ಅಥವಾ

ಒಟ್ಟು 21 ಕಡೆಗಳಲ್ಲಿ , 12 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಸ್ಥಲವಿವರಂಗಳ ವಿಚಾರಿಸುವಲ್ಲಿ ಘಟಕ್ಕೆ ಕರ ಚರಣ ನಾಸಿಕ ನಯನ ಕರ್ಣ ಮುಂತಾದ ಅವಯವಂಗಳೊಳಗಾದ ಭೇದವ ಘಟ ಗಬ್ರ್ಥೀಕರಿಸಿಕೊಂಬತೆ ಆ ಘನವ ಚೇತನ ವಸ್ತು ಹೊತ್ತಾಡುವಂತೆ, ಇದು ಸ್ಥಲವಿವರ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ, ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ. ಜ್ಞಾನವೆಂಬ ಅಗ್ನಿಯನಿಕ್ಕಿ ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದಡೆಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ? ಶಿಲ್ಪನ ಶಿಲೆ ಲೋಹ ಮೊದಲಾಗಿ ಕುರುಹುಗೊಂಡವ ದೇವತಾಕಳೆಯ ತುಂಬುವನೆ ? ಶಿಲೆ ಲೋಹ ಲಕ್ಷಣವ ನೆಲೆ ಶುದ್ಧವ ಮಾಡುವನಲ್ಲದೆ. ತಾ ಕಟ್ಟುವ ಇಷ್ಟಕ್ಕೆ ಕಟ್ಟಿಲ್ಲ, ಮೇಲೆ ರೊಕ್ಕವ ತಾಯೆಂಬವಳಂತೆ ಕಟ್ಟಿಹೋದ ಮನವ ಇಷ್ಟದಲ್ಲಿ ನೆಮ್ಮಿಸದೆ. ಇನ್ನಾರ ಕೇಳುವೆ ? ನೀ ಅಲೇಖಮಯ ಶೂನ್ಯ ಕಲ್ಲಿನ ಮರೆಯಾದೆ
--------------
ವಚನಭಂಡಾರಿ ಶಾಂತರಸ
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು, ಇಲ್ಲವೆಂದು ನುಡಿವುತ್ತಿಹರು ಆಧ್ಯಾತ್ಮಯೋಗಿಗಳು. ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ? ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ. ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ? ನಾನಾ ಸುಖಂಗಳ ಸುಖಿಸಬಲ್ಲುದೆ ? ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ, ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ. ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು. ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು. ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೈದಿಲ್ಲದವಂಗೆ ಕಾಳಗವುಂಟೆ? ಆತ್ಮನಿಲ್ಲದ ಘಟಕ್ಕೆ ಚೇತನವುಂಟೆ? ಅಜಾತನ ನೀತಿಯನರಿಯದವಂಗೆ ನಿರ್ಧರದ ಜ್ಯೋತಿರ್ಮಯವ ಬಲ್ಲನೆ? ಇಷ್ಟವನರಿಯದವನ ಮಾತಿನ ನೀತಿ ಮಡಕೆಯ ತೂತಿನ ಬೈರೆಯ ನೀರು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಯವೆಂಬ ಘಟಕ್ಕೆ ಕರಣಾದಿಗಳೆ ಸುಯಿದಾನ ಅದಕ್ಕೆ ಚೈತನ್ಯವೇ ಜಲವಾಗಿ, ಸಮತೆಯೇ ಮುಚ್ಚಳಿಕೆ, ಧೃತಿಯೆಂಬ ಸಮಿದೆ, ಮತಿಯೆಂಬ ಅಗ್ನಿಯಲುರುಹಿ, ಜ್ಞಾನವೆಂಬ ದರ್ವಿಯಲ್ಲಿ ಘಟ್ಟಿಸಿ ಪಕ್ವಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ, ಪರಿಣಾಮ[ದೋ]ಗರವ ನೀಡುವೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ. ಲಯವಹ ಘಟಕ್ಕೆ ಹಲವು ತೆರನುಂಟು. ಹಲವು ತೆರದ ಲಯವ ಬಲ್ಲಡೆ, ಬೇರೊಂದು ಕುಲಹೊಲೆಸೂತಕವೆಂಬುದುಂಟೆ ? ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ, ನಿಂದ ನಿಜವೆ ತಾನಾದವಂಗೆ ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಂಗಲಿಂಗಸಂಬಂಧವೆಲ್ಲಿಯದಯ್ಯಾ ? ಪ್ರಾಣ ಮುಟ್ಟದನ್ನಕ್ಕರ ಲಿಂಗಾರ್ಚನೆ ಯಾಕೆ ? ಪ್ರಾಣ ಮುಟ್ಟಿ ಮಾಡಿತ್ತೆ ಲಿಂಗಾರ್ಚನೆ. ಪ್ರಾಣ ಒಂದಾಗಿ ಕೊಂಬುದೆ ಪ್ರಸಾದ. ಅಳಿವ ಘಟಕ್ಕೆ ಇದೆತ್ತಣ ಲಿಂಗಸಂಬಂಧವೋ ? ಇದ ಮಾಡಿದವರಾರು ? ಇದು ಕುಟಿಲ. ಪ್ರಾಣಲಿಂಗವೆ ಗುರುಸಂಬಂಧ. ಪ್ರಾಣಪ್ರಸಾದವೆ ಗುರುಮಹತ್ವ. ತನುಮನಧನವನು ಪ್ರಾಣ ಮುಂತಾಗಿ ನಿವೇದಿಸಬಲ್ಲಡೆ ಆತನ ಘಟವು, [ಅ]ಕಾಯವು. ಪ್ರಾಣ ಮುಟ್ಟಿತ್ತೆ ಲಿಂಗಾರ್ಚನೆ. ಪ್ರಾಣ ಮುಟ್ಟದ ಭಕ್ತಿ ಸಲ್ಲದು, ಸಲ್ಲದು. ಇಂತೀ ಪ್ರಾಣ ತದ್ಗತವಾದಾತನೆ ನಿಃಸಂಸಾರಿ ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಆವಾವ ಸ್ಥಲಂಗಳನಾದರಿಸಿ ನಡೆವಲ್ಲಿ, ಆ ಘಟನೆ ಬೀಗವಾಗಿ ಎಸಳೆ ಆತ್ಮವಾಗಿ, ಅರಿವೆ ಕೈಯಾಗಿ, ಸ್ವಸ್ಥ ಘಟಕ್ಕೆ, ಸ್ವಸ್ಥ ಕೈಗಳಿಂದ ಸಿಕ್ಕು ಹರಿವುದಲ್ಲದೆ, ಮತ್ತೊಂದು ಕೈಯಿಕ್ಕಿ ತುಡುಕಿದಡೆ ಬಿಟ್ಟುದುಂಟೆ ಆ ಸಿಕ್ಕು? ಇಂತೀ ಕ್ರೀಯಲ್ಲಿ ಕ್ರೀಯ ಕಂಡು, ಭಾವದಲ್ಲಿ ಭ್ರಮೆ ಹಿಂಗಿ, ಜ್ಞಾನದಲ್ಲಿ ಸಂಚವಿಲ್ಲದೆ ನಿಂದ ನಿಲವು, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೇಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷೆ* ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋಱÂ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಮೀನಜ ರೋಮಜ ಋಷಿಯರು ಮೊದಲಾದ ಅನಂತಕೋಟಿ ಬ್ರಹ್ಮರಿಲ್ಲದಂದು, ಅಲ್ಲಿಂದತ್ತತ್ತ ಏಕೋಲಿಂಗನೊಬ್ಬನೆ ಶರಣ. ಗುರುವೆ ಪರಮಗುರುವೆ ನೀನೆ ಗತಿಯಯ್ಯಾ. ಆದಿಕುಳಕ್ಕೆ ಮೂಲಿಗನಾಗಿ ಸುಳುಹ ತೋರಿ ಪಾವನವ ಮಾಡಬಂದೆ ಬಹುಮುಖ ಜೀವಿಗಳಿಗೆ ಬಹುಮುಖ ಪ್ರಸಾದವ ತೋರಿದೆಯಯ್ಯಾ ಭುವನವ ಸಲಹಲೆಂದು ಆದಿಯ ಲಿಂಗವ ಅನಾದಿಯ ಶರಣನ ಕೈಯಲಿ ಕೊಟ್ಟಿರಿ. ಆ ಲಿಂಗವನು ನೀ ಪುಟ್ಟಿಸಿದ ಘಟಕ್ಕೆ ಕಾರುಣ್ಯವ ಮಾಡಿ ಸಲಹಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹೆಂಡದ ಹರವಿಗೆ ಹಾಲಹರವಿಯ ಹೋಲಿಸಿದರೆ, ಆ ಹೆಂಡದ ಹರವಿ ಹಾಲಹರವಿಯಾಗಬಲ್ಲುದೆ ? ಮದ್ಯಪಾನದ ಘಟಕ್ಕೆ ಘೃತದಘಟ ಹೋಲಿಸಿದರೆ ಆ ಮದ್ಯಪಾನದ ಘಟ ಘೃತಘಟವಾಗಬಲ್ಲುದೆ ? ಆಡಿನ ಕೊರಳಮೊಲೆಗೆ ಆಕಳಮೊಲೆಯ ಹೋಲಿಸಿದರೆ ಆ ಆಡಿನ ಕೊರಳ ಮೊಲೆ ಆಕಳ ಮೊಲೆಯಾಗಬಲ್ಲುದೆ ? ಗುಲಗಂಜಿಗೆ ಮಾಣಿಕವ ಹೋಲಿಸಿದರೆ ಆ ಗುಲಗಂಜಿ ಮಾಣಿಕವಾಗಬಲ್ಲುದೆ ? ವಜ್ರದ ಪಾಷಾಣಕ್ಕೆ ರಂಗೋಲಿಯಕಲ್ಲು ಹೋಲಿಸಿದರೆ, ಆ ರಂಗೋಲಿಯಕಲ್ಲು ವಜ್ರವಾಗಬಲ್ಲುದೆ ? ಬಿಳಿಹೂಲಿಗೆ ಮೌಕ್ತಿಕವ ಹೋಲಿಸಿದರೆ ಆ ಬಿಳಿಹೂಲಿಯ ಹಣ್ಣು ಮುತ್ತಾಗಬಲ್ಲುದೆ ? ಇಂತೀ ದೃಷ್ಟಾಂತದಂತೆ ಲೋಕಮಧ್ಯದಲ್ಲಿ ಜೀವಾತ್ಮರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಹಾಗೆ ಸುಜ್ಞಾನೋದಯವಾಗಿ- ಶ್ರೀಗುರುಕಾರುಣ್ಯದಿಂ ಸರ್ವಾಂಗಲಿಂಗಸಂಬಂಧಿಗಳಾದ ಶಿವಶರಣರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಇದು ಕಾರಣ ಅಂತಪ್ಪ ಭಿನ್ನಜ್ಞಾನಿಗಳಾದ ಜೀವಾತ್ಮರಿಗೆ ಸುಜ್ಞಾನಿಗಳಾದ ಶಿವಶರಣರ ಹೋಲಿಸಿದರೆ ಆ ಕಡುಪಾತಕಿ ಜಡಜೀವಿಗಳು ಶಿವಜ್ಞಾನಸಂಪನ್ನರಾದ ಶರಣಜನಂಗಳಾಗಬಲ್ಲರೆ ? ಆಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಸ್ಥಲವೆಂದು ನುಡಿವರು, ಅನಾದಿಸ್ಥಲವೆಂದು ನುಡಿವರು, ಆದಿಗೆ ಒಡಲುಂಟು, ಅನಾದಿಗೆ ಒಡಲಿಲ್ಲ. ನ ಚ ಭೂಮಿರ್ನ ಚ ಜಲಂ ನ ಚ ತೇಜೋ ನ ಚ ವಾಯುಃ ನ ಚಾಕಾಶಃ ಇವೆಲ್ಲವೂ ಘಟಕ್ಕೆ ಸಂಬಂಧವಾಗಿ ಘಟ ಕೆಡುವುದು. ಇಂಥ ನಿರ್ದೇಹಿ ಶರಣಂಗಲ್ಲದೆ ಅರಿಯಬಾರದು, ಕೂಡಲಚೆನ್ನಸಂಗಯ್ಯಾ
--------------
ಚನ್ನಬಸವಣ್ಣ
ಇನ್ನಷ್ಟು ... -->