊಂಡು ಮಿಟ್ಟಿಯ ಭಂಡರಂತೆ ಕುಟ್ಟಿಯಾಡಬಹುದೆ? ಇಂತೀ ಬಾಹ್ಯ ದೃಷ್ಟಿಗಳ್ಳರ, ಆತ್ಮಚಿತ್ತಗಳ್ಳರ ವ್ರತಸ್ಥರೆಂದು ಎನಲಾಗದು. ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು ಅವರುವ ಮುಟ್ಟದಿಹನಾಗಿ
--------------
ಕರುಳ ಕೇತಯ್ಯ
ದೃಶ್ಯವ ಕಾಬ ದೃಷ್ಟನಾರೋ ಎಂದಡೆ ದೃಶ್ಯ ದೃಷ್ಟಗಳನರಿವ ಅರಿವದು ದೃಶ್ಯನೂ ಅಲ್ಲ ದೃಷ್ಟನೂ ಅಲ್ಲ. ಅದೃಶ್ಯಭಾವ ದೃಷ್ಟಿ ಚಿನ್ಮಯ ದರ್ಶನಾದಿ ಕ್ರಿಯೆಯಿಲ್ಲದ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಲ್ಲನ ನೋಟದ ಬೇಟದ ಕೂಟದ ಪರಿಯ ನಾನೇನೆಂದು ಹೇಳುವೆ? ವಿಪರೀತ ಕೆಳದಿ. ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ ಬೇಟ ಬೇರುಂಟೆ? ಹೇಳು ಅವ್ವಾ. ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು? ಹೇಳಾ ಅವ್ವಾ. ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
--------------
ಸಿದ್ಧರಾಮೇಶ್ವರ
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ. ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
--------------
ಅಲ್ಲಮಪ್ರಭುದೇವರು
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ, ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ, ಆ ಸೂತ್ರ ಆ ಪಾಷಾಣವ ಗ್ರಹಿಸಿ, ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ, ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು ಶಿವಪೂಜಕನ ಶಿವಮೂರ್ತಿಧ್ಯಾನ. ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಲಿಂಗವನರಿವವರಿಗಲ್ಲದೆ ಕಾಣಬಾರದು.
--------------
ಮೋಳಿಗೆ ಮಹಾದೇವಿ
ಶರಣನ ನೋಟ ಭವಕ್ಕೆ ಓಟ ನೋಡಯ್ಯಾ. ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ. ಶರಣನ ದೇಹ ಶಿವದೇಹ ನೋಡಯ್ಯಾ. ಶರಣನ ಪಾದುಕೆ ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಚಮ್ಮಾವುಗೆ ನೋಡಾ, ಮಡಿವಾಳ ಮಾಚಣ್ಣಾ.
--------------
ಸಿದ್ಧರಾಮೇಶ್ವರ
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ. ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು. ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ. ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ. ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಅರಿಯದವಂಗೆ ಅರಿದಿಹೆನೆಂಬ ಬಯಲರೋಗ ಹುಟ್ಟಿ, ಕಾಲುಗೆಟ್ಟು ದೃಷ್ಟಿ ನಷ್ಟವಾಗುತ್ತಿದೆ ನೋಡಾ ! ಅದಕ್ಕೆ ನಾನೊಂದ ಮದ್ದ ಕಂಡೆ. ಹೆಸರಿಲ್ಲದ ಗಿಡ, ಮೂಲವಿಲ್ಲದ ಬೇರು. ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು, ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು, ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ ಇಕ್ಕುವದಕ್ಕೆ ಮೊದಲೆ, ಮದ್ದಿನ ದೃಷ್ಟ ನಷ್ಟವಾಯಿತ್ತು , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು. ತನಗಲ್ಲದುದ ಕೈ ಮುಟ್ಟಿದಲ್ಲಿ ಅಲ್ಲಿಯೇ ತೆಗೆವೆನು. ತನಗಲ್ಲದುದ ಕಿವಿ ಕೇಳಿದಲ್ಲಿ ಅಲ್ಲಿಯೇ ಗುಂಟಿ ಬಲಿವೆನು. ತನಗಲ್ಲದುದ ನಾಸಿಕ ವಾಸಿಸಿದಲ್ಲಿ ಅಲ್ಲಿಯೇ ದಸಿಯ ದಕ್ಕನೇರಿಸುವೆನು. ದೃಷ್ಟಿ ಅನುತಪ್ಪಿ ನೋಡಿದಲ್ಲಿ ಅಲ್ಲಿಯೇ ಕಿತ್ತಿಡುವೆನು. ಚಿತ್ತ ಅನುತಪ್ಪಿ ಮತ್ತೊಂದ ನೆನೆದಡೆ, ಆತ್ಮನನಲ್ಲಿಯೆ ಕಿತ್ತು ಹಾಕುವೆನು. ಇದಕ್ಕೆ ನೀವೇ ಸಾಕ್ಷಿ, ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು.
--------------
ಕರುಳ ಕೇತಯ್ಯ
ಲಿಂಗದ ಕಲೆ ಅಂತರಂಗಕ್ಕೆ ವೇದಿಸುವ ಹಲವು ಸಾಧನಂಗಳಲ್ಲಿ ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯಾ. ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹರಿಚದಂತಿರ್ದಡೆ ಆ ಲಿಂಗವು ಕಂಗಳಲ್ಲಿ ವ್ಯಾಪಿಸುತಿಪ್ಪುದು. ಆ ಮಂಗಲಮಯವಾದ ಕಂಗಳಲ್ಲಿ ಮನವಿರಿಸಿ, ಲಿಂಗನಿರೀಕ್ಷಣೆಯಿಂದ ನೆನೆಯಲು, ಆ ಲಿಂಗಮೂರ್ತಿ ಮನವನಿಂಬುಗೊಂಡು ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು. ಬಳಿಕ ಮನೋಮಯಲಿಂಗವನು ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು, ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು ಭಾವಲಿಂಗವಾಗಿ ಕಂಗೊಳಿಸುತಿಪ್ಪುದು. ಆ ಭಾವಲಿಂಗವನು ಎಡೆವಿಡದೆ ಭಾವಿಸುತ್ತ, ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು, ಶರಣನು ನಿತ್ಯತೃಪ್ತನಾಗಿ ವಿರಾಜಿಸುತಿಪ್ಪನು. ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ ಕೂಡುವ ಪರಮೋಪಾಯವು.
--------------
ಚನ್ನಬಸವಣ್ಣ
ಹೊರನಾಳ ಎಂಟುಕೋಟಿ, ಒಳನಾಳ ನೂರೆಂಟು. ಹೊರದ್ವಾರ ಒಂಬತ್ತು, ಒಳದ್ವಾರ ಸರ್ವಾಂಗಮಯ. ಇಂತೀ ಪಂಚತತ್ವ, ಅಷ್ಟಗುಣಂಗಳು ಕೂಡಿ, ಘಟ್ಟಿಗೊಂಡ ತನು ಶುಕ್ಲ ಶೋಣಿತ ಮಜ್ಜೆ ಮಾಂಸ ಎಲುವು ಸರ ಚರ್ಮ ರೋಮ. ಇಂತೀ ಅಷ್ಟಗುಣಂಗಳ ಕಷ್ಟೋತ್ತರದಲ್ಲಿ ಸಿಕ್ಕಿದ ಆತ್ಮಂಗೆ, ಇಂದ್ರಿಯಂಗಳ ರೋಗವಿಡಿದು ಬಂಧ ಮೋಕ್ಷ ಕರ್ಮಂಗಳೆಂಬ ಶೀತ ಜ್ವರ ತಾಪಂಗಳಲ್ಲಿ ವ್ಯವಹರಿಸುವ ಆತ್ಮಂಗೆ, ನಾನೊಂದು ನಿಹಿತದ ಮದ್ದ ಕಂಡೆ. ಅದು ಅರೆವಡೆ ಅಸಾದ್ಯ, ಸುಮ್ಮನೆ ಮೆಲುವಡೆ ಸವೆಯದು. ದೃಷ್ಟಿ ನಟ್ಟು ಮುಚ್ಚಿರಲಿಕ್ಕಾಗಿ ರೋಗರುಜೆ ಬಚ್ಚಬಯಲು, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು, ನೋಡುವರ ದೃಷ್ಟಿ ಬಟ್ಟಬಯಲು ರೇಕಣ್ಣಪ್ರಿಯ ನಾಗಿನಾಥನಲ್ಲಿ ಆಟವನಾಡಿದ ಅರಿದಾಗಿ.
--------------
ಬಹುರೂಪಿ ಚೌಡಯ್ಯ
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ. ಸರ್ವೇಂದ್ರಿಯಂಗಳ ಸಂಚವ ಬಿಟ್ಟು, ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ. ಅಲ್ಲ ಅಹುದು, ಉಂಟು ಇಲ್ಲ ಎಂಬುದು ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ. ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ. ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ. ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ. ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ, ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ. ಉಭಯದ ತೊಟ್ಟು ಬಿಟ್ಟಲ್ಲಿ, ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬೇಡ ಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ !_ ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು ! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->