ಅಥವಾ

ಒಟ್ಟು 57 ಕಡೆಗಳಲ್ಲಿ , 17 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾನರಿದು ಮತ್ತೇನುವ ಮುಟ್ಟೆನೆಂಬುದು ಭರಿತಾರ್ಪಣದ ಕಟ್ಟು. ಇಂತೀ ಗುಣ, ಭರಿತಾರ್ಪಣವಲ್ಲವೆ ? ಅಶನದಾಸೆಯ ಬಿಡು, ಎಲೆ ದೆಸೆಗೆಟ್ಟ ಜೀವವೆ. ನಿನ್ನ ನೀನರಿ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗವಾಗಬಲ್ಲಡೆ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಪ್ರಾಣಲಿಂಗವೆಂಬುದೊಂದು ಮಾತಿನಂತುಟಲ್ಲ. ಲೋಗರ ಸುಖದುಃಖ ತನ್ನದೆನ್ನದನ್ನಕ್ಕ ಚೆನ್ನ ಸಿದ್ಧಸೋಮನಾಥನೆಂಬ ಲಿಂಗ ಬರಿದೆ ಒಲಿವನೆ?
--------------
ಅಮುಗಿದೇವಯ್ಯ
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ? ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ? ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?
--------------
ಅಕ್ಕಮಹಾದೇವಿ
ಗುರು ಚರ ಕರ್ತರು ತಾವಾದ ಮೇಲೆ ಭಕ್ತನಾಚಾರದಲ್ಲಿರಬೇಕು. ಮೃಷ್ಟಾನ್ನಕಿಚ್ಫೈಸದೆ ದೂರಸ್ಥರಾಗಿ, ಗಣಕ ಪಾರದ್ವಾರ ಹುಸಿ ಕೊಲೆ ಕಳವು ಹಿಂಸೆಗೊಡಂಬಡದೆ, ಮತ್ತೆ ಕಿಸುಕುಳದ ಗಂಟ ಕೆಲಕೊತ್ತಿಸಿ, ತಾ ಹರಚರವಾದ ಪರಮಲಿಂಗಾಂಗಿಗೆ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗೈಕ್ಯ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ? ಮುಟ್ಟಿ ಮುಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು ಇದು ಕೃತ್ಯದ ನೇಮ, ಭರಿತಾರ್ಪಣವೆ? ಭರಿತಾರ್ಪಣವಾವುದೆಂದಡೆ: ಪರಸ್ತ್ರಿ ಒಲಿದು ಬಂದಲ್ಲಿ, ನೇಮಕಲ್ಲದ ದ್ಯವ್ಯನೆರೆದು, ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧಾನಾಗಿ ಕಾಯಕರ್ಮಕ್ಕೊಳಗಲ್ಲದೆ, ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ, ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ, ಪರಿಭ್ರಮವ ಹರಿದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಆಲಿಕಲ್ಲ, ನೀರೊಳಗೆ ಬೆರಸಿದಂತೆ, ಉಪ್ಪಿನ ಹರಳ, ಉದಕದೊಳಗೆ ಹಾಕಿದಂತೆ, ಕರ್ಪುರದ ಹಣತೆಯಲ್ಲಿ, ಜ್ಯೋತಿಯ ಬೆಳಗ ಬೆರಸಿದಂತೆ, ಮಹಾಲಿಂಗ ಚೆನ್ನ ರಾಮೇಶ್ವರಲಿಂಗದಲ್ಲಿ ಬೆರಸಿ, ಎರಡಳಿದಡಗಿದ ನಿಜಲಿಂಗೈಕ್ಯನು.
--------------
ಮೈದುನ ರಾಮಯ್ಯ
ಕೀಳು ಡೋಹರ ಕಕ್ಕ; ಕೀಳು ಮಾದರ ಚೆನ್ನ. ಕೀಳು ಓಹಿಲದೇವ; ಕೀಳು ಉದ್ಭಟಯ್ಯ. ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ತಾನರಿಯದುದನರಿದಾಗವೆ ಭರಿತಾರ್ಪಣ. ತಾ ಕೆಡಿಸಿದುದ ಕಂಡಲ್ಲಿಯೆ ಭರಿತಾರ್ಪಣ. ತ್ರಿವಿಧಮಲದಿಂದ ಕಟ್ಟೊತ್ತರ ಬಂದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿದ್ದಾಗವೆ ಭರಿತಾರ್ಪಣ. ತಾ ಹೇಳಿದ ವ್ರತ ನೇಮ ನಿತ್ಯ ಕೃತ್ಯಂಗಳಲ್ಲಿ ಅನುಸರಣೆಯಿಂದ ತನು ಸೋಂಕಿದಾಗವೆ ಭರಿತಾರ್ಪಣ. ಪಡಿಪುಚ್ಚವಿಲ್ಲದ ನುಡಿಗೆಡೆಯಾಗದೆ ಲಿಂಗದಲ್ಲಿ ಒಡಗೂಡೂದೆ ಭರಿತಾರ್ಪಣ. ಇದು ಕ್ಷುತ್ತಿನ ಆಗಲ್ಲ, ಸಂಸಾರಘಟವ ಮೆತ್ತುವ ಬುತ್ತಿಯಲ್ಲ. ನಿತ್ಯಾನಿತ್ಯವ ತಿಳಿದು, ನಿಶ್ಚಯವನರಿದಲ್ಲಿ ಭರಿತಾರ್ಪಣ. ಇದು ಸತ್ಯವಂತರ ಹೊಲ, ಮುಕ್ತಿವಂತರ ಬೆಳೆ. ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ವಚನಾರ್ಥವನರಿದು ನುಡಿದಿಹೆನೆಂದಡೆ, ರಚನೆಯ ರಂಜನೆಗೆ ಒಳಗಾಯಿತ್ತು. ತತ್ವವನಟ್ಟೈಸಿಹೆನೆಂದಡೆ ಆತ್ಮಘಾತಕ ಭೂತಸಿದ್ಧಿಗೊಳಗಾಯಿತ್ತು. ಸರ್ವವೂ ತಾನೆಂದರಿದವಗೆ ಸಂದೇಹಸೂತಕವಿಲ್ಲ. ಅರಿವು ಆತ್ಮನಲ್ಲಿ ವೇದ್ಯವಾದವಗೆ ಆ ಸರ್ವವೂ ಅಹುದಲ್ಲಾಯೆಂದು ನಿಂದ ಮತ್ತೆ ಮಾರ್ಪೊಳಲನೇರಿದ ಧೀರನಂತಿರಬೇಡವೆ ಪರಮವಿರಕ್ತಿ. ಲೋಲಿಯ......ದಂತೆ, ಜೋಲಿಯ ಕೀಲಿನಂತೆ ಗ್ರಂಥಿಯ ಗಸಣದಂತಿಪ್ಪವರ ಕಂಡೆನಗೆ ಹೇಸಿಕೆಯಾಯಿತ್ತು. ಪರತತ್ವಪ್ರಕಾಶ ಚೆನ್ನ ರಾಮೇಶ್ವರಲಿಂಗವನರಿವುದಕ್ಕೆ ಅಹುದೋ, ಅಲ್ಲವೋ ಎನುತಿರ್ದೆನು.
--------------
ಜ್ಯೋತಿ ಸಿದ್ಧೇಶ್ವರ
ಸರ್ವಜೀವ ನಿನ್ನ ಹಾಹೆ ಎಂಬೆನೆ? ಅದು ಭಿನ್ನಭಾವ ತ್ರಿಗುಣಾತ್ಮಕರುಂಟು, ಅದು ನಿನಗನ್ಯವೆಂಬೆನೆ? ಆ ತ್ರಿಗುಣಾತ್ಮಕರು ನಿನ್ನ ತಿಲಾಂಶ. ಇಂತೀ ಸರ್ವಭೂತಕ್ಕೆ ನಿನ್ನ ದಯ. ಎನಗಿದೇಕೆ ಗೆಲ್ಲ ಸೋಲವೆಂಬ ಖುಲ್ಲತನ, ಎಲ್ಲ ಜೀವಕ್ಕೂ ಸರಿ. ಅರುಣೋದಯದಂತೆ ಎನ್ನ ಚಿತ್ತದಲ್ಲಿ ಸರ್ವಜೀವಕ್ಕೆ ಎಲ್ಲಕ್ಕೂ ದಯವ ಮಾಡು, ಚೆನ್ನ ದಸರೇಶ್ವರಲಿಂಗಾ.
--------------
ದಸರಯ್ಯ
ಇನ್ನಷ್ಟು ... -->