ಅಥವಾ

ಒಟ್ಟು 59 ಕಡೆಗಳಲ್ಲಿ , 25 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ. ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ. ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ, ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ. ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ. ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ. ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ. ತನುಮನಧನವೊಂದಾಗಿ ತನ್ನದಾದಡೆ ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು ಬೇರೆ ಮುಕ್ತಿ ಎಂತಪ್ಪುದಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ ಎನ್ನ ಜ್ಞಾನಕ್ಕೆ ಸ್ವಾನುಭಾವೀಕ್ಷೆಯ ಮಾಡಿ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶವಿಮೋಚ[ನ]ನೆ, ಅನ್ವಯ ಮನದ ಸರ್ವಾಂಗಲೋಲುಪ್ತ, ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.
--------------
ಸಿದ್ಧರಾಮೇಶ್ವರ
ಅರಿವನರಿದು ಮರಹ ಮರೆದು, ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ? ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು. ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ, ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?
--------------
ಅಲ್ಲಮಪ್ರಭುದೇವರು
ಮೂರು ತಪ್ಪ ಹೊರಿಸಿ ಬಂದವಳಿಗೆ ಇನ್ನಾರ ಕೊಂಡು ಕೆಲಸವೇತಕ್ಕೆ ? ಹೊಗದಿಹೆನೆ ಹೋಗಿಹೆನೆ, ಜ್ಞಾನಕ್ಕೆ ಹಾನಿ. ಅರೆಗೋಣ ಕೊಯ್ದವನಂತೆ ಇನ್ನೇವೆ ? ಈ ಗುಣವ ಬಿಡಿಸಾ ಎನ್ನ ತಂದೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ. ಇಲ್ಲ ಎಂದಡೆ ಸಮಯಕ್ಕೆ ದೂರ, ಉಂಟೆಂದಡೆ ಜ್ಞಾನಕ್ಕೆ ದೂರ. ಉಭಯವ ಸಂಪಾದಿಸುವದಕ್ಕೆ ಎನಗೆ ಭಂಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ, ಬಣ್ಣವನೊರೆದು ಬಂಗಾರದ ಇರವನರಿಯಬಹುದೆ ? ಜೀವವರಿದು ಜ್ಞಾನವ ಕಾಣಬೇಕಲ್ಲದೆ ಜೀವವಳಿದು ಜ್ಞಾನಕ್ಕೆ ಉಳಿವುಂಟೆ ? ಅದು ಜ್ಯೋತಿಯ ಮೇಲಣ ತಮವದೆ, ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ. ಆ ಪರಿಯ ಇರವು ಜೀವಪರಮನ ಕಲೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.
--------------
ಸಗರದ ಬೊಮ್ಮಣ್ಣ
ಕರಸ್ಥಲದ ಲಿಂಗವೆ ಕಾಯಕ್ಕೆ ವೇಧಿಸಿದಲ್ಲಿ, ಕಾಯ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇಧಿಸಿದಲ್ಲಿ ಪ್ರಾಣ ಲಿಂಗವಾಯಿತ್ತು, ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇಧಿಸಿದಲ್ಲಿ ಭಾವ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇಧಿಸಿದಲ್ಲಿ ಜ್ಞಾನ ಲಿಂಗವಾಯಿತ್ತು. ಅಂತಾದ ಕಾರಣ_ನಮ್ಮ ಗುಹೇಶ್ವರನ ಶರಣಂಗೆ, ಅರಿವರತು ಕುರುಹು ನಿಷ್ಪತಿಯಾಗಿ, ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು
--------------
ಅಲ್ಲಮಪ್ರಭುದೇವರು
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಾದ್ವೈತದ ಹೆಚ್ಚುಗೆ, ಭಾವಾದ್ವೈತಕ್ಕೆ ಸಂಬಂಧವಾಗಿಹುದು. ಭಾವಾದ್ವೆ ೈತದ ಹೆಚ್ಚುಗೆ, ಕ್ರಿಯಾದ್ವೈತವ ಸಂಬಂದ್ಥಿಸಿಕೊಂಡಿಹುದು. ಕ್ರಿಯಾದ್ವೈತದ ಹೆಚ್ಚುಗೆ, ಸರ್ವಮಯವಾಗಿ ಘನಲಿಂಗವ ಗಬ್ರ್ಥೀಕರಿಸಿಕೊಂಡಿಪ್ಪುದು. ಇಂತೀ ಭೇದ. ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ, ಕ್ರೀಯಿಂದ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಬೆಳೆದು ಬೆಳೆಯಿಸಿಕೊಂಬುದು ನೀರೊ ನೆಲನೊ ಬೀಜವೊ ಎಂಬುದ ತಿಳಿದು, ಕರ್ಮವರ್ಮ ಕೂಟಂಗಳ ಆಟವನರಿತು ವರ್ತನಕ್ಕೆ ಕ್ರೀ ಸತ್ಯಕ್ಕೆ ಜ್ಞಾನ ಜ್ಞಾನಕ್ಕೆ ಸರ್ವಜೀವದ ವ್ಯಾಪಾರ ಭೇದ. ಅದು ಸಂಪದ ಸಂಬಂಧ ತತ್ವ ಗೋಪತಿನಾಥ ವಿಶ್ವೇಶ್ವರಲಿಂಗದ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ? ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ ಹಾರವೇತಕ್ಕೆ? ಸಕಲಸುಖ ಬೋಳಿಂಗೆ ಅಖಿಳ ಸುಖಗೋಷಿ* ಏತಕ್ಕೆ? ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ? ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ ತಮಗೆ ವಂದಿಸಿ ನಿಂದಿಸುವರಂಗವನರಿಯದೆ ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ ಕಂಡು ನುಡಿದಡೆ ಸಮಯಕ್ಕೆ ಹಾನಿ. ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ. ಉಭಯವನೂ ಪ್ರತಿಪಾದಿಸದಿದ್ದಡೆ, ತನ್ನಯ ಭಕ್ತಿಗೆ ಇದಿರೆಡೆಗೇಡು. ಇದು ಚುನ್ನವಲ್ಲ, ಎನ್ನಯ ಕೇಡು. ಈ ಗುಣ ಚೆನ್ನಬಸವಣ್ಣಪ್ರಿಯ ಕಮಳೇಶ್ವಲಿಂಗ ಸಾಕ್ಷಿಯಾಗಿ.
--------------
ಶ್ರೀಗುರು ಪ್ರಭುನ್ಮುನೀಶ್ವರ
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ, ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ. ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ ! ಮನವನೊಳಕೊಂಡ ಜ್ಞಾನಕ್ಕೆ ಭಂಗ; ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕರ್ತೃ ನೀನಾಗಿ, ಭೃತ್ಯ ನಾನಾದ ಅಚ್ಚುಗವ ಬಿಡಿಸಯ್ಯಾ. ಜ್ಞಾನಕ್ಕೆ ಜ್ಞಾನವ ಹೇಳಿದಡೆ ಕೇಳಬಲ್ಲವರಾರು. ಸವಿಗೆ ಸ್ವಾದವನಿಕ್ಕಿದಡೆ ಉಣಬಲ್ಲವರಾರು. ಬೆಳಗಿಂಗೆ ಬೆಳಗನಿತ್ತಡೆ ಉಡಬಲ್ಲವರಾರು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಜೈಕ್ಯನಾದೆನೆಂಬಾತ ಮತ್ತೊಬ್ಬನಾರು.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->