ಅಥವಾ

ಒಟ್ಟು 30 ಕಡೆಗಳಲ್ಲಿ , 14 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
`ಅರ್ಥ ಪ್ರಾಣ ಅಬ್ಥಿಮಾನ ನಿಮ್ಮದೆಂ'ಬಿರಿ, ಒತ್ತಿ ನೋಡಿದಡೆ ಮುಟ್ಟಲೀಯಿರಿ. ಮುಟ್ಟೆ ಬಂದಲ್ಲಿ ಕಠಾರಿಯ ಕಾಳಗವ ನೀವಾಡಿಸುವಿರಲ್ಲದೆ ಲಿಂಗಜಂಗಮವಂತನಾಗಬಾರದು. ಕೂಡಲಸಂಗಮದೇವಾ, ವೇಷಡಂಭಕರಿಗೆ ಭಕ್ತಿ ಎಂತಪ್ಪುದಯ್ಯಾ.
--------------
ಬಸವಣ್ಣ
ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ, ಶರೀರವುಳ್ಳನ್ನಕ್ಕ ಸುಖದುಃಖವ ಸಂತಾಪಿಸಬೇಕು. ತೆಪ್ಪದಲ್ಲಿ ನಿಂದು ಒತ್ತಿ ಹೊಳೆಯ ದಾಟುವಂತೆ. ಕ್ರೀಶುದ್ಧವಾದಲ್ಲಿ ಜ್ಞಾನದ ಗೊತ್ತು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ? ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ. ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು. ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು. ಕಚ್ಚಿದ ವಿಷ ತಾಗಿ ಮತ್ತನಾಗಿ ಬಿದ್ದಿತ್ತು. ನಾಗಾಲಡಿಯಾಗಿ ಆನೆಯದೆ ತಾನುಳಿದ ಪರಿಯ ನೋಡಾ, ಈ ವಸ್ತುವನ್ನೇಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು; ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತರದಂತೆ, ವಿಷಯ ತೋರಿದಡೆ ಯೋನಿ ಚಕ್ರವ ನಿಶ್ಚಯಿಸುವುದು ಆ ವಿಷಯ ತೀರಿದ ಬಳಿಕ ಆ ಯೋನಿ ಸ್ನಾನದಕುಳಿಯಿಂದ ಕಡೆಯಾಗಿಪ್ಪುದು ನೋಡ. ಸತಿಯೆಂಬುವಳು ಸತ್ತ ಶವಕಿಂದ ಕಡೆಯಾಗಿಪ್ಪಳು ನೋಡ. ಅಪ್ಪಬಾರದು ಅಪ್ಪಬಾರದು; ಅತಿ ಹೇಸಿಕೆ. ಪಶುಪತಿ ನೀ ಮಾಡಿದ ವಿಷಯವಿದ್ಥಿ ಈರೇಳು ಲೋಕವನಂಡೆಲೆವುತ್ತಿದೆ ನೋಡಾ. ಈ ಸಂಸಾರ ಪ್ರಪಂಚ ದೇವದಾನವ ಮಾನವರು ಪರಿಹರಿಸಲಾರದೆ ಆಳುತ್ತ ಮುಳುಗತ್ತಲಿಪ್ಪರು ನೋಡಾ. ಇದು ಕಾರಣ, ಸದಾಶಿವನನರಿದು ನೆನೆಯಲು ಸಂಸಾರಪ್ರಪಂಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ ದೇವನಿಲ್ಲದ ದೇಗುಲದಂತೆ, ಪತಿಯಿಲ್ಲದ ಸತಿಯ ಶೃಂಗಾರದಂತೆ, ಗುರುವಾಜ್ಞೆಯಿಲ್ಲದೆ ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ ಶಿವನ ಮುಟ್ಟದು ನೋಡಾ. ಶ್ರೀಗುರುವಿನ ವಾಕ್ಯದಿಂದಹುದೆಂದುದನು ಅಲ್ಲ ಎಂದು ಉದಾಸಿನದಿಂದ ಮಾಡಿದ ಭಕ್ತಿ ಅದು ಕರ್ಮಕ್ಕೆ ಗುರಿ ನೋಡಾ. ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ ಸದ್ಯೋನ್ಮುಕ್ತಿಗೆ ಕಾರಣ ನೋಡಾ. ಏಕೋಭಾವದ ನಿಷ್ಠೆ ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ. ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ ಕರ್ಮಂಗಳ ಒತ್ತಿ ಒರಸುವುದು ನೋಡಾ. ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ ಭೇದಿಸಿ ಬಹಿಷ್ಕರಿಸಿ ಸರ್ವಾಂಗದಲ್ಲಿ ಧರಿಸಲು ಭವಬಂಧನ ದುರಿತದೋಷಂಗಳು ಪರಿಹರವಪ್ಪುದು ತಪ್ಪದು ನೋಡಾ. ಇದು ಕಾರಣ ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸಿ ಮಲತ್ರಯಂಗಳ ತೊಳೆದೆನು ನೋಡಾ. ಮಲತ್ರಂಯಗಳು ಪರಿಹರವಾಗದ ಮುನ್ನ ಭವಬಂಧನದ ಬೇರುಗಳ ಸಂಹರಿಸಿ ಜನನ ಮರಣಂಗಳ ಒತ್ತಿ ಒರಸುವುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಿಕ್ಷಕ್ಕೆ ಬಂದಾ ಚರಮೂರ್ತಿಗಳ ಕಂಡು ಕುಕ್ಷಿಯಲ್ಲಿ ಮರಗುವ ಯಕ್ಕಲನರಕಿಗಳಿಗೆತ್ತಣ ಉಪದೇಶವಯ್ಯಾ? ಸುತ್ತಿರ್ದ ಪ್ರಪಂಚಕ್ಕೆ ಸವೆದು ಕರ್ತುಗಳಿಗೆ ಅರೆಕಾಸು ಸವೆಯದೆ ನಾವು ನಿತ್ಯಭಕ್ತರೆಂದರೆ ಒತ್ತಿ ಹಾಕುವರು ಬಾಯಲ್ಲಿ ಹುಡಿಯಯ್ಯಾ ಯಮನವರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಮುಖಿಗಳೆಂದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು. ಸ್ಥೂಲವಾವುದು ಸೂಕ್ಷ್ಮವಾವುದು ಎಂದಡೆ : ಲಿಂಗದ ಶಕ್ತಿಪೀಠದಲ್ಲಿ ಅಕ್ಕಿಯ ತೂಕ ಮೇಣವನೊತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ ಮತ್ತಂ, ಲಿಂಗದ ಕಟಿಯಲ್ಲಿ ಅರ್ಧ ಅಕ್ಕಿಯ ತೂಕ ಮೇಣವನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ವರ್ತುಳ ಗೋಮುಖದಲ್ಲಿ ಅರ್ಧ ಅಕ್ಕಿಯ ಸರಿಭಾಗವ ಮಾಡಿದಲ್ಲಿ ಗಿರ್ದವೆನಿಸಿತ್ತು. ಆ ಗಿರ್ದ ಅಕ್ಕಿಯ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ನಾಳ ಗೋಳಕದಲ್ಲಿ ಎಳ್ಳಿನ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೊರಗಾದಡೆ ಸೂಕ್ಷ್ಮ. ಮತ್ತಂ, ಲಿಂಗದ ಮಸ್ತಕದಿಂದೆ ಕೆಳಗಣ ಪೀಠಪರಿಯಂತರವಾಗಿ ಕೂದಲು ಮುಳುಗುವಷ್ಟು ಸೀಳಿದಡೆ ಸ್ಥೂಲ, ಆ ಕೂದಲು ಹೆಚ್ಚಾದಡೆ ಸೂಕ್ಷ್ಮ. ಈ ಉಭಯಾರ್ಥವ ತಿಳಿದು ಸೂಕ್ಷ್ಮವಾದಡೆ ಮುನ್ನಿನಂತೆ ಧರಿಸಿಕೊಳ್ಳಬೇಕು. ಸ್ಥೂಲವಾದಡೆ ಆ ಲಿಂಗದಲ್ಲಿ ಐಕ್ಯವಾಗಬೇಕು. ಅದೆಂತೆಂದೊಡೆ: ``ವ್ರೀಹಿ ವ್ರೀಹ್ಯರ್ಧ ವಿಚ್ಛಿನ್ನಂ ಕೇಶಗ್ರಾಹ್ಯಂ ಪ್ರಮಾದತಃ | ಪೀಠಾದಿ ಲಿಂಗಪರ್ಯಂತಂ ತ್ಯಜೇತ್ ಪ್ರಾಣಾನ್ ನಗಾತ್ಮಜೇ ||'' ಮತ್ತಂ; ``ತಂಡುಲಾರ್ಧಂ ಪೀಠಮಧ್ಯಂ ತದರ್ಧಂ ವೃತ್ತಗೋಮುಖಂ | ತಿಲಮಾತ್ರ ಯೋನಿಲಿಂಗಂ ತದಾಧಿಕ್ಯಂ ತ್ಯಜೇದಸೂನ್ ||'' ಎಂದುದಾಗಿ, ಇಂತಪ್ಪ ಲಿಂಗೈಕ್ಯರಾದ ಮಹಾಶರಣರು ಮೂರುಲೋಕಕ್ಕೆ ಅಧಿಕರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು ನರಕಕ್ಕೆ ಹೋದರೊಂದುಕೋಟ್ಯಾನುಕೋಟಿ ಬ್ರಹ್ಮರು. ವೇದದ ಅರ್ಥವನರಿಯದೆ ಜೀವನ ಬಾಧೆಯಂ ಮಾಡುವ ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು. ಆದಿಯ ಪ್ರಮಥರು ಕಂಡುದೆಂತೆಂದಡೆ: ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ, ಕೋಣನೆಂಬುದು ಕ್ರೋಧ, ಅಂಗವಿಕಾರವೆಂಬುದು ಹೋತ. ಇಂತು ನಾಲ್ಕು ವರ್ಗಂಗಳು. ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು. ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ, ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹುತ್ತದ ಮೇಲಣ ಸರ್ಪ ಸತ್ತಿತ್ತೆಂದು ಮುಟ್ಟಿ ಬಾಳ್ದ ಮನುಜರುಂಟೆ ? ಒತ್ತಿಗೆ ಬಂದ ವ್ಯಾಘ್ರನನಪ್ಪಿಕೊಂಡ ಮನುಜರುಂಟೆ ? ತತ್ವವ ಬಲ್ಲ ಶರಣರು ಸತ್ತ ಹಾಗೆ ಇದ್ದರೆ, ಇವರು ಕತ್ತೆಯ ಮನುಜರೆಂದು ಮತ್ರ್ಯದವರು ಒತ್ತಿ ನುಡಿದರೆ, ಅವರೆತ್ತ ಬಲ್ಲರೊ ? ಅವರ ನುಡಿದವರು ಅತ್ತಲೂ ಅಲ್ಲ , ಇತ್ತಲೂ ಅಲ್ಲ ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹರನ ಭಜಿಸುವುದು, ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ. ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು, ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು. ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ.
--------------
ಬಸವಣ್ಣ
ಒತ್ತಿ ಹೊಸೆದ ಕಿಚ್ಚ ನಾ ಮಾಡಿದೆನೆಂದು ಮುಟ್ಟಿ ಹಿಡಿದಡೆ, ಕೈ ಬೇಯದಿಹುದೆ ಎನ್ನಿಂದಾಯಿತ್ತು, ಎನ್ನಿಂದಾಯಿತ್ತು, ಎನ್ನಿಂದಾಯಿತ್ತು ಎನ್ನದಿರು ಮನವೆ, ನಾನು ಮಾಡಿದೆನೆನ್ನದಿರು ಮನವೆ. ಕೂಡಲಸಂಗಮದೇವ ಕೇಳಯ್ಯಾ, ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.
--------------
ಬಸವಣ್ಣ
ಇನ್ನಷ್ಟು ... -->