ಅಥವಾ

ಒಟ್ಟು 11 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಆಧಾರದಲ್ಲಿ ಅರವತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಸ್ವಾದ್ಥಿಷ್ಠಾನದಲ್ಲಿ ಎಪ್ಪತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಮಣಿಪೂರಕದಲ್ಲಿ ಎಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಅನಾಹತದಲ್ಲಿ ತೊಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ವಿಶುದ್ಧಿಯಲ್ಲಿ ನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಆಜ್ಞೇಯದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಬ್ರಹ್ಮರಂಧ್ರದಲ್ಲಿ ಅಗಣಿತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಶಿಖಾಚಕ್ರದಲ್ಲಿ ಅಖಂಡ ಬೆಳಗನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಇಂತು ಎನ್ನೊಳಗೆ ಥಳಥಳಿಸಿ ಬೆಳಗುವ ಬೆಳಗಿನ ಬೆಳಗು ಮಹಾಬೆಳಗಿನೊಳಗೆ ಮುಳುಗಿ ಎನ್ನಂಗದ ಕಳೆಯಳಿದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗಬ್ರ್ಥೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು, ಆ ಬೆಳಗಿನೊಳಗೆ ಬೆಳೆದ ಶಿಶುವಾನಯ್ಯಾ. ಕಳೆಯರಿಯದೆ ಬೆಳೆದೆನು, ತಿಳುಹಿಲ್ಲದೆ ನಿಂದೆನು. ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು.
--------------
ನೀಲಮ್ಮ
ಎನ್ನಂಗದ ಮಧ್ಯದೊಳಗೆ ಮಂಗಳಾಂಗನ ಬೆಳಗು ಥಳಥಳಿಸಿ ಹೊಳೆಯುತಿರ್ಪುದಾಗಿ, ಎನ್ನ ಕಂಗಳ ಕಳವಳಿಕೆ ಕಡೆಗಾಯಿತ್ತು. ಎನ್ನ ಮನದ ಮುಂದಣ ಮರವೆ ಹಾರಿಹೋಯಿತ್ತು. ಅಖಂಡೇಶ್ವರನ ನಿಲವು ನಿಶ್ಚಲವಾಗಿ ಕಾಣಬಂದಿತ್ತು.
--------------
ಷಣ್ಮುಖಸ್ವಾಮಿ
ಸ್ವಸ್ಥ ಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ ನೆಟ್ಟೆಲುವ ನೆಟ್ಟನೆ ಮಾಡಿ ಅಧೋಮುಖಗಮನವಾಯುವ ಊಧ್ರ್ವಮುಖವ ಮಾಡಿ, ಆಧಾರವಂ ಬಲಿದು ಪ್ರಾಣವಾಯುವ ಪಾನವ ಮಾಡಿ ಆರುವೆರಳಿನಿಂ ಆರುದ್ವಾರವನೊತ್ತಲು ಶಶಿ ರವಿ ಬಿಂಬಗಳ ಮಸುಳಿಪ ನಾದ ಬಿಂದು ತೇಜವು ಕೂಡಿ ಮೂರ್ತಿಯಾಗಿ ಥಳಥಳಿಸಿ ಹೊಳೆವ ಲಿಂಗದ ಬೆಳಗಿನೊಳಗೆ ಮನವಳಿದಾತನೆ ಉನ್ಮನಿವನಿತೆಗೆ ವಲ್ಲಭನೆನಿಸುವ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಪರಮಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು ಗುರುಮುಖದಿಂದೆ ಕರ ಮನ ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು, ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ, ಕಾಶಿ ಗೋಕರ್ಣ ರಾಮೇಶ ನದಿ ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ ಕಂಡರೇನು ಕಾಣಿಸಿಕೊಂಡರೇನು ಹೋಗಿ ಬರುವ ಮಾರ್ಗ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಿಂಡದೊಳಗೊಂದು ಅಖಂಡಜ್ಯೋತಿ ಥಳಥಳಿಸಿ ಬೆಳಗುತಿರ್ಪುದು ನೋಡಾ. ಆ ಅಖಂಡಜ್ಯೋತಿಯನೊಡಗೂಡಿ ಅವಿರಳ ಶಿವಯೋಗಿಯಾದೆನಾಗಿ, ಪಿಂಡದ ಖಂಡಿತವು ಕಡೆಗಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ, ಬಯಸುವ ಬಯಕೆ ಕೈಸಾರಿದಂತೆ, ಬಡವ ನಿಧಾನವನೆಡಹಿ ಕಂಡಂತೆ, ನಾನರಸುತ್ತಲರಸುತ್ತ ಬಂದು ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ. ಎನ್ನ ಅರಿವಿನ ಹರುಹ ಕಂಡೆ ನೋಡಾ. ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ ಅಖಂಡಜ್ಯೋತಿಯ ಕಂಡೆ ನೋಡಾ ! ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ, ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ. ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ, ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ, ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.
--------------
ಬಸವಣ್ಣ
ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು. ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು. ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು. ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು. ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು. "ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ' ಎಂದುದಾಗಿ, ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು ಥಳಥಳಿಸಿ ಬೆಳಬೆಳಗಿ ಹೊಳೆವುತ್ತ, ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು.
--------------
ಸತ್ಯಕ್ಕ
ನಳಿನಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಳವಳಿಸದೆ ತುಳುಕುವ ಇಂದ್ರಿಯಂಗಳ ಬಂಧಿಸಿ, ಸುಳಿವ ಕರಣಂಗಳ ಬಲಿದು ಒಬ್ಬುಳಿಗೊಳಿಸಿ, ಉನ್ಮನಿಯ ಮಂಟಪದಲ್ಲಿ ನಿರಂತರ ಬೆಳಗುವ ಪ್ರಾಣಲಿಂಗದಲ್ಲಿ ಮನಪವನಾಗ್ನಿಗಳೊಂದಾಗಿ, ಸಾವಿರ ಕಿರಣಸಹಿತ ಒಡೆದುಮೂಡಿದ ಪ್ರಭಾಕಾಲದ ಸೂರ್ಯನಂತೆ, ಮಹಾಬೆಳಗಿನ ಪ್ರಭಾಪಟಲದಿಂದೆ ಥಳಥಳಿಸಿ ಬೆಳಗುವ ಪ್ರಾಣಲಿಂಗವನು ಕಂಗಳು ತುಂಬಿ ನೋಡಿ, ಮನ ತುಂಬಿ ಸಂತೋಷಿಸಿ, ಸರ್ವಾಂಗ ಗುಡಿಗಟ್ಟಿ, ಪರಮ ಪರಿಣಾಮ ತಲೆದೋರಿ, ಮಹಾಪರಿಣಾಮದೊಳಗೆ ಓಲಾಡಬಲ್ಲರೆ ಅದೇ ಪ್ರಾಣಲಿಂಗಸಂಬಂಧ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->