ಅಥವಾ

ಒಟ್ಟು 83 ಕಡೆಗಳಲ್ಲಿ , 33 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಯತ ಸ್ವಾಯತ ಲಿಂಗಾನುಗ್ರಹ ಕಾರಣ ಶಿವಧ್ಯಾನ, ಲಿಂಗ ಜಂಗಮ ಪ್‍ಸಾದ ತೃಪ್ತಿ. ಬಹುಲಿಂಗ ಪ್ರಸಾದವೆ ಕಿಲ್ಬಿಷ, ಇಂತೆಂದುದು ಕೂಡಲಚೆನ್ನಸಂಗನ ವಚನ.
--------------
ಚನ್ನಬಸವಣ್ಣ
ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು, ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು, ಆಕಾಶದಲ್ಲಿ ಶಬ್ದವಿಹುದು, ತೃಪ್ತಿಯಲ್ಲಿ ಆತ್ಮನೆಂಬ ಮಹಾಭೂತಾಶ್ರಯವಾಗಿಹುದು ನೋಡಾ. ಇದಕ್ಕೆ ಶಿವಪ್ರಕಾಶಾಗಮೇ : ``ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಾಃ | ರೂಪ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ || ಶಬ್ದಮಾಕಾಶಮಾಶ್ರಿತ್ಯ ಆತ್ಮಾ ಚ ತೃಪ್ತಿ ಆಶ್ರಯಾಃ | ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಘನದ ವೇದಿಸಿದ ಮನ, ಮನವ ವೇದಿಸಿದ ಇಂದ್ರಿಯಂಗಳು, ಇಂದ್ರಿಯಂಗಳ ವೇದಿಸಿದ ತನು, ತನುವ ವೇದಿಸಿದ ಪ್ರಸಾದ, ಪ್ರಸಾದವ ವೇದಿಸಿದ ಪರಿಣಾಮ, ಪರಿಣಾಮವ ವೇದಿಸಿದ ತೃಪ್ತಿ, ತೃಪ್ತಿಯ ವೇದಿಸಿದ ಇಷ್ಟಲಿಂಗ, ಇಷ್ಟಲಿಂಗವ ವೇದಿಸಿದ ಜ್ಞಾನ, ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ, ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ ?
--------------
ಹಾವಿನಹಾಳ ಕಲ್ಲಯ್ಯ
ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ, ಕಡೆ ಕಿಗ್ಗೊಂಬಿಗೆರೆದವರುಂಟೆ ? ಅರಿದು ಪೂಜಿಸುವಲ್ಲಿ ಹರಿವುದು ಮನಪಾಶ. ಅರಿದು ಅರ್ಪಿಸುವಲ್ಲಿ ಲಿಂಗದ ಒಡಲೆಲ್ಲ ತೃಪ್ತಿ. ತನ್ನನರಿದಲ್ಲಿ ಸಕಲಜೀವವೆಲ್ಲ ಮುಕ್ತಿ. ತನ್ನ ಸುಖದುಃಖ ಇದಿರಿಗೂ ಸರಿಯೆಂದಲ್ಲಿ, ಅನ್ನಬ್ಥಿನ್ನವಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರುಪಾದ್ಥಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ- ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ, ಮನಸಂಬಂಧವಾದ ರುಚಿಪದಾರ್ಥವನ್ನು ಪ್ರಾಣಲಿಂಗಕ್ಕೆ ಸಮರ್ಪಿಸಿ, ಧನಸಂಬಂಧವಾದ ತೃಪ್ತಿ ಪದಾರ್ಥವನ್ನು ಭಾವಲಿಂಗಕ್ಕೆ ಸಮರ್ಪಿಸಿ, ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ, ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ, ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ, ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ, ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ, ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ, ಘ್ರಾಣ, ಚಿಹ್ನೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ, ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಜಂಗಮಕ್ಕೆ ನೀಡಿದ ತೃಪ್ತಿ ಜಗಕೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಹರಿ ಸುರ ಬ್ರಹ್ಮಾದಿಗಳಿಗೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸ್ವರ್ಗ ಮತ್ರ್ಯ ಪಾತಾಳ ಸಚರಾಚರಂಗಳಿಗೆಲ್ಲ ತೃಪ್ತಿಯಾಯಿತ್ತು ನೋಡಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸಾಕ್ಷಾತ್ಪರಬ್ರಹ್ಮ ಪರಶಿವಂಗೆ ತೃಪ್ತಿಯಾಯಿತ್ತು ನೋಡಿರೋ ! ಅದೆಂತೆಂದೊಡೆ : ``ಸುರತೃಪ್ತಂ ಬುಧಸ್ತೋಮಂ ಮಮ ತೃಪ್ತಂತು ವೈಷ್ಣವಮ್ | ಜಂಗಮಂತು ಜಗತ್ ತೃಪ್ತಂ ಶಿವತೃಪ್ತಂ ತು ಪದ್ಮಿನಿ ||'' ಎಂದುದಾಗಿ, ಇಂತಪ್ಪ ಜಂಗಮ ತೃಪ್ತಿಯಾದಡೆ ನಮ್ಮ ಅಖಂಡೇಶ್ವರಲಿಂಗ ತೃಪ್ತಿಯಾಯಿತ್ತು ನೋಡಿರೋ !
--------------
ಷಣ್ಮುಖಸ್ವಾಮಿ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಎಲ್ಲವು ಲಿಂಗಕ್ಕೆ ಸಲ್ವುದೆಂಬುದನದು, ಸಂಕಲ್ಪಸೂತಕವಳಿದು. ಬಂದ ಪದಾರ್ಥವ ಲಿಂಗಭಾಜನದಲ್ಲಿ ಸಹಭೋಜನವ ಮಾಡುವುದು ಲಿಂಗಭರಿತಾರ್ಪಣ. ಲಿಂಗಕ್ಕೂ ತನಗೂ ಬ್ಥಿನ್ನಭಾವವಿಲ್ಲದೆ ಲಿಂಗದೊಳಗೆ ಸಲೆ ಸಂದು ಒಂದಾಗಿ ಕೂಡಿದುದು ಶರಣಭರಿತಾರ್ಪಣ, ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ.
--------------
ಅರಿವಿನ ಮಾರಿತಂದೆ
ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ. ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು. ''ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ'' ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ತೊರೆಯುದಕವ ಕೆರೆಯುಂಡು ತೃಪ್ತವಾಗಲು ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ, ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ. ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ, ಸಚರಾಚರವೆಲ್ಲವು ತೃಪ್ತಿಯಾದವು ನೋಡಾ. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ವಿಹಂಗನ ತತ್ತಿಗೆ ಸ್ಪರ್ಶನದಿಂದ ಕೂರ್ಮನ ಶಿಶುವಿಂಗೆ ಕೂರ್ಮೆಯಿಂದ ಚತುಃಪಾದಿ ನರಕುಲಕ್ಕೆ ಕುಚಗಳಿಂದ ಮಿಕ್ಕಾದ ಜೀವಜಾತಿ ಲಕ್ಷಣಕ್ಕೆ ತಮ್ಮ ಸ್ಥಾನದಲ್ಲಿಯೆ ತೃಪ್ತಿ. ಆವ ಸ್ಥಲವ ನೆಮ್ಮಿದಲ್ಲಿಯೂ ಭಾವಶುದ್ಧವಾದಲ್ಲಿಯೆ ಮುಕ್ತಿ. ಉಭಯಕ್ಕೆ ಉಪಮಾತೀತನಾದಾಗಲೇ ನಿರ್ವೀಜ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ ಮಾಡುವುದು ದಾಸೋಹವೆ ? ಆವ ಕಾಯಕವು ಪ್ರಾಣವೆ ಕಡೆಯಾಗಿ, ದ್ರವ್ಯ ಮೊದಲಾಗಿ, ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು, ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ.
--------------
ಶಿವಲೆಂಕ ಮಂಚಣ್ಣ
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙÂ್ತಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಕಣ್ಣು ನೋಡಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಕಿವಿ ಕೇಳಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಘ್ರಾಣ ವಾಸಿಸಿ ಅರ್ಪಿಸಿದುದು ಅದಾವ ಲಿಂಗಕ್ಕೆ ? ಜಿಹ್ವೆಯ ಕೊನೆಯಲ್ಲಿ ಸವಿದು ಅರ್ಪಿಸಿದುದು ಅದಾವ ಲಿಂಗಕ್ಕೆ ? ಕರ ಮುಟ್ಟಿದ ಸೋಂಕಿನ ಸುಖ ಅದಾವ ಲಿಂಗಕ್ಕೆ ? ಇಂತೀ ಪಂಚೇಂದ್ರಿಯಂಗಳಲ್ಲಿ ಅರ್ಪಿಸಿಕೊಂಬ ಆತ್ಮನ ತೃಪ್ತಿ ಐದೋ ಮೂರೋ ಬೇರೆರಡೋ ಏಕವೋ ? ಎಂಬುದ ನಿಧಾನಿಸಿ ಬಹುವೆಜ್ಜದ ಕುಂಭದಲ್ಲಿ ಅಗ್ನಿಯನಿರಿಸಿ ಉರುಹಲಿಕೆ ವೆಜ್ಜ ವೆಜ್ಜಕ್ಕೆ ತಪ್ಪದೆ ಕಿಚ್ಚು ಹೊದ್ದಿ ತೋರುವದು ವೆಜ್ಜದ ಗುಣವೋ ? ಒಂದಗ್ನಿಯ ಗುಣವೋ ? ಇಂತೀ ಗುಣವ ನಿಧಾನಿಸಿಕೊಂಡು ನಿಜಪ್ರಸಾದವ ಕೊಂಬ ಸ್ವಯಪ್ರಸಾದಿಗೆ ತ್ರಿವಿಧಪ್ರಸಾದ ಸಾಧ್ಯವಪ್ಪುದಲ್ಲದೆ ವರ್ತಕಪ್ರಸಾದಿಗಳಿತ್ತಲೆ ಉಳಿದರು. ದಹನ ಚಂಡಿಕೇಶ್ವರಲಿಂಗಕ್ಕೆ ಅರ್ಪಿತ ಮುಟ್ಟದೆ ಹೋಯಿತ್ತು.
--------------
ಪ್ರಸಾದಿ ಲೆಂಕಬಂಕಣ್ಣ
ಇನ್ನಷ್ಟು ... -->