ಅಥವಾ

ಒಟ್ಟು 21 ಕಡೆಗಳಲ್ಲಿ , 14 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಂಕಿ ಸುಡಬಲ್ಲಡೆ ಕಲ್ಲು ನೀರು ಮರಂಗಳಲ್ಲಡಗಬಲ್ಲುದೆ ? ಅರಿವು ಶ್ರೇಷ್ಠವೆಂದಡೆ ಕುರುಹಿನಲ್ಲಡಗಿ ಬೇರೊಂದೆಡೆಯುಂಟೆಂದು ನುಡಿವಾಗ ಅದೇತರಲ್ಲಿ ಒದಗಿದ ಅರಿವು ? ಪಾಷಾಣದಲ್ಲಿ ಒದಗಿದ ಪ್ರಭೆಯಂತೆ, ಆ ಪಾಷಾಣ ಒಡೆಯೆ ಆ ಪ್ರಭೆಗೆ ಕುರುಹುಂಟೆ ? ಇಂತೀ ಲೇಸಪ್ಪ ಕುರುಹನರಿಯಬೇಕು ಕಾಣಾ, ನಮ್ಮ ಗುಹೇಶ್ವರನುಳ್ಳನ್ನಕ್ಕ ಅಂಬಿಗರ ಚೌಡಯ್ಯ.
--------------
ಅಲ್ಲಮಪ್ರಭುದೇವರು
ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ. ನೋಯಿಸದೆ ಕಾಬುದಕ್ಕೆ ಆರಡಿಯಲ್ಲ. ನೋಯದೆ ಕೊಂಬುದಕ್ಕೆ ಪಿಪೀಲಿಕನಲ್ಲ, ಬಂಧಿಸಿ ಕಾಬುದಕ್ಕೆ ಚಂದನ ಶಿಲೆಯಲ್ಲ. ಭಕ್ತಿಯೆಂಬ ಅಂಗದ ಸತಿ ನಾನಾಗಿ, ವಿರಕ್ತಿಯೆಂಬ ಘನಲಿಂಗದ ಕೂಟಪುರುಷ ನೀನಾಗಿ, ಇಂತೀ ಉಭಯದಿಂದ ಒದಗಿದ ರೂಪು ನಾಮವ ಏನೆಂಬೆ ? ಅಲೇಖನಾದ ಶೂನ್ಯ ಕಲ್ಲಿನ ಹಂಗು ಬಿಡು, ಬೇಡಿಕೊಂಬೆ.
--------------
ವಚನಭಂಡಾರಿ ಶಾಂತರಸ
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ ಅದೇತರಿಂದ ಒದಗಿದ ಕುರುಹು ? ಶಿಲೆಯ ಪ್ರತಿಷೆ*ಯ ಮಾಡಿ ತನ್ನ ಒಲವರ ವಿಶ್ವಾಸದಿಂದ ಬಲಿಕೆಯನರಿವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು. ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ, ಲಯವಾದ ಮತ್ತೆ ಜಗವಿಲ್ಲವಾಗಿ. ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು, ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು. ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ. ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ? ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ? ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ? ನೆರೆ ಸತ್ಯನಲ್ಲಿ [ಹಾ]ರುವ ಮ[ನದವನು]ಂಟೆ ? ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ ಗುರುವೆಂದರರು, ಲಿಂಗವೆಂದರು, ಜಂಗಮವೆಂದರು. ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ. ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ. ಇಂತೀ ಷಟ್‍ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು, [ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಲವು ತರುಗಿರಿ ತೃಣಕಾಷ*ವೆಲ್ಲಕೆಯೂ ಒಂದೇ ಕಿಡಿ ಸಾಲದೇನಯ್ಯಾ ! ಹಲವು ಜನನದಲ್ಲಿ ಒದಗಿದ ಪಾಪಂಗಳ ಸುಡುವರೆ ಗುರುಕರುಣವೆಂಬ ಒಂದೇ ಕಿಡಿ ಸಾಲದೇನಯ್ಯಾ ? ಸಾಕ್ಷಿ :``ಇಂಧನಂ ವಹ್ನಿಸಂಯುಕ್ತಂ ವೃಕ್ಷನಾಮ ನ ವಿದ್ಯತೇ | ಗುರುಸಂಸಾರಸಂಪನ್ನಃ ಸ ರುದ್ರೋ ನಾತ್ರ ಸಂಶಯಃ ||'' ಎಂದುದಾಗಿ, ಅದು ಕಾರಣ, ಎನ್ನ ಭವವ ಕಳೆದು ಲಿಂಗದೇಹಿಯ ಮಾಡಿದ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಅಣುಕುಂಡಲ ನಾಗಬಂಧನವೆಂಬ ಸುಷುಮ್ನನಾಳದಿಂದ ಒದಗಿದ ನಿರೂಪ(ಬಿಂದು)ವನು ಒಸರಲೀಯದೆ ಕಟ್ಟಿಹೆನೆಂದರೆ ಆ ಶಶಿಧರಂಗಳವಲ್ಲ. ಒಡಲುಗೊಂಡರೆ ಒಸರುವುದು ಮಾಬುದೆ ? ಒಡಲಿಲ್ಲದಿದ್ದರೆ ಒಸರುವುದು ಮಾಬುದು. ಒಸರಲೀಯದೆ ಕಟ್ಟಿದೆನೆಂಬ ಮೂರ್ಖರೆಲ್ಲಾ ಭಂಗಬಟ್ಟು ನಸಿದ್ಧರಾಗಿ ಹೋದರಯ್ಯಾ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ, ಕೋಟ್ಯನುಕೋಟಿ ಕರ್ಮವ ಪೂಜಿಸುವ ಕರ್ಮಿಗಳೆತ್ತ ಬಲ್ಲರು, ಆ ಶರಣನ ? ಭಕ್ತಿ ಹಿಂದುಮುಂದಾದ ಮಹಾಲಿಂಗೈಕ್ಯನ ನಿಲವ ? ಇದು ಕಾರಣ, ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯರ ನಿಲವ ಲಿಂಗೈಕ್ಯನೇ ಬಲ್ಲ.
--------------
ಚನ್ನಬಸವಣ್ಣ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಕರಣ ನಾಲ್ಕು, ಮದುವೆಂಟು, ವ್ಯಸನವೇಳು, ಅರಿಷಡ್ವರ್ಗಂಗಳಲ್ಲಿ ಬುದ್ಧಿಯಾಗಿರಬೇಕೆಂದು ಹೇಳುತ್ತಿರ್ಪ ಅಣ್ಣಗಳು ಕೇಳಿರೊ. ಆತ್ಮ ಸಂಬಂಧವಾದಲ್ಲಿ ಆವ ಕರಣಂಗಳೂ ಇಲ್ಲ. ಆತ್ಮನಿಂದ ಒದಗಿದ ಇಂದ್ರಿಯಂಗಳಲ್ಲದೆ, ಬೇರೆ ಕರಣಂಗಳಿಗೆ ಗುಣವಿಲ್ಲವಾಗಿ, ಸ್ಥಾವರ ಮೂಲವ ಕಡಿದು ಶಾಖೆಗಳಿಲ್ಲವಾದ ಕಾರಣ, ಆತ್ಮನ ನಿಲವನರಿದವಂಗೆ, ಬೇರೆ ಕರಣಂಗಳ ಬಂಧನವಿಲ್ಲವಾದ ಕಾರಣ, ಲಿಂಗವ ಕುರಿತಲ್ಲಿ, ಅಂಗವ [ಮ]ರೆಯಬಾರದು. ಅಂಗಕ್ಕೂ ಪ್ರಾಣಕ್ಕೂ ಹಿಂಗಿತೆನಬಾರದು, ನಿಃಕಳಂಕ ಮಲ್ಲಿಕಾರ್ಜುನನ ಸಂಗದಲ್ಲಿ ನಿರ್ವಾಣವಾದವಂಗೆ.
--------------
ಮೋಳಿಗೆ ಮಾರಯ್ಯ
ಬೆಳಗಿನೊಳಗಣ ಬೆಳಗು ಮಹಾಬೆಳಗೆಂಬ ಪ್ರಸಾದದಲ್ಲಿ ಒದಗಿದ ಪ್ರಸಾದಿಯ ಪರಿಣಾಮದ ಪರಮಾನಂದವನೇನೆಂದುಪಮಿಸುವೆನಯ್ಯಾ ಪರಮಾಶ್ರಯವೇ ತಾನಾಗಿ, ಕೂಡಲಸಂಗಮದೇವಯ್ಯಾ, ಚೆನ್ನಬಸವಣ್ಣನೆಂಬ ಮಹಾಪ್ರಸಾದಿ ಎನ್ನ ವಾಙ್ಮನಕ್ಕಗೋಚರನಾ[ಗೆ], ನಾನೇನೆಂಬೆನಯ್ಯಾ.
--------------
ಬಸವಣ್ಣ
ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಬಿಟ್ಟು, ತನ್ನ ಸ್ವಕಾಯಕದಿಂದ ಬಂದು ಒದಗಿದ ದ್ರವ್ಯವ ಒಡೆಯನ ಮುಂದಿಟ್ಟು, ತಾನೊಡಗೂಡಿ ಕೊಂಡ ಪ್ರಸಾದಿಯ ಪ್ರಸಾದವ ಎನ್ನೊಡೆಯನ ಮುಂದಿಟ್ಟು ಏಲೇಶ್ವರಲಿಂಗಕ್ಕೆ ಕೊಡುವೆನು.
--------------
ಏಲೇಶ್ವರ ಕೇತಯ್ಯ
ಪೃಥ್ವಿ ಅಪ್ಪು ತೇಜ ವಾಯು, ಆಕಾಶ_ ಇಂತೀ ಪಂಚಭೂತದಿಂದ ಒದಗಿದ ತನುವಿನ ಭೇದವ ನೋಡಿರೆ ಅಯ್ಯಾ. ಐದರ ವಿಶ್ರಾಂತಿಯಲ್ಲಿಯೆ ತನು ಸವೆದು ಹೋಗುತ್ತಿರಲು ಮತ್ತೆ ದೇವರ ಕಂಡೆನೆಂದರೆ ತನುವೆಲ್ಲಿಯದೊ ? ಅಕ್ಕಟಕ್ಕಟಾ ಲಿಂಗವೆ ! ಜಡದೇಹಿಗಳೆಲ್ಲಾ ಜಡವನೆ ಪೂಜಿಸಿ ಹತ್ತಿದರಲ್ಲಾ ಕೈಲಾಸದ ಬಟ್ಟೆಯ, ಹೋ ಹೋ ಅಲ್ಲಿಯೂ ಪ್ರಳಯ ಬಿಡದು ! ನಾ ನನ್ನ ಅಚಲಲಿಂಗವ ಸೋಂಕಿ ಸ್ವಯಾನುಭಾವ ಸಮ್ಯಕ್‍ಜ್ಞಾನದಿಂದ ಕೈಲಾಸದ ಬಟ್ಟೆ ಹಿಂದಾಗಿ ನಾ ಬಯಲಾದೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು ಅರಿಯದ ಮೌನಿಯ ಮುಕ್ತಿಯಿದೇನೊ ? ಅರಿದಡೇನು ಅರಿಯದಿದ್ದಡೇನು, ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ ? ಅಂಗದಲ್ಲಿ ಒದಗಿದ ಲಿಂಗವನರಿಯದೆ ಭಂಗಬಟ್ಟರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು, ಅಷ್ಟತನುಮೂರ್ತಿಯಾತ್ಮನೆಂದು ಇಂತಿವರೊಳಗಾದ ಮರ್ಕಟ ವಿಹಂಗ ಪಿಪೀಲಿಕ ಜ್ಞಾನಂಗಳೆಂದು, ತ್ರಿಶಕ್ತಿಯೊಳಗಾದ ನಾನಾ ಶಕ್ತಿಭೇದಂಗಳೆಂದು, ಇಂದ್ರಿಯ ಐದರಲ್ಲಿ ಒದಗಿದ ನಾನಾ ಇಂದ್ರಿಯಂಗಳೆಂದು, ಷಡುವರ್ಣದೊಳಗಾದ ನಾನಾ ವರ್ಣಂಗಳೆಂದು, ಸಪ್ತಧಾತುವಿನೊಳಗಾದ ನಾನಾ ಧಾತುಗಳೆಂದು, ಅಷ್ಟಮದಂಗಳೊಳಗಾದ ನಾನಾ ಮದಂಗಳೆಂದು, ಇಂತೀ ನಾನಾ ವರ್ತನಂಗಳನರಿವ ಚಿತ್ತದ ಗೊತ್ತದಾವುದು ? ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುರಿದು ಸುಡಲೇತಕ್ಕೆ ? ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮಯ ಮೊನೆ ನಷ್ಟ. ಇದು ಪಿಂಡಜ್ಞಾನ, ಶುದ್ಧಜ್ಞಾನೋದಯಭೇದ, ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ, ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ. ಬೀಜ ಒಳಗು, ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು, ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು ಹಿಪ್ಪೆ ಬೀಜ ಹೊರಗಾದುದನರಿತು ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ ಜ್ಞಾನ. ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ ಮಾತು ಸಾಕಂತಿರಲಿ. ಕ್ರೀಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ, ದಿವ್ಯಜ್ಞಾನದಲ್ಲಿ ಕೂಟ. ಇದು ಸದ್ಯೋಜಾತಲಿಂಗದ ಷಟ್‍ಸ್ಥಲ ಲೇಪದಾಟ.
--------------
ಅವಸರದ ರೇಕಣ್ಣ
ಇನ್ನಷ್ಟು ... -->