ಅಥವಾ

ಒಟ್ಟು 206 ಕಡೆಗಳಲ್ಲಿ , 37 ವಚನಕಾರರು , 154 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ. ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ, ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ, ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ, ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ? ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ, ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ? ಇವರೆಲ್ಲರನೊಲ್ಲೆನೆಂದೆ, ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೂರು ಲೋಕದವರ ನಿದ್ರಾಂಗನೆ ಹೀರಿ ಹಿಂಡಿ ಪ್ರಾಣಕಾರ್ಪಣ್ಯವ ಮಾಡಿ ತಟ್ಟುಗೆಡಹಿದಳು. ಇವಳ ಗೆಲುವವರ ಆರನೂ ಕಾಣೆ, ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತ ಐದಾರೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಣ್ಣ ಕೊಟ್ಟು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ಮಣ್ಣಿನ ಪುಣ್ಯ ಮುಕ್ಕಣ್ಣನ ಮುಖಕ್ಕೆ ಬಂತ್ತು. ನೀರನೆರೆದು ಪುಣ್ಯವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ನೀರಿನ ಪುಣ್ಯ ನಿರಂಜನನ ಮುಖಕ್ಕೆ ನಿಮಿರಿತ್ತು. ಜ್ಯೋತಿಯ ಬೆಳಗಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. [ಜೋತಿಯ ಪುಣ್ಯ.... ದೀಪದ.... ಮುಖಕ್ಕೆ ಹೊಯಿತ್ತು.] [ಚಾಮರವ ಬೀಸಿ ಪಾಪವ ಕಳೆವೆನೆಂಬವನ ಭಾಷೆ ಹೊಲ್ಲ ಹೊಲ್ಲ.] ಚಾಮರದ ಪುಣ್ಯ ಚಾಮರಾದ್ಥೀಶನ ಮುಖಕ್ಕೆ ಅಮರಗೊಂಡಿತ್ತು. ದೇವಾಲಯವ ಕಟ್ಟಿ ದೇವತ್ವವ ಪಡೆವೆನೆಂಬವನ ಭಾಷೆ ಹೊಲ್ಲ ಹೊಲ್ಲ. ದೇವಾಲಯದ ಪುಣ್ಯ ಅಧೋಮುಖಂಗೆ ಸೇರಿತ್ತು. ಕೊಟ್ಟ ಭಕ್ತನಾರನೂ ಕಾಣೆ, ಕೈಕೊಂಡ ಜಂಗಮನಾದರೂ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ. ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚುವ ಕೆಡಿಸುವವರನಾರನೂ ಕಾಣೆನಯ್ಯಾ. ಆದ್ಯರ ವೇದ್ಯರ ವಚನಂಗಳಿಂದ ಅರಿದೆವೆಂಬವರು ಅರಿಯಲಾರರು ನೋಡಾ. ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು. ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು. ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು. ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು. ಅಮುಗೇಶ್ವರಲಿಂಗವ ನಾನೆ ಅರಿಯಬೇಕು.
--------------
ಅಮುಗೆ ರಾಯಮ್ಮ
ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ, ತೇಜಸ್ತತ್ವ ಅರಿವುಭೇದವಾಗಿ, ಇಂತೀ ತ್ರಿವಿಧಭೇದ ವರ್ತುಳ ಗೋಮುಖ ಗೋಳಕಾಕಾರ ಕೂಡಿ ಲಿಂಗವಾದಲ್ಲಿ, ಈಶ್ವರತತ್ವ ವಾಯುಭೇದವಾಗಿ, ಸದಾಶಿವತತ್ವ ಆಕಾಶಭೇದವಾಗಿ, ಉಭಯ ಏಕವಾಗಿ, ಅಗ್ನಿತತ್ವ ಕೂಡಲಿಕ್ಕೆ ಆ ತ್ರಿವಿಧ ಏಕವಾಗಿ, ಅಪ್ಪುತತ್ವವ ಕೂಡಲಿಕ್ಕೆ ಆ ಚತುರ್ಭಾವ ಏಕವಾಗಿ, ಪೃಥ್ವಿತತ್ವ ಕೂಡಲಾಗಿ, ಉತ್ಪತ್ಯವೆಲ್ಲಿ ಅಡಗಿತ್ತು ? ಸ್ಥಿತಿಯೆಲ್ಲಿ ನಡೆಯಿತ್ತು ? ಲಯವೆಲ್ಲಿ ಸತ್ತಿತ್ತು ? ಲಿಂಗ ಮಧ್ಯ ಸಚರಾಚರವೆಂದಲ್ಲಿ, ಕಂಡು ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ: ಜಂಗಮದ ಪಾದೋದಕ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಜಂಗಮದ ಕುಂದು ನಿಂದೆಯ ಕೇಳಬಾರದು. ಜಂಗಮಪ್ರಸಾದವ ಲಿಂಗಕ್ಕೆ ಕೊಡುವಲ್ಲಿ ಅರ್ಥ ಪ್ರಾಣ ಅಬ್ಥಿಮಾನವ ಮುಟ್ಟಿದಲ್ಲಿ ಚಿತ್ತದಲ್ಲಿ ಹೆಚ್ಚು ಕುಂದು ತೋರಿದಾಗಲೆ ಪ್ರಸಾದಕ್ಕೆ ದೂರ. ಇದು ಕಾರಣ, ದೇಹಭಾವವಳಿದವಂಗಲ್ಲದೆ ಪಾದೋದಕ ಪ್ರಸಾದವಿಲ್ಲಾ ಎಂದೆ. ವಿಶ್ವಾಸವುಂಟಾದಲ್ಲಿ ಕುರುಹಿನ ಮುದ್ರೆಯ ಬಯಕೆ ಉಂಟೆ ಅಯ್ಯಾ? ಅವಿಶ್ವಾಸವುಳ್ಳವಂಗೆ ಗುರುಚರದ ಮಾರ್ಗವಿಲ್ಲಾಯೆಂದೆ. ಸದಾಶಿವಮೂರ್ತಿಲಿಂಗವ ಹೀಗರಿವುದಕ್ಕೆಠಾವ ಕಾಣೆ.
--------------
ಅರಿವಿನ ಮಾರಿತಂದೆ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ. ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ. ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು, ಜಂಗಮಕ್ಕೆ ಭಕ್ತನಾದೆನಯ್ಯಾ. ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ. ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು. ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ ನಿಮ್ಮ ಜಂಗಮದಲ್ಲಿ ವರವ ಪಡೆದು, ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.
--------------
ಮಡಿವಾಳ ಮಾಚಿದೇವ
ಎಳವತ್ತಿಗೆಯಲ್ಲಿದಲ್ಲಿ ತಿಳಿವು ನಿನಗಿಲ್ಲ , ರೂಹತ್ತಿಗೆ ಬಂದಲ್ಲಿ ಮುಂದ ನೀ ಕಾಣೆ. ಸಿರಿವಳದಲ್ಲಿ ದೇವಕಾರ್ಯವಂ ಮಾಡು. ಮದುವಳದಲ್ಲಿಗೆ ಹೋಗದ ಮುನ್ನ ಭಕ್ತಿಯ ಮಾಡು. ನೀನರಿಯೆ ಕಾಡನೂರಿಗೆ ಹೋಗದ ಮುನ್ನ, ಸೊಡ್ಡಳಂಗೆ ಶರಣೆನ್ನಿ.
--------------
ಸೊಡ್ಡಳ ಬಾಚರಸ
ಅರಿಯಬಾರದ ಘನವನರಿವ ಪರಿಯೆಂತು ಹೇಳಾ ! ಕುರುಹಿಟ್ಟು ಕೂಡುವರ ಕಾಣೆ ಮೂರುಲೋಕದೊಳಗೆ. ಅರಿಯಬಾರದುದನರಿದು, ಹರಿಯಬಾರದುದ ಹರಿದು, ಮರೆಯಬಾರದುದ ಮರೆದು ನೆರೆಯಬಾರದುದ ನೆರೆದು ನಿಜವಾದರು ನಿಮ್ಮ ಶರಣರು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ, ಇಂದ್ರನಾದಡಾಗಲಿ, ಚಂದ್ರನಾದಡಾಗಲಿ, ಎಮ್ಮ ಶಿವಶರಣರ ನೋವು ಎನ್ನ ನೋವು ನೋಡಾ. `ಅವರನೊರಸುವೆನುರುಹುವೆ'ಯೆಂದು ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ನೊಸಲ ಕಣ್ಣಿಂಗೆ ಬೆಸನನಿತ್ತಡೆ, ನಿಲಬಲ್ಲ ಗರುವರನಾರನೂ ಕಾಣೆ.
--------------
ಸಿದ್ಧರಾಮೇಶ್ವರ
ಕೆಳಗಣ ಅವಳಿವಳೆ, ಮೇಲಣ ಆತನ ಕಾಣೆ, ಆತನೇತರವ. ಬಾಸರ ಕೃಷ್ಣ ಕಪೋತ ತೂತಿನವ ಅಜಾತನಲ್ಲಾಯೆಂದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಪುರುಷಾಮೃಗದ ಕೈಯಲ್ಲಿ, ಪರುಷವಿಪ್ಪುದ ಕಂಡೆನಯ್ಯ. ಪರುಷವ ಸೋಂಕದೆ ಪಶುವಾಗಿದೆ ನೋಡಾ. ಪುರುಷಾಮೃಗವನರಿದು ಪರುಷವ ಸಾಧನಮಾಡಬಲ್ಲ ಹಿರಿಯನಾರನೂ ಕಾಣೆ. ಕಸ್ತುರಿಯ ಮೃಗ ಬಂದು ಸುಳಿಯಲು ಪುರುಷಾಮೃಗವಳಿದು, ಪರುಷಸಾಧನವಾಗಿ, ಪರಾಪರವಾದುದೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಕಾಲೊಳಗಿನ ಮುಳ್ಳ ಕಣ್ಣಿನಿಂದೆ ತೆಗೆಯಬಹುದು. ಕಣ್ಣೊಳಗಿನ ಮುಳ್ಳ ಕಾಲಲ್ಲಿ ತೆಗೆವ ಜಾಣರನಾರನು ಕಾಣೆ ಮೂರುಲೋಕದೊಳಗೆ. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು ಕಣ್ಣ ಮುಚ್ಚಿ ಕಾಲ ಮುಳ್ಳ ತೆಗೆವರು ಕಾಲಕೊಯ್ದು ಕಣ್ಣ ಮುಳ್ಳ ತೆಗೆವರು, ಮರಳಿ ನೋಡಿದರೆ ದೀಪದೊಳಡಗುವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->