ಅಥವಾ

ಒಟ್ಟು 151 ಕಡೆಗಳಲ್ಲಿ , 39 ವಚನಕಾರರು , 113 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅದ್ಥಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಾಯದೊಳಗೆ ಲಕ್ಷವಿರ್ದಡೆ ಕಾಣಬಾರದು. ಕರಣದೊಳಗೆ ಲಕ್ಷವಿರ್ದಡೆ ಕಾಣಬಾರದು. ಪ್ರಾಣದೊಳಗೆ ಲಕ್ಷವಿರ್ದಡೆ ಕಾಣಬಾರದು. ಭಾವದೊಳಗೆ ಲಕ್ಷವಿರ್ದಡೆ ಕಾಣಬಾರದು. ತನ್ನೊಳಗೆ ಲಕ್ಷವಿಲ್ಲದಿರ್ದೊಡೆ ಕಾಣಬಾರದು ಗುರುನಿರಂಜನ ಚನ್ನಬಸವಲಿಂಗವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ ಭಗ ಮೂರು, ಬಾಯಾರು, ಪೃಷ್ಠ ಎಂಬತ್ತನಾಲ್ಕುಲಕ್ಷ. ರೋಮ ಎಂಟುಕೋಟಿ. ಹಲ್ಲು ಹದಿನಾರು, ನಾಲಗೆ ಏಳು. ಕಿವಿ ಇಪ್ಪತ್ತೈದು, ನಾಡಿ ಶತದಶ. ಮೂಗು ಮೂವತ್ತೇಳು, ಕಾಲೆಂಟು. ಭುಜವೆರಡು, ಕೈವೊಂದೆ. ಹಿಂದೆ ಮುಂದೆ ನೋಡುವ ಕಣ್ಣು, ಅಬ್ಥಿಸಂದ್ಥಿಯೊಳಗೆ ಒಂದೆ ಅದೆ. ಅರ್ಕೇಶ್ವರಲಿಂಗವ ಕಾಣಬಾರದು.
--------------
ಮಧುವಯ್ಯ
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು. ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು, ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ, ಪಾಪಿಯ ಕೂಸನೆತ್ತಿದಂತೆ. ಕೂಡಲಸಂಗಮದೇವರ ಭಕ್ತಿ ಅಳಿಮನದವರಿಗೆ ಅಳವಡದಯ್ಯಾ.
--------------
ಬಸವಣ್ಣ
ಉಣ್ಣದೆ ತೃಪ್ತನಾದ ಗುರು. ಆ ಗುರುವು ಪೆಸರ್ಗೊಳ್ಳದೆ ಮುನ್ನವಾದ ಶಿಷ್ಯ. ಇದು ಅನ್ಯರಿಗೆ ಕಾಣಬಾರದು. ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು, ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಹೊತ್ತುಹೋಗದ ಮುನ್ನ ನೀವು ಸತ್ತಂತೆ ಇರಿರೊ. ಸತ್ತಂತೆ ಇದಲ್ಲದೆ ತತ್ವವ ಕಾಣಬಾರದು. ತತ್ತವ ಕಂಡಲ್ಲದೆ ಮನ ಬತ್ತಲೆಯಾಗದು. ಬತ್ತಲೆಯಾದಲ್ಲದೆ ಘನವ ಕಾಣಬಾರದು. ಘನವ ಕಂಡಲ್ಲದೆ ನಿಮ್ಮ ನೆನಹು ನಿಷ್ಪತ್ತಿಯಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಮತ್ಸ್ಯ ಹೊಳೆಯ ನುಂಗಿ, ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ. ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ತೋರುವಡೆ ವಿಷಯವಾಗಿರದು, ಅದು ಅರಿಯಬಾರದಾಗಿ ಅರಿಯಬಾರದು, ಅರಿಯಬಾರದಾಗಿ ಹೇಳಬಾರದ, ಹೇಳಬಾರದಾಗಿ ಕಾಣಬಾರದು. ಅದು ಅತಕ್ರ್ಯ, ಅದು ನಿನ್ನಲ್ಲಿಯೆ ಇದೆ. ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ. ಅದನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ, ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ, ಆ ಸೂತ್ರ ಆ ಪಾಷಾಣವ ಗ್ರಹಿಸಿ, ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ, ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು ಶಿವಪೂಜಕನ ಶಿವಮೂರ್ತಿಧ್ಯಾನ. ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಲಿಂಗವನರಿವವರಿಗಲ್ಲದೆ ಕಾಣಬಾರದು.
--------------
ಮೋಳಿಗೆ ಮಹಾದೇವಿ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಹಳ್ಳದೊಳು ತೇಲಿಹೋಗುವ ಕಂಬಕೆ ತೊರೆನೆರೆಗಳು ಮುಸುಕಿ ಹೋಗುತಿದೆ ನೋಡಾ ! ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ ಆರಿಗೆ ಕಾಣಬಾರದು ನೋಡಾ ! ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ, ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ ಸಾದ್ಥಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ, ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ, ಮನವ ಮರೆಯ ಮಾತು ನೆನಹಿನಲ್ಲಿ ಅರಿದು, ನಾಲಗೆಯ ನುಡಿವಾಗಲಲ್ಲದೆ ಕಾಣಬಾರದು, ಕೇಳಬಾರದು ಒಂದಂಗದೊಳಗಡಗಿದ ನೂರೊಂದರ ಪರಿ,ರಾಮನಾಥ.
--------------
ಜೇಡರ ದಾಸಿಮಯ್ಯ
ಇನ್ನಷ್ಟು ... -->