ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೋತ್ರ ತ್ವಕ್ಕು ಚಕ್ಷು ಜಿಹ್ವೆ ಘ್ರಾಣಂಗಳೆಂಬವೈದು ಜ್ಞಾನೇಂದ್ರಿಯಂಗಳು. ವಾಕು ಪಾಣಿ ಪಾದ ಗುಹ್ಯ ಗುದಂಗಳೆಂಬವೈದು ಕರ್ಮೇಂದ್ರಿಯಂಗಳು. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬವೈದು ವಿಷಯಂಗಳು. ವಚನ ಆದಾನ ಗಮನ ಆನಂದ ವಿಸರ್ಜನಂಗಳು ಕರ್ಮೇಂದ್ರಿಯಂಗಳ ವಿಷಯಂಗಳು. ಶ್ರೋತ್ರೇಂದ್ರಿಯ ವಾಗೀಂದ್ರಿಯಂಗಳಿಗೆ ಭೇದವಿಲ್ಲ. ಶ್ರವಣೇಂದ್ರಿಯವಿಷಯವಪ್ಪ ಶಬ್ದಕ್ಕೆಯು, ವಾಗೀಂದ್ರಿಯವಿಷಯವಪ್ಪ ನುಡಿಗೆಯು ಭೇದವಿಲ್ಲ. ತ್ವಗೀಂದ್ರಿಯ ಪಾಣೇಂದ್ರಿಯಂಗಳೆಂಬ, ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳೆರಡಕ್ಕೆಯು ತ್ವಕ್ಪಾಣಿಗಳ ವಿಷಯಂಗಳಪ್ಪ ಸ್ಪರ್ಶನ ಆದಾನ ಈ ಎರಡು ವಿಷಯಂಗಳಿಗೆಯೂ ಭೇದವಿಲ್ಲ. ಜ್ಞಾನಕರ್ಮೇಂದ್ರಿಯಂಗಳಪ್ಪ ನೇತ್ರ ಪಾದಂಗಳೆಂಬೆರಡಕ್ಕೆಯು ನೇತ್ರ ವಿಷಯವಪ್ಪ ರೂಪಕ್ಕೆಯು ಪಾದೇಂದ್ರಿಯ ವಿಷಯಮಪ್ಪ ಗಮನಕ್ಕೆಯು ಭೇದವಿಲ್ಲ. ಆ ಜಿಹ್ವೆ ಗುಹ್ಯ ವಿಷಯಂಗಳಪ್ಪ ರಸ ಆನಂದವಪ್ಪವೆಂಬೆರಡು ವಿಷಯಂಗಳಿಗೆಯೂ ಭೇದವಿಲ್ಲ. ಘ್ರಾಣೇಂದ್ರಿಯ ಗುದೇಂದ್ರಿಯಂಗಳಿಗೆಯು ಭೇದವಿಲ್ಲ. ಅವರ ವಿಷಯಂಗಳಪ್ಪ ಗಂಧ ವಿಜರ್ಸನಂಗಳೆಂಬೆರಡು ವಿಷಯಂಗಳಿಗೆಯು ಭೇದವಿಲ್ಲ. ಈ ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳಿಗೆ ಹೃದಯವೇ ಕಾರಣವಾಗಿ ಹೃದಯವಾಕಾಶವೆನಿಸಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಶ್ರೋತ್ರಂ ವಾಚೋರ್ನಭೇದೋýಸ್ತಿ ಶಬ್ದಸ್ಯ ವಚನಸ್ಯ ಚ | ಸ್ಪರ್ಶಭಾಷಣ ಸದ್ಭಾವಾದ್ಭೇದೋ ನ ತು ಕರದ್ವಯೋಃ || ನ ನೇತ್ರಪಾದಯೋರ್ಭೇದಃ ರೂಪಸ್ಯ ಗಮನಸ್ಯ ಚ | ರಸಾನಂದಯೋರ್ಭೇದೋ ನ ಜಿಹ್ವಾ ಗುಹ್ಯಯೋಸ್ತಥಾ || ನಾಸಿಕಾ ಗುದಯೋರ್ಭೇದೋ ನಾಸ್ತಿ ಗಂಧವಿಸರ್ಗಯೋಃ | ಅಸ್ತಿಭೇದ ಪ್ರಮಾಣಸ್ಯ ಇತಿ ಸತ್ಯಾರ್ಥವರ್ಧಿನಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ :ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ , ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಕಾಶದೊಳಗಣ ಆಕಾಶ, ಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆಕಾಶದೊಳಗಣ ವಾಯು, ಮನಸ್ಸು; ಅಲ್ಲಿ ಜಂಗಮಲಿಂಗ ಸ್ವಾಯತ. ಆಕಾಶದೊಳಗಣ ಅಗ್ನಿ, ಅಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆಕಾಶದೊಳಗಣ ಅಪ್ಪು, ಚಿತ್ತ; ಅಲ್ಲಿ ಗುರುಲಿಂಗ ಸ್ವಾಯತ. ಆಕಾಶದೊಳಗಣ ಪೃಥ್ವಿ, ಬುದ್ಧಿ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚಕರಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ವಾಯುವಿನೊಳಗಣ ಆಕಾಶ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ, ವಾಯುವಿನೊಳಗಣ ಅಗ್ನಿ, ಸಮಾನವಾಯು; ಅಲ್ಲಿ ಪ್ರಸಾದಲಿಂಗ ಸ್ವಾಯತ. ವಾಯುವಿನೊಳಗಣ ಅಗ್ನಿ, ಉದಾನವಾಯು; ಅಲ್ಲಿ ಶಿವಲಿಂಗ ಸ್ವಾಯತ. ವಾಯುವಿನೊಳಗಣ ಅಪ್ಪು, ಅಪಾನವಾಯು; ಅಲ್ಲಿ ಗುರುಲಿಂಗ ಸ್ವಾಯತ. ವಾಯುವಿನೊಳಗಣ ಪೃಥ್ವಿ, ಪ್ರಾಣವಾಯು; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ವಾಯುಪಂಚಕದಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಗ್ನಿಯೊಳಗಣ ಅಗ್ನಿ, ನೇತ್ರೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಅಗ್ನಿಯೊಳಗಣ ಆಕಾಶ, ಶ್ರೋತ್ರೇಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಅಗ್ನಿಯೊಳಗಣ ಅಪ್ಪು, ಜಿಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಅಗ್ನಿಯೊಳಗಣ ಪೃಥ್ವಿ, ಘ್ರಾಣೇಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಬುದ್ಧೀಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಅಪ್ಪುವಿನೊಳಗಣ ಅಪ್ಪು, ರಸ; ಅಲ್ಲಿ ಗುರುಲಿಂಗ ಸ್ವಾಯತ. ಅಪ್ಪುವಿನೊಳಗಣ ಆಕಾಶ, ಶಬ್ದ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಅಪ್ಪುವಿನೊಳಗಣ ವಾಯು, ಸ್ಪರ್ಶನ; ಅಲ್ಲಿ ಜಂಗಮಲಿಂಗ ಸ್ವಾಯತ. ಅಪ್ಪುವಿನೊಳಗಣ ಅಗ್ನಿ ರೂಪು; ಅಲ್ಲಿ ಶಿವಲಿಂಗ ಸ್ವಾಯತ. ಅಪ್ಪುವಿನೊಳಗಣ ಪೃಥ್ವಿ ಗಂಧ; ಅಲ್ಲಿ ಆಚಾರಲಿಂಗ ಸ್ವಾಯತ. ಹೀಂಗೆ ಪಂಚವಿಷಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಪೃಥ್ವಿಯೊಳಗಣ ಪೃಥ್ವಿ, ಪಾಯ್ವಿಂದ್ರಿಯ; ಅಲ್ಲಿ ಆಚಾರಲಿಂಗ ಸ್ವಾಯತ. ಪೃಥ್ವಿಯೊಳಗಣ ಆಕಾಶ, ವಾಗಿಂದ್ರಿಯ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಪೃಥ್ವಿಯೊಳಗಣ ವಾಯು, ಪಾಣೀಂದ್ರಿಯ; ಅಲ್ಲಿ ಜಂಗಮಲಿಂಗ ಸ್ವಾಯತ. ಪೃಥ್ವಿಯೊಳಗಣ ಅಗ್ನಿ, ಪಾದೇಂದ್ರಿಯ; ಅಲ್ಲಿ ಶಿವಲಿಂಗ ಸ್ವಾಯತ. ಪೃಥ್ವಿಯೊಳಗಣ ಅಪ್ಪು, ಗುಹ್ವೇಂದ್ರಿಯ; ಅಲ್ಲಿ ಗುರುಲಿಂಗ ಸ್ವಾಯತ. ಹೀಂಗೆ ಪಂಚಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಆತ್ಮನೊಳಗಣ ಆತ್ಮ,ಶುದ್ಧಾತ್ಮ; ಅಲ್ಲಿ ಮಹಾಲಿಂಗ ಸ್ವಾಯತ. ಆತ್ಮನೊಳಗಣ ಆಕಾಶ, ಸುಜ್ಞಾನ; ಅಲ್ಲಿ ಪ್ರಸಾದಲಿಂಗ ಸ್ವಾಯತ. ಆತ್ಮನೊಳಗಣ ವಾಯು, ಸುಮನ; ಅಲ್ಲಿ ಜಂಗಮಲಿಂಗ ಸ್ವಾಯತ. ಆತ್ಮನೊಳಗಣ ಅಗ್ನಿ, ನಿರಹಂಕಾರ; ಅಲ್ಲಿ ಶಿವಲಿಂಗ ಸ್ವಾಯತ. ಆತ್ಮನೊಳಗಣ ಅಪ್ಪು, ಸುಬುದ್ಧಿ; ಅಲ್ಲಿ ಗುರುಲಿಂಗ ಸ್ವಾಯತ. ಆತ್ಮನೊಳಗಣ ಪೃಥ್ವಿ, ಸುಚಿತ್ತ; ಅಲ್ಲಿ ಆಚಾರಲಿಂಗ ಸ್ವಾಯತ. ಇಂತೀ ಪ್ರಾಣಂಗಳಲ್ಲಿಯೂ ಲಿಂಗವೇ ಸ್ವಾಯತವಾಗಿಪ್ಪುದಯ್ಯ. ಇಂತೀ ಅಂಗ ಪ್ರಾಣಂಗಳಲ್ಲಿಯು ಲಿಂಗವೇ ಎಡೆಕಡೆಯಿಲ್ಲದ ಪ್ರಭೇದವನರಿದಾತನೆ ಸರ್ವಾಂಗಲಿಂಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರ್ಮಸಾದಾಖ್ಯಸ್ವರೂಪವಾದ ಆಚಾರಲಿಂಗದಲ್ಲಿ ನಕಾರಮಂತ್ರಸ್ವರೂಪವಾದ ಘ್ರಾಣೇಂದ್ರಿಯ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಕರ್ತೃಸಾದಾಖ್ಯಸ್ವರೂಪವಾದ ಗುರುಲಿಂಗದಲ್ಲಿ ಮಕಾರಮಂತ್ರಸ್ವರೂಪವಾದ ಜಿಹ್ವೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮೂರ್ತಿಸಾದಾಖ್ಯಸ್ವರೂಪವಾದ ಶಿವಲಿಂಗದಲ್ಲಿ ಶಿಕಾರಮಂತ್ರಸ್ವರೂಪವಾದ ನೇತ್ರೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಅಮೂರ್ತಿಸಾದಾಖ್ಯಸ್ವರೂಪವಾದ ಜಂಗಮಲಿಂಗದಲ್ಲಿ ವಕಾರಮಂತ್ರಸ್ವರೂಪವಾದ ತ್ವಗಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಶಿವಸಾದಾಖ್ಯಸ್ವರೂಪವಾದ ಪ್ರಸಾದಲಿಂಗದಲ್ಲಿ ಯಕಾರಮಂತ್ರಸ್ವರೂಪವಾದ ಶ್ರವಣೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮಹಾಸಾದಾಖ್ಯಸ್ವರೂಪವಾದ ಮಹಾಲಿಂಗದಲ್ಲಿ ಓಂಕಾರಮಂತ್ರಸ್ವರೂಪವಾದ ಹೃದಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಇಂತೀ ಷಡ್ವಿಧಲಿಂಗದಲ್ಲಿ ಷಡಿಂದ್ರಿಯಂಗಳ ಸಂಯೋಗಮಾಡಿ, ಆ ಷಡ್ವಿಧ ಲಿಂಗಂಗಳೊಂದಾದ ಮಹಾಘನವೆ ತಾನಾಗಿ ಸುಳಿಯಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ. ಶ್ರೀಗುರು ಮಹಾಂತಯೋಗೇಂದ್ರ ನೀವು ಎನಗೆ ಗತಿ ಮತಿ ಚೈತನ್ಯದಿ ಸರ್ವವು ನೀನೇ ಆದಿಯಲ್ಲಾ. ನಿನಗೆ ನಾನು ಏನಾದೆ ಹೇಳಾ ? ನಾನು ನೀನೇ ಆದದ್ದು ಹೇಳಬಾರದೆಂಬುದು ಅಹಂಕಾರವೇ ದೇವಾ ? ನೀನು ಅಹಂಕಾರಿಯಾಗಿರೆ ನಾನು ನಿರಹಂಕಾರಿಯಾದರೆ ಹೆಚ್ಚುಕಡಿಮೆಯಾಗುವದು. ಅದು ಕಾರಣ ನೀನು ಹೇಳದಿದ್ದರೆ ನಾನು ಹೇಳುವೆನು. ಅದೆಂತೆಂದೊಡೆ : ನಾನು ನಿನ್ನ ಗುರುವಿನಲ್ಲಿ ಮುಂದೆ ಹುಟ್ಟಿದೆ, ನೀನು ನನ್ನ ಹಿಂದೆ ಹುಟ್ಟಿದೆ : ನಿನಗೆ ನಾನು ಏನಾದೆ ? ನಿನಗೆ ನಾನು ಅಣ್ಣನಾದೆ. ಮತ್ತೆ ನಾನು ಮುಂದೆ ಗುರುವ ಪಡದು ನಾ ನಿನ್ನ ಪಡೆದೆ. ನಿನಗೆ ನಾನು ತಂದಿಯಾದೆ. ನಾ ಮುಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲಿ ನಾ ನಿನಗೆ ಮುತ್ತ್ಯಾನಾದೆ. ಮುಂದೆ ಸಾಧುರ ಸಂಗ ಪಡೆದು ಆ ಸಾಧುರ ಸಂಗದಿಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲೆ ನಾ ನಿನಗೆ ಅಜ್ಜನಾದೆ. ಮುಂದೆ ಸತ್ಕರ್ಮ, ಆ ಸತ್ಕರ್ಮ ಪಡದಲ್ಲೆ ಸಾಧುರಸಂಗ, ಆ ಸಾಧುರಸಂಗದಿಂದ ಗುರು, ಆ ಗುರುವಿನಲ್ಲಿ ನೀನಾದುದಕ್ಕೆ ನಿನಗೆ ಪಣಜನಾದೆ. ಮುಂದೆ ನೀತಿ ಪಡದಲ್ಲಿ ಆ ನೀತಿಯಿಂದ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರು, ಆ ಗುರುವಿನಿಂದ ನಾನಾದಮ್ಯಾಲೆ ನಾ ನಿನಗೆ ಪಣಜನಪ್ಪನಾದೆ. ಮುಂದೆ ನಾನು ಜ್ಞಾನ ಪಡೆದಲ್ಲಿ ಆ ಜ್ಞಾನದಿಂದ ನೀತಿ, ಆ ನೀತಿಯಿಂದೆ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರುವು, ಆ ಗುರುವಿನಿಂದ ನಿನ್ನ ಪಡೆದಲ್ಲಿ ನಾ ನಿನಗೆ ಪಣಜನ ಮುತ್ತ್ಯನಾದೆ. ನಾ ಮುಂದೆ ನರಜನ್ಮ ಪಡದಲ್ಲಿ ಜ್ಞಾನ, ಆ ಜ್ಞಾನದಿಂದೆ ನೀತಿ, ನೀತಿಯಿಂದ ಸತ್ಕರ್ಮ, ಸತ್ಕರ್ಮದಿಂದೆ ಸಾಧುರ ಸಂಗ, ಸಾಧುರಸಂಗದಿಂದೆ ಗುರುವು, ಗುರುವಿನಿಂದೆ ನೀನು, ನಾ ನಿನಗೆ ಪಣಜನಜ್ಜನಾದೆ. ಈ ನರಜನ್ಮಕ್ಕೆ ಮುಂದೆ ಪುಣ್ಯವೆ ಕಾರಣ. ಮುಂದೆ ಪುಣ್ಯಪಡೆದಲ್ಲಿ ಆ ಪುಣ್ಯದಿಂದೆ ಈ ನರಜನ್ಮಪಡೆದೆ. ಈ ನರಜನ್ಮದಿಂದೆ ಜ್ಞಾನಪಡೆದೆ, ಈ ಜ್ಞಾನದಿಂದೆ ನೀತಿಪಡೆದೆ, ನೀತಿಯಿಂದೆ ಸತ್ಕರ್ಮ, ಸತ್ಕರ್ಮದಿಂದೆ ಸಾಧುರಸಂಗಪಡೆದೆ. ಈ ಸಾಧುರಸಂಗದಿಂದೆ ಗುರುವಿನಪಡೆದೆ. ಗುರುವಿನಿಂದ ನಿನ್ನ ಪಡೆದೆ ; ನಾ ನಿನಗೆ ಪಣಜನ ಪಣಜನಾದೆ. ಇಷ್ಟಾದರೂ ಆಯಿತೇ ? ಮತ್ತೆ ನಿನ್ನ ಘ್ರಾಣಕ್ಕೆ ಗಂಧವಕೊಟ್ಟೆ, ನಿನ್ನ ಜಿಹ್ವೆಗೆ ರಸವ ನೀಡಿದೆ, ನಿನ್ನ ನೇತ್ರಕ್ಕೆ ರೂಪವ ತೋರಿದೆ, ನಿನ್ನ ಅಂಗಕ್ಕೆ ಆಭರಣವನಿಟ್ಟೆ, ನಿನ್ನ ಶ್ರೋತ್ರಕ್ಕೆ ಶಬ್ದವ ಕೊಟ್ಟೆ, ನಿನ್ನ ಹೃದಯಕ್ಕೆ ತೃಪ್ತಿಯಮಾಡಿದೆ. ನಾನು ಈ ಪರಿಯಲ್ಲಿ ನಿನ್ನ ಹುಟ್ಟಿಸಿದೆ, ನಿನ್ನ ಬೆಳೆಸಿದೆ, ನಿನ್ನ ಮನ್ನಿಸಿದೆ, ನಿನ್ನ ವರ್ಣಿಸಿದೆ. ಮತ್ತೆ ಗುರು-ಶಿಷ್ಯ ಸತಿ-ಪತಿನ್ಯಾಯ. ನೀ ಪತಿ ನಾ ಸತಿ, ಅಹುದೋ ಅಲ್ಲವೋ ? ಮತ್ತೆ ನೀ ಪತಿಯಾದ ಮೇಲೆ ನಿನಗೆ ನಾನು ಸೋಲಬೇಕೋ ನನಗೆ ನೀನು ಸೋಲಬೇಕೋ ? ನನಗೆ ನೀ ಸೋತಲ್ಲಿ ನಾ ಹೆಚ್ಚೊ ? ನೀ ಹೆಚ್ಚೊ ? ನಾನೇ ಹೆಚ್ಚು. ಅದು ಹೇಗೆಂದಡೆ : ನನ್ನ ಮುಡಿಯಲಾದ ಗಂಧಕ್ಕೆ ನಿನ್ನ ಘ್ರಾಣೇಂದ್ರಿಯ ಸೋತಿತು. ನನ್ನ ಅಧರಾಮೃತಕ್ಕೆ ನಿನ್ನ ಜಿಹ್ವೇಂದ್ರಿಯ ಸೋತಿತು. ನನ್ನ ಹಾವ ಭಾವ ವಿಭ್ರಮ ವಿಲಾಸ ಶೃಂಗಾರ ತೋರಿಕೆಗೆ ನಿನ್ನ ನಯನೇಂದ್ರಿಯ ಸೋತಿತು. ನನ್ನ ಅಂಗದಾಲಿಂಗಕ್ಕೆ ನಿನ್ನ ತ್ವಗೇಂದ್ರಿಯ ಸೋತಿತು. ನನ್ನ ಸಂಗಸಮರಸದಲ್ಲಿ ನಿನ್ನ ಸಂಯೋಗ ಸೋತಿತು. ನೀನು ಆವ ಪರಿಯಾಗಿ ನನ್ನ ಸೋಲಿಸಬಂದರೆ. ನಾನು ನಿನ್ನ ಆವಾವ ಪರಿಯಾಗಿ ಸೋಲಿಸಿದೆ. ಅದು ಹಾಂಗಿರಲಿ, ಇನ್ನೊಂದುಂಟು-ಅದು ಏನೆನಲು : ನೀನು ನಾ ಮುಡದದ್ದು ಮುಡದಿ, ನಾ ಉಂಡದ್ದು ಉಂಡಿ, ನಾ ಕಂಡದ್ದು ಕಂಡಿ, ನಾ ಉಟ್ಟದ್ದು ಉಟ್ಟಿ, ನಾ ಕೇಳಿದ್ದು ಕೇಳಿದಿ, ನಾ ಕುಡದದ್ದು ಕುಡಿದಿ, ನೀನು ನನ್ನ ಪ್ರಸಾದಿ ಆದಿಯಲ್ಲಾ. ಮತ್ತೆ ನನ್ನ ಮೂಗೇ ನಿನ್ನ ಮೂಗು, ನನ್ನ ಬಾಯಿಯೇ ನಿನ್ನ ಬಾಯಿ, ನನ್ನ ಕಣ್ಣೇ ನಿನ್ನ ಕಣ್ಣು, ನನ್ನ ಮೈಯ್ಯೇ ನಿನ್ನ ಮೈ, ನನ್ನ ಕಿವಿಯೇ ನಿನ್ನ ಕಿವಿ, ನನ್ನ ಹೃದಯವೇ ನಿನ್ನ ಹೃದಯ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನಾನೇ ನೀನು, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗೀಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು ಅಗ್ನಿಯ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಇಂತು ಪಾದೇಂದ್ರಿಯ, ಪಾಯ್ವೇಂದ್ರಿಯ, ಗುಹ್ಯೇಂದ್ರಿಯ, ಪಾಣೇಂದ್ರಿಯ, ವಾಗೇಂದ್ರಿಯ, ಘ್ರಾಣೇಂದ್ರಿಯ, ಜಿಹ್ವೇಂದ್ರಿಯ, ನೇತ್ರೇಂದ್ರಿಯ, ತ್ವಗೇಂದ್ರಿಯ, ಶ್ರೋತ್ರೇಂದ್ರಿಯ ಮೊದಲಾದ ಸಮಸ್ತ ಇಂದ್ರಿಯ ವಿಷಯ ವ್ಯಾಪಾರದಿಂದ ಹುಸಿ, ಕಳವು, ಪರದಾರ, ಪರನಿಂದ್ಯ, ಪರಹಿಂಸೆ, ಪರದೈವ, ಪರಕಾಂಕ್ಷೆ, ಅನೃತ, ಅಪಶಬ್ದ ಮೊದಲಾಗಿ ಪರಮಪಾತಕತನದಿಂದ ಹೊಡದಾಡಿ, ಅರ್ಥಪ್ರಾಣಾಭಿಮಾನವ ಕಳಕೊಂಡು ಭವಭಾರಿಯಾಗಿ ನಷ್ಟವಾಯಿತಯ್ಯ ಎನ್ನ ಹೃದಯೇಂದ್ರಿಯವು. ಇಂತಾ ಇಂದ್ರಿಯಂಗಳ ದುಸ್ಸಂಗದಿಂದ ಜಡಶರೀರಿಯಾಗಿ, ನಿಮ್ಮ ನಿಜಭಕ್ತಿಯ ಮರದೆನಯ್ಯ ಪರಮಾರಾಧ್ಯದಿರವೆ. ಇನ್ನೆನಗೆ ಗತಿಯ ಪಥವ ತೋರಿಸಯ್ಯ ಮಹಾಪ್ರಭುವೆ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
-->