ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ, ಮಯೂರನೃಪಗೆ. ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ, ವೀರ ವಿಕ್ರಮಗೆ. ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ, ಹರಿಶ್ಚಂದ್ರಂಗೆ, ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ, ನಳಂಗೆ. ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ, ಬ್ಥೀಮಂಗೆ. ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ, ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ. ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ, ಮುಮ್ಮಡಿ ಸಿಂಗನೃಪಂಗೆ. ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ, ವಿಶ್ವಾಮಿತ್ರಂಗೆ. ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ ಮಹಾಗಣಂಗಳು ಲಯವಿಲ್ಲದ ರಾಜಯೋಗವ ಪಡೆದಿಹರಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕುಲಮದ ಛಲಮದ ವಿದ್ಯಾಮದದವರ ತೋರದಿರಾ. ಅವರ ಅರೂಢಪದವಿಯನೆನಗೆ ತೋರದಿರಾ. ಅವರ ಗರುವ ಗಂಭೀರವನೆನಗೆ ತೋರದಿರಾ. ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ, ಎನಗೆ ತೋರದಿರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕುಲಮದ ಶೂನ್ಯನೆಂಬೆ ಹುಟ್ಟುಗೆಟ್ಟಿರ್ದನಾಗಿ, ಛಲಮದ ಶೂನ್ಯನೆಂಬೆ ದ್ವೈತಗೆಟ್ಟಿರ್ದನಾಗಿ, ಧನಮದ ಶೂನ್ಯನೆಂಬೆ ಕರಣಪ್ರಕೃತಿ ನಷ್ಟವಾಗಿರ್ದನಾಗಿ, ರೂಪಮದ ಶೂನ್ಯನೆಂಬೆ ದೇಹಭಾವವಳಿದಿರ್ದನಾಗಿ, ಯವ್ವನಮದ ಶೂನ್ಯನೆಂಬೆ ಕಾಮನ ಕಳೆಯಳಿದುಳಿದಿರ್ದನಾಗಿ, ವಿದ್ಯಾಮದ ಶೂನ್ಯನೆಂಬೆ ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವೇ ಸ್ವಯಮಾಗಿರ್ದನಾಗಿ, ರಾಜಮದ ಶೂನ್ಯನೆಂಬೆ ಚಿದ್ಘನಲಿಂಗಕ್ಕೆ ಚಿತ್ತವನರ್ಪಿಸಿರ್ದನಾಗಿ, ತಪಮದ ಶೂನ್ಯನೆಂಬೆ ತ್ರಿಪುಟಿಗತೀತ ಗುರುನಿರಂಜನ ಚನ್ನಬಸವಲಿಂಗವಾಗಿರ್ದನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಿವ ಜಲಧಿಯಂತೆ, ಚರಿಸಿ ಬಹ ಮನವ ನಿಲ್ಲೆಂದು ನಿಲಿಸುವ ಪುರುಷರುಂಟೆ ? ಬಿರುಗಾಳಿ ಬೀಸಿದರೆ ಒಲಿ ಒಲಿದು ಉರಿವ ಬಲುಗಿಚ್ಚಿನ ಉರಿಯ ನೆಲೆಗೆ ನಿಲಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಇವ ಬಲ್ಲೆನೆಂಬವರೆಲ್ಲ ಅನ್ನದ ಮದ, ಅಹಂಕಾರದ ಮದ, ಕುಲಮದ, ಛಲಮದ, ಯೌವನಮದ, ವಿದ್ಯಾಮದ, ತಪದ ಮದ, ಆತ್ಮದ ಮದ ಇಂತೀ ಅಷ್ಟಮದವಿಡಿದು ಬಲ್ಲೆವೆಂಬರಲ್ಲದೆ, ದೃಷ್ಟನಷ್ಟವಾವುದೆಂದರಿಯದೆ, ಎಲ್ಲರೂ ಭ್ರಷ್ಟರಾಗಿಹೋದರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ , ನಿಮ್ಮ ನೆಲೆಯನರಿಯದ ಕಾರಣ.
--------------
ಹಡಪದ ಅಪ್ಪಣ್ಣ
ಅಯ್ಯಾ, ಮತ್ತೊಂದು ವೇಳೆ ಅಷ್ಟತನುವಿನ ಮೂಲಹಂಕಾರವನೆತ್ತಿ ಚರಿಸಿತಯ್ಯ. ಅದೆಂತೆಂದಡೆ : ಆ ಮೂಲಹಂಕಾರವೆ ಷೋಡಶಮದವಾಗಿ ಬ್ರಹ್ಮನ ಶಿರವ ಕಳೆಯಿತಯ್ಯ, ವಿಷ್ಣುವನು ಹಂದಿಯಾಗಿ ಹುಟ್ಟಿಸಿತಯ್ಯ. ಇಂದ್ರನ ಶರೀರವ ಭವದ ಬೀಡು ಯೋನಿದ್ವಾರವ ಮಾಡಿತಯ್ಯ. ಸೂರ್ಯ ಚಂದ್ರರ ಭವರಾಟಾಳದಲ್ಲಿ ತಿರಿಗಿಸಿತಯ್ಯ. ಆ ಮದಂಗಳಾವುವೆಂದಡೆ : ಕುಲಮದ, ಛಲಮದ, ಧನಮದ, ಯೌವನಮದ, ರೂಪುಮದ, ವಿದ್ಯಾಮದ, ರಾಜ್ಯಮದ, ತಪಮದ, ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಎಂಬ ಷೋಡಶಮದದ ಸಂದಿನಲ್ಲಿ ಎನ್ನ ಕೆಡಹಿ, ಬಹುದುಃಖದಲ್ಲಿ ಅಳಲಿಸಿತಯ್ಯ. ಗುರುವೆ, ಇಂಥ ದುರ್ಜೀವ ಮನದ ಸಂಗವ ತೊಲಗಿಸಿ ಕಾಯಯ್ಯ ಕರುಣಾಳುವೆ, ಸಚ್ಚಿದಾನಂದಮೂರ್ತಿ ಭವರೋಗವೈದ್ಯನೆ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
-->