ಅಥವಾ

ಒಟ್ಟು 18 ಕಡೆಗಳಲ್ಲಿ , 12 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಒಡಲಿಲ್ಲದ ಭಕ್ತನ ಪರಿಯ ನೋಡಾ, ಮನಪ್ರಾಣಮುಕ್ತ, ಭವರಹಿತಜಂಗಮದ ಪರಿಯ ನೋಡಾ. ಸಿಡಿಲ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೆ ಉಭಯ ಒಂದಾದವರ ಕಂಡಡೆ, ನೀವೆಂಬೆ ಕೂಡಲಸಂಗಮದೇವಾ.
--------------
ಬಸವಣ್ಣ
>ಒಡಲುಗೊಂಡು ಒಡಲವಿಡಿಯದೆ ಒಡಲಿಲ್ಲದ ನಿಜವ ಬೆರಸೆಲವೊ ! ನರರು ಸುರರು ಕಿನ್ನರರು ಖೇಚರ ಪರಮ ಪದವಿಯನರಿಯದ ಕಾರಣ ಭವದೊಳಗೆ ಸಿಲುಕಿದರು. ಕೂಡಲಚೆನ್ನಸಂಗನ ನಿಜರೂಪನೆ ಬೆರಸಿರೊ ಮುಮುಕ್ಷುಗಳಿರಾ.
--------------
ಚನ್ನಬಸವಣ್ಣ
ಒಡಲಿಲ್ಲದ ಭಕ್ತಂಗೆ ನಿರ್ಜೀವಿ ಜಂಗಮ ಸುಳಿದ ನೋಡಯ್ಯಾ. ಆ ಜಂಗಮ ಸುಳಿದಡೆ, ಆ ಭಕ್ತನೋಡಲು ತುಂಬಿ ಜೀವವಾಯಿತ್ತು. ಆ ಜಂಗಮದ ಭೇದವನರಿಯಲಾಗಿ, ಆ ಜೀವವಳಿದು, ನೀ ನಾನೆಂಬ ಭಾವಕ್ಕೆ ನೆಲೆಯಾಯಿತ್ತು. ಆ ಜಂಗಮದ ಕಳಾಪರಿಪೂರ್ಣವನರಿಯಲಾಗಿ, ಆ ಭಾವ ಮಹತ್ವವನೊಳಕೊಂಡಿತ್ತಯ್ಯಾ. ಆ ಒಳಕೊಂಡ ಮಹತ್ವವೆ ಮಹದೊಡಗೂಡಿ ಹೋಯಿತ್ತು. ಹೋದ ಮತ್ತೆ ನಾ ನೀನೆಂಬುದಿಲ್ಲ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲದ ಕಾರಣ, ಅಡಿಯಿಲ್ಲದ ಮುಡಿಯಿಲ್ಲದ ಒಡಲಿಲ್ಲದ, ಹಿಡಿಯಲಿಲ್ಲದ, ಬಿಡಲಿಲ್ಲದ, ನೋಡಲಿಲ್ಲದ, ನುಡಿಸಲಿಲ್ಲದ, ಕೂಡಲಿಲ್ಲದ ಅಪ್ರತಿಮ ನೀನಾಗಿ, ಅರುಹಿಲ್ಲದ, ಮರಹಿಲ್ಲದ, ಮಹಾಮಹಿಮ ನೀನಾದಕಾರಣ, ನಿನ್ನ, ನಿರವಯಲಿಂಗವೆಂದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ಭವವಿಲ್ಲದ ಭಕ್ತನ ಪರಿಯ ನೋಡಾ ! ಮನ ಪ್ರಾಣ ಮುಕ್ತಿಭಾವ ವಿರಹಿತ ಒಡಲಿಲ್ಲದ ಜಂಗಮದ ಪರಿಯ ನೋಡಾ ! ಸಿಡಿಲು ಮಿಂಚಿನ ರೂಹನೊಂದೆಡೆಯಲ್ಲಿ ಹಿಡಿಯಲುಂಟೆ ? ಈ ಉಭಯ ಒಂದಾದವರ ಕಂಡರೆ ನೀವೆಂಬೆನಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು. ಲಿಂಗಭಕ್ತನ ಇಂಬಾವುದೆಂದರಿಯರು. ಲಿಂಗಭಕ್ತ ಹಮ್ಮುಬಿಮ್ಮಿನವನೆ ? ಲಿಂಗಭಕ್ತ ಸೀಮೆಯಾದವನೆ ? ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ, ಉಳಿದುವೆಲ್ಲಾ `ಸಟೆ' ಎಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನನಗೊಂದು ತಾಣವಾಗಿಯದೆ ನಾನತ್ತಲಡಗಲೇಬೇಕು. ನಾನು ನಿರಾಳ ಸಂಬಂಧಿಯಾಗಿರಲು ಪ್ರತಿಯಿಲ್ಲದ ರೂಪನರುಹು ಕುರುಹ ಮಾಡಲು ಒಡಲಿಲ್ಲದ ಹುಯ್ಯಲ ಕಂಡೆ ನಾನು. ಸಂಗಯ್ಯನಲ್ಲಿ ಇರಪರವಳಿದು ಪ್ರಸಾದಿಯಾದೆನು.
--------------
ನೀಲಮ್ಮ
ಸಂಗಿಯಲ್ಲದ ನಿಸ್ಸಂಗಿಯಲ್ಲದ, ರೂಪಿಲ್ಲದ ನಿರೂಪಿಲ್ಲದ ಸುಳುಹು ನೋಡಾ ! ದ್ವೈತವಿಲ್ಲದ ಅದ್ವೈತವಿಲ್ಲದ, ಸೀಮೆಯಿಲ್ಲದ ನಿಸ್ಸೀಮೆಯಿಲ್ಲದ ಸುಳುಹು ನೋಡಾ ! ನಡೆಯಿಲ್ಲದ ನುಡಿಯಿಲ್ಲದ ಒಡಲಿಲ್ಲದ ಸುಳುಹು ನೋಡಾ ! ಕಡೆ ಮೊದಲೆಡೆದೆರಹಿಲ್ಲದಖಂಡ ಗುಹೇಶ್ವರಲಿಂಗ ನಿರಾಳ ನಿಜೈಕ್ಯ ನೋಡಾ.
--------------
ಅಲ್ಲಮಪ್ರಭುದೇವರು
ಆದಿ ಅನಾದಿಯೆಂಬ (ಯೆಂಬುದ?) ಅಂತರಾತ್ಮನಲ್ಲಿ ತಿಳಿಯಲರಿಯದೆ ಆದಿ ದೈವವೆಂದು ಬರಿಯ ಬಹಿರಂಗದ ಬಳಕೆಯನೆ ಬಳಸಿ, ಅನ್ಯ ದೈವಂಗಳನಾರಾಧಿಸಿ ಕೆಡುತ್ತಿಪ್ಪರು ನೋಡಾ. ಅದಕೆ ತಪ್ಪೇನು, ಮಕ್ಕಳಿಗೆ ತಮ್ಮ ಮಾತೆಯೇ ದೈವ. ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ. ಪ್ರಭುವಿಗೆ ತನ್ನ ಪ್ರಧಾನನೆ ದೈವ, ಪ್ರಧಾನಂಗೆ ತನ್ನ ರಾಯನೆ ದೈವ. ರಾಯಂಗೆ ತನ್ನ ಲಕ್ಷ್ಮಿಯೆ ದೈವ, ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ. ವಿಷ್ಣುವಿಗೆ ತನ್ನ ರುದ್ರನೆ ದೈವ, ಆ ರುದ್ರಂಗೆ ತನ್ನ ಈಶ್ವರನೆ ದೈವ. ಈಶ್ವರಂಗೆ ತನ್ನ ಸದಾಶಿವನೆ ದೈವ, ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ. ಸರ್ವಗತ ಶಿವನಿಗೆ ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ ಆದಿ ದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ. ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ ವರವುಳ್ಳ ದೇವರೆಂದು ಬೆರವುತ್ತಿಹರು. ಅದಕ್ಕೆ ತಪ್ಪೇನು ಅವರಿಗಪ್ಪಂಥ, ವರವೀವುದಕ್ಕೆ ಸತ್ಯವುಳ್ಳವನಹುದು. ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು. ಅವರ ಕೈಯಲ್ಲಿ ಆರಾಧಿಸಿಕೊಂಬ ದೈವಂಗಳೆಲ್ಲವು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ, ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು ಜಪತಪ ಹೋಮ ನೇಮಂಗಳ ಮಾಡಿ ಮಾರಣ ಮೋಹನ ಸ್ತಂಭನ ಉಚ್ಚಾಟನ ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ ದೂರ ಶ್ರವಣ, ಕಮಲದರ್ಶನ, ತ್ರಿಕಾಲಜ್ಞಾನ, ಪರಕಾಯಪ್ರವೇಶವೆಂಬ ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ, ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು. ಕಿರಿದುದಿನ ಅವರ ದೇವರೆನ್ನಬಹುದೆ ? ದೇಹಕೇಡಿಗಳ ಸತ್ಯರೆಂದೆನಬಹುದೆ ? ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ ? ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ ? ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ. ಅದೆಂತೆಂದಡೆ: ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ ? ಇಲ್ಲದಿರ್ದಡೆ ಸುಮ್ಮನಿರಿರೆ. ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು. ಅದು ಹೇಗೆಂದಡೆ: ಬ್ರಹ್ಮವೇದದಲ್ಲರಸುವನು. ವಿಷ್ಣು ಪೂಜೆಯಲ್ಲರಸುವನು. ರುದ್ರ ಜಪದಲ್ಲರಸುವನು. ಈಶ್ವರ ನಿತ್ಯನೇಮದಲ್ಲರಸುವನು. ಸದಾಶಿವನು ನಿತ್ಯ ಉಪಚಾರದಲ್ಲರಸುವನು. ಸರ್ವಗತ ಶೂನ್ಯದಲ್ಲರಸುವನು. ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು. ಚಂದ್ರ ಸೂರ್ಯರು ಹರಿದರಸುವರು. ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ' ಎಂಬ ಮಂತ್ರದಲ್ಲರಸುವರು. ಸತ್ಯಋಷಿ ದಧೀಚಿ ಗೌತಮ ವಶಿಷ* ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ ತಪ, ಯೋಗ, ಆಗಮಂಗಳಲ್ಲಿ ಅರಸುವರು. ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು, ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ. ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು. ಮತ್ತಾ ಕಣ್ಣ ತೆರೆದು ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ. ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು ನಿಶ್ಚಿಂತ ನಿರಾಳನು
--------------
ಅಲ್ಲಮಪ್ರಭುದೇವರು
ತಲೆಯಿಲ್ಲದ ಗುರು, ಕಾಲಿಲ್ಲದೆ ನಿಂದ ನೋಡ! ಒಡಲಿಲ್ಲದ ಶಿಷ್ಯನಾದ ಪರಿಯ ನೋಡ! ಗುರುವಿನ ಒಡಲ ಬಗೆಯ ಹುಟ್ಟಿದಾತ ಒಡನೆ ಗುರುಸಹಿತ ನಿಂದ ನಿಲವನೇನೆಂಬೆನಯ್ಯಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಆಡಬಾರದ ಬಯಲು ಸೂಡಬಾರದ ಬಯಲು ನುಡಿಯಬಾರದ ಬಯಲು ಹಿಡಿಯಬಾರದ ಬಯಲು ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ. ಭಾಷೆ ಪೈಸರವಿಲ್ಲ, ಓಸರಿಸೆನನ್ಯಕ್ಕೆ, ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ. ಆರಳಿದು ಮೂರಾಗಿ, ಮೂರಳಿದು ಎರಡಾಗಿ, ಎರಡಳಿದು ಒಂದಾಗಿ ನಿಂದೆನಯ್ಯಾ. ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ ಆ ಪ್ರಭುವಿನಿಂದ ಕೃತಕೃತ್ಯಳಾದೆನು ನಾನು. ಮರೆಯಲಾಗದು, ನಿಮ್ಮ ಶಿಶುವೆಂದು ಎನ್ನನು, ಚೆನ್ನಮಲ್ಲಿಕಾರ್ಜುನನ ಬೆರೆಸೆಂದು ಹರಸುತ್ತಿಹುದು.
--------------
ಅಕ್ಕಮಹಾದೇವಿ
ಕಾಲಿಲ್ಲದ ನಡೆ, ಒಡಲಿಲ್ಲದ ರೂಪು, ಕಂಗಳಿಲ್ಲದ ನೋಟ, ಮನವಿಲ್ಲದ ಬೇಟ; ಭಾವವಿಲ್ಲದ ತೃಪ್ತಿ , ಜೀವವಿಲ್ಲದ ಶರಣನ ಸುಳುಹ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->