ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು. ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ ಅವರವರಲ್ಲಿ ಅವ ಬೆರಸಿದಡೆ ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೇಶ. ಆನೆಯ ಮಾನದಲ್ಲಿ ಇರಿಸಬಹುದೆ? ಕಿರಿದು ಘನದಲ್ಲಿ ಅಡಗುವುದಲ್ಲದೆ ಘನ ಕಿರಿದಿನಲ್ಲಿ ಅಡಗುವುದೆ? ಅಮೃತದ ಕೆಲದಲ್ಲಿ ಅಂಬಲಿಯುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಮತ್ತಂ, ಅಲ್ಲಿಂದ ಲಿಂಗಮೂರ್ತಿಯ ಕರಸ್ಥಲಕ್ಕೆ ಬಿಜಯಂಗೈಸುವ ವಿವರ : ಲಿಂಗಮಸ್ತಕದಲ್ಲಿ ಅಂಗುಷ*ವನ್ನಿಟ್ಟು, ಆಧಾರದಲ್ಲಿ ಅನಾಮಿಕ ಮಧ್ಯಾಂಗುಲವ ಮಡುಗಿ, ಕನಿಷ*ತರ್ಜನಿಗಳ ಎಡಬಲಕೆ ನಿಲ್ಲಿಸಿ, ಲಿಂಗಮೂರ್ತಿಯ ಸಾವಧಾನಭಕ್ತಿಗಳಿಂದ ವಾಮಕರಸ್ಥಲ ಪಾಣಿತಾಣಕ್ಕೆ ಬಿಜಯಂಗೈಸಿ, ಆ ಲಿಂಗದೇವನ ಸಮರಸಾನಂದ ನಿಜಾನುಭಾವದಿಂದ ಹನ್ನೆರಡುವೇಳೆ ಜಿಹ್ವೆಪ್ರಕ್ಷಾಲನಂಗೆಯ್ಸಿ, ದ್ವಾದಶಾಂಗುಲ ಅಷ್ಟಾಂಗುಲ ಷಡಂಗುಲದೊಳಗೆ ಮಧುರ ಒಗರು ಖಾರ ಆಮ್ಲ ಕಹಿ ಮೊದಲಾದ ಕಾಷ*ದೊಳಗೆ ಅಯೋಗ್ಯವಾದ ಶುಷ್ಕಕಾಷ*ವಂ ಬಿಟ್ಟು, ಯೋಗ್ಯವಾದಂಥಾದ್ದರೊಳಗೆ ದೊರೆದಂಥಾದ್ದೊಂದು ಕಾಷ*ವನು ಆ ಪಾದೋದಕಸ್ಪರಿಶನದಿಂದೆ ಪವಿತ್ರವೆನಿಸಿ, ಜಂಗಮಕ್ಕೆ ಕೊಟ್ಟು ತಾ ಕೊಂಡಂಥಾದ್ದೆ ಪ್ರಸಾದವೆನಿಸುವುದು. ಆ ಪ್ರಸಾದವನ್ನು ಲಿಂಗಸ್ಪರಿಶನದಿಂದೆ ದಂತಪಂಕ್ತಿಗಳ ತೀಡಿ, ಹಸ್ತಾಂಗುಲಿ ಪಾದಾಂಗುಲಿಗಳಂ ತೀಡಿದ ಮೇಲೆ ಒಡೆದು ಎರಡು ಭಾಗವ ಮಾಡಿ ಜಿಹ್ವೆಯ ಪವಿತ್ರವಾಗಿ ಹೆರೆದು, ಆ ನಿರ್ಮಾಲ್ಯವ ನಿಕ್ಷೇಪಸ್ಥಲದಲ್ಲಿ ಹಾಕಿ, ಮುಖಮಜ್ಜನವ ಮಾಡಿ, ಬಚ್ಚಬರಿಯಾನಂದಲೋಲಾಬ್ಧಿಯಲ್ಲಿರ್ಪುದೆ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಗುರುಮಾರ್ಗಾಚಾರ ಸತ್ಕ್ರಿಯಾಭಕ್ತಿಜ್ಞಾನವೈರಾಗ್ಯ ಷಟ್ಸ್ಥಲಮಾರ್ಗವಿಡಿದು ಆಚರಿಸುವ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಸ್ವಯಚರಪರಮೂರ್ತಿಗಳು ಮೊದಲಾಗಿ ಲಿಂಗಾರ್ಚನೆಯ ವೇಳೆ ತ್ರಿಕಾಲಂಗಳಲ್ಲಿ ದಂತಪಙÂ್ತಚೇತನ ಪರಿಯಂತರ ಮಧುರ ಒಗರು ಖಾರ ಆಮ್ಲ ಕಹಿಯುಕ್ತವಾದ ಕಾಷ*ದೊಳಗೆ ಅರ್ಪಿತಕ್ಕೆ ಅಯೋಗ್ಯವಾದುದನುಳಿದು, ಯೋಗ್ಯವಾದ ಕಾಷ*ವ ದ್ವಾದಶಾಂಗುಲವಾದಡೂ ಸರಿಯೆ, ಅಷ್ಟಾಂಗುಲವಾದಡೂ ಸರಿಯೆ, ಮೀರಿದಡೆ ಷಡಂಗುಲದಿಂದಾಗಲಿ ದಂತಧಾವನ ಕ್ರಿಯೆಗಳ ಮಾಡುವದು. ದಂತಪಙÂ್ತಯ ಚೇತನ ತಪ್ಪಿದಲ್ಲಿ ಪರ್ಣದಿಂದಾಗಲಿ, ಗುರುಪಾದೊದಕಮಿಶ್ರವಾದ ವಿಭೂತಿಯಿಂದಲಾ[ಗಲಿ] ದಂತಪಙÂ್ತಯ ತೀಡಿ, ಮುಖಸ್ನಾನವ ಮಾಡಿ, ಲಿಂಗಾರ್ಚನೆ ಲಿಂಗಾರ್ಪಣವ ಮಾಡಬೇಕಲ್ಲದೆ ಇಂತು ಗುರುವಾಕ್ಯವ ಮೀರಿ, ಸಂಸಾರಲಂಪಟದಿಂದ ಹಾಂಗೆ ಭುಂಜಿಸುವಾತಂಗೆ ಪ್ರಸಾದಿಸ್ಥಲ ಮೊದಲು, ಪರಸ್ಥಲ ಕಡೆಯಾಗಿ ಪಿಂಡಾದಿ ಜ್ಞಾನಶೂನ್ಯಸ್ಥಲಕ್ಕೆ ಹೊರಗು ನೋಡ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು. ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು. ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು. ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ ಮುಂತಾಗಿ ಸ್ವಾದಿಸಬೇಕು. ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು. ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ, ಸರ್ವವಾದ್ಯದಲ್ಲಿ ಅಡಗಿದ ನಾದದಂತೆ, ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ. ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ.
--------------
ಅವಸರದ ರೇಕಣ್ಣ
ವೇದವ ಗ್ರಹಿಸಿದೆನೆಂದು ಕರ್ಮವ ಬಿಡಬಹುದೆ? ಸಕಲಶಾಸ್ತ್ರವ ವೇದಿಸಿದೆನೆಂದು ಪಾಪಪುಣ್ಯವಿಲ್ಲಾ ಎಂದು ನಡೆಯಬಹುದೆ? ಪುರಾಣದ ಪೂರ್ವವ ಬಲ್ಲೆನೆಂದು ನೆಲೆ ಹೊಲೆ ಕುಲ ಛಲ ಒಂದೆನ್ನಬಹುದೆ? ಮಧುರ ಖಾರ ಕಹಿಯನರಿವನ್ನಕ್ಕ ಕ್ರೀ ಹೇಗೆ ಇದ್ದಿತ್ತು, ವರ್ತನಶುದ್ಧ ಹಾಗಿರಬೇಕು, ಸದ್ಯೋಜಾತಲಿಂಗವನರಿವುದಕ್ಕೆ ಭಕ್ತಿಮಾರ್ಗ.
--------------
ಅವಸರದ ರೇಕಣ್ಣ
-->