ಅಥವಾ

ಒಟ್ಟು 175 ಕಡೆಗಳಲ್ಲಿ , 35 ವಚನಕಾರರು , 150 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗವನೊಳಕೊಂಡ ಲಿಂಗವು ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು, ಕಂಡು ಹಗರಣವಾಯಿತ್ತೆನಗೆ. ಗುರುಲಿಂಗಜಂಗಮಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ ! ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--------------
ಷಣ್ಮುಖಸ್ವಾಮಿ
ನಿಮ್ಮ ನೆನೆವುತ್ತಿದ್ದಿತ್ತು_ನೆನೆವ ಮುಖವಾವುದೆಂದರಿಯದೆ, ಪೂಜೆಯ ಪೂಜಿಸುತ್ತಿದ್ದಿತ್ತು_ಪೂಜೆಯ ಮುಖವಾವುದೆಂದರಿಯದೆ; ಆಡಿ ಹಾಡಿ ಬೇಡುತ್ತಿದ್ದಿತ್ತು_ಬೇಡುವ ಮುಖವಾವುದೆಂದರಿಯದೆ; ಕಾಯದಲ್ಲಿ ಇಲ್ಲ, ಜೀವದಲ್ಲಿಇಲ್ಲ, ಭಾವದಲ್ಲಿ ಇಲ್ಲ; ಭರಿತವು ಅದು ತಾನಪ್ಪುದು. ತಾನಲ್ಲದುದೇನ ಹೇಳುವೆ ಕೌತುಕವ? ಗುಹೇಶ್ವರನೆಂಬ ಹೆಸರೊಳಗಿದ್ದುದ ಬೆಸಗೊಂಬವರಿಲ್ಲ ನಿರಾಳದ ಘನವ !
--------------
ಅಲ್ಲಮಪ್ರಭುದೇವರು
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ತೋರಬಾರದ ಘನವ ಹೇಳಲೆಂದೇನಯ್ಯಾ ? ಹೇಳಬಾರದ ಘನವ ತೋರಲೆಂದೇನಯ್ಯಾ ? ಶರಸಂಧಾನದ ಪರಿಯಲ್ಲ ನೋಡಾ ! ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ ವಾಸನೆಯ ಲತೆಗಳೊಳ್ಬೆಳೆದ ಅತಿಶಯಾನಂದರೂಪವನರಿಯಲಾರಳವಲ್ಲ ನೋಡಾ. ಭೂಚರರರಿಯರು ಖೇಚರರರಿಯರು ಪೆರ್ಚಲದಾಶ್ರಯವಗೊಂಡಾಯಸವನುಂಬ ಅರೆಮರುಳರಂತಿರಲಿ ಧರೆಯೊಳಿಪ್ಪ ನರರೆತ್ತ ಬಲ್ಲರು ಹೇಳಾ ! ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ? ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ? ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ? ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ? `ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬ ಲೋಕದ ಗಾದೆಮಾತಿನಂತೆ, ಸದ್ಗುರುಕಾರುಣ್ಯವಾದಡೂ ಸಾದ್ಥಿಸಿದವನಿಲ್ಲ , ಸಕಳೇಶ್ವರಾ.
--------------
ಸಕಳೇಶ ಮಾದರಸ
ಕಂಗಳೆ ಕರುಳಾಗಿ ಉರವಣಿಸಿ ಬಪ್ಪವನ ಬರವ ನೋಡಾ, ಇರವ ನೋಡಾ. ಪರವ ನೋಡಾ, ಇಹಪರವ ನೋಡಾ, ಇಹಪರವೊಂದಾದ ಘನವ ನೋಡಾ, ಎಲೆ, ಘನಕ್ಕೆ ಘನವ ನೋಡಾ. ಕರುವಿಟ್ಟ ರೂಪಿನಂತೆ ಕಂಗಳೆರಡು ಹಳಚದೆ ಭುಗಿಲನೆ ನಡೆತಹ. ಇಂತಪ್ಪ ಗರುವ ಪ್ರಭುವ ಕಂಡೆವೈ ಕೂಡಲಸಂಗಮದೇವಾ.
--------------
ಬಸವಣ್ಣ
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ. ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾಗಿ, ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ. ಇಂತಪ್ಪ ನಿರೂಪದ ಮಹಾಘನವು ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ, ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಿಷ್ಠೆಯ ಮರೆದರೇನಯ್ಯಾ ? ಲೋಕದ ಮನುಜರ ದೃಷ್ಟಿಗೆ ಸಿಲ್ಕಿ ಭ್ರಷ್ಟೆದ್ದುಹೋದರು. ತನು ಕಷ್ಟಮಾಡಿದರೇನಯ್ಯಾ ಮನ ನಿಷ್ಠವಾಗದನ್ನಕ್ಕ ? ತನು ಮನವೆರಡು ನಷ್ಟವಾಗಿ, ಘನವ ನೆಮ್ಮಿ, ನಿಮ್ಮ ನೆನಹು ನಿಷ್ಪತ್ತಿಯಾದ ಶರಣರ ಎನಗೊಮ್ಮೆ ತೋರಯ್ಯ, ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ, ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ, ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ, ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ, ನಿಜದರಿವನರುಹಿಸಿಕೊಟ್ಟ ಗುರುವೆ, ನಿರ್ಮಳಪ್ರಭೆಯ ತೋರಿದ ಗುರುವೆ, ನಿಜವನನುಭವಕ್ಕೆ ತಂದ ಗುರುವೆ ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ, ಬಸವನ ಪ್ರಭೆ ಎಲ್ಲಿ ಅಡಗಿತ್ತೊ?
--------------
ನೀಲಮ್ಮ
ಹೊತ್ತುಹೋಗದ ಮುನ್ನ ನೀವು ಸತ್ತಂತೆ ಇರಿರೊ. ಸತ್ತಂತೆ ಇದಲ್ಲದೆ ತತ್ವವ ಕಾಣಬಾರದು. ತತ್ತವ ಕಂಡಲ್ಲದೆ ಮನ ಬತ್ತಲೆಯಾಗದು. ಬತ್ತಲೆಯಾದಲ್ಲದೆ ಘನವ ಕಾಣಬಾರದು. ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ದೇವಿಯರೊಳಗೆ ದೇವನೆ ಕೂಡಿದ. ಹರಹರ ಮಾಯೆ[ಯ] ಘನವ ಮನವ ತನುವನಾರಿಗೆಯು ತಿಳಿಯಬಾರದು. ತಿಳಿದೆನೆಂಬೊ ಭ್ರಮಿ[ತರಿಗೆ] ಕರ ಸನ್ನಿಹಿತವಳವಡುವಳಲ್ಲ . ತಂದೆ ಅಣ್ಣ ತಮ್ಮ ಬಂಧು ಬಳಗ ಕುಲ ಆವುದೆನ್ನದೆ ಕುಲಗೆಡುವಂಥವಳಲ್ಲ. ನಮ್ಮ ಘನ ಗುರು ಅಲ್ಲಮ ಪ್ರಭುದೇವನು ಶಾಂತಿ ಸೈರಣೆ ಉಳ್ಳಂಥವಂಗೆ ತದ್ರೂಪದ ಮಹಿಮೆಯ ಉಸುರಿ ಹೇಳುವನು ನಮ್ಮ ತನಯ ಶಿವಶಾಂತ ಮೂರುತಿ ಕಾಣಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಶೀಲವಂತರು, ಶೀಲವಂತರು ಎಂದೇನೊ ? ಶೀಲವಂತಿಕೆಯನಾರು ಬಲ್ಲರು? ಶೀಲವಾದರೆ ಶಿವನೊಳು ಬೆರೆವುದೇ ಶೀಲ. ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ. ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ. ಅದಕ್ಕೆ ತುರಿಯಾತೀತ ಶೀಲವಾದರೆ, ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ. ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ, ತನ್ನ ತನಗೆ ಕಾಯಕೃತ್ಯವಲ್ಲದೆ, ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ, ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಘನವ ಕಂಡೆ, ಅನುವ ಕಂಡೆ, ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ. ಅರಿವರಿದು ಮರಹ ಮರೆದೆ. ಕುರುಹಿನ ಮೋಹ ಮೊರೆಗೆಡದೆ ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.
--------------
ಅಕ್ಕಮಹಾದೇವಿ
ಇನ್ನಷ್ಟು ... -->