ಅಥವಾ

ಒಟ್ಟು 32 ಕಡೆಗಳಲ್ಲಿ , 15 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿತ್ತಲುಗದೆ ತನು ತರಹರವಾಯಿತ್ತು ನಿಮ್ಮಡಿಗೆ. ಸಂಚಲವಳಿದುಳಿದೀ ಮನವು ಒಲಿದು ಉಲಿಯುತ್ತಿದೆ ನಿಮ್ಮ ನೆನವಿಂಗೆ. ವಂಚನೆಯ ಜರೆದು ಮರೆದು ನೆರೆದಿಪ್ಪವು ನಿಮ್ಮ ಸುಳುಹಿನ ಬರವ ಪಂಚೇಂದ್ರಿಯಗಳು. ಇಚ್ಫೆ ಆಮಿಷ ಅಳಿದುಳಿದು ಆಚ್ಫಾದಿಸಿ ಆಹ್ವಾನಿಸುತಿರ್ದವು ನಿಮ್ಮತ್ತ ಪಂಚವಿಷಯಗಳು. ಇಂತು ಸಕಲ ಸಂಭ್ರಮ ನೆರವಿಯೊಳೊಂದಿ ಪರವಶದೊಳಿರ್ದೆನು ಪರಮಗುರು ಚರಲಿಂಗವೆ, ಅರಿದರಿದೆನ್ನವಧರಿಸು ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು. ಪದ : ಹರನಕ್ಷಿ ಜಲದಲ್ಲುದಯವಾಗಿ ಮುನಿ ವರ ವಿಶ್ವಾಮಿತ್ರ ಗೌತಮ ವಶಿಷ್ಠರ ನೆರೆ ಮುಕ್ತರ ಮಾಡಿ ಕೈಲಾಸಪದದೊಳ ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. | 1 | ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್ ಚಿತ್ತಸಮಸ್ತಕೆ ಧಾರಣಗಳು ಅದ ರೊತ್ತಿಲಿ ಕರ್ಣಕುಂಡಲಕೆ ಏಕೈ ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. | 2 | ಕೊರಳೊಳು ಬತ್ತೀಸ ಉರದೊಳು ಮಹಾ ಸರ ಅಷ್ಟಶತಮಾಲೆಯನುವೆ ನೀವು ಕರಕಂಕಣಕೆ ದಶಬಾಹುಪೂರಕೆ ನೆರೆ ಷೋಡಶ ರುದ್ರಕ್ಷಿಯನೊಲಿದು. | 3 | ಕರದಂಘ್ರಿಮಾಲೆಗೆ ದಶವೇಕ ಮಹಾಜಪ ಸರ [ಕೂಡಿಕೊಂಡು ಲೇಸೆಂದು] ಮೇಣ್ ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. | 4 | ಇನಿತು ತೆರದ ರುದ್ರಾಕ್ಷಿಯ ಮಹಾ ಘನವೆಂಬಲ್ಲಿ ಮುಕ್ತಿಯ ಸಾರ ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ ನೆನವ ತೋರುವ ತತ್ವಚಿಂತಾಮಣಿಯನೊಲಿದು. | 5 |
--------------
ಹೇಮಗಲ್ಲ ಹಂಪ
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ? ಮುಟ್ಟಿ ಮುಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು ಇದು ಕೃತ್ಯದ ನೇಮ, ಭರಿತಾರ್ಪಣವೆ? ಭರಿತಾರ್ಪಣವಾವುದೆಂದಡೆ: ಪರಸ್ತ್ರಿ ಒಲಿದು ಬಂದಲ್ಲಿ, ನೇಮಕಲ್ಲದ ದ್ಯವ್ಯನೆರೆದು, ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧಾನಾಗಿ ಕಾಯಕರ್ಮಕ್ಕೊಳಗಲ್ಲದೆ, ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ, ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ, ಪರಿಭ್ರಮವ ಹರಿದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಎಮ್ಮ ನಲ್ಲನೊದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ' ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು.
--------------
ಸಿದ್ಧರಾಮೇಶ್ವರ
ನಾನಾದೇಶವ ತಿರುಗಿದಡಿಲ್ಲ. ನಾನಾ ವ್ಯಾಪಾರವ ಮಾಡಿದಡಿಲ್ಲ. ಏನು ಮಾಡಿದಡೇನು ಹುರುಳಿಲ್ಲ. ಅಖಂಡೇಶ್ವರಾ, ನೀವು ದಯೆ ಹುಟ್ಟಿ ಒಲಿದು ನೋಡಿ ಕರುಣಿಸಿ ಸಲಹದನ್ನಕ್ಕರ ಉಳಿದುದೆಲ್ಲ ವ್ಯರ್ಥ ನೋಡಾ.
--------------
ಷಣ್ಮುಖಸ್ವಾಮಿ
ಮುದ್ದ ನೋಡಿ, ಮುಖವ ನೋಡಿ, ಮೊಲೆಯ ನೋಡಿ, ಮುಡಿಯ ನೋಡಿ, ಕರಗಿ ಕೊರಗುವುದೆನ್ನ ಮನ, ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ. ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ. ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ, ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ
--------------
ಬಸವಣ್ಣ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎಲೆ ಅಯ್ಯಾ, ನೀನು ಕುಲವು, ಅವಕುಲವು ಎನ್ನದೆ ಒಲಿದು ಅವರಿಗೆ ಬೆಲೆಯಿಲ್ಲದ ಬಲವ ಮಾಡಿದೆ. ಒಲಿದು ನಿನ್ನ ಪೂಜಿಪರಿಗೆ ಗೆಲವ ಮಾಡಿ, ನಿಲುಗಡೆಯ ಮರೆದವರ ತಲೆಯರಿದು ಬಿಸುಡಿ[ದೆ] ಕಲಿದೇವ, ನಿನಗಾರು ಸರಿಯಿಲ್ಲ ಕಾಣಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಕಾಳುದೈವಕ್ಕೆ ಕೈಯತ್ತಲೊಲ್ಲದೆ ಕಾರಣಮೂರ್ತಿಯ ಕರತಂದು ಪೂಜೆಯ ಮಾಡಿ, ಭವಿಮುಟ್ಟದ ವರತೆಯ ನೀರ ತಂದು, ಪಶುಕಾಲು ಸೋಂಕದ ಧಾನ್ಯಗೂಡಿ, ಮಾಡದ ಒಲೆಯಲ್ಲಿ ಮಾಡಿದ ಪಾಕವ ಚಲುವಾಗಿ ನೀಡಿದರೆ ಒಲಿದು ಬಂದೆನ್ನಪ್ಪಿದ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಗುರುವಿನಿಂದರಿದಬಳಿಕ ಮರೆದು ಮಾಡಲಾಗದು, ಬೆರೆದು ನೋಡಲಾಗದು, ಒಲಿದು ಕೂಡಲಾಗದು, ಅದೇನು ಕಾರಣವೆಂದೊಡೆ : ಕೊಟ್ಟುದೊಂದರುವು ಬಿಟ್ಟರೆ ಹುಟ್ಟು ಹೊಂದುಗಳಟ್ಟಬಾರದು, ಗುರುನಿರಂಜನ ಚನ್ನಬಸವಲಿಂಗದಲ್ಲಿ ಇತರ ಸುಖಹಿತವಲ್ಲದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಭಕ್ತನಾದ ಮೇಲೆ ಅಂಗದ ಸುಖವ ಮರೆದಿರಬೇಕು. ಲಿಂಗಭಕ್ತನಾದ ಮೇಲೆ ಮನದ ಸುಖವ ಮರೆದಿರಬೇಕು. ಜಂಗಮಭಕ್ತನಾದಮೇಲೆ ಪ್ರಾಣದ ಸುಖವ ಮರೆದಿರಬೇಕು. ಪಾದೋದಕಭಕ್ತನಾದ ಮೇಲೆ ರಸನೆಯ ಸುಖವ ಮರೆದಿರಬೇಕು. ಪ್ರಸಾದಭಕ್ತನಾದ ಮೇಲೆ ಅನ್ಯವಾಸನೆಯ ಸುಖವ ಮರೆದಿರಬೇಕು. ವಿಭೂತಿಯ ಧರಿಸಿದ ಮೇಲೆ ಸೋಂಕಿನ ಸುಖವ ಮರೆದಿರಬೇಕು. ರುದ್ರಾಕ್ಷಿಯ ಧರಿಸಿದ ಮೇಲೆ ಸ್ತ್ರೀರೂಪಿನ ಲಕ್ಷಣ ಮರೆದಿರಬೇಕು. ಮಂತ್ರವೇದಿಯಾದ ಮೇಲೆ ಲಲನೆಯರ ವಿನಯ ನುಡಿಯ ಒಲಿದು ಕೇಳದಿರಬೇಕು. ಇಂತು ಅಷ್ಟಾವರಣವನು ಅಂಗದಲ್ಲಿ ಕಾಣಿಸಿಕೊಂಡ ಬಳಿಕ ಭಕ್ತಿ ನಿಷೆ*ಯ ನೆರೆದು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಚ್ಚರಿತನಾಗಿರಬೇಕು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುನ್ನ ಶಿರಂಗಳ ಕೊಯಿದಿಕ್ಕಿ ನಿಮ್ಮ ಒಲವ ಕಾಣದೆ ಬೆರಗಾದುದು ಬೆನ್ನಹುರಿ ನವಸಿರಂಗಳೆಲ್ಲವ ಕೊಯ್ದು ತಂತಿಯ ಮಾಡಿ ಹಾಡಿದನಯ್ಯಾ. ಗೀತದಿಂದ ಒಲಿದು ಕೃತಾರ್ಥನ ಮಾಡಿದೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ.
--------------
ಸಿದ್ಧರಾಮೇಶ್ವರ
ಕಾಡುಗುರಿ ಈಯಿತ್ತೊಂದು ಮೂದೇವರ ಮುಲ್ಲನ ಮರಿಯ. ಅದಕ್ಕೆ ಮೇಹಿಲ್ಲ, ಹಾಲನೊಲ್ಲದು. ಅದು ಬಾಲೆಯರ ಬಣ್ಣದ ಲೋಲಮರಿ. ಸಾಲುಗಾಲಿನಲ್ಲಿ ಹರಿದಾಡುತ್ತಿದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಲಿದು ಒಲ್ಲದ ಕಾರಣ.
--------------
ಸಗರದ ಬೊಮ್ಮಣ್ಣ
ಲೌಕಿಕದನುಸಂಧಾನ ಸಮನಿಸದೆ ಅನ್ಯವ ಸುಟ್ಟರು ಎನ್ನ ಹೃದಯದ ಕಂಗಳು ಲಿಂಗದಲ್ಲಿ ನಟ್ಟು ಬಗೆಯಲಾರಳವು. ಅಲ್ಲದೆ, ನಿಷೆ* ಒಲಿದು ಗಟ್ಟಿಗೊಂಡು ಅಂಗಶಂಕೆಯೆಂಬ ಭಂಗವಿನ್ನೆಲ್ಲಿಯದೊರಿ ಹಾಲು ಬೆರಸಿದ ನೀರ ಹಂಸೆ[ಗಾ]ಗದಂತೆ ಪಾವಕನಾದನಯ್ಯಾ ಕೂಡಲಸಂಗಮದೇವಾ ನಿಮ್ಮ ಶರಣು.
--------------
ಬಸವಣ್ಣ
ನೋಡುವ ಕಂಗಳಿಗೆ ರೂಪಿಂಬಾಗಿರಲು ನೀವು ಮನನಾಚದೆ ಬಂದಿರಣ್ಣಾ. ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ. ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ. ಮೂತ್ರವು ಬಿಂದು ಒಸರುವ ನಾಳವೆಂದು ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ. ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು ಇದಾವ ಕಾರಣವೆಂದರಿಯದೆ, ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ. ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.
--------------
ಅಕ್ಕಮಹಾದೇವಿ
ಇನ್ನಷ್ಟು ... -->