ಅಥವಾ

ಒಟ್ಟು 11 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯುಗದ ಉತ್ಸಾಹವ (ಉತ್ಸವವ?) ನೋಡಿರೆ ! ಪಂಚಶಕ್ತಿಗಳಿಗೆ ಪಂಚಪ್ರಧಾನರು. ಅವರ ಆಗುಹೋಗನು ಆ ಶರಣನೆ ಬಲ್ಲ. ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ ! ಮೂರು ದರುಶನಕ್ಕೆ ಮುಯ್ಯಾನುವನಲ್ಲ, ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು, ನಿಘಂಟುಗಳೆಂಬುವಕ್ಕೆ ಭೇದಕನಲ್ಲ, ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ. ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು, ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು. ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು. ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
--------------
ಅಲ್ಲಮಪ್ರಭುದೇವರು
ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮದೇವ ಅಥರ್ವಣವೇದ ತಾನಿರ್ದಲ್ಲಿ, ಉದಾತ್ತ ಅನುದಾತ್ತ ಸ್ವರಿತ ಪ್ರಚರವೆಂಬ ಸ್ವರಂಗಳು ಮೊದಲಾಗಿ, ಅನಂತ ವೇದಸ್ವರಂಗಳೆಲ್ಲ ತಾನಿರ್ದಲ್ಲಿ, ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ, ಅಷ್ಟಾದಶಪುರಾಣಂಗಳು ತಾನಿರ್ದಲ್ಲಿ, ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ, ಅನಂತಕೋಟಿ ವೇದಂಗಳು ತಾನಿರ್ದಲ್ಲಿ, ಇವೆಲ್ಲ ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ? ತನ್ನಿಂದದ್ಥಿಕವಪ್ಪ ಪರಬ್ರಹ್ಮವಿಲ್ಲವಾಗಿ ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ ಅನಂತ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ ಜವನಿಕೆಯೊಳಗೆ ಕೆಡಹಿಕೊಂಡಿತ್ತು. ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು. ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು. ಅಂಗವೆಲ್ಲವನರಿದೆನೆಂಬವರ ಹಿಂಗದೆ ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು. ಲಿಂಗಮೋಹಿಗಳೆಂಬವರ ತನ್ನ ಸಂಗದ ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು. ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು. ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು. ವಾಗದ್ವೈತವ ನುಡಿವ ಅರುಹಿರಿಯರೆಂಬವರ ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂಅರ್sತರ ಮಾಡಿತ್ತು. ಸುಷುಪ್ತಿಯಲ್ಲಿ ಕಂಡೆನೆಂಬವರ ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು. ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ]. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರ್ಧರವಾದಲ್ಲಿ ನಿವಾಸವಾಗಿಪ್ಪನು.
--------------
ಬಾಚಿಕಾಯಕದ ಬಸವಣ್ಣ
ಅಯ್ಯಾ, ತರ್ಕ ವ್ಯಾಕರಣಾಗಮ ಶಾಸತ್ತ್ರ ಪುರಾಣ ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು. ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು. ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು. ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು, ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ. ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಬರೆದು ಓದಿಸುವ ಅಕರಿಗಳೆಲ್ಲ ನೀವು ಕೇಳಿರೋ: ತರ್ಕ ವ್ಯಾಕರಣ ಛಂದಸ್ಸು ನಿಘಂಟು ವೇದಶಾಸ್ತ್ರವನೋದಿ ಕೇಳಿ ಗಂಗೆಗೆ ಹರಿವವರನೇನೆಂಬೆ? ಪರವಧುವೆಂಬುದನರಿಯಿರಲ್ಲಾ! ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ ಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ ಆತನೀಗ ಪಂಚತತ್ವದ ಮೂಲವ ತಿಳಿದು ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು. ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ ! ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ ಅಂತಹವನಿಗೆ ತನ್ನ ತನುವೆಂಬ ಹುತ್ತದ ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ. ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು, ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ, ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ ಮುಹೂರ್ತವ ಮಾಡಿಕೊಂಡಿಹುದು. ಓಂಕಾರವೆಂಬುವದೊಂದು ಅಕ್ಷರವ ನೋಡಿ ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು, ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ, ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು, ಸಾವಿರೆಸಳಿನ ಕಮಲದೊಳಗೆ ಪೊಕ್ಕು, ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ. ಇಂತೀ ಕಾಯದ ಕೀಲನರಿಯದ ಕವಿಗಳು ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ವ್ಯಾಕರಣವನೋದ್ಲ ಶಬ್ದಶುದ್ಧಿಯಲ್ಲದೆ, ಮನ ಶುದ್ಧವಾಗಿ ಜ್ಞಾನಶುದ್ಧಿಯಾಗದು. ಛಂದಸ್ಸು ಸಾಧಿಸಿದಲ್ಲಿ ಕವಿತಾಶುದ್ಧಿಯಲ್ಲದೆ, ಕವಿತೆಯ ಸಾಧಿಸಿ, ವ್ಯಾಸನಂತೆ ಚಿರಂಜೀವಿಯಾಗನು. ಅಷ್ಟಾದಶಪುರಾಣವ ಸಾಧಿಸಿದಲ್ಲಿ ವಾಕ್‍ಶ್ಧುಯಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾದೇವಾ, ದೇಹಸ್ವಭಾವ ಶುದ್ಧಯಾಗದು ನೋಡಾ, ಮಡಿವಾಳ ಮಾಚಯ್ಯಾ
--------------
ಸಿದ್ಧರಾಮೇಶ್ವರ
`ಮಹಿಂ ದು:ಖವಿವರ್ಧಿನಿಂ | ಭೂತ್ಯಾಯುರ್ಭಾಗ ವೈಷಮ್ಯ' || ಮೇಲೆ ಸಕಲ ಮಂತ್ರಂಗಳಿಗೆ ಸಾಧಾರಣಮಾದ ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕ, ಸ್ವರ, ವರ್ಣ, ಸ್ಥಾನ, ಅಕ್ಷರ, ಕಲೆ, ತತ್ವ ಅರ್ಥಚಿಂತನಾದಿಗಳೆಂಬ ಅಂಗಗಳಲ್ಲಿ ಮುಖ್ಯವಾದ ಮಂತ್ರ ಪ್ರಥಮ ದೃಷ್ಟವಾದ ಋಷಿಯನೆ ಮಸ್ತಕದಲ್ಲಿ, ಮಂತ್ರಾಕ್ಷರ ಸಂಖ್ಯಾರೂಪಮಾದ ಛಂದವನೆ ಮುಖದಲ್ಲಿ, ಮಂತ್ರವಾಚ್ಯವಾದ ಅಧಿದೇವದೇವತೆಯನೆ ಹೃದಯದಲ್ಲಿ, ಮಂತ್ರದೇವತಾ ನಾಮವರ್ಣ ವಿಶೇಷ ಮಾದ ಬೀಜವನೆ ನಾಭಿಯಲ್ಲಿ, ಮಂತ್ರಸಿದ್ಧಿಪ್ರದಮಾದ ಕುಂಡಲಿನ್ಯಾದಿಶಕ್ತಿಯನೆ ಗುಹ್ಯದಲ್ಲಿ, ವಿಘ್ನನಿವರ್ತಕಮಾದ ಕೀಲಕವನೆ ಪಾದ ದಲ್ಲಿ, ಬೇರೆ ಮಂತ್ರ ರಕ್ಷಕರಾದ ಉಮೆ ವಿಘ್ನೇಶ್ವರರನೆ ಕ್ರಮದಿಂ ವಾಮ ದಕ್ಷಿಣ ಭುಜದ್ವಯದಲ್ಲಿ, ಋಷೆಯೇ ನಮ:ಎಂಬಂತೀ ಕ್ರಮದಿಂ ಚತುಸ್ಯಾಂತ ನಮ ಸ್ಕಾರಪೂರ್ವಕವಾಗಿ ಆಯಾ ಸ್ಥಾನಂಗಳಂ ಮುಟ್ಟಿ ಮುಟ್ಟಿ ಸ್ಮರಿಸುವುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ ಆಯುರ್ದಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ ಲಿಂಗವಂತನೆನಿಸಿಕೊಂಬುದಿಲ್ಲ. ಲಿಂಗವುಳ್ಳ ಶಿವಭಕ್ತಂಗೆ ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು ಹರಿವ ಕಂಗಳು, ಒಂದು ಸಾಸಿವೆರಜ ತನ್ನ ತಾಗದು. ಛಂದಸ್ಸು ನಿಘಂಟು ವ್ಯಾಕರಣ ಅದ್ವೈತ ವೇದ ಶಾಸ್ತ್ರ ಪುರಾಣವನೋದಿಕೊಂಡು ಮುಂದಣವರಿಗೆ ಹೇಳುವರಲ್ಲದೆ, ತನ್ನೊಳಗಣ ಶುದ್ಧಿಯ ತಾನರಿಯದೆ ಅನ್ಯರಿಗೆ ಉಪದೇಶವ ಹೇಳುವ ಬಿನುಗುಜಾತಿಗಳ ನುಡಿಯ, ಕೇಳಲಾಗದೆಂದ, ಕಲಿದೇವರದೇವಯ್ಯ
--------------
ಮಡಿವಾಳ ಮಾಚಿದೇವ
ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್ ಪ್ರಳಯಕಾಲಸ್ಯ | ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?) ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ, ಅರಿಯದಿರ್ದೊಡೆ ಕೇಳಿ. ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು. ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು ನಾಭಿಮಂಡಲವೆಂಬ ಹುತ್ತದೊಳಗಿರ್ದ ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ ಬಾಲ ಮೇಲಕಾಗಿರುವುದು ಕಾಣಿರೋ. ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ, ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು, ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು, ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು, ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ, ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ ! ಇಂತು ಮಂತ್ರದ ಕೀಲನರಿಯದ ಕವಿಗಳು ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ, ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ, ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ, ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು ತಮ್ಮ ಆತ್ಮದ ಶುದ್ಧಿಯ ತಾವರಿಯದೆ ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ. ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು, ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ ತಾವು ಅಳದಾಡುವಂತೆ ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು ಹೋರಟೆಗೊಳ್ಳುತ್ತಿದ್ದರು ಕಾಣಿರೋ. ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು ಕೂಗಿಡುತಿರ್ದವು ಕಾಣಿರೋ. ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ, ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ, ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ ಹರಿದಾಡುತ್ತಿದ್ದವು ಕಾಣಿರೋ. ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
-->