ಅಥವಾ

ಒಟ್ಟು 8 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತು ಮಾತಿನ ತೂತಜ್ಞಾನಿಗಳಿಗೆತ್ತಣ ಶರಣಸ್ಥಲವಯ್ಯಾ? ಸೋತು ನಡೆಯರು ಗುರುಹಿರಿಯರಿಗೆ ಖ್ಯಾತಿಯ ಮುಂದಿಟ್ಟು ಮಲತ್ರಯದಾಸೆಯೊಳು ಮುಳುಗಿ. ಇತರರ್ಗೆ ನೀತಿ ನೂತನದಿಂದೆ ಜರಿದು ತನ್ನನರಿಯದೆ ಭಿನ್ನವಿಟಟು ಮನಗೂಡಿ ಚರಿಸುವ ಶುನಕರು ಶರಣರೆಂದರೆ ಸರಿಯಪ್ಪುದೆ? ನಾಚಿಕೆಯಿಲ್ಲದ ನಾಡಭೂತಗಳನೆನಗೊಮ್ಮೆ ತೋರದಿರಯ್ಯಾ ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾತಿನ ವೈರಕ್ಕೆ ಹೋತುವಾಗದೆ, ಖ್ಯಾತಿಯ ಲಾಭಕ್ಕೆ ಮಾಟಕೂಟವಾಗದೆ ವಾಸಿಯ ಮಾತಿಗೆ ನಾಸಿಕವನರಿದುಕೊಳ್ಳದೆ, ವೇಸಿಯ ಕೂಸಿಗಾಗಿ ಸತಿಪುತ್ರರ ಘಾಸಿಮಾಡದೆ, ಕಿಂಚಿತ್ತು ತೂತಿಗಾಗಿ ಆತನ ಬಿಡದಿರು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆಗಮಂಗಳ ಶೋಧಿಸಿ ಮಾತಿನ ನೀತಿಯ ಹೇಳುವರೆಲ್ಲರು ಹಿರಿಯರೆ? ಖ್ಯಾತಿಯ ಘಟಧರ್ಮಕ್ಕೆ ಮಾಡುವರೆಲ್ಲರು ಭಕ್ತರೆ? ವೇಷವ ಬಿಟ್ಟು ಮೈವಾಸನವನೊಲ್ಲದೆ ವೇಷದಲ್ಲಿ ತಿರುಗುವ ವಿರಕ್ತರೆಂದು ಮತ್ತೆ, ಭವಪಾಶದಲ್ಲಿ ಬೀಳುತ್ತಿಹ ಪಾಷಂಡಿಗಳಿಗೇಕೆ ಸತ್ಪಥನೀತಿ? ಇಂತೀ ತ್ರಿವಿಧವ ನೇತಿಗಳೆದಲ್ಲದೆ ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ? ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ? ಖ್ಯಾತಿಯ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ? ಇಂತಿವನರಿದು ಮಾಡುವ ಭಕ್ತರು ಆಪ್ಯಾಯನಕ್ಕೆ ಅನ್ನ ಅಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು ಈ ತ್ರಿವಧಕುಚಿತವೆಂದವರನರಿಯಬೇಕು. ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ ನೇಮವ ನೋಡಾ ! ಊರಿಗೆ ಬಲುಗಯ್ಯ ಬಂದುಣ್ಣಬೇಕೆಂದು ದಾರಿದಾರಿಯ ಕಾಯ್ದು ಮತ್ತಾರನು ಏನೆಂದರಿಯದೆ. ಮತ್ತಾರು ಆರೈಕೆಗೊಂಡಡೆ ದೇವರೆಂದು, ಬಂದವರ ದಾರಿಗರೆಂದು ಕಾಣುತ್ತ ಇಂತೀ ಗಾರಾದ ಮನಕ್ಕೆ ಇನ್ನಾರು ಹೇಳುವರಯ್ಯಾ ! ಮುಂದೆ ಬಸುರಾಗಿ ಹೆರುವಾಗ ಊರೆಲ್ಲರು ಅವಳಂಗವ ಕಂಡಂತೆ ಜಗಭಂಡ ಶೀಲವಂತನಾಗಿ, ತನ್ನ ಕೊಂಡಾಡುವ ಸತ್ತ ಮತ್ತೆ ಮೂರು ಹೆಂಡಗುಡಿ ಹೇಯಶೀಲ ಕಂಡವರಿಗೆ ನಗೆಯಾಯಿತ್ತು ಇದರಂದಕಂಜಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಕಂಡೂ ಕಾಣದಂತಿದ್ದ.
--------------
ಅಕ್ಕಮ್ಮ
ಸಾಸಿರ ನೋಂಪಿಯ ನೋ[ಂ]ತು, ನೂಲೆಳೆಯ ಹರಿದಂತಾಯಿತ್ತೆನ್ನ ಭಕ್ತಿ. ಭಾವದಲ್ಲಿ ಬಲಿಕೆಯಿಲ್ಲ, ಜ್ಞಾನದಲ್ಲಿ ಶುದ್ಧವಿಲ್ಲ. ಮಾಟದಲ್ಲಿ ಕೂಟವಿಲ್ಲ, ಈ ವ್ಯವಹಾರ ಸಾಕು. ಖ್ಯಾತಿಯ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾತಿನ ಮಾಲೆ ಎಷ್ಟಾದಡೆಯೂ ಉಂಟು. ಖ್ಯಾತಿಯ ಮಾಟ ಜಗದೊಳಗೆ ಎಷ್ಟಾದಡೂ ಉಂಟು. ಜಗದೀಶನನರಿವ ಆತನಿದ್ದ ಠಾವೇ, ಭಾಸುರತೇಜಪ್ರಕಾಶ, ಅದರಿಂದಾಚೆಯ ಮಾತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೋಳಿಗೇಕೊ ತ್ರಿಭಸ್ಮಸುರೇಖೆ ? ಗುರುವಿಗೇಕೊ ಕೊನರು ? ಜಂಗಮಕ್ಕೇಕೊ ಭರವಶ ? ಲಿಂಗಕ್ಕೇಕೊ ಮುನ್ನೀರು ? ಭಕ್ತಂಗೇಕೊ ಖ್ಯಾತಿಯ ಲಾಭ ? ಇಂತಿವರು ತಾಳಬಿಟ್ಟು ಕುರಸವ ಕೊಂಡು, ದಡಿಗಿಡಾಗಿ ಹೊಡೆಯಿಸಿಕೊಳಬೇಡ. ಮುಂದೆ ಮೇಲಣವರುಹ ನೋಡಿ, ಬದುಕೆಂದನು ಮಾಚಯ್ಯ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
-->