ಅಥವಾ

ಒಟ್ಟು 47 ಕಡೆಗಳಲ್ಲಿ , 16 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
--------------
ಅಕ್ಕಮ್ಮ
ತನ್ನ ಮುಟ್ಟಿ ನೀಡಿದುದೆ ಪ್ರಸಾದ, ತನ್ನ ಮುಟ್ಟ[ದೆ] ನೀಡಿದುದೆ ಓಗರ. ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ. ಇದು ಕಾರಣ_ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಅಚ್ಚಪ್ರಸಾದವೆಂದು ಹುಸಿದು, ತನುಮನದ ಹವಣಿಗೆ ಗಡಣಿಸಿಕೊಂಬರು, ತನುಮನ ಮುಟ್ಟಿದ ಓಗರ ಲಿಂಗಾರ್ಪಿತಕ್ಕೆ ಸಲ್ಲದು. ಅರ್ಪಿತವನುಂಡು ಅಚ್ಚಪ್ರಸಾದಿಗಳೆಂಬವರನು ಲಿಂಗದಲ್ಲಿ ಸಮ್ಯಕ್‍ಶರಣರು ಮೆಚ್ಚರು. ಬಂದುದ ಕೂಡಲಚೆನ್ನಸಂಗಂಗರ್ಪಿಸಿ ಕೊಳಬಲ್ಲಡಾತನೆ ಅಚ್ಚಪ್ರಸಾದಿ.
--------------
ಚನ್ನಬಸವಣ್ಣ
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ ಪ್ರಾಣದಲ್ಲಿ ಜಂಗಮಸಾಹಿತ್ಯ ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
--------------
ಚನ್ನಬಸವಣ್ಣ
ಲಿಂಗಕ್ಕೆ ಗಿಣ್ಣಿಲ ಓಗರ, ಭಕ್ತಂಗೆ ತಳಿಗೆ ತುಂಬಿದ ಓಗರ, ಆನಿನ್ನೇವೆನಯ್ಯಾ! ಲಿಂಗವ ಕಿರಿದು ಮಾಡಿ, ಅಂಗವ ಹಿರಿದು ಮಾಡಿ, ನಾನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷ, ಆನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ಭೋಗವ ಭೋಗಿಪರ ತೋರದಿರಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಮ್ಮವರು ಅದ್ಥಿಕರು, ಎಲ್ಲರಿಂದವೂ ಅದ್ಥಿಕರು; ಪಾಕವ ಮಾಡುವ ಭಾಂಡ ಸೊಣಗನ ಡೊವಿಗೆಯಯ್ಯಾ ! ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು `ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆ'ಂದೂ.
--------------
ಬಸವಣ್ಣ
ಶರಣಸಾಹಿತ್ಯ ಲಿಂಗ ನೋಡಾ, ಲಿಂಗ ಸಾಹಿತ್ಯ ಶರಣ ನೋಡಾ. ಸಂಗವೆ ಸನುಮತವಾಗಿ ಮತ್ತೊಂದು ಪರಿಯಲ್ಲ. ಶರಣನೆ ಓಗರ, ಲಿಂಗವೆ ಪ್ರಸಾದ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ ದುರಾಚಾರಿಯ ಮಾತ ಕೇಳಲಾಗದು. ಭವಿ ಕೊಂಡುದು ಓಗರ, ಭಕ್ತ ಕೊಂಡುದು ಅನರ್ಪಿತ. ಇಂತೀ ಉಭಯವನರಿದು ಪ್ರಸಾದವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಪ್ರಾಣ ಲಿಂಗಕ್ಕೆ ಆಗಿ, ಲಿಂಗ ಪ್ರಾಣಕ್ಕೆ ಆಗಿ, ಆಚಾರ ಅನುಭಾವ ದ್ವಿವಿಧ ಸನುಮತವಾಗಿ, ತನು ಪ್ರಸಾದಕ್ಕೆಯಾಗಿ ಪ್ರಸಾದ ತನುವಿಂಗಾಗಿ, ಶರೀರಪ್ರೇಮದಿಂ ಸರ್ವಾಂಗ (ಲಿಂಗ) ನೋಡಾ. ಬಂದುದೆ ಓಗರ ನಿಂದುದೆ ಪ್ರಸಾದ. ಅಲ್ಲಿ ನಿತ್ಯನಿರಂತರ ಸಾವಧಾನಿ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಲಿಂಗಾರ್ಚನೆಯ ಮಾಡುವಾಗ ಪಾದಪೂಜೆಯ ಮಾಡುವಾಗ ಪಾದೋದಕ ಪ್ರಸಾದ ಕೊಂಬುವಾಗ ಭವಿಶಬ್ದ ಕುಶಬ್ದ ಹಿಂಸಾಶಬ್ದ ಹೊಲೆಶಬ್ದ ಹುಸಿಶಬ್ದ ಹೇಸಿಕೆಶಬ್ದ ವಾಕರಿಕೆಶಬ್ದ ಇವೆಲ್ಲವ ಪ್ರಸಾದಿಗಳು ವರ್ಜಿಸುವುದು. ವರ್ಜಿಸದಿರ್ದಡೆ, ಲಿಂಗಾರ್ಚನೆ ಪಾದಪೂಜೆ ಪಾದೋದಕ ಪ್ರಸಾದ ನಿಷ್ಫಲ. ಸಾಕ್ಷಿ : 'ಭವಿಶಬ್ದಂ ಕುಶಬ್ದಂ ಚ ಹಿಂಸಾಶಬ್ದಂ ಸತಾಪಕಂ | ಶ್ವಪಚ್ಯಾನೃತಶಬ್ದಂ ಚ ಕರ್ಕಶೋ ಭಾಂಡಿಕೋಪಿ ವಾ | ಬೀಭತ್ಸಕಂ ಮಹಾದೇವಿ ಪ್ರಸಾದಂ ಚ ವಿವರ್ಜಯೇತ್ ||' ಎಂದುದಾಗಿ, ಪ್ರಸಾದ ಮುಗಿಯುವತನಕ ಭೋಜ್ಯ ಭೋಜ್ಯಕ್ಕೆ ಪಂಚಾಕ್ಷರಿಯ ಸ್ಮರಿಸುತ್ತ ಸಲಿಸುವುದು. ಶಿವಸ್ಮರಣೆಯಿಂದ ಸ್ವೀಕರಿಸಿದ್ದು ಮುನ್ನೂರರುವತ್ತು ವ್ಯಾಧಿ ನಿಲ್ಲದೆ ಓಡುವವು. ಹೀಗೆ ನಂಬಿಗೆಯುಳ್ಳಡೆ ಪ್ರಸಾದಸಿದ್ಧಿಯಪ್ಪುದು ನೋಡಾ ! ನಮ್ಮ ಬಿಬ್ಬಬಾಚಯ್ಯನವರು ನಂಬಿದ ಕಾರಣದಿಂದ ಓಗರ ಪ್ರಸಾದವಾಗಿ, ಎಂಜಲವೆಂದ ವಿಪ್ರರ ಮಂಡೆಯಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ ? ಮತ್ತೆ, ಮರುಳಶಂಕರದೇವರು ಪ್ರಸಾದದ ಕುಂಡದೊಳಗೆ ಹನ್ನೆರಡು ವರ್ಷವಿದ್ದು ನಿಜೈಕ್ಯವಾದುದಿಲ್ಲವೆ ? ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು ; ನಂಬಿದವರಿಗಿಂಬಾಗಿಪ್ಪನು ನಮ್ಮ ಶಾಂತಕೂಡಸಂಗಮದೇವ.
--------------
ಗಣದಾಸಿ ವೀರಣ್ಣ
ಆಕಾಶದುರಿ, ನೆಲದ ಮಡಕೆಯಲ್ಲಿ ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು. ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.
--------------
ಬಿಬ್ಬಿ ಬಾಚಯ್ಯ
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ. [ಶಿಷ್ಯ]ಪ್ರಸಾದ ಗುರುವಿಂಗಲ್ಲದೆ ಗುರುವಿನ ಪ್ರಸಾದ ಶಿಷ್ಯಂಗಿಲ್ಲ ! ಇದು ಕಾರಣ,_ಗುರುವೆ ಓಗರ, ಓಗರವೆ ಅರ್ಪಿತ. ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ ! ಸುಡು ಸುಡು, ಶಬ್ದಸೂತಕರ ಕೈಯಲ್ಲಿ, ಸ್ಥಾವರ ವಿಧಿವಶವಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ರಿಣಾತೂರ್ಯ, ಮುಕ್ತ್ಯಾತೂರ್ಯ, ಸ್ವೇಚ್ಫಾತೂರ್ಯ. ಇಂತೀ ಮಾಟವ ಮಾಡುವಲ್ಲಿ, ಉಂಡಲ್ಲಿ ಓಗರ ವಾಂತಿಯಾದಂತೆ, ತಾ ಮಾಡಿದ ಸುಖ ತನಗೆ ದುಃಖವಹ ಭೇದಮಂ ಬಿಟ್ಟು, ಸ್ವೇಚ್ಫಾತೂರ್ಯವೆಂಬ ತುದಿಯಲ್ಲಿ ನಿಂದು, ಆ ತೂರ್ಯವಂ ಬಿಟ್ಟು ತುದಿಯಲ್ಲಿ ನಿಂದು, ಒಡೆಯನು ಕೈಲೆಡೆಯ ಮಡಗಿರಲಾಗಿ ಕೇಳಿದಡೆ, ಒಡೆಯಂಗೆ ಒಡವೆಯಂ ಕೊಟ್ಟು, ದೃಢಚಿತ್ತದಲ್ಲಿರ್ಪವಂಗೆ ಪೊಡವಿಯ ಮಾಟಕೂಟದಾಟದವರು ಸರಿಯೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->