ಅಥವಾ

ಒಟ್ಟು 178 ಕಡೆಗಳಲ್ಲಿ , 55 ವಚನಕಾರರು , 169 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು, ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ, ನೋಡುವ ಕರಣಂಗಳು ಮೆಚ್ಚುವಂತೆ ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ, ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ, ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು, ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ.
--------------
ಸಗರದ ಬೊಮ್ಮಣ್ಣ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ಸೂರ್ಯನ ಉದಯ ತಾವರೆಗೆ ಜೀವಾಳ, ಚಂದ್ರಮನುದಯ ನೆ್ದುಲೆಗೆ ಜೀವಾಳ. ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ, ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ. ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ. 367
--------------
ಬಸವಣ್ಣ
ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ, ಭಾವಲಿಂಗದ ಸಮರಸವ ಬಲ್ಲವರಾರೊ ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ. ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. 66 ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ. ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ. ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ. ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ. ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ. ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ. ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ. ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ. ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು, ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು, ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು. ಪ್ರಕೃತಿಯೋಗವಂ ಮಾಡುವ ನರಸುರಾಸುರರು ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು. ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ ಸರ್ವಯೋಗಂಗಳು ತೃಣಮಾತ್ರವು_ಗುಹೇಶ್ವರಲಿಂಗವನರಿದರಾಗಿ.
--------------
ಅಲ್ಲಮಪ್ರಭುದೇವರು
ಅರಿದೆನು, ನಾನೇನ ಅರಿವಡೆ ಶೂನ್ಯನೆ ತೆರಹಿಲ್ಲದೊಂದು ಶುದ್ಧಘನತರವನು ನೆನಹಿನ ಮನೆಯಾಗಿ ಅವನ ನೋಟವೆ ಕೂಟ ಅವನೆನ್ನ ಕಾಯಕ್ಕೆ ಪ್ರಾಣನಾಗಿ ಪ್ರಾಣಪ್ರತಿಷ್ಠೆಯನು ತಾನು ಮಾಡುವ ರೂಪ ಶೂನ್ಯಕಾಯರು ಕಾಣಬಲ್ಲರೆ ಕಪಿಲಸಿದ್ಧಮಲ್ಲೇಶ್ವರನ?
--------------
ಸಿದ್ಧರಾಮೇಶ್ವರ
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು, ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು, ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ ಅಯಿದರಾಟಿ, ಆರರ ಕೂಟ, ಏಳರ ಬೇಟ, ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು. ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು. ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ.
--------------
ಶಿವಲೆಂಕ ಮಂಚಣ್ಣ
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ನಲ್ಲನ ನೋಟದ ಬೇಟದ ಕೂಟದ ಪರಿಯ ನಾನೇನೆಂದು ಹೇಳುವೆ? ವಿಪರೀತ ಕೆಳದಿ. ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ ಬೇಟ ಬೇರುಂಟೆ? ಹೇಳು ಅವ್ವಾ. ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು? ಹೇಳಾ ಅವ್ವಾ. ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
--------------
ಸಿದ್ಧರಾಮೇಶ್ವರ
ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ, ಸಕಲಸುಖಭೋಗಂಗಳ ಹಿಡಿವಲ್ಲಿ, ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ, ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
--------------
ಏಲೇಶ್ವರ ಕೇತಯ್ಯ
ಮಾಟದಿಂದ ಮಾಡಿ ಕಂಡೆಹೆನೆಂಬವರೆಲ್ಲರು ಸ್ಥೂಲ ಸೂಕ್ಷ್ಮ ಅಧಮವೆಂದರಸಿ ಕೆಟ್ಟರು. ಅರಿದೆಹೆನೆಂದು ತಿರುಗಾಡುವರೆಲ್ಲರು ಕಂಗಳ ನೋಟ ಕಾಮನ ಕೂಟ, ಅಂಗದ ಸುಖಕ್ಕಾಗಿ ಕೆಟ್ಟರು. ಲಿಂಗವ ಪೂಜಿಸುವರೆಲ್ಲರು ಆ ಲಿಂಗದ ಅರ್ಚನೆಯನರಿಯದೆ, ಲಿಂಗದ ಅರ್ಪಿತವನರಿಯದೆ, ನೀರು ಓಗರವೆಂಬ ರೋಗದಲ್ಲಿ ಸತ್ತರು. ಇಂತೀ ಭೇದವನರಿದಲ್ಲಿ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಲಿಗೆ ಕೋಳ, ಕೈಗೆ ಸಂಕಲೆ, ಕೊರಳಿಗೆ ಪಾಶ ಪಾಷಂಡಿಗಳಾಗುತ್ತ, ಮತ್ತಾ ಅರಿವಿನ ಹೊಲಬೆಲ್ಲ ಅಡಗಿತ್ತು. ಅಂಗದ ಕ್ರೀ, ಲಿಂಗದ ಕೂಟ, ನಿರಂಗದ ಸುಖವೆಂಬುದು ಆ ಮೂರರ ಬಂಧದಲ್ಲಿ ಅಡಗಿತ್ತು. ಬೇರೊಂದು ಸಂಗವೆಲ್ಲಿದ್ದಿತ್ತು ಹೇಳಾ ? ನಿರಂಗವೆಂಬ ನಾಮವಿಲ್ಲದನೆ ಕಾಮಕ್ಕೇಕೆ ಕೂಟವಾದೆ ? ದುರ್ಮುಖಕ್ಕೇಕೆ ಆತ್ಮನಾದೆ ? ಕಾಮಧೂಮ ಧೂಳೇಶ್ವರನೆಂಬುದಕ್ಕೆ ಕುರುಹಿಲ್ಲದ ನೆರೆ ನಾಮವಾದೆಯಲ್ಲಾ.
--------------
ಮಾದಾರ ಧೂಳಯ್ಯ
ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ, ಶ್ರದ್ಥೆಯಿಲ್ಲದ ಕೂಟ, ಶಿವಲಿಂಗಾರ್ಚನೆಯಿಲ್ಲದವನ ಹೃದಯ ನಂದಿಸಿದ ಕಜ್ಜಳದಂತೆ. ಆ ಸಂದೇಹವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ? ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ. ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಢಿಯ ಕೂಟ ಸಮನಿಸದು ಕೇಳಾ.
--------------
ಮುಕ್ತಾಯಕ್ಕ
ಇನ್ನಷ್ಟು ... -->