ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು, ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ, ನೋಡುವ ಕರಣಂಗಳು ಮೆಚ್ಚುವಂತೆ ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ, ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ, ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು, ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ.
--------------
ಸಗರದ ಬೊಮ್ಮಣ್ಣ
ಡೊಂಬರ ಡೊಳ್ಳಧ್ವನಿ ಕೇಳಬಂದಿತ್ತು. ಪೌಜೆಂದು ಮುಂದೆ ಹರಿವನಂತೆ, ಅದರಂದವ ಕೇಳದೆ, ಹಿಂದು ಮುಂದ ತಿಳಿಯದೆ, ಕಂಡಕಂಡವರೊಳಗೆ ಬಂಧಕ್ಕೆ ಹೋರಿಯಾಡುವ ಬಂಧನಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಳವು ಹಾದರಕ್ಕೆ ಗುಪ್ತ. ಶಿವಭಕ್ತಿ ಶಿವಪೂಜೆ ಶಿವಜ್ಞಾನ ಇಂತಿವಕ್ಕೆ ಬಾಹ್ಯಾಡಂಬರವೆ? ಅರಿವುದೊಂದು ಅರುಹಿಸಿಕೊಂಬುದೊಂದು. ಇಂತೀ ಉಭಯ ಸುಖ ಸಂಭಾಷಣವಲ್ಲದೆ ರಟ್ಟೆಯ ಪೂಜೆ ಕರ್ಕಶದನುಭವ. ಡೊಂಬರ ಡೊಳ್ಳ ಕೇಳಿ, ಬಂದವರೆಲ್ಲರು ನಿಂದು ನೋಡಿ ತಮ್ಮ ತಮ್ಮ ಮಂದಿರಕ್ಕೆ ಹೋಹಂತಾಯಿತ್ತು. ಈ ಪಥದ ಸಂದನಾರು ಅರಿಯರು. ನಾರಾಯಣಪ್ರಿಯ ರಾಮನಾಥನಲ್ಲಿ ತನ್ನ ತಾನೆ ತಿಳಿದ ಶರಣ ಬಲ್ಲ.
--------------
ಗುಪ್ತ ಮಂಚಣ್ಣ
ಬಂದೆ ಗುಡಿಯ ಹೊತ್ತು, ಡೊಂಬರ ಹಿಂದೆ ಹೋದೆ ಸುತ್ತಿ. ಸೂಳೆಯ ಮಚ್ಚಿ ನಾಣುಗೆಟ್ಟೆ. ಕಾಯವೆಂಬ ಗುಡಿ, ಮೋಹವೆಂಬ ಸೂಳೆ. ಅರಿವ ಮನ ಅರಿಯದೆ ಡೊಂಬರಾಟವೆಂಬ ಬಂಧದಲ್ಲಿ ಹೊಕ್ಕು ನೊಂದೆ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ, ನಿನ್ನೊಂದಾಗಿ ಕೊಂಡಾಡಲಂಜುವೆ.
--------------
ಸಗರದ ಬೊಮ್ಮಣ್ಣ
ಭಕ್ತಿ ಮಂದಿರದಲ್ಲಿ ಪೂಜಿಸಿಕೊಂಬ ಜಂಗಮವ ನೋಡಾ, ಅಯ್ಯಾ. ಜಂಗಮವೆಂಬುದಕ್ಕೆ ನಾಚರಯ್ಯಾ. ಭಕ್ತರ ಮಂದಿರಕ್ಕೆ ಹೂ ಕಾಯಿ ಹಣ್ಣು ಹುಲ್ಲು ಹೊರೆ ಬೊಕ್ಕಸ ಪಹರಿ ಪಾಡಿತನ ಬಾಗಿಲು ಮುಂತಾಗಿ ಶುಶ್ರೂಷೆಯಂ ಮಾಡಿ ಉಂಬಾಗ, ಒಡೆಯರೆನಿಸಿಕೊಂಬ ತುಡುಗುಣಿಗೆಲ್ಲಿಯದೊ, ನಿಜಜಂಗಮಸ್ಥಲ ? ಹೊಟ್ಟೆಯ ಕಕ್ಕುಲತೆಗೆ ಕಷ್ಟಜೀವವ ಹೊರೆವ ಹೆಬ್ಬೊಟ್ಟೆಯ ಡೊಂಬರ ಕಂಡು, ಬಟ್ಟಬಯಲಾದೆಯಾ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ತಾಳು ಬೋಳು ಕಪ್ಪರಾದಿಗಳೆಂಬರು, ತಾಳಾವುದು, ಬೋಳಾವುದು, ಕಪ್ಪರವಾವುದೆಂದರಿಯರು. ಕಾಯದ ಕಳವಳದ ಗುಣವ ತಾಳಬಲ್ಲರೆ ತಾಳು, ಸಂಸಾರ ವಿಷಯವ ಬೋಳಿಸ ಬಲ್ಲರೆ ಬೋಳು ಪರದಲ್ಲಿ ಪರಿಣಾಮಿಸಬಲ್ಲರೆ ಕಪ್ಪರ. ಅಂತಲ್ಲದಿದ್ದರೆ ಕೂಡಲಚೆನ್ನಸಂಗಮದೇವರಲ್ಲಿ ಡೊಂಬರ ಬೋಳು.
--------------
ಚನ್ನಬಸವಣ್ಣ
-->