ಅಥವಾ

ಒಟ್ಟು 43 ಕಡೆಗಳಲ್ಲಿ , 18 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ. ಕೃತ್ರಿಮ ನುಡಿವುದಕ್ಕೆ ಅಕೃತ್ಯನಲ್ಲ. ಮತ್ತೆ ಇವರ ನಿಂದಿಸುವುದಕ್ಕೆ ಬಂಧ ಮೋಕ್ಷದವನಲ್ಲ. ಇವರುವ ಅಂದಚಂದವ ಅಂತಿಂತೆಂಬುದಕ್ಕೆ ಉಭಯದ ಗೊಂದಳದವನಲ್ಲ. ಎನ್ನ ಅಂದದ ಇರವ ಕೇಳಲಿಕ್ಕೆ ನಿಮ್ಮಂಗವ ಹೇಳಿದೆನೈಸೆ. ಎನಗೆ ಎನ್ನಂಗೆ ನಿರುಪಮನ ಸಂಗ ಇನ್ನೆಂದಿಗೆ, ಎನ್ನ ಗೂಡಿನ ಒಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಲಿಂಗಮುದ್ರೆಯ ಕ್ಷೇತ್ರದೊಳಗೊಂದು ಬಾಳೆಯ ಬನವಿಪ್ಪುದು. ಆ ಬನಕೊಂದು ಏಳು ಸೋಪಾನದ ಬಾವಿಯಿಪ್ಪುದು. ಆ ಬಾವಿಯ ಉದಕವನು ಎತ್ತುವ ಮನುಜರಿಲ್ಲದೆ, ಸತ್ವಕೈಯಿಂದೆತ್ತಿ ಸುತ್ತಲಿಕ್ಕೆ ಸೂಸದೆ ನಿವೇದಿಸಿಕೊಂಡರೆ ನಿತ್ಯ ಫಲವು ಸವಿಚಿತ್ರವಾಗಿಪ್ಪುದು. ಒಡೆಯ ಬಂಟರ ನಡೆಯಲ್ಲದೆ ನೋಡಿರೆ ಪರಿಣಾಮಪರವಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಮನದ ರಜದ ಮಣ್ಣ ಕಳೆದು ದಯಾ ಶಾಂತಿಯುದಕವ ತೆಗೆವೆನಯ್ಯಾ, ಜಳಕವ ಮಾಡಿ ಯೋಗಕಂಪನಿಕ್ಕಿ ಹೊದೆವೆನಯ್ಯಾ, ಅದನೊಂದೆಡೆಗೆ ತಂದು ಬಟ್ಟಗಾಣದಲ್ಲಿಕ್ಕಿ ಹಿಳಿವೆನಯ್ಯಾ. ಹಿಳಿದ ರಸದ ಕಂಪ ಕೊಡುವ ಒಡೆಯ ನೀನೆ, ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ಬೇರು ಇಲ್ಲದ ಮರ ಹೋಗಿ ಆದಿಯ ಸೇರಿತ್ತಯ್ಯ, ಆ ಮರಕ್ಕೆ ಐದು ಕೊಂಬೆಗಳು ಬೆಳೆದಿರ್ಪವು ನೋಡಾ. ಬ್ರಹ್ಮವೊಂದನೇರಿದ, ವಿಷ್ಣುವೊಂದನೇರಿದ, ರುದ್ರವೊಂದನೇರಿದ, ಈಶ್ವರನೊಂದನೇರಿದ, ಸದಾಶಿವನೊಂದನೇರಿದ- ಈ ಐದು ಕೊಂಬೆಗಳ ಮೆಟ್ಟಿ ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣ ಸವಿಯಲೊಡನೆ, ಹಣ್ಣಿನ ಒಡೆಯ ಬಂದು ಸವಿದಾತನ ನುಂಗಿದ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಯ್ಚಿಟ್ಟ ಬಯ್ಕೆಯ ಒಡೆಯ ಕೊಂಡುಹೋದಲ್ಲಿ ನೆಲ ಉಮ್ಮಳಿಸಿದರುಂಟೆ ಅಯ್ಯಾ? ತನ್ನ ವಿಶ್ವಾಸಕ್ಕೆ ಗುರುವೆಂದು ಕಂಡಡೆ, ನಿನ್ನಯ ಗುರುತನದ ಹರವರಿಯೆಂತಯ್ಯಾ? ಅಮೃತವ ಹೊಯಿದಿದ್ದ ಕುಡಿಕೆಯಂತಾಗಬೇಡ ಗುರುತನವಳಿದು ಸ್ವಯಗುರುವಾಗು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಯ್ಯಾ ಗುರುವೆಂಬರ್ಚಕನು ತಂದು, ಎನಗಿಷ್ಟವ ಕಟ್ಟಲಿಕೆ, ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು. ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು, ಲಿಖಿತವ ಲೇಖನವ ಮಾಡಿ ಮಾಡಿ ದಣಿದು, ಹಂಗನೂಲ ಹರಿದು ಹಾಕಿದೆನು. ಇಷ್ಟವನಿಲ್ಲಿಯೇ ಇಟ್ಟೆನು. ಅಯ್ಯಾ ನಾ ಹಿಡಿದ ನೀಲಕಂಠನು ಶಕ್ತಿ ಸಮೇತವ ಬಿಟ್ಟನು, ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು, ನಿರ್ವಚನವಾಯಿತ್ತು . ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು. ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು, ನಾದ ಶೂನ್ಯವಾಯಿತ್ತು ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ.
--------------
ವಚನಭಂಡಾರಿ ಶಾಂತರಸ
ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೆ? ಅಟ್ಟ ಅಡಿಗೆಯ ಪತಿಗಿಕ್ಕದ ಸತಿ ಉಂಡಡೆ ನೆಟ್ಟನೆ ಕಳ್ಳೆಯಲ್ಲವೆ? ಕೊಟ್ಟಾತ ಒಡವೆಯ ಬೇಡಿದಡೆ ಕಟ್ಟಿ ಹೋರುವ ಕಷ್ಟಜೀವಿಗೇಕೆ ತ್ರಿವಿಧಭಕ್ತಿ, ಸಜ್ಜನಯುಕ್ತಿ? ಇಂತೀ ಸಜ್ಜನಗಳ್ಳರ ಬಲ್ಲನಾಗಿ ಸದಾಶಿವಮೂರ್ತಿಲಿಂಗವು ಒಲ್ಲನು.
--------------
ಅರಿವಿನ ಮಾರಿತಂದೆ
ಘನವೆಂಬ ಮನದ ತಲೆವಾಗಿಲಲ್ಲಿ ಸದಾ ಸನ್ನಹಿತನಾಗಿಪ್ಪೆಯಯ್ಯಾ. ಸಕಲಪದಾರ್ಥದ ಪೂರ್ವಾಶ್ರಯವ ಕಳೆದುಬಹ ಸುಖಂಗಳನವಧರಿಸುತಿಪ್ಪೆಯಯ್ಯಾ, ನಿನ್ನ ಮುಟ್ಟಿ ಬಂದುದಲ್ಲದೆ ಎನ್ನ ಮುಟ್ಟದೆಂಬ ಎನ್ನ ಮನದ ನಿಷ್ಠೆಗೆ ನೀನೆ ಒಡೆಯ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ. ನುಂಗಿದ ಕೋಡಗವ ಗುಂಗುರ ನುಂಗಿತ್ತು. ಗುಂಗುರ ಬಂದು ಕಣ್ಣ ಕಾಡಲಾಗಿ, ಕಣ್ಣಿನ ಕಾಡಿಗೆ ಅಳಿಯಲಾಗಿ, ಕಣ್ಣಿನ ಬಣ್ಣ ಕೆಟ್ಟಿತ್ತು. ಕಣ್ಣಿನ ಒಡೆಯ ನೋಡಿ ಗುಂಗುರ ಒರಸಲಾಗಿ, ಆ ಗುಂಗುರ ಸತ್ತು, ಕೋಡಗ ಉಳಿಯಿತ್ತು. ಆ ಕೋಡಗವನಾಡಿಸಿಕೊಂಡುಂಬ ಜೋಗಿಗಳಿಗೇಕೆ, ಆ ರೂಢನ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಾಳಾಂಬಕ ಬಲೆಗೆ ಸಿಲ್ಕಿದ, ಲೀಲಾಂಗ ಕಾಲಕ್ಕೊಳಗಾದ. ಪುಷ್ಪೋದ್ಭವ ಹಿಡಿಗಟ್ಟಿಗೀಡಾದ. ಇವರ ಮೂವರ ದೇವರೆಂದಾರಾದ್ಥಿಸಿದಡೆ, ಜೇನಮಡಕೆಯಲ್ಲಿ ಸಿಕ್ಕಿದ ನೊಣದಂತಾದಿರಯ್ಯಾ. ಅಂಟಿಗೆ ಸಿಕ್ಕಿದ ವಿಹಂಗನಂತಾದಿರಣ್ಣಾ. ಅಂಥವರ ಕಂಡು ಎನಗಂಜಿಕೆಯಾಯಿತ್ತಯ್ಯಾ. ಇವರ ಮೂವರ ಬಿಡಲಾರದೆ, ಭಾಳಾಂಬಕನ ಭಾಳದಲ್ಲಿ ಧರಿಸಿದೆ. ವಿಷ್ಣುವಿನ ಅಕ್ಷಿಯಲ್ಲಿ ಧರಿಸಿದೆ, ಬ್ರಹ್ಮನ ಬಾಯಲ್ಲಿ ಧರಿಸಿದೆ. ಇವರ ಮೂವರ ಕೊಂದ ಭೇದ. ಲಲಾಟದಲ್ಲಿದ್ದವನ ತಲೆಯ ಹೊಯ್ದೆ. ಅಕ್ಷಿಯಲ್ಲಿದ್ದವನ ಕುಕ್ಷಿಯಂ ಕುಕ್ಕಿದೆ. ಬಾಯಲ್ಲಿದ್ದವನ ಬಸುರ ಒಡೆಯ ಹೊಯ್ದೆ. ಹೊಯ್ಯಲಾಗಿ ಅವರು ಬದುಕಿದರು, ನಾ ಸತ್ತೆ. ಸತ್ತವನಿಗೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಜಗವೆಲ್ಲವೂ ಗೋವಿನ ಹಂಗು. ನರ ಸುರಾದಿಗಳೆಲ್ಲರೂ ಗೋವಿನ ಹಂಗು. ಸಕಲ ಜೀವನ ಆಧಾರ ಗೋಮರ. ಗೋಕುಲಕ್ಕೆ ಒಡೆಯ ಗೋಪತಿಧರ. ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯರಾಮನಾಥಾ.
--------------
ಗುಪ್ತ ಮಂಚಣ್ಣ
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ. ಕುರುಹಿಂಗೆ ಬಂದ ಸೀಮ ನೀನಲ್ಲ. ಏಕಯ್ಯ ನಿನಗೆ ಪ್ರಾಪಂಚಿಕವು? ಆನಂದಮಧ್ಯದ ಅಪರವಾಗಿ, ಅಪರಮಧ್ಯದಲಿ ಪೂರ್ವನಾಗಿ ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ. ಆರಯ್ಯಾ ಬಲ್ಲರು ನಿನ್ನ ಪರಿಯ? ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು. ಏಕಂಗನಿಷ್ಠಾಪರರು ಅವರು ಬಲ್ಲರು. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ, ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->