ಅಥವಾ

ಒಟ್ಟು 79 ಕಡೆಗಳಲ್ಲಿ , 30 ವಚನಕಾರರು , 70 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರಿಯನೆಚ್ಚಲ್ಲಿ ತಾಗಿದವೊಲು, ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ, ಕಾಯ ಜೀವದ ಸಂದಣಿಯಲ್ಲಿ, ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ, ಆ ಗುಣವ ಕರಿಗೊಂಡು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಾನಾ ಭೇದವ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ ಬೆಳೆವುತಿಪ್ಪ ಮೂರುತಿ ನೀನೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
>ಸಾವ ಜೀವ ಬಿಂದುವಿನ ಸಂಚ, ಸಾಯದ ನಾದ ಪ್ರಾಣದ ಸಂಚ. ಸಾವ ಜೀವದ, ಸಾಯದ ಪ್ರಾಣದ _ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ, ಸಾವ ಜೀವದ, ಸಾಯದ ಪ್ರಾಣದ ಎರಡರ ಭೇದವ ಭೇದಿಸಿ ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ, ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು. ಇಂತೀ ಉಭಯ ಸಂಬಂಧವಳಿದ ಸಂಬಂಧ ನಿಜವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
--------------
ಚನ್ನಬಸವಣ್ಣ
ನಡೆ ನೋಡುವ ಸುಖದ ಸುಗ್ಗಿ ನೀನೆ ಅಯ್ಯಾ, ಕಾಯ ಜೀವದ ಗುಣ ನೀನೆ ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ. ||
--------------
ಸಿದ್ಧರಾಮೇಶ್ವರ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ. ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ. ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ. ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ. ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ? ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದೆನು.
--------------
ಅಕ್ಕಮಹಾದೇವಿ
ನೀರ ಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು, ನೋಡಯ್ಯಾ. ದೇಹದ ಜೀವದ ಸಂದ ನೀವು ಬಿಚ್ಚಬಲ್ಲರಲ್ಲದೆ ನಾನೆತ್ತ ಬಲ್ಲೆನಯ್ಯಾ? ನೀವಿಕ್ಕಿದ ತೊಡಕ ಬಿಡಿಸಬಾರದು; ನೀವು ಬಿಡಿಸಿದ ತೊಡಕನಿಕ್ಕಬಾರದು. ಕಪಿಲಸಿದ್ಧಮಲ್ಲಿನಾಥಯ್ಯಾ, ಎನ್ನ ಕಾಯದ ಜೀವದ ಹೂಗೆಯ ಬಿಡಿಸಾ, ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ. ಜಲವೊತ್ತಿದರೆ ಬಚ್ಚಲೊಳಗೆ ಬಿಡಬೇಕಯ್ಯ. ಇಂದ್ರಿಯವೊತ್ತಿದರೆ ಯೋನಿಯೆಂಬ ಬಚ್ಚಲೊಳಗೆ ಬಿಡಬೇಕಯ್ಯ. ಸ್ವಾನನೊಂದು ಚರ್ಮವ ಕಚ್ಚಿ ತಂದು, ತಿಪ್ಪೆಯ ಕೆರದು ಹೂಳಿ, ಮತ್ತೊಂದು ನಾಯಿ ಬಂದು ಕಚ್ಚೀತೆಂದು ಕಾಯ್ದುಕೊಂಡಿಪ್ಪಂತೆ ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ ಮನೆಯ ಮರೆಯಲ್ಲಿರಿಸಿಕೊಂಡು, ಮತ್ತೊಂದು ಬಂದು ಕಚ್ಚೀತ್ತೆಂದು ಕುಕ್ಕನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯಿನ್ನೆಲ್ಲಿಯದೋ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ, ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ, ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಗುರುವಿಡಿದು ಕಾಯದ ಕರ್ಮವ ಹರಿದೆನಯ್ಯ. ಲಿಂಗವಿಡಿದು ಜೀವದ ಕರ್ಮವ ಹರಿದೆನಯ್ಯ. ಜಂಗಮವಿಡಿದು ಪ್ರಾಣದ ಕರ್ಮವ ಹರಿದೆನಯ್ಯ. ಪ್ರಸಾದವ ಹಿಡಿದು ಸರ್ವಕರ್ಮವ ಹರಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ. ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ. ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ, ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ.
--------------
ಬಿಬ್ಬಿ ಬಾಚಯ್ಯ
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.
--------------
ಚನ್ನಬಸವಣ್ಣ
ಕಳೆ ಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ. ಹೊಲೆ ಮಲವ ಕಳೆದಲ್ಲದೆ ಮನ ಶುದ್ಧವಲ್ಲ. ಜೀವನ ನೆಲೆಯನರಿದಲ್ಲದೆ ಕಾಯ ಶುದ್ಧವಲ್ಲ. ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ. ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->