ಅಥವಾ

ಒಟ್ಟು 457 ಕಡೆಗಳಲ್ಲಿ , 75 ವಚನಕಾರರು , 369 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ, ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ. ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿಮ್ಮನರಿವರನರಿವೆನಯ್ಯಾ. ನಿಮ್ಮ ಮರೆವರ ಮರೆವೆನಯ್ಯಾ. ಮಾಯಿದೇವಿಗೆ ಮತವ ಕೊಟ್ಟು ಎಲ್ಲ ಹಿರಿಯರ ಜರಿವೆಯಯ್ಯಾ. ಇವೆಲ್ಲವ ತೋರಿ ನೀ ಗೆಲುವೆಯಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283
--------------
ಬಸವಣ್ಣ
ನೋಡುವರುಳ್ಳಡೆ ಮಾಡುವೆ ದೇಹಾರವ. ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿುಲ್ಲ. ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು, ಕೂಡಲಸಂಗಮದೇವಾ. 307
--------------
ಬಸವಣ್ಣ
ಸುದತಿ ಪುತ್ರ ಮಿತ್ರ ಮಾತೃಪಿತೃರು ಹಿತರು ನಿತ್ಯರೆಂದು ಹದೆದು ಕುದಿದು ಕೋಟಲೆಗೊಂಬನ್ನಕ್ಕರ ಗುರುವೆಂದೇನಯ್ಯ. ಸುರಚಾಪದಂತೆ ತೋರಿ ಕೆಡುವ ಹೆಣ್ಣು ಹೊನ್ನು ಮಣ್ಣ ನಚ್ಚಿ ಮದಡನಾಗಿಪ್ಪನ್ನಕ್ಕರ ಲಿಂಗವೆಂದೇನಯ್ಯ. ಈ ಕಷ್ಟ ಸಂಸೃತಿಯ ಕೂಪತಾಪದೊಳಗೆ ಬಿದ್ದುರುಳುವ ನಾಮನಷ್ಟರಿಗೆ ಜಂಗಮಲಿಂಗವೆಂದೇನಯ್ಯ. ಈ ದುಷ್ಟದುರ್ಮಲತ್ರಯದ ಅಂಧಕಾರ ಘೋರತರವಿಕಾರ ಸರ್ಪದಷ್ಟರಾದ ದುಷ್ಟರಿಗೆ ಶಿವಸತ್ವಥವೆಂದೇನು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. ಭಕ್ತನ ಮಾಹೇಶ್ವರ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೊಡುವವ ಮಾನವನೆಂದು ಒಡಲಾಸೆಯ ತೋರದಿರು, ಕೊಡುವವ ಮಾನವನಲ್ಲ. ಕೊಡುವವ ಕೊಂಬುವವ ಮಾನವರ ನಡುವಿಪ್ಪ ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ. ಜೀವನ ಬುದ್ಧಿಯಿಂದ ನರನನಾಸೆಗೈಯದಿರು. ಆಸೆಗೈದರೆ ಕಾವವರಲ್ಲ , ಕೊಲ್ಲುವವರೂ ಅಲ್ಲ , ಕೊಡುವವರೂ ಅಲ್ಲ , ಬಿಡುವವರೂ ಅಲ್ಲ . ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ ? ವೈಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ. ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ ?
--------------
ಹೇಮಗಲ್ಲ ಹಂಪ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಹಿಂದಣಜನ್ಮದ ಸಂಸಾರವ ಮರೆದು, ಮುಂದಣ ಭವಬಂಧನಂಗಳ ಜರಿದು, ಸಂದೇಹ ಸಂಕಲ್ಪಗಳ ಹರಿದು, ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ ! ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ ! ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ, ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ ! ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನಬಸವಣ್ಣಾ !
--------------
ಚನ್ನಬಸವಣ್ಣ
ಅಕ್ಕನ ಮೂಲೆಯ ಮೊದಲಿನಲ್ಲಿ ಮೂವರು ತಮ್ಮಂದಿರು ಬಂದರು. ತಮ್ಮ ತಮ್ಮ ಅಂಗವ ತೋರಿ, ಅಕ್ಕನ ಮುಂದೆ ಬೆತ್ತಲೆ ಆಡುತ್ತಿದ್ದರೆ, ಬೆತ್ತಲೆಯ ಮುಟ್ಟಿ ಕಂಡು, ತಮ್ಮನದ ತನ್ನದರಲ್ಲಿ ಇಕ್ಕಿಕೊಂಡಳು. ಅಕ್ಕ ತಮ್ಮನ ಕೂಡಿ ಒಪ್ಪವಾಗಿ ಬಾಳುತ್ತಿದ್ದರು, ಬಂಕೇಶ್ವರಲಿಂಗವನರಿತ ಕಾರಣ.
--------------
ಸುಂಕದ ಬಂಕಣ್ಣ
ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು, ನಿಲಿಸಿ ತೋರಿ, ಮುನ್ನಿನಂತಾಯಿತ್ತು. ಅಪ್ಪು ಸಂಗವನೆಯ್ದಿದಂತೆ ಇರಬೇಕು, ಇಷ್ಟಪ್ರಾಣಯೋಗಸಂಬಂಧ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು, ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು, ಅರಿವು ಹಿಂಗಲಿಕೆ ಒಂದೆಂಬುದು, ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು, ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು, ಉಭಯಭಾವದಲ್ಲಿ ತೋರಿ ಹರಿದಾಡುವುದು, ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ? ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ.
--------------
ಮಾದಾರ ಧೂಳಯ್ಯ
ಮೊಲನ ಕಂಡ ನಾಯಂತೆ ಇಂದ್ರಿಯವಿಷಯಕ್ಕೆ ಮುಂದುವರಿಯದಿರಾ. ಅಂಗನೆಯರ ಸಮ್ಮೇಳದಿಂ ಭಂಗಿತನಾಗದಿರಾ. ಲಿಂಗವನಪ್ಪಿ ಸುಖಿಯಾಗಿ ಎಲೆ ಮನವೇ. ಅಂಗದಿಚ್ಛೆಗೆ ಆಯಸಂಬಡದಿರಾ. ಲಿಂಗ ಸಂಗಿಗಳು ನೋಡಿ ನಗುವರೆಲೆ[ಲೆಲೆ] ಮನವೇ. ಇಂದ್ರಿಯಭೋಗಂಗಳೆಂಬವು ಕನಸಿನ ಸಿರಿಯಂತೆ ತೋರಿ ಅಡಗುವವೋ. ಇವನೇಕೆ ನಚ್ಚುವೆ ಮಚ್ಚುವೆ ಹುಚ್ಚು ಮನವೇ? ಹರಹರಾ ಶಿವ ಶಿವಾ ಎನ್ನೆಯೋ ಎಲೆಲೆ ಮನವೇ. ನಿನ್ನ ನಾ ಬೇಡಕೊಂಬೆನಯ್ಯೋ ಎಲೆಲೆ ಮನವೇ. ಸಿಂಹನ ಕಂಡ ಕರಿಯಂತೆ ಕೆಡೆಬಡೆದೋಡದರಿಯ್ಯೋ ಪಾಪಿ ಮನವೇ. ಲಿಂಗ ಪಾದವ ಸಾರಿ, ಶಿವಭಕ್ತನಾಗಿ ಮುಕ್ತಿಸಮ್ಮೇಳನಾಗಯ್ಯ. ಕರ್ತೃ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಡಗೂಡಿ, ನಿತ್ಯನಾಗಬಲ್ಲರೆಲೆಲೆ ಮನವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->