ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ. ಪಂಚಭೂತದ ಪ್ರಕೃತಿಕಾಯವ ಕಳೆದು ಪ್ರಸಾದಾಕಾಯವ ಮಾಡಿದಿರಿಯಯ್ಯ. ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ. ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ. ಅಂಗವಿಷಯಭ್ರಮೆಯ ಕಳೆದು ಲಿಂಗವಿಷಯಭ್ರಾಂತನ ಮಾಡಿದಿರಿಯಯ್ಯ. ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ. ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ ಮಾಡಿದಿರಿಯಯ್ಯ. ಕುಲಸೂತಕ ಛಲಸೂತಕ ತನುಸೂತಕ ಮನಸೂತಕ ನೆನಹುಸೂತಕ ಭಾವಸೂತಕವೆಂಬ ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭವಿಜನ್ಮವ ಕಳದು ಭಕ್ತನ ಮಾಡಿದರಯ್ಯ. ಪಂಚಭೂತದ ಪ್ರಕೃತಿಯ ಕಳದು ಪ್ರಸಾದಕಾಯವ ಮಾಡಿದರಯ್ಯ. ಅಂಗೇಂದ್ರಿಯಂಗಳ ಕಳದು ಲಿಂಗೇಂದ್ರಿಯಂಗಳ ಮಾಡಿದರಯ್ಯ. ಅಂಗವಿಷಯಭ್ರಮೆಯಂ ಕಳದು ಲಿಂಗವಿಷಯಭ್ರಾಂತನ ಮಾಡಿದರಯ್ಯ. ಅಂಗಕರಣಂಗಳ ಕಳದು ಲಿಂಗಕರಣಂಗಳ ಬೆಸಸುವಂತೆ ಮಾಡಿದರಯ್ಯ. ಕುಲಸೂತಕ ಛಲಸೂತಕ ತನುಸೂತಕ ನೆನವುಸೂತಕ ಭಾವಸೂತಕ ಇಂತೀ ಸೂತಕವೆಂಬ ಭ್ರಾಂತನು ಬಿಡಿಸಿ ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು ಪುನರ್ಜಾತನಂ ಮಾಡಿದ ಬಳಿಕ, ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದ ಬಳಿಕ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ, ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ, ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ, _ಇವನೆಂತೂ ಹಿಡಿಯಲಾಗದು, ಸದ್ಭಕ್ತನು. ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ ಭಾವಸೂತಕವುಳ್ಳನ್ನಕ್ಕರ ಐಕ್ಯನಲ್ಲ ಇಂತೀ ಸೂತಕವ ಮುಂದುಗೊಂಡಿಪ್ಪವರ ಮುಖವ ನೋಡಲಾಗದು ಗುಹೇಶ್ವರ.
--------------
ಅಲ್ಲಮಪ್ರಭುದೇವರು
-->