ಅಥವಾ

ಒಟ್ಟು 12 ಕಡೆಗಳಲ್ಲಿ , 11 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ. ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಆರು ಗುಣವೆಂಬೊ ಅರಿಕೆಯನೈದೆವೆಂಬ ಅರುಹಿರಿಯರು ನೀವು ಕೇಳಿರೋ. ಅರುವೆಂಬುದನೆ ಅರಿದು, ಮರಬೆಂಬುದನೆ ಮರದು, ಪರಶಿವಗುರುಮೂರ್ತಿಯೆಂದು ಗುರುವ ಕೊಂಡಾಡುತ್ತ ಆ ಗುರುಮೂರ್ತಿ ಗುರುದೀಕ್ಷವನೆ ಶಿರದಮೇಲಿಹ ಹಸ್ತವನು ಆ ತತ್‍ಕ್ಷಣದಲ್ಲಿ ಕಾರುಣ್ಯದಿಂದಲಿ ಪರಮಪ್ರಸಾದವ ಸಾರಾಯವ ಕೊಂಡದನು ಅರಿತು, ಮನದಲ್ಲಿ ಆಧಾರಚಕ್ರವಂ ಬಲಿದು ಇಡಾ ಪಿಂಗಳ ಸುಷುಮ್ನವೆಂಬ ಸಂದೇಹವನಳಿದು, ಏಕನಾಳವ ಕೂಡುತ್ತ ಮೂರುಪುರದ ಬಾಗಿಲಂಗಳ ಪೊಕ್ಕು ಪರಮಪ್ರಸಾದವ ಕೊಡುತಿರ್ದ ಘನಲಿಂಗವ ಕೊಡಬಲ್ಲರೆ ಅದೇ ಅರುವು ಹಿರಿಯತನ. ಇದನರಿಯದೆ ಅರುಹಿರಿಯರೆಂದು ತಿರುಗುವ ಬೂಟಕರಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ !
--------------
ಗುಹೇಶ್ವರಯ್ಯ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಅಂಗವ ಮರೆದು ಲಿಂಗವನರಿಯಬೇಕೆಂಬರು, ಕರಣಂಗಳರತು ಘನಲಿಂಗವನರಿಯಬೇಕೆಂಬರು. ಅದು ನಾನಿಕ್ಕಿದ ತಡೆ ಕೇಳಿರಣ್ಣಾ. ಆಕಾಶ ಬಯಲಾದಡೆ ಮುಗಿಲು ರೂಪ ತೋರಿ ಅಳಿವ ಪರಿಯಿನ್ನೆಂತೊ? ನಕ್ಷತ್ರ ಚಂದ್ರ ಸೂರ್ಯಾದಿಗಳು ಗ್ರಹ ಪ್ರವರ್ತನವಹ ಪರಿಯಿನ್ನೆಂತೊ? ಅವು ವಾಯುಮಯ ಆಧಾರವಾಗಿ ತೋರುತ್ತಿಹ ನೆಮ್ಮುಗೆಯ ಇರವು. ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು, ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು. ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ ಉಭಯದ ಅಬ್ಥಿಸಂದ್ಥಿಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಜ್ಞಾನಾದ್ವೈತದ ಹೆಚ್ಚುಗೆ, ಭಾವಾದ್ವೈತಕ್ಕೆ ಸಂಬಂಧವಾಗಿಹುದು. ಭಾವಾದ್ವೆ ೈತದ ಹೆಚ್ಚುಗೆ, ಕ್ರಿಯಾದ್ವೈತವ ಸಂಬಂದ್ಥಿಸಿಕೊಂಡಿಹುದು. ಕ್ರಿಯಾದ್ವೈತದ ಹೆಚ್ಚುಗೆ, ಸರ್ವಮಯವಾಗಿ ಘನಲಿಂಗವ ಗಬ್ರ್ಥೀಕರಿಸಿಕೊಂಡಿಪ್ಪುದು. ಇಂತೀ ಭೇದ. ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ, ಕ್ರೀಯಿಂದ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಪರಸ್ತ್ರೀಯರ ನೋಡುವ ಕಣ್ಣು, ಲಿಂಗವ ನೋಡಿದ ಅವರಿಗೆ ಲಿಂಗವಿಲ್ಲ. ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ, ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ, ತಾ ಮಾಡುವ ಪೂಜೆ ನಿಷ್ಫಲ. ಇದರಿದಡೆ ವ್ರತ. ಅಲ್ಲದಿರ್ದಡೆ, ಸುರೆಯ ಒಳಗೆ ತುಂಬಿ, ಹೊರಗೆ ಬೂದಿಯ ಪೂಸಿದಂತಾಯಿತ್ತು, ಕಲಿದೇವಾ.
--------------
ಮಡಿವಾಳ ಮಾಚಿದೇವ
ಅರ್ತಿ ಅಭ್ಯಾಸ ಮಚ್ಚು ಕಾರಣದಿಂದ ಮಾಡುವ ಭಕ್ತಿ , ದ್ರವ್ಯದ ಕೇಡಾಯಿತ್ತು. ಮನ ನೆಮ್ಮಿದ ಅರ್ತಿ, ಘನವ ನೆಮ್ಮಿದ ಅಭ್ಯಾಸ, ಎಡೆಬಿಡುವಿಲ್ಲದ ಮಚ್ಚು, ಘನಲಿಂಗವ ಕೂಡುವುದೊಂದಚ್ಚು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಸುಚಿತ್ತದ ಗೊತ್ತು.
--------------
ಶಿವಲೆಂಕ ಮಂಚಣ್ಣ
ಆರು ಕಂಬದ ದೇಗುಲದೊಳಗೆ ಮೂರು ಬಾಗಿಲ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಘನಲಿಂಗವ ಕಂಡೆನಯ್ಯ. ಆ ಘನಲಿಂಗದ ಸಂಗದಿಂದ ನಿರಂಜನದೇಶಕ್ಕೆ ಹೋಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿನ ಮಧ್ಯದಲ್ಲಿ ಹೂಳಿರ್ದ ಇಷ್ಟಲಿಂಗದಲ್ಲಿ ತನುವನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಮನದ ಮಧ್ಯದಲ್ಲಿ ಹೂಳಿರ್ದ ಪ್ರಾಣಲಿಂಗದಲ್ಲಿ ಮನವ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಜೀವನ ಮಧ್ಯದಲ್ಲಿ ಹೂಳಿರ್ದ ಭಾವಲಿಂಗದಲ್ಲಿ ಜೀವನ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಇಂತೀ ಅನುಭಾವದ ಅನುವನರಿಯದೆ ತನುವಿನ ಕೈಯಲ್ಲಿ ಘನಲಿಂಗವ ಹಿಡಿದಿರ್ದಡೇನು ಅದು ಹುಟ್ಟುಗುರುಡನ ಕೈಯ್ಯ ಕನ್ನಡಿಯ ಕೊಟ್ಚಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕುರುಹ ಕೊಡುವಲ್ಲಿ ಗುರುವಾಗಿ, ವೇಷವ ತೊಟ್ಟು ತಿರುಗುವಲ್ಲಿ ಚರವಾಗಿ, ಭಾಷೆಯ ತೊಟ್ಟು ಮಾಡುವಲ್ಲಿ ಭಕ್ತನಾಗಿ, ಈ ತ್ರಿವಿಧದಾಟ ಇದರ ಭೇದ. ಘನಲಿಂಗವ ಕೂಡಿಹೆನೆಂಬ ಕೂಟದ ಭೇದ. ಎತ್ತ ಸುತ್ತಿ ಬಂದಡೂ ವಂಕದ ತಪ್ಪಲಿನಲ್ಲಿ ಹೋಗಬೇಕು. ಇದು ನಿಶ್ಚಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ, ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ. ವ್ರತಶೀಲಾಚಾರದ ಸ್ವರೂಪವನರಿಯದ, ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ. ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು, ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ ಘನಲಿಂಗವ ಬೆರಸಬಲ್ಲಡೆ ಅದು ಶೀಲ. ಮನದ ತನುವ ಮಹಾಘನದರುವಿನಲ್ಲಿಗೆ ತಂದು ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ ಬೆರಸಬಲ್ಲಡೆ ಅದು ವ್ರತ. ಸದಾಚಾರ ನಿಯತಾಚಾರ, ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ. ವ್ರತ ಶೀಲಾಚಾರದ ಅನುವನರಿಯದೆ, ಘನ ಶರಣರ ಬೆರಸದೆ, ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ ತಮ ತಮಗೆ ಅರಿದೆಹೆನೆಂಬವರೆಲ್ಲರೂ ಅನುಮಾವನನರಿಯದೆ ಕೆಟ್ಟರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ. ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
-->